
ಹದಗೆಟ್ಟ ರಾಯಬಾಗ–ಹಾರೂಗೇರಿ ರಸ್ತೆ!: ಸಂಚಾರ ದುಸ್ತರ: ವಾಹನ ಸವಾರರ ಪರದಾಟ
ರಾಯಬಾಗ: ರಾಯಬಾಗ–ಹಾರೂಗೇರಿ ಮಾರ್ಗದ 18 ಕಿ.ಮೀ ರಸ್ತೆ ಹದಗೆಟ್ಟಿದೆ. ಹಲವು ಕಡೆ ದೊಡ್ಡ ಗುಂಡಿ ಬಿದ್ದಿರುವುದರಿಂದ, ವಾಹನ ಸವಾರರು ಹಾಗೂ ಪ್ರಯಾಣಿಕರು ನಿತ್ಯ ಸಂಚಾರಕ್ಕೆ ತೊಂದರೆ ಅನುಭವಿಸುವಂತಾಗಿದೆ.
2018–19ನೇ ಸಾಲಿನಲ್ಲಿ ನಿರ್ಮಿಸಿದ್ದ ರಸ್ತೆಯ ಡಾಂಬರು ಸಂಪೂರ್ಣವಾಗಿ ಕಿತ್ತು ಹೋಗಿದೆ. ಮಳೆಯಾದರೆ ಗುಂಡಿಗಳಲ್ಲಿ ನೀರು ನಿಂತು, ಅವುಗಳ ಆಳ ತಿಳಿಯದ ಸ್ಥಿತಿ ನಿರ್ಮಾಣವಾಗುತ್ತಿದೆ. ಹಾಗಾಗಿ ಅಪಾಯದ ನಡುವೆಯೇ ಸಂಚರಿಸಬೇಕಾದ ಸ್ಥಿತಿ ಎದುರಾಗಿದೆ. ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಪ್ರಯಾಣಿಸುವಂತಾಗಿದೆ.
ರಾಯಬಾಗ, ಹಾರೂಗೇರಿ ಮತ್ತಿತರ ಗ್ರಾಮಗಳ ಜನರು ಸಂಚಾರಕ್ಕೆ ಈ ರಸ್ತೆಯನ್ನೇ ನಿತ್ಯ ಅವಲಂಬಿಸಿದ್ದಾರೆ. ನಿತ್ಯ ಸಾವಿರಾರು ವಾಹನ ಈ ಮಾರ್ಗದಲ್ಲಿ ಸಂಚರಿಸುತ್ತವೆ. ಆದರೆ, ಹದಗೆಟ್ಟ ರಸ್ತೆಯಿಂದಾಗಿ ಸಂಚಾರ ದುಸ್ತರವಾಗಿ ಪರಿಣಮಿಸಿದೆ ಎಂದು ಹಲವು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.
‘ರಾತ್ರಿ ಸಂಚರಿಸುವಾಗ ರಸ್ತೆಯಲ್ಲಿನ ಗುಂಡಿ ಕಾಣಿಸುತ್ತಿಲ್ಲ. ಇದರಿಂದಾಗಿ ಅಪಘಾತ ಸಂಭವಿಸುವ ಸಾಧ್ಯತೆ ಇದೆ’ ಎಂದು ಸವಾರರು ಆತಂಕ ವ್ಯಕ್ತಪಡಿಸುತ್ತಾರೆ.
‘ಸಂಬಂಧಿತ ಅಧಿಕಾರಿಗಳು ರಸ್ತೆಯಲ್ಲಿನ ಗುಂಡಿ ಮುಚ್ಚಬೇಕು. ಅಗತ್ಯವಿರುವ ಕಡೆ ಡಾಂಬರೀಕರಣ ಮಾಡಬೇಕು’ ಎಂಬ ಆಗ್ರಹ ಕೇಳಿಬರುತ್ತಿದೆ.
ರಸ್ತೆ ಹದಗೆಟ್ಟಿದ್ದರಿಂದ ನಿತ್ಯ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅಧಿಕಾರಿಗಳು ಕೂಡಲೇ ಕ್ರಮಕೈಗೊಳ್ಳಬೇಕು
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260826-21-1597891934