
ದುಲೀಪ್ ಟ್ರೋಫಿ ಟೂರ್ನಿ: ದಕ್ಷಿಣ ವಲಯಕ್ಕೆ ‘ಉತ್ತರ’ದ ಸವಾಲು
ಬೆಂಗಳೂರು: ದೇವನಹಳ್ಳಿಯ ವಿಮಾನ ನಿಲ್ದಾಣದ ಸನಿಹದಲ್ಲಿರುವ ಬಿಸಿಸಿಐ ಶ್ರೇಷ್ಠತಾ ಕೇಂದ್ರದಲ್ಲಿ ಮತ್ತೆ ದೇಶಿ ಕ್ರಿಕೆಟ್ ಕಲರವ ಪ್ರತಿಧ್ವನಿಸುತ್ತಿದೆ. ಇಲ್ಲಿಯ ಕ್ರೀಡಾಂಗಣಗಳಲ್ಲಿ ಭಾನುವಾರದಿಂದ ದುಲೀಪ್ ಟ್ರೋಫಿ ಟೂರ್ನಿಯ ಎರಡು ಸೆಮಿಫೈನಲ್ ಪಂದ್ಯಗಳು ಆರಂಭವಾಗಲಿವೆ.
ದಕ್ಷಿಣ ವಲಯವು ಉತ್ತರ ವಲಯದ ಎದುರು ಹಣಾಹಣಿ ನಡೆಸಲಿದೆ. ಇನ್ನೊಂದು ಕಡೆ ಕೇಂದ್ರ ವಲಯ ಮತ್ತು ಪಶ್ಚಿಮ ವಲಯ ತಂಡಗಳು ಮುಖಾಮುಖಿಯಾಗಲಿವೆ. ಇಲ್ಲಿ ಗೆದ್ದ ತಂಡಗಳು ಮುಂದಿನ ತಿಂಗಳ 6ರಿಂದ ಚೆನ್ನೈನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
ದೇಶಿ ಕ್ರಿಕೆಟ್ ಋತುವಿನ ಮೊದಲ ಟೂರ್ನಿ ಇದಾಗಿದೆ. ಈಚೆಗಷ್ಟೇ ಕ್ವಾರ್ಟರ್‌ಫೈನಲ್ ಪಂದ್ಯಗಳು ಇಲ್ಲಿ ನಡೆದಿದ್ದವು. ಅದರಲ್ಲಿ ಉತ್ತರ ವಲಯ ಮತ್ತು ಪೂರ್ವ ವಲಯ ತಂಡಗಳು ಗೆದ್ದು ಸೆಮಿಫೈನಲ್ ಪ್ರವೇಶಿಸಿದ್ದವು.
ಹೋದ ವರ್ಷ ಇದೇ ಕ್ರೀಡಾಂಗಣ ದಲ್ಲಿ ನಡೆದಿದ್ದ ಟೂರ್ನಿಯ ಫೈನಲ್‌ನಲ್ಲಿ ಸೋತಿದ್ದ ದಕ್ಷಿಣ ವಲಯ ತಂಡವು ಈ ಬಾರಿ ತಿಲಕ್ ವರ್ಮಾ ನಾಯಕತ್ವದಲ್ಲಿ ಕಣಕ್ಕಿಳಿಯಲಿದೆ. ಉತ್ತರ ವಲಯದ ಸವಾಲನ್ನು ಎದುರಿಸಲಿದೆ.
ದಕ್ಷಿಣ ವಲಯದಲ್ಲಿ ಕರ್ನಾಟಕದ ಬ್ಯಾಟರ್ ಕರುಣ್ ನಾಯರ್, ಸ್ಮರಣ್ ರವಿಚಂದ್ರನ್, ಸ್ಪಿನ್ನರ್ ಶ್ರೇಯಸ್ ಗೋಪಾಲ್ ಮತ್ತು ವೇಗಿ ವಿದ್ವತ್ ಕಾವೇರಪ್ಪ ಇದ್ದಾರೆ. ತಮಿಳುನಾಡಿನ ಎನ್.ಜಗದೀಶನ್ ಕೂಡ ಇದ್ದಾರೆ. ರಿಕಿ ಭುಯ್ ಅವಂತಹ ದೇಶಿ ಕ್ರಿಕೆಟ್‌ನ ಅನುಭವಿ ಕೂಡ ತಂಡದಲ್ಲಿದ್ದಾರೆ. ಈ ತಂಡದ ಬ್ಯಾಟಿಂಗ್ ವಿಭಾಗವು ಬಲಿಷ್ಠವಾಗಿದೆ.
