
Cauvery dam:ಕಬಿನಿ, ಕೆಆರ್‌ಎಸ್ ಜಲಾಶಯದಿಂದ 12 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ
ಬೆಂಗಳೂರು: ಕಾವೇರಿ ನೀರು ಬಿಡುಗಡೆ ಆದೇಶ ವಿರೋಧಿಸಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿರುವ ನಡುವೆಯೇ ಕಾವೇರಿ ಕೊಳ್ಳದ ಪ್ರಮುಖ ಜಲಾಶಯಗಳಾದ ಕಬಿನಿ ಹಾಗೂ ಕೃಷ್ಣರಾಜಸಾಗರ ಜಲಾಶಯದಿಂದ ಸುಮಾರು 12 ಸಾವಿರ ಕ್ಯೂಸೆಕ್ ನೀರು ಹರಿಸಲಾಗುತ್ತಿದೆ.
ಮೈಸೂರು ಜಿಲ್ಲೆಯ ಕಬಿನಿ ಜಲಾಶಯ ಕಳೆದ ತಿಂಗಳೇ ಭರ್ತಿಯಾಗಿದೆ. ಈಗಲೂ ಕೇರಳದಲ್ಲಿ ಮಳೆಯಾಗಿ ಒಳಹರಿವು ಉತ್ತಮವಾಗಿರುವುದರಿಂದ ಜಲಾಶಯದಿಂದ ಹೆಚ್ಚಿನ ನೀರನ್ನು ಹೊರ ಬಿಡಲಾಗುತ್ತಿದೆ.
ಜಲಾಶಯಕ್ಕೆ ಗುರುವಾರ ಬೆಳಿಗ್ಗೆ ಹೊತ್ತಿಗೆ 8448 ಕ್ಯೂಸೆಕ್ ನೀರು ಒಳಹರಿವು ಇದೆ. ಹೊರ ಹರಿವಿನ ಪ್ರಮಾಣವು 10 ಸಾವಿರ ಕ್ಯೂಸೆಕ್ ಮುಂದುವರೆಸಲಾಗಿದೆ. ಕೆಲ ದಿನಗಳಿಂದೂ ಇದೇ ಪ್ರಮಾಣದಲ್ಲಿ ಕಪಿಲಾ ನದಿ ಮೂಲಕ ನೀರು ಹೊರಬಿಡಲಾಗುತ್ತಿದೆ. ಜಲಾಶಯದ ನೀರಿನ ಮಟ್ಟವು 2282.36 ಅಡಿಯಷ್ಟಿದೆ. ಗರಿಷ್ಠ ಮಟ್ಟವು 2284 ಅಡಿ. ಜಲಾಶಯದಲ್ಲಿ ಈಗಲೂ 19 ಟಿಎಂಸಿಯಷ್ಟು ನೀರಿದ್ದು ಶೇ 90ಕ್ಕೂ ಅಧಿಕ ನೀರು ಸಂಗ್ರಹವಾಗಿದೆ.
ಕಬಿನಿ ಜಲಾಶಯಕ್ಕೆ ಈ ತಿಂಗಳಲ್ಲಿ ಉತ್ತಮ ನೀರು ಹರಿದು ಬಂದಿದೆ. ಜಲಾಶಯ ಈಗಾಗಲೇ ಭರ್ತಿಯಾಗಿರುವುದರಿಂದ ಸುರಕ್ಷತೆ ದೃಷ್ಟಿಯಿಂದ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಹೊರ ಬಿಡಲಾಗುತ್ತಿದೆ. 20ಕ್ಕೂ ಹೆಚ್ಚು ದಿನದಿಂದ 16 ಟಿಎಂಸಿಗೂ ಅಧಿಕ ನೀರು ಹರಿದು ಹೋಗಿದೆ ಎನ್ನುವುದು ಅಧಿಕಾರಿಗಳ ವಿವರಣೆ.
ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯಕ್ಕೆ ಒಳಹರಿವು ಕೊಂಚ ಕಡಿಮೆಯಾಗಿದೆ. ಈಗ 4875 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದಿಂದ 2310 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಇದು ಕೆರೆ ತುಂಬಿಸಲು ಹಾಗೂ ಕುಡಿಯುವ ನೀರಿಗೆ ಎನ್ನುವ ಮಾಹಿತಿಯನ್ನು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
ಕೆಆರ್‌ಎಸ್ ಜಲಾಶಯದಲ್ಲಿ ಈಗ 109.74 ಅಡಿ ನೀರಿದೆ. ಜಲಾಶಯದ ಗರಿಷ್ಠ ಮಟ್ಟ ತಲುಪಲು ಇನ್ನೂ 15 ಅಡಿ ನೀರು ಅಗತ್ಯವಿದೆ.
ಹಾರಂಗಿ ಜಲಾಶಯಕ್ಕೆ ಈಗ 4133 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದ ಹೊರ ಹರಿವಿನ ಪ್ರಮಾಣವನ್ನು 5 ಸಾವಿರ ಕ್ಯೂಸೆಕ್ ಗೆ ತಗ್ಗಿಸಲಾಗಿದೆ. ಜಲಾಶಯವು ಭರ್ತಿಯಾಗಿದ್ದು, 2858.07 ಅಡಿ ನೀರು ಸಂಗ್ರಹವಾಗಿದೆ.