
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯ ಕೊಬ್ಬರಿ ಧಾರಣೆ.. ಕಳೆದ ವರ್ಷದ ಆಗಸ್ಟ್ ದಾಖಲೆ ಉಡೀಸ್
Copra Price: ಕಲ್ಪತರು ನಾಡು ಅಂತಲೇ ಪ್ರಸಿದ್ಧಿ ಪಡೆದಿರುವ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಕೊಬ್ಬರಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಹಾಗಾದ್ರೆ ಪ್ರಸ್ತುತ ಧಾರಣೆ ಎಷ್ಟಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ತುಮಕೂರು ಜಿಲ್ಲೆಯ ಪ್ರಸಿದ್ಧ ತಿಪಟೂರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಪ್ರತಿ ಸೋಮವಾರ ಹಾಗೂ ಗುರುವಾರ ನಡೆಯುವ ತೆಂಗು ಹಾಗೂ ಕೊಬ್ಬರಿ ಟೆಂಡರ್ ಪ್ರಕ್ರಿಯೆ ನಡೆಯುತ್ತದೆ. ಈಗ ಪ್ರಸ್ತುತ ಕೊಬ್ಬರಿ ದರ ಸ್ಥಿರತೆ ಕಾಯ್ದುಕೊಂಡಿದ್ದು, ಇದರಿಂದ ಬೆಳೆಗಾರರಲ್ಲಿ ಮಂದಹಾಸ ಹೆಚ್ಚಾದಂತಾಗಿದೆ. ಇದಕ್ಕೆ ಕಾರಣ ಕೂಡ ಇದೆ.
ಪ್ರಸ್ತುತ ಕ್ವಿಂಟಾಲ್ ಕೊಬ್ಬರಿ ಧಾರಣೆ ಎಷ್ಟು?
ಸಾಮಾನ್ಯವಾಗಿ ಆಷಾಢದಲ್ಲಿ ಮಾರುಕಟ್ಟೆಯಲ್ಲಿ ಕೊಬ್ಬರಿ ಧಾರಣೆ ಕಡಿಮೆ ಆಗುತ್ತದೆ. ಆದರೆ ಇದೀಗ ಅದೇ ದಾಖಲೆಯ ಬೆಲೆ ಮುಂದುವರೆದಿರುವುದು ಅಚ್ಚರಿಗೆ ಕಾರಣವಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಕೊಬ್ಬರಿಗೆ ಗರಿಷ್ಠ 32,000 ರೂಪಾಯಿಗೆ ಮಾರಾಟವಾಗುತ್ತಿದೆ ಎಂದು ಪ್ರಜಾವಾಣಿ ವರದಿ ಮಾಡಿದೆ.
ಮಾರ್ಚ್ ಕೊನೆಯ ವಾರದಿಂದ ಶ್ರಾವಣ ಆರಂಭದವರೆಗೂ ಕೊಬ್ಬರಿ ದರವು ಕ್ವಿಂಟಲ್‌ಗೆ 31,000ದಿಂದ 32,000 ರೂಪಾಯಿ ಆಸುಪಾಸಿನಲ್ಲೇ ಸ್ಥಿರವಾಗಿ ಮುಂದುವರೆದಿದೆ. ಇದೇ ವರ್ಷದ ಏಪ್ರಿಲ್ 16ರಂದು ತಿಪಟೂರು ಮಾರುಕಟ್ಟೆಯಲ್ಲಿ ದಾಖಲೆಯ ಮಟ್ಟದ ದರ ದಾಖಲಾಗಿತ್ತು. ಅಂದು ಕ್ವಿಂಟಾಲ್ ಕೊಬ್ಬರಿಗೆ ಗರಿಷ್ಠ ₹38,018 ವರೆಗೆ ಬಿಡ್ ಆಗಿತ್ತು.
ನಂತರದ ದಿನಗಳಲ್ಲಿ ದರದಲ್ಲಿ ಕೊಂಚ ಇಳಿಕೆಯಾಗಿತ್ತು. ಆದರೂ ಕಳೆದ ನಾಲ್ಕು ತಿಂಗಳಿಂದ ಬೆಲೆ ಕುಸಿಯದೆ ಒಂದೇ ಮಟ್ಟದಲ್ಲಿ ಕಾಯ್ದುಕೊಂಡಿರುವುದು ವಿಶೇಷ ಅಂತಲೇ ಹೇಳಬಹುದು. ಕಳೆದ ವರ್ಷದ ಇದೇ ಅವಧಿಯಲ್ಲಿ ಅಂದರೆ ಆಗಸ್ಟ್‌ಗೆ ಹೋಲಿಕೆ ಮಾಡಿದರೆ ಕೊಬ್ಬರಿ ದರದಲ್ಲಿ ಗಮನಾರ್ಹ ಏರಿಕೆಯಾಗಿದೆ.
ಕಳೆದ ವರ್ಷದ ಈ ಸಮಯದಲ್ಲಿದ್ದ ದರ ಎಷ್ಟು?
ಕಳೆದ ವರ್ಷ ಕ್ವಿಂಟಾಲ್ ಕೊಬ್ಬರಿಗೆ 26,500 ರೂಪಾಯಿ ಇತ್ತು. ಆಗಿನಿಂದ ಹಂತ-ಹಂತವಾಗಿ ಏರಿಕೆ ಆಗುತ್ತಾ ಸಾಗಿದ್ದು, ಏಪ್ರಿಲ್‌ನಲ್ಲಿ ಸಾರ್ವಕಾಲಿಕ ದಾಖಲೆ ಬರೆದಿತ್ತು. ಪ್ರಸ್ತುತ ದರವು ದಾಖಲೆ ಮಟ್ಟಕ್ಕಿಂತ ಕೊಂಚ ಕಡಿಮೆ ಇದ್ದರೂ, ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದರೆ ಉತ್ತಮ ಸ್ಥಿತಿಯಲ್ಲಿದೆ ಅಂತಲೇ ಹೇಳಬಹುದು. ಕೇವಲ ಒಣ ಕೊಬ್ಬರಿ ಮಾತ್ರ ಅಲ್ಲದೆ, ತೆಂಗಿನ ಇತರ ಉಪ ಉತ್ಪನ್ನಗಳಿಗೂ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದೆ.