ಆದರೆ ಉತ್ತರ ವಲಯದ ಸ್ಪಿನ್ ಜೋಡಿ ಅಬಿದ್ ಮುಷ್ತಾಕ್ ಮತ್ತು ನಿಶಾಂತ್ ಸಂಧು ಅವರ ಸವಾಲನ್ನು ಎದುರಿಸುವುದು ಸುಲಭವಲ್ಲ. ವೇಗದ ವಿಭಾಗದಲ್ಲಿ ಎಡಗೈ ಬೌಲರ್ ಅರ್ಷದೀಪ್ ಸಿಂಗ್, ಅನ್ಷುಲ್ ಕಂಬೋಜ್ ಮತ್ತು ಗುರ್ನೂರ್ ಬ್ರಾರ್ ಅವರಿದ್ದಾರೆ. ಮೂವರೂ ಭಾರತ ತಂಡದಲ್ಲಿ ಆಡಿರುವವರು. ತಂಡದ ನಾಯಕ ಕನ್ಹಯ್ಯಾ ವಾಧ್ವಾನ್, ಆಯುಷ್ ಬಡೋನಿ, ಅಬ್ದುಲ್ ಸಮದ್, ಯಶ್ ಧುಲ್, ಆಯುಷ್ ದೊಸೆಜಾ ಅವರು ಬ್ಯಾಟಿಂಗ್ ವಿಭಾಗದ ಶಕ್ತಿಯಾಗಿದ್ದಾರೆ.ಈ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕುವ ಹೊಣೆ ದಕ್ಷಿಣದ ವಿದ್ವತ್, ಶ್ರೇಯಸ್ ಮತ್ತು ಎಡಗೈ ಸ್ಪಿನ್ನರ್ ತನಯ್ ತ್ಯಾಗರಾಜನ್ ಅವರ ಮೇಲೆ ಇದೆ.
ಕಳೆದ ವಾರವಷ್ಟ್ರೇ ಇದೇ ಕ್ರೀಡಾಂಗಣದಲ್ಲಿ ಉತ್ತರ ವಲಯವು ಕ್ವಾರ್ಟರ್‌ಫೈನಲ್‌ನಲ್ಲಿ ಪಶ್ಚಿಮ ವಲಯದಂತಹ ಬಲಿಷ್ಠ ತಂಡವನ್ನು ಮಣಿಸಿತ್ತು. ಆದ್ದರಿಂದ ದಕ್ಷಿಣ ವಲಯಕ್ಕೆ ನಿಖರ ತಂತ್ರಗಾರಿಕೆಯೊಂದಿಗೆ ಕಣಕ್ಕಿಳಿಯುವ ಒತ್ತಡವಿದೆ.
ನೇರ ಪ್ರಸಾರ: ಸ್ಟಾರ್‌ಸ್ಪೋರ್ಟ್ಸ್ ನೆಟ್‌ವರ್ಕ್, ಜಿಯೊ ಹಾಟ್‌ಸ್ಟಾರ್
ವೈಭವ್ ಬೌಲಿಂಗ್ ಕುತೂಹಲ; ರಜತ್ ಪಾಟೀದಾರ್ ಆಕರ್ಷಣೆ
ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸತತ ಎರಡು ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ ನಾಯಕ ರಜತ್ ಪಾಟೀದಾರ್ ಮತ್ತು ‘ಬೇಬಿ ಬಾಸ್’ ವೈಭವ್ ಸೂರ್ಯವಂಶಿ ಇಲ್ಲಿ ಮುಖಾಮುಖಿಯಾಗಲಿದ್ದಾರೆ.
