
ಧಾರವಾಡ | ರಕ್ಷಾ ಬಂಧನ: ರಾಖಿ ಖರೀದಿ ಜೋರು
ಧಾರವಾಡ: ಸಹೋದರ-ಸಹೋದರಿಯರ ಬಾಂಧವ್ಯದ ಪ್ರತೀಕದ ‘ರಕ್ಷಾ ಬಂಧನ’ ಹಬ್ಬಕ್ಕೆ ಇನ್ನು ಒಂದು ದಿನ ಬಾಕಿ ಉಳಿದಿದ್ದು, ಬುಧವಾರ ನಗರದ ಮಾರುಕಟ್ಟೆಯಲ್ಲಿ ವಿವಿಧ ಬಣ್ಣ, ವಿನ್ಯಾಸದ ರಾಖಿಗಳನ್ನು ಜನರು ಖರೀದಿಸಿದರು.
ಸುಭಾಷ್ ರಸ್ತೆ, ಲೈನ್ ಬಜಾರ್, ಅಕ್ಕಿ ಪೇಟೆ, ಸಿಬಿಟಿ, ಸೂಪರ್ ಮಾರ್ಕೆಟ್ ಸೇರಿದಂತೆ ಪ್ರಮುಖ ರಸ್ತೆಗಳ ಸ್ಟೇಷನರಿ ಅಂಗಡಿಗಳು ಹಾಗೂ ತಳ್ಳುಗಾಡಿಗಳಲ್ಲಿ ನಾನಾ ವಿನ್ಯಾಸದ ರಾಖಿಗಳು ರಾರಾಜಿಸುತ್ತಿವೆ. ಅಂಗಡಿಗಳ ಮುಂಭಾಗ ಹಾಗೂ ಚಾವಣಿಯಿಂದ ಇಳಿಬಿಟ್ಟಿರುವ ಹಗ್ಗಗಳಲ್ಲಿ ಗೊಂಚಲು ಗೊಂಚಲಾಗಿ ನೇತಾಡುತ್ತಿರುವ ರಾಖಿಗಳು ಹೆಣ್ಣುಮಕ್ಕಳನ್ನು ಸೆಳೆಯುತ್ತಿವೆ.
ಫ್ಯಾನ್ಸಿ ರಾಖಿ, ಪೆಂಡೆಂಟ್ ರಾಖಿ, ಸ್ಟೋನ್ ರಾಖಿ, ಜರ್ದೋಸಿ ರಾಖಿ, ಎಡಿ (ಅಮೆರಿಕಲನ್ ಡೈಮಂಡ್) ಹಾಗೂ ಲುಂಬಾ ರಾಖಿಗಳು ವಿಶೇಷ ಆಕರ್ಷಣೆಯಾಗಿವೆ. ಇದರೊಂದಿಗೆ ಪರಿಸರ ಕಾಳಜಿಯ ವಿವಿಧ ಧಾನ್ಯಗಳಿಂದ ಸಿದ್ಧಪಡಿಸಿದ ಪರಿಸರ ಸ್ನೇಹಿ ರಾಖಿಗಳೂ ಆಕರ್ಷಕವಾಗಿವೆ. ಮಹಿಳೆಯರು ಹಾಗೂ ಕಾಲೇಜು ವಿದ್ಯಾರ್ಥಿನಿಯರು ಬಂದು ತಮಗೆ ಇಷ್ಟವಾದ ವಿನ್ಯಾಸಗಳನ್ನು ಆಯ್ದುಕೊಳ್ಳುತ್ತಿದ್ದ ದೃಶ್ಯ ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿತ್ತು.
ಸಾಂಪ್ರದಾಯಿಕ ಶೈಲಿಯ ರೇಷ್ಮೆ ರಾಖಿಗಳು ಹೆಚ್ಚು ಮಾರಾಟವಾಗುತ್ತಿವೆ. ಅವುಗಳ ಬೆಲೆಯೂ ಕೊಂಚ ದುಬಾರಿ ಇದೆ. ಇದರೊಂದಿಗೆ ಸ್ಪಂಜ್, ವಿವಿಧ ಬಗೆಯ ದಾರ, ರುದ್ರಾಕ್ಷಿ, ಮಣಿ ಹಾಗೂ ಹರಳು ಪೋಣಿಸಿರುವ ರಾಖಿಗಳು ಮಾರಾಟವಾಗುತ್ತಿವೆ.
ಸ್ಪೈಡರ್ ಮ್ಯಾನ್, ಛೋಟಾ ಭೀಮ್, ಡೊರೆಮಾನ್ ಹಾಗೂ ವಿವಿಧ ಕಾರ್ಟೂನ್ ಪಾತ್ರಗಳ ಚಿತ್ರವಿರುವ ರಾಖಿಗಳನ್ನು ಮಕ್ಕಳಿಗಾಗಿ ಮಾರಾಟಕ್ಕಿಡಲಾಗಿದೆ. ಸ್ಟೋನ್, ಶ್ರೀರಕ್ಷಾ, ಶುಭ, ಸ್ವಸ್ತಿಕ್, ಕ್ರೇಜಿ, ತಾರಾ ಹಾಗೂ ಡೈಮಂಡ್ ಹೆಸರಿನ ರಾಖಿಗಳು ಲಭ್ಯ ಇವೆ.
₹ 2 ರಿಂದ ₹ 300ವರೆಗಿನ ದರದ ರಾಖಿಗಳು ಇವೆ. ಗ್ರಾಹಕರು ತಮಗಿಷ್ಟವಾದುದನ್ನು ಖರೀದಿಸುತ್ತಾರೆ ಎಂದು ವ್ಯಾಪಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಉಡುಗೊರೆ, ಸಿಹಿ ಖರೀದಿಯೂ ಜೋರು
ರಕ್ಷಾ ಬಂಧನದ ಅಂಗವಾಗಿ ಸಿಹಿ ಮತ್ತು ಉಡುಗೊರೆಗಳ ಖರೀದಿಯೂ ಜೋರಾಗಿದೆ. ಬೇಕರಿ ಮತ್ತು ಸಿಹಿ ಉಂಡೆ ಅಂಗಡಿಗಳಲ್ಲಿ ಪೇಢಾ, ಲಡ್ಡು, ಜಾಮೂನು, ಜಿಲೇಬಿಯನ್ನು ಜನ ಖರೀದಿಸಿದರು. ಮತ್ತೊಂದೆಡೆ ಸಹೋದರಿಯರಿಗೆ ಉಡುಗೊರೆ ನೀಡಲು ಸಜ್ಜಾಗಿರುವ ಸಹೋದರರು ಬಟ್ಟೆ, ಚಿನ್ನಾಭರಣ ಹಾಗೂ ಮೊಬೈಲ್ ಫೋನ್ ಮೊದಲಾದವುಗಳನ್ನು ಖರೀದಿಸಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260827-24-1924845210