ಕೊಬ್ಬರಿ ಬೆಳೆಗಾರರ ಮುಖದಲ್ಲಿ ಹೆಚ್ಚಿದ ಸಂತಸ..
ಮಳೆ ಅಭಾವ, ಅಂತರ್ಜಲ ಕುಸಿತ ಹಾಗೂ ತೆಂಗಿನ ಮರಗಳಿಗೆ ತಗುಲಿದ ವಿವಿಧ ರೋಗಗಳಿಂದಾಗಿ ಈ ಬಾರಿ ತೆಂಗಿನ ಇಳುವರಿಯಲ್ಲಿ ಭಾರಿ ಪ್ರಮಾಣದ ಕುಸಿತ ಕಂಡುಬಂದಿದೆ. ಇದರಿಂದ ಮಾರುಕಟ್ಟೆಗೆ ಬರುವ ಕೊಬ್ಬರಿಯ ಪ್ರಮಾಣ ಕಡಿಮೆ ಆಗಿದ್ದು, ಇದು ಕೂಡ ಬೇಡಿಕೆ ಹೆಚ್ಚಾಗಲು ಪ್ರಮುಖ ಕಾರಣ ಎಂದು ಹೇಳಬಹುದು.
ಕೊಬ್ಬರಿ ಮತ್ತು ಅದರ ಉಪ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗುತ್ತಿರುವುದು ಬೆಳೆಗಾರರಿಗೆ ನೆಮ್ಮದಿ ತಂದಿದೆ. ಆದರೂ ಇಳುವರಿ ಕುಸಿತ ಹಾಗೂ ನಿರ್ವಹಣಾ ವೆಚ್ಚದ ಏರಿಕೆ ರೈತರನ್ನು ಕಂಗಾಲಾಗುವಂತೆ ಮಾಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚು ಬೆಲೆ ಸಿಗುವ ನಿರೀಕ್ಷೆಯಲ್ಲಿ ರೈತರಿದ್ದಾರೆ.
ಕೊಬ್ಬರಿ ದರ ಏರಿಕೆಗೆ ಪ್ರಮುಖ ಕಾರಣಗಳೇನು?
* ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಕೊಬ್ಬರಿಗೆ ಬೇಡಿಕೆ ಹೆಚ್ಚಿದೆ, ಆದರೆ ಅದಕ್ಕೆ ತಕ್ಕಂತೆ ಸರಬರಾಜು ಇಲ್ಲದಿರುವುದು ಬೆಲೆ ಏರಿಕೆಗೆ ಕಾರಣ ಆಗಿದೆ.
* ತೆಂಗು ಬೆಳೆಯುವ ಪ್ರಮುಖ ಪ್ರದೇಶಗಳಲ್ಲಿ ಮಳೆ ಕೊರತೆಯಿಂದ ಇಳುವರಿ ಕುಸಿದಿದೆ. ಮಾರುಕಟ್ಟೆಗೆ ಬರುತ್ತಿರುವ ಕೊಬ್ಬರಿಯ ಪ್ರಮಾಣ ಕಡಿಮೆ ಆಗಿರುವುದು ಬೆಲೆ ಏರಿಕೆಗೆ ನೇರ ಕಾರಣವಾಗಿದೆ.
* ಸ್ಥಳೀಯ ಮಾರುಕಟ್ಟೆಗಳ ಜೊತೆಗೆ ಹೊರರಾಜ್ಯಗಳಲ್ಲಿಯೂ ತಿಪಟೂರು ಉಂಡೆ ಕೊಬ್ಬರಿಗೆ ಭಾರಿ ಬೇಡಿಕೆ ಇದೆ. ಅದರಲ್ಲೂ ಹಬ್ಬಗಳು ಮತ್ತು ಶುಭ ಸಮಾರಂಭಗಳ ವೇಳೆ ಬೇಡಿಕೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.
* ರೈತರು ಮತ್ತು ವ್ಯಾಪಾರಸ್ಥರ ಬಳಿ ಇದ್ದ ಹಳೆಯ ಕೊಬ್ಬರಿಯ ದಾಸ್ತಾನುಗಳು ಬಹುತೇಕ ಖಾಲಿಯಾಗಿವೆ. ಹೊಸ ಕೊಬ್ಬರಿ ಮಾರುಕಟ್ಟೆಗೆ ಬರಲು ಸಮಯ ತೆಗೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಲಭ್ಯವಿರುವ ಸ್ಟಾಕ್‌ಗೆ ಹೆಚ್ಚಿನ ಬೆಲೆ ಸಿಗುತ್ತಿದೆ. ಅದರಲ್ಲೂ ಎಪಿಎಂಸಿ ಹರಾಜು ಪ್ರಕ್ರಿಯೆಯಲ್ಲಿ ಮಧ್ಯವರ್ತಿಗಳ ಹಾವಳಿ ಕಡಿಮೆ ಮತ್ತು ರೈತರು ಬೆಲೆ ಏರುವವರೆಗೂ ಕಾಯುವ ತಾಳ್ಮೆ ತೋರುತ್ತಿರುವುದು ಕೂಡ ದರ ಏರಿಕೆಗೆ ಕಾರಣವಾಗಿದೆ ಎಂದು ಹೇಳಬಹುದು.