‘ಯುವ–ನವ ಕರ್ನಾಟಕ’: ಡಿ.ಕೆ ಕನಸು

‘ಯುವ–ನವ ಕರ್ನಾಟಕ’: ಡಿ.ಕೆ ಕನಸು

‘ಯುವ–ನವ ಕರ್ನಾಟಕ’: ಡಿ.ಕೆ ಕನಸು

ಬೆಂಗಳೂರು: ಕೃಷಿಯಲ್ಲಿ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ ಅಳವಡಿಕೆಗೆ ‘ರೈತ ಚೈತನ್ಯ’, ಶಾಲಾ ಮಕ್ಕಳಿಗೆ ‘ಎಐ ಅಕ್ಷರ ಅಭಿಯಾನ’, ಕೌಶಲಾಭಿವೃದ್ಧಿಗಾಗಿ ‘ಕೋಡಿಂಗ್‌ ಗುರುಕುಲ’ ಮತ್ತು 2047ರ ವೇಳೆಗೆ ₹320 ಲಕ್ಷ ಕೋಟಿ ಆರ್ಥಿಕತೆಯುಳ್ಳ ರಾಜ್ಯವಾಗಿ ಕರ್ನಾಟಕ... 

80ನೇ ಸ್ವಾತಂತ್ರ್ಯೋತ್ಸವದ ಭಾಗವಾಗಿ ನಗರದ ಮಾಣಿಕ್‌ ಷಾ ಪರೇಡ್‌ ಮೈದಾನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಬಿತ್ತಿದ ‘ಯುವ–ನವ ಕರ್ನಾಟಕ’ದ ರೂಪುರೇಷೆಯ ಕೆಲವು ಘೋಷಣೆಗಳಿವು.

‘ದೇಶದ ಜನಸಂಖ್ಯೆಯಲ್ಲಿ ಕರ್ನಾಟಕದ ಪಾಲು ಶೇ 5.5ರಷ್ಟಿದ್ದರೂ ದೇಶದ ಆರ್ಥಿಕತೆಯಲ್ಲಿ ರಾಜ್ಯದ ಪಾಲು ಶೇ 9.19ರಷ್ಟಿದೆ. 2025–26ರಲ್ಲಿ ರಾಜ್ಯದ ಒಟ್ಟು ಆಂತರಿಕ ಉತ್ಪನ್ನ (ಜಿಎಸ್‌ಡಿಪಿ) ₹32.81 ಲಕ್ಷ ಕೋಟಿಯಷ್ಟಿತ್ತು. ಈಗಿನ ಒಟ್ಟು ಆರ್ಥಿಕತೆ 0.34 ಲಕ್ಷ ಕೋಟಿ ಡಾಲರ್‌ನಷ್ಟಿದೆ. 100ನೇ ಸ್ವಾತಂತ್ರ್ಯೋತ್ಸವದ ವೇಳೆಗೆ ಇದನ್ನು 3 ಲಕ್ಷ ಕೋಟಿ ಡಾಲರ್‌ಗೆ (ಸುಮಾರು ₹320 ಲಕ್ಷ ಕೋಟಿ) ಹೆಚ್ಚಿಸಬೇಕು’ ಎಂದು ಕರೆ ಕೊಟ್ಟರು.

‘ಕೃಷಿಯಿಂದ ಆರಂಭವಾಗಿ ತಂತ್ರಾಂಶ ಕೋಡಿಂಗ್‌ವರೆಗೂ ಅಭಿವೃದ್ಧಿಯಾಗಬೇಕು. ಆಗ ಮಾತ್ರವೇ ರಾಜ್ಯದ ಸಮಗ್ರ ಅಭಿವೃದ್ಧಿ ಸಾಧ್ಯ. ನಾವೆಲ್ಲರೂ ಒಟ್ಟಾಗಿ, ಒಂದು ತಂಡವಾಗಿ ದುಡಿದು ‘ನವ ಕರ್ನಾಟಕ’ವನ್ನು ಸಾಕಾರ ಮಾಡಬೇಕು’ ಎಂದರು.

