
ಹೊಸಕೋಟೆ: ಜಲಮೂಲಕ್ಕೆ ಧಕ್ಕೆ; ಬರಿದಾದ ಜೀವದೊಡಲು
ಹೊಸಕೋಟೆ: ಕೆರೆ ಜಲಮೂಲಗಳಾದ ಹಳ್ಳಕೊಳ್ಳ, ರಾಜ ಕಾಲುವೆ, ಕಾನೆ, ಗುಂಡು ತೋಪುಗಳು ಒತ್ತುವರಿಯ ಕಬಂಧಬಾಹುಗೆ ಸಿಲುಕಿ ನಲುಗಿ ಹೋಗಿದೆ. ನೈಸರ್ಗಿಕವಾಗಿ ನೀರು ಹರಿಯದೆ ತಾಲ್ಲೂಕಿನ ಜೀವನಾಡಿಗಳು ಬರಿದಾಗುತ್ತಿವೆ. ಇದರ ಪರಿಣಾಮವಾಗಿ ಅಂತರ್ಜಲ ಕ್ಷೀಣಿಸುತ್ತಿದೆ. ಕೆರೆಗಳು ಅಸ್ತಿತ್ವ ಕಳೆದುಕೊಳ್ಳುತ್ತಿರುವದರಿಂದ ಪಕ್ಷಿ ಆವಾಸ ಸ್ಥಾನಕ್ಕೂ ಧಕ್ಕೆಯಾಗಿದೆ. ಜೀವ ವೈವಿಧ್ಯತೆಯೂ ನಾಶವಾಗುತ್ತಿದೆ.
ಕೆರೆ ಕುಂಟೆಗಳಿಗೆ ಮಳೆ ನೀರು ಹರಿಯುತ್ತಿದ್ದ ಹಳ್ಳಕೊಳ್ಳ, ರಾಜಕಾಲುವೆಗಳು ರಿಯಲ್ ಎಸ್ಟೇಟ್ ದಂಧೆಗೆ ಬಲಿಯಾಗಿವೆ. ಹೊಸಕೋಟೆ ನಗರ ವ್ಯಾಪ್ತಿಯಲ್ಲಿ 30 ರಾಜಕಾಲುವೆಗಳಿದ್ದವು. ಈಗ ಕಣ್ಣಿಗೆ ಕಾಣುವುದು ನಾಲ್ಕು ಮಾತ್ರ. ತಾಲ್ಲೂಕಿನಲ್ಲಿ 20 ವರ್ಷದ ಹಿಂದೆ ಸುಮಾರು 400ಕ್ಕೂ ಹೆಚ್ಚು ಕೆರೆಗಳಿದ್ದವು. ಈಗ ಆ ಸಂಖ್ಯೆ 194ಕ್ಕೆ ಇಳಿದಿವೆ.
1,500 ಅಡಿ ಬೋರ್‌ವೇಲ್ ಕೊರೆಯಿಸಿದರೂ ನೀರು ಸಿಗುತ್ತಿಲ್ಲ. ಇದರಿಂದ ಸಮಗ್ರ ಬೆಳೆ ಬೆಳೆಯಲಾಗದೆ ರೈತರು ನೀರಿನ ಲಭ್ಯತೆ ತಕ್ಕಂತೆ ಸೀಮಿತ ಬೆಳೆ ಮಾತ್ರ ಬೆಳೆಯುತ್ತಿದ್ದಾರೆ. ಈಗ ಮಳೆ ಕೈಕೊಟ್ಟಿರುವುದರಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ.
ಪೂರ್ವಜರು ನೀರು ಹರಿವಿನ ಮೂಲ ಅರಿತು ವೈಜ್ಞಾನಿಕವಾಗಿ ಕೆರೆ ಕುಂಟೆ ನಿರ್ಮಿಸಿದ್ದರು. ಬೆಂಗಳೂರಿನ ನಗರೀಕರಣ ತಾಲ್ಲೂಕಿಗೂ ವ್ಯಾಪಿಸಿದ ಫಲವಾಗಿ ಈ ಭಾಗದ ಜೀವನಾಡಿಗಳಂತಿದ್ದ ಜಲಮೂಲಗಳು ಮುಚ್ಚಿವೆ. ಯಾವ ಕೆರೆಯೂ ಸರಿಯಾಗಿ ತುಂಬುತ್ತಿಲ್ಲ ಎಂಬ ಕೂಗು ಪ್ರತಿ ಹಳ್ಳಿಯಲ್ಲೂ ಕೇಳಿ ಬರುತ್ತಿದೆ.
