
ಶ್ರಾವಣದಲ್ಲೂ ಚೇತರಿಕೆಯಾಗದ ಅಡಿಕೆ ದರ
ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಗೆ ಶ್ರಾವಣ ಮಾಸ ಬಂದೊಡನೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿ, ದರ ಏರಿಕೆಯಾಗುತ್ತಿತ್ತು. ಆದರೆ, ಈ ಬಾರಿ ಶ್ರಾವಣದಲ್ಲಿ ಅಡಿಕೆ ಧಾರಣೆಯಲ್ಲಿ ಯಾವುದೇ ಚೇತರಿಕೆ ಕಾಣಿಸದಿರುವುದು, ಫಸಲನ್ನು ದಾಸ್ತಾನು ಮಾಡಿದ್ದ ಬೆಳೆಗಾರರಲ್ಲಿ ನಿರಾಸೆ ಮೂಡಿಸಿದೆ.
ಇಲ್ಲಿನ ಅಡಿಕೆ ಮಾರುಕಟ್ಟೆಯಲ್ಲಿ ಸದ್ಯ ಚಾಲಿ ಅಡಿಕೆಗೆ ಕ್ವಿಂಟಲ್ಗೆ ಸರಾಸರಿ ₹46 ಸಾವಿರ ಹಾಗೂ ಕೆಂಪಡಿಕೆಗೆ ₹50 ಸಾವಿರ ಆಸುಪಾಸಿನಲ್ಲಿ ದರ ಲಭಿಸುತ್ತಿದೆ. ಶಿರಸಿ ಮತ್ತು ಸುತ್ತಮುತ್ತಲಿನ ಶೇ 75ರಷ್ಟು ಅಡಿಕೆ ಬೆಳೆಗಾರರು ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿಯೇ ತಮ್ಮ ಫಸಲನ್ನು ಮಾರಾಟ ಮಾಡಿ ಹಣ ಮಾಡಿಕೊಳ್ಳುತ್ತಾರೆ. ಆದರೆ ಉಳಿದ ಶೇ 25ರಷ್ಟು ರೈತರು ಶ್ರಾವಣದ ದಿನಗಳಲ್ಲಿ ಉತ್ತಮ ಧಾರಣೆ ಸಿಗುತ್ತದೆ ಎಂಬ ನಿರೀಕ್ಷೆಯೊಂದಿಗೆ ತಮ್ಮ ಸರಕನ್ನು ಕಾಯ್ದಿರಿಸುತ್ತಾರೆ.
‘ಶ್ರಾವಣದ ಅವಧಿಯಲ್ಲಿ ಕ್ವಿಂಟಲ್ಗೆ ₹6 ಸಾವಿರದಿಂದ ₹10 ಸಾವಿರದವರೆಗೆ ಹೆಚ್ಚುವರಿ ಧಾರಣೆ ಸಿಗುತ್ತಿತ್ತು. ಆದರೆ ಕಳೆದ ಮೂರು ವರ್ಷಗಳಿಂದ ಶ್ರಾವಣ ಬಂದರೂ ಬೆಲೆ ಏರಿಕೆಯಾಗದ ಪರಿಣಾಮ, ದರಕ್ಕಾಗಿ ಕಾಯುವ ಸಂಪ್ರದಾಯವೇ ಬೆಳೆಗಾರರಿಗೆ ಹೊರೆಯಾಗಿ ಪರಿಣಮಿಸಿದೆ’ ಎನ್ನುತ್ತಾರೆ ರೈತರೊಬ್ಬರು.
‘ಈ ಭಾಗದ ಅಡಿಕೆಗೆ ಪ್ರಮುಖವಾಗಿ ಗುಜರಾತ್, ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶಗಳು ಪ್ರಮುಖ ಮಾರುಕಟ್ಟೆ ಕೇಂದ್ರಗಳಾಗಿವೆ. ಉತ್ತರ ಭಾರತದ ರಾಜ್ಯಗಳಲ್ಲಿ ಮಳೆಯಿಂದಾಗಿ ವ್ಯಾಪಾರ ವಹಿವಾಟು ಮಂದಗತಿಯಲ್ಲಿದ್ದು, ಶ್ರಾವಣ ಮಾಸದ ಸಾಂಪ್ರದಾಯಿಕ ಬೇಡಿಕೆ ಕ್ಷೀಣಿಸಿದೆ. ಇದರ ಜತೆಗೆ, ಮಾರುಕಟ್ಟೆಗೆ ಕಳಪೆ ಗುಣಮಟ್ಟದ ಅಡಿಕೆ ಪೂರೈಕೆಯಾಗುತ್ತಿರುವುದು ಸಹ ಉತ್ತಮ ಗುಣಮಟ್ಟದ ಮಲೆನಾಡಿನ ಅಡಿಕೆಯ ಬೆಲೆ ಕುಸಿತಕ್ಕೆ ಕಾರಣವಾಗಿದೆ’ ಎಂದು ಸ್ಥಳೀಯ ಸಹಕಾರ ಸಂಘಗಳ ಪ್ರಮುಖರು ವಿಶ್ಲೇಷಿಸುತ್ತಾರೆ.
‘ಕಳೆದ ಕೆಲವು ವರ್ಷಗಳಲ್ಲಿ ಎದುರಾದ ಹವಾಮಾನ ವೈಪರೀತ್ಯ, ಅತಿಯಾದ ಮಳೆ ಹಾಗೂ ಮಾರಕ ಕೊಳೆರೋಗದ ಬಾಧೆಯಿಂದಾಗಿ ಅಡಿಕೆ ಇಳುವರಿ ಗಮನಾರ್ಹವಾಗಿ ಕಡಿಮೆಯಾಗಿತ್ತು. ಉತ್ಪಾದನೆ ಕಡಿಮೆಯಿದ್ದರೂ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗಬಹುದು ಎಂಬ ಆಸೆಯಿಂದ ಸಾಲ ಮಾಡಿ ರೈತರು ಅಡಿಕೆಯನ್ನು ದಾಸ್ತಾನು ಮಾಡಿದ್ದರು. ಆದರೆ ಈಗ ಬೆಲೆಯೂ ಸಿಗದೆ, ಇತ್ತ ಸರಕನ್ನು ಇನ್ನಷ್ಟು ದಿನ ದಾಸ್ತಾನು ಮಾಡಲಾಗದೆ ಕೃಷಿಕರು ಇಕ್ಕಟ್ಟಿಗೆ ಸಿಲುಕಿದ್ದಾರೆ’ ಎಂದು ಕೃಷಿಕ ನಾಗರಾಜ ಹೆಗಡೆ ಅಲವತ್ತುಕೊಂಡರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260826-20-1133863726