
ಹಗರಿಬೊಮ್ಮನಹಳ್ಳಿ: ನೀರಲ್ಲಿ ಮುಳುಗಿದ್ದ ಇನ್ನೊಬ್ಬ ಯುವಕನ ಮೃತದೇಹ ಪತ್ತೆ
ಹಗರಿಬೊಮ್ಮನಹಳ್ಳಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ತಂಬ್ರಹಳ್ಳಿ ಬಳಿ ತುಂಗಭದ್ರಾ ಹಿನ್ನೀರು ಪ್ರದೇಶದಲ್ಲಿ ಮೀನು ಹಿಡಿಯಲು ಹೋಗಿ ನಾಪತ್ತೆಯಾಗಿದ್ದ ಮೂವರು ಯುವಕರ ಪೈಕಿ ಮತ್ತೊಬ್ಬ ಯುವಕನ ಮೃತದೇಹ ಗುರುವಾರ ಬೆಳಿಗ್ಗೆ ಪತ್ತೆಯಾಗಿದೆ.
ಮೀನುಗಾರ ಮಡಿವಾಳರ ಅಜ್ಜಪ್ಪ (26) ಅವರ ಮೃತದೇಹ ಮೀನಿನ ಬಲೆಯಲ್ಗಿ ಸಿಕ್ಕಿ ಹಾಕಿಕೊಂಡ ರೀತಿಯಲ್ಲಿ ಇತ್ತು. ಬೆಳಿಗ್ಗೆ ಉಡುಪಿಯಿಂದ ಬಂದ ಮುಳುಗು ತಜ್ಞ ಈಶ್ವರ ಮಲ್ಪೆ, ಎಸ್ಡಿಆರ್ಎಫ್ ತಂಡದವರು ಶೋಧ ನಡೆಸುತ್ತಿದ್ದಾಗ ಮೃತದೇಹ ಪತ್ತೆಯಾಯಿತು. ಅದನ್ನು ದಡಕ್ಕೆ ತರುತ್ತಿದ್ದಂತೆಯೇ ಕುಟುಂಬದವರ ರೋದನ ಮುಗಿಲು ಮುಟ್ಟಿತ್ತು.
ಬುಧವಾರ ಬೆಳಿಗ್ಗೆ ಯಮನೂರಪ್ಪನ ಮೃತದೇಹ ಪತ್ತೆಯಾಗಿತ್ತು. ಇದೀಗ ನಾಪತ್ತೆಯಾಗಿರುವ ಮಡಿವಾಳರ ರಾಜ ನಿಗಾಗಿ ಹುಡುಕಾಟ ನಡೆಯುತ್ತಿದೆ.
ಉಡುಪಿಯಿಂದ ಮುಳುಗು ತಜ್ಞ:
ಉಡುಪಿಯಿಂದ ಬಂದ ಮುಳುಗು ತಜ್ಞ ಈಶ್ವರ ಮಲ್ಪೆ ಅವರು ಗುರುವಾರ ಬೆಳಿಗ್ಗೆಯಿಂದಲೇ ತಮ್ಮ ಕಾರ್ಯಾಚರಣೆ ಆರಂಭಿಸಿದ್ದರು. ಕಲಬುರ್ಗಿಯಿಂದ ಬಂದಿರುವ ಎಸ್ಡಿಆರ್ಎಫ್ ಮತ್ತು ಅಗ್ನಿಶಾಮಕ ಸಿಬ್ಬಂದಿ ಸಹ ಅವರಿಗೆ ಸಾಥ್ ನೀಡಿದರು. ಎಸ್ಡಿಆರ್ಎಫ್ ಮತ್ತು ಅಗ್ನಿಶಾಮಕ ತಂಡದವರು ಬುಧವಾರ ದಿನವಿಡೀ ಹುಡುಕಾಟ ನಡೆಸಿದ್ದರೂ ಇತರ ಇಬ್ಬರ ಮೃತದೇಹ ಪತ್ತೆಯಾಗಿರಲಿಲ್ಲ. ಕತ್ತಲೆಯಾದ ಕಾರಣ ಬುಧವಾರದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಗುರುವಾರ ಬೆಳಿಗ್ಗೆ ಶೋಧ ಕಾರ್ಯಾಚರಣೆ ಆರಂಭವಾಗಿತ್ತು.
ಈಗಾಗಲೇ ವರದಿಯಾಗಿರುವಂತೆ ತಂಬ್ರಹಳ್ಳಿಯ ಮೀನುಗಾರ ಕುಟುಂಬದ ಮೂವರು ಯುವಕರು ಮಂಗಳವಾರ ಸಂಜೆ ತೆಪ್ಪದಲ್ಲಿ ಮೀನು ಹಿಡಿಯಲು ಹೋಗಿದ್ದಾಗ ಬಲವಾದ ಗಾಳಿ ಬೀಸಿದ್ದರಿಂದ ತೆಪ್ಪ ಮಗುಚಿ ಬಿದ್ದಿತ್ತು.