
ಬೀದರ್: ಔಷಧ ಸಿಂಪರಣೆಗೆ ಡ್ರೋನ್ ಬಳಕೆ
ಜನವಾಡ: ಕಾರ್ಮಿಕರ ಕೊರತೆಯ ಕಾರಣ ಬೀದರ್ ತಾಲ್ಲೂಕಿನಲ್ಲಿ ಕೃಷಿ ಚಟುವಟಿಕೆಗೆ ಡ್ರೋನ್ ಬಳಕೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ತಾಲ್ಲೂಕಿನ ಅನೇಕ ರೈತರು ಬೆಳೆಗಳಿಗೆ ಕೀಟನಾಶಕ ಸಿಂಪರಣೆಗೆ ಡ್ರೋನ್ ಬಳಸುತ್ತಿದ್ದಾರೆ.
ಮುಂಗಾರು ಹಂಗಾಮಿನಲ್ಲಿ ಜನವಾಡ, ಯರನಳ್ಳಿ, ಜಾಂಪಾಡ್, ಹೊಕ್ರಾಣ(ಬಿ), ಮರ್ಜಾಪುರ ಮತ್ತಿತರ ಗ್ರಾಮಗಳ ರೈತರು ಡ್ರೋನ್ ಮೂಲಕ ಸೋಯಾಬಿನ್, ಭತ್ತ, ಉದ್ದು, ಹೆಸರು ಬೆಳೆಗಳಿಗೆ ಔಷಧ ಸಿಂಪರಣೆ ಮಾಡಿದ್ದಾರೆ.
ತಾಲ್ಲೂಕಿನಲ್ಲಿ ಎರಡು ಖಾಸಗಿ ಕಂಪನಿಗಳು ಪ್ರತಿ ಎಕರೆಗೆ ₹ 400ರಂತೆ ಕೀಟನಾಶಕ ಸಿಂಪರಣೆಗೆ ಬಾಡಿಗೆ ಮೇಲೆ ಡ್ರೋನ್ ಸೇವೆ ಒದಗಿಸುತ್ತಿವೆ.
‘ಕೃಷಿ ಕೆಲಸಕ್ಕೆ ಕಾರ್ಮಿಕರು ಸಿಗುತ್ತಿಲ್ಲ. ಹೀಗಾಗಿ ಬೆಳೆಗಳಿಗೆ ರೋಗ ಹಾಗೂ ಕೀಟನಾಶಕ ಸಿಂಪರಣೆಗೆ ಮೂರು ವರ್ಷಗಳಿಂದ ಬಾಡಿಗೆ ಮೇಲೆ ಡ್ರೋನ್ ಬಳಸುತ್ತಿದ್ದೇನೆ’ ಎನ್ನುತ್ತಾರೆ ಜಾಂಪಾಡ್ ಗ್ರಾಮದ ರೈತ ಅಮೃತ್ ದೇವರಂಪಲ್ಲಿ.
‘ಡ್ರೋನ್ ಬಳಸಿ 20 ಎಕರೆ ಸೋಯಾಬಿನ್, ಭತ್ತ ಬೆಳೆಗೆ ಔಷಧ ಸಿಂಪರಣೆ ಮಾಡಿದ್ದೇನೆ. ಕಾರ್ಮಿಕರ ಮೂಲಕ ಸಿಂಪರಿಸಿದರೆ ಮೂರು ದಿನ ಬೇಕಾಗುತ್ತಿತ್ತು. ಡ್ರೋನ್ ಎರಡೂವರೆ ತಾಸಿನಲ್ಲೇ ಔಷಧ ಸಿಂಪರಣೆ ಮಾಡಿದೆ. ಡ್ರೋನ್ ಬಳಸಿದ್ದರಿಂದ ಕಾರ್ಮಿಕರ ಕೊರತೆ ಕಾಡಿಲ್ಲ. ಸ್ವಲ್ಪ ಹಣ ಹಾಗೂ ಸಮಯದ ಉಳಿತಾಯ ಆಗಿದೆ’ ಎಂದು ತಿಳಿಸುತ್ತಾರೆ.
‘ಡ್ರೋನ್ ಮೂಲಕ ಔಷಧ ಸಿಂಪರಣೆಗೆ ರೈತರು ರೋಗ ಹಾಗೂ ಕೀಟನಾಶಕ ಮಿಶ್ರಣ ಮಾಡಿ ಕೊಡಬೇಕಾಗುತ್ತದೆ. ಡ್ರೋನ್ ಆಪರೇಟರ್ ಕೂಡ ಔಷಧ ಮಿಶ್ರಣ ಮಾಡಿಕೊಳ್ಳಬಹುದು’ ಎನ್ನುತ್ತಾರೆ ಜನವಾಡ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ರಾಜಶೇಖರ ಬಸನಾಯಕ್.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260830-33-632806311