ತಾಲ್ಲೂಕಿನಲ್ಲಿ ಸುಮಾರು 15 ವರ್ಷದ ಹಿಂದೆ ಕೆರೆಗಳ ಮಣ್ಣು ತೆರವು ಮಾಡದಂತೆ ಅಂತರ್ಜಲ ಕಾಪಾಡುವ ನಿಟ್ಟಿನಲ್ಲಿ ಕೆರೆ ಸುತ್ತಮುತ್ತ ಬಿದಿರು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು. ಆದರೆ, ಯಾವ ಕೆರೆಗಳಲ್ಲಿ ಬಿದಿರು ತೋಪು ಇವೆ ಎಂದು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕೆರೆ ಒಡಲು ಬಗಿದು ರಾಜಾರೋಷವಾಗಿ ಮಣ್ಣು ಸಾಗಿಸಲಾಗುತ್ತಿದೆ. ಇದರಿಂದ ನೈಸರ್ಗಿಕ ಪದರ ನಾಶವಾಗಿ ಮಳೆಗಾಲದಲ್ಲಿ ಸಂಗ್ರಹ ಆಗುವ ಸ್ವಲ್ಪ ನೀರು ಕೂಡ ಸಂಗ್ರಹ ಆಗುತ್ತಿಲ್ಲ. ಇಷ್ಟೆಲ್ಲ ನಡೆಯುತ್ತಿದ್ದರೂ ಪಂಚಾಯಿತಿ ಹಾಗೂ ಸಣ್ಣ ನೀರಾವರಿ ಇಲಾಖೆ ಇದಕ್ಕೂ ತಮಗೂ ಯಾವುದೇ ಸಂಬಂಧವಿಲ್ಲದಂತೆ ವರ್ತಿಸುತ್ತಿದೆ. ಈ ನಿರ್ಲಕ್ಷ್ಯ ಧೋರಣೆಯಿಂದಲೇ ಕೆರೆಗಳು ಕಣ್ಮರೆಯಾಗುತ್ತಿವೆ ಎನ್ನುತ್ತಾರೆ ಸ್ಥಳೀಯರು.
ತಾಲ್ಲೂಕಿನ ಕೆರೆ, ಕುಂಟೆ, ರಾಜಕಾಲುವೆ, ಹಳ್ಳಕೊಳ್ಳ ಒತ್ತುವರಿ ತೆರವು ಸಂಬಂಧ ಮಾಹಿತಿಗಾಗಿ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಮುನಿಯಪ್ಪ ಅವರಿಗೆ ಕರೆ ಮಾಡಿದರೆ ಸ್ವೀಕರಿಸುತ್ತಿಲ್ಲ ಮತ್ತು ಕಳಿಸಿದ ಸಂದೇಶಕ್ಕೂ ಪ್ರತಿಕ್ರಿಯೆ ನೀಡಿಲ್ಲ.
ಕೊಳಚೆ ನೀರು ಹರಿಸಲು ಕೋಟ್ಯಂತರ ರೂಪಾಯಿ ವ್ಯರ್ಥ
‘ಜಲಮೂಲಗಳ ಒತ್ತುವರಿ ತೆರವುಗೊಳಿಸಿ ಸರಾಗವಾಗಿ ನೀರು ಹರಿಯುವಂತೆ ಕ್ರಮ ಕೈಗೊಂಡರೆ ಕೆರೆಗಳಲ್ಲಿ ಸದಾ ನೀರು ತುಂಬಿರುತ್ತದೆ. ಕೃಷಿಗೆ ನೈಸರ್ಗಿಕವಾದ ಸ್ವಚ್ಛ ನೀರು ಲಭ್ಯವಾಗುತ್ತದೆ. ಈ ಕೆಲಸ ಬಿಟ್ಟು ಸರ್ಕಾರ ಬೆಂಗಳೂರಿನ ಕೊಳಚೆ ನೀರನ್ನು ಹರಿಸಲು ಶುದ್ಧೀಕರಣದ ಹೆಸರಲ್ಲಿ ಸಾವಿರಾರು ಕೋಟಿ ವ್ಯರ್ಥವಾಗಿ ವ್ಯಯಿಸುತ್ತದೆ. ಈಗಾಗಲೇ ಕೆ.ಸಿ.ವ್ಯಾಲಿ ಹಾಗೂ ಎಚ್.ಎನ್.ವ್ಯಾಲಿ ನೀರಿನಿಂದ ರೈತರು ಹಲವು ಕಾಯಿಲೆ ಅನುಭವಿಸುತ್ತಿದ್ದಾರೆ. ಅನಗತ್ಯ ಯೋಜನೆಗಳನ್ನು ಕೈಬಿಟ್ಟು, ಜಲಮೂಲ ರಕ್ಷಣೆ ಮಾಡಿ, ಹದ್ದಬಸ್ತಿನಲ್ಲಿ ಇಟ್ಟರೆ ಕೆರೆಗಳು ತುಂಬುತ್ತವೆ’ ಎನ್ನುತ್ತಾರೆ ಸ್ಥಳೀಯರು.
ಎಷ್ಟು ದಿನ ಕೃಷಿ ಕೈಹಿಡಿಯುತ್ತೋ ಗೊತ್ತಿಲ್ಲ...