ಪಡಿತರದಾರರ ಇ–ಕೆವೈಸಿ: ಕಾಣದ ಪ್ರಗತಿ

ಪಡಿತರದಾರರ ಇ–ಕೆವೈಸಿ: ಕಾಣದ ಪ್ರಗತಿ

ಪಡಿತರದಾರರ ಇ–ಕೆವೈಸಿ: ಕಾಣದ ಪ್ರಗತಿ

ಬೆಳಗಾವಿ: ರಾಜ್ಯದ ನ್ಯಾಯಬೆಲೆ ಅಂಗಡಿಗಳಲ್ಲಿ ಇ–ಕೆವೈಸಿ ಮಾಡುವ ಪ್ರಕ್ರಿಯೆ ಆರಂಭವಾಗಿ ತಿಂಗಳಾದರೂ ಶೇ 9.73ರಷ್ಟು ಮಾತ್ರ ಪ್ರಗತಿಯಾಗಿದೆ. 

ಸರ್ವರ್‌ ಸಮಸ್ಯೆ, ವೃದ್ಧರು ಮತ್ತು ಕಟ್ಟಡ ಕಾರ್ಮಿಕರ ಬೆರಳಚ್ಚು ದಾಖಲಾಗದಿರುವುದು ಸೇರಿ ಹಲವು  ಕಾರಣಗಳಿಂದ 12 ಜಿಲ್ಲೆಗಳಲ್ಲಿ ಶೇ 1ರಷ್ಟು ಪ್ರಗತಿಯೂ ಆಗಿಲ್ಲ.

ಪಡಿತರ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ರಾಜ್ಯದ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಜುಲೈ 10ರಿಂದ ಇ–ಕೆವೈಸಿ ಮಾಡಲಾಗುತ್ತಿದೆ. ಇದಕ್ಕಾಗಿ ಬಿಪಿಎಲ್‌, ಎಪಿಎಲ್‌, ಅಂತ್ಯೋದಯ ಸೇರಿ 2.67 ಕೋಟಿ ಪಡಿತರ ಚೀಟಿದಾರರನ್ನು ಗುರುತಿಸಲಾಗಿದೆ.

ಆಗಸ್ಟ್‌ 14ರವರೆಗೆ 26.03 ಲಕ್ಷ ಪಡಿತರ ಚೀಟಿದಾರರು ಇ–ಕೆವೈಸಿ ಮಾಡಿಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ಬೆಳಗಾವಿ (ಶೇ 52.84), ವಿಜಯಪುರ (ಶೇ 46.35), ರಾಯಚೂರು (ಶೇ 25.71) ಮುಂದಿವೆ. ಗದಗ (ಶೇ 0.20) ಕೊನೇ ಸ್ಥಾನದಲ್ಲಿದೆ.

ತುಮಕೂರು, ಕಲಬುರಗಿ, ಹಾಸನ, ಚಿತ್ರದುರ್ಗ, ಹಾವೇರಿ, ಕೋಲಾರ, ವಿಜಯನಗರ, ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮೀಣ, ಚಿಕ್ಕಮಗಳೂರು, ಚಾಮರಾಜನಗರದಲ್ಲಿ ಶೇ 1ರಷ್ಟು ಪ್ರಗತಿಯೂ ಆಗಿಲ್ಲ.

ಐದು ವರ್ಷಗಳ ಹಿಂದೆ ಇ–ಕೆವೈಸಿ ಮಾಡಿಸಿದವರ ಪೈಕಿ ಹಲವರು ಮೃತಪಟ್ಟಿದ್ದಾರೆ. ಪಡಿತರ ಚೀಟಿದಾರರ ಪಟ್ಟಿಯಲ್ಲಿ ಕೆಲವು ಅನರ್ಹರು ಸೇರಿದ್ದಾರೆ ಎಂಬ ಆರೋಪವೂ ಇದೆ. ಹಾಗಾಗಿ, ಇ–ಕೆವೈಸಿ ಮಾಡಿಸಿ ಐದು ವರ್ಷ ಪೂರೈಸಿದ ಫಲಾನುಭವಿಗಳು ಮತ್ತೊಮ್ಮೆ ಇ–ಕೆವೈಸಿ ಮಾಡಿಸಬೇಕು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಆದೇಶಿಸಿದೆ. ಪಡಿತರ ಚೀಟಿಯಲ್ಲಿರುವ ಎಲ್ಲ ಸದಸ್ಯರಿಗೂ ಇದು ಕಡ್ಡಾಯ. ಸೆಪ್ಟೆಂಬರ್‌ 30ರೊಳಗೆ ಇ–ಕೆವೈಸಿ ಆಗದಿದ್ದರೆ ಪಡಿತರ ವಿತರಣೆ ನಿಲ್ಲಿಸುವುದಾಗಿ ಇಲಾಖೆ ಎಚ್ಚರಿಕೆ ಕೊಟ್ಟಿದೆ. 

‘ಕಟ್ಟಡ ಕಾರ್ಮಿಕನಾದ ನಾನು ಇ–ಕೆವೈಸಿ ಮಾಡಿಸಲು ಮೂರು ಸಲ ನ್ಯಾಯಬೆಲೆ ಅಂಗಡಿಗೆ ಹೋಗಿದ್ದೆ. ಆದರೆ, ನನ್ನ ಬೆರಳಚ್ಚು ದಾಖಲಾಗುತ್ತಿಲ್ಲ. ಹಾಗಾಗಿ, ಇ–ಕೆವೈಸಿ ಮಾಡಿಸುವುದು ಹೇಗೆಂದು ಚಿಂತೆಯಾಗಿದೆ’ ಎಂದು ಬೈಲಹೊಂಗಲ ತಾಲ್ಲೂಕಿನ ವಕ್ಕುಂದ ಗ್ರಾಮಸ್ಥ ಸಹದೇವ ಕರೀಕಟ್ಟಿ ಹೇಳಿದರು.

‘ನಮ್ಮೂರು ರಾಮದುರ್ಗ ತಾಲ್ಲೂಕಿನ ಹುಲಕುಂದ. ಬೆಳಗಾವಿಯಲ್ಲಿ ವಾಸವಿದ್ದೇವೆ. ಈಚೆಗೆ ಎಸ್‌ಐಆರ್‌ ಪ್ರಕ್ರಿಯೆಗೆ ಮಾಹಿತಿ ನೀಡಿಬಂದೆವು. ನಂತರ ಗೃಹಜ್ಯೋತಿ ಯೋಜನೆ ಫಲಾನುಭವಿಗಳ ದಾಖಲೆಗಳ ಮರುಪರಿಶೀಲನೆ ಕಾರ್ಯ ನಡೆಯಿತು. ಈ ಮಧ್ಯೆ, ಪಡಿತರಕ್ಕಾಗಿ ಇ–ಕೆವೈಸಿ ಮಾಡಿಸಬೇಕು ಎನ್ನುತ್ತಿದ್ದಾರೆ. ಈಗ ಅದಕ್ಕಾಗಿ ಮತ್ತೆ ಊರಿಗೆ ಹೋಗಬೇಕಾಗಿದೆ. ಹೀಗೆ ಸಾಲು ಸಾಲಾಗಿ ಪ್ರಕ್ರಿಯೆ ನಡೆಯುತ್ತಿರುವುದರಿಂದ ಬೆಳಗಾವಿಯಿಂದ ಊರಿಗೆ ಹೋಗಲು ಕಷ್ಟವಾಗುತ್ತಿದೆ’ ಎನ್ನುತ್ತಾರೆ ಸುರೇಶ ದಾನಶೆಟ್ಟಿ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