‘ರೈತರ ಅನುಭವಕ್ಕೆ ಆಧುನಿಕ ತಂತ್ರಜ್ಞಾನವನ್ನು ಮೇಳೈಸಬೇಕು. ಡ್ರೋನ್‌ ಮತ್ತು ಉಪಗ್ರಹಗಳ ಮೂಲಕ ಕೃಷಿ ಭೂಮಿಯ ಸಮೀಕ್ಷೆ ಮಾಡಿ, ರೈತರು ಏನು ಬೆಳೆಯಬೇಕು ಎಂಬುದನ್ನು ತಿಳಿಸಬೇಕು. ರಾಜ್ಯದಲ್ಲಿ ಯಾವೆಲ್ಲಾ ಬೆಳೆ ಎಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿದೆ ಎಂಬ ಮಾಹಿತಿ ರೈತರ ಬೆರಳತುದಿಯಲ್ಲಿ ಲಭ್ಯವಿರಬೇಕು ಎಂಬ ಉದ್ದೇಶದಿಂದ ‘ಮುಖ್ಯಮಂತ್ರಿ ರೈತ ಚೈತನ್ಯ’ ಯೋಜನೆ ಜಾರಿಗೆ ತರುತ್ತಿದ್ದೇವೆ’ ಎಂದು ಘೋಷಿಸಿದರು.

‘ಕೃತಕ ಬುದ್ಧಿಮತ್ತೆ (ಎಐ) ಈ ಹೊತ್ತಿನ ತುರ್ತು. ಕಾಲೇಜು, ಎಂಜಿನಿಯರಿಂಗ್‌ ಶಿಕ್ಷಣದಲ್ಲಿ ಎಐ ಕಲಿಸುತ್ತೇವೆ ಎಂದು ಕೂತರೆ ಬಹಳ ಹಿಂದೆ ಉಳಿದುಬಿಡುತ್ತೇವೆ. ಹಾಗಾಗದಂತೆ ತಡೆಯುವ ಹೊಣೆ ನಮ್ಮ ಮೇಲಿದೆ. ಹೀಗಾಗಿ, ರಾಜ್ಯದ ಶಾಲೆಗಳಲ್ಲಿ 6ನೇ ತರಗತಿಯಿಂದಲೇ ಎಐ ಪಠ್ಯ ಪರಿಚಯಿಸುತ್ತೇವೆ. ಎಐ ಅಕ್ಷರ ಅಭಿಯಾನ, ಕೋಡಿಂಗ್‌ ಗುರುಕುಲ, ಎಐ ವಿಶ್ವವಿದ್ಯಾಲಯ ಆರಂಭಿಸಲಾಗುತ್ತಿದೆ’ ಎಂದು ವಿವರಿಸಿದರು.

‘ವೃತ್ತಿಪರ ಕೋರ್ಸ್‌ಗಳಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶೇ 15ರಷ್ಟು ಮೀಸಲಾತಿ ಜಾರಿಯಲ್ಲಿದೆ. ಇದರಲ್ಲಿ, 1ರಿಂದ 10ನೇ ತರಗತಿವರೆಗೆ ಸರ್ಕಾರಿ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಶೇ 7.5ರಷ್ಟು ಮೀಸಲಾತಿ ಕಲ್ಪಿಸಲು ‘ವಿದ್ಯಾರ್ಥಿ ಸಹಾಯಹಸ್ತ’ ಕಾರ್ಯಕ್ರಮ ಜಾರಿಗೆ ತರಲಾಗುತ್ತದೆ. ಇದರಿಂದ, ಎಂಜಿನಿಯರಿಂಗ್‌, ವೈದ್ಯಕೀಯ ಕೋರ್ಸ್‌ಗಳಲ್ಲಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳ ಪ್ರಾತಿನಿಧ್ಯ ಹೆಚ್ಚಾಗಲಿದೆ’ ಎಂದರು.

‘ಹೀಗೆ ಸಮಾಜದ ಎಲ್ಲ ವರ್ಗ, ಸಮುದಾಯ, ಪ್ರದೇಶಗಳನ್ನು ಅಭಿವೃದ್ಧಿಪಡಿಸುವ ಮೂಲಕ ‘ಭಾರತದ ಬಲ ಕರ್ನಾಟಕ’ ಎಂಬ ಪರಿಕಲ್ಪನೆಯನ್ನು ನನಸಾಗಿಸಲು ನಾವೆಲ್ಲರೂ ದುಡಿಯಬೇಕು’ ಎಂದು ಕರೆ ನೀಡಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