ರಜತ್ ಅವರು ‘ಹಾಲಿ ಚಾಂಪಿಯನ್’ ಕೇಂದ್ರವಲಯದ ನಾಯಕತ್ವ ವಹಿಸಿದ್ದಾರೆ. ಇಶಾನ್ ಕಿಶನ್ ನಾಯಕತ್ವದ ಪೂರ್ವ ವಲಯ ತಂಡದಲ್ಲಿ 15ರ ಪೋರ ವೈಭವ್ ಆಡುತ್ತಿದ್ದಾರೆ. ಕ್ವಾರ್ಟರ್‌ಫೈನಲ್‌ನಲ್ಲಿ ಈಶಾನ್ಯ ವಲಯದ ಎದುರು ವೈಭವ್ ಅವರು ಬ್ಯಾಟಿಂಗ್‌ನಲ್ಲಿ ವಿಫಲರಾಗಿದ್ದರು. ಆದರೆ; ಬೌಲಿಂಗ್ ಮಾಡುವ ಅವಕಾಶ ಸಿಕ್ಕಾಗ ಒಂದೇ ಓವರ್‌ನಲ್ಲಿ ಎರಡು ವಿಕೆಟ್ ಗಳಿಸಿದ್ದರು.
‘ಯಾವುದೇ ಬ್ಯಾಟರ್‌ಗೆ ಸಾಂದರ್ಭಿಕವಾಗಿ ಬೌಲಿಂಗ್ ಮಾಡುವುದು ಖುಷಿ ಕೊಡುತ್ತದೆ. ಅದರಲ್ಲೂ ವಿಕೆಟ್ ಗಳಿಸಿಬಿಟ್ಟರೆ ಸಂಭ್ರಮಕ್ಕೆ ಸಾಟಿಯೇ ಇಲ್ಲ. ನನಗೂ ಹಾಗೆಯೇ ಆಯಿತು. ಬಹಳ ಖುಷಿಯಾಯಿತು’ ಎಂದು ವೈಭವ್ ಹೇಳುತ್ತಾರೆ.
ಆದರೆ ಸೆಮಿಫೈನಲ್‌ನಲ್ಲಿ ಬಲಾಢ್ಯ ತಂಡವಾಗಿರುವ ಕೇಂದ್ರ ವಲಯದ ಎದುರು ಅವರಿಗೆ ಬೌಲಿಂಗ್ ಕೊಡಲು ನಾಯಕ ಇಶಾನ್ ಮುಂದಾಗುವುದು ಅನುಮಾನ. ಆದರೆ ಉಪನಾಯಕರೂ ಆಗಿರುವ ವೈಭವ್ ಅವರಿಗೆ ‘ಕೆಂಪು ಚೆಂಡಿನ’ ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ಲಯ ಕಂಡುಕೊಳ್ಳುವ ಅವಕಾಶವಂತೂ ಸಿಗಲಿದೆ. ಈಗಾಗಲೇ ಟಿ20 ಕ್ರಿಕೆಟ್‌ನಲ್ಲಿ ಛಾಪು ಮೂಡಿಸಿರುವ ವೈಭವ್ ದೀರ್ಘ ಮಾದರಿಯಲ್ಲಿಯೂ ತಮ್ಮ ಹೆಜ್ಜೆಗುರುತು ಮೂಡಿಸಬೇಕಿದೆ. ಆದ್ದರಿಂದ ಅವರ ಮೇಲೆ ಅಪಾರ ನಿರೀಕ್ಷೆ ಇದೆ. ಸುದೀಪ್ ಕುಮಾರ್ ಘರಾಮಿ, ಶಹಬಾಜ್ ಅಹಮದ್ ಅಮೋಘ ಲಯದಲ್ಲಿದ್ದಾರೆ. ಅನುಭವಿ ಬೌಲರ್ ಮೊಹಮ್ಮದ್ ಶಮಿ, ಮುಕೇಶ್ ಕುಮಾರ್ ಅವರು ಬೌಲಿಂಗ್ ವಿಭಾಗದ ಪ್ರಮುಖರಾಗಿದ್ದಾರೆ.
ರಜತ್ ಬಳಗದಲ್ಲಿರುವ ಆರ್ಯನ್ ಜುಯಾಲ್, ಹರ್ಷ ದುಬೆ, ರಿಂಕು ಸಿಂಗ್ ಹಾಗೂ ಯಶ್ ಠಾಕೂರ್ ಅವರ ಮೇಲೆ ನಿರೀಕ್ಷೆಯ ಭಾರ ಇದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260830-51-1737210305