ಕಲಬುರಗಿ ಮೇಯರ್‌, ಉಪಮೇಯರ್ ಸ್ಥಾನಕ್ಕೆ ಶನಿವಾರ ಚುನಾವಣೆ ನಿಗದಿ

ಕಲಬುರಗಿ ಮೇಯರ್‌, ಉಪಮೇಯರ್ ಸ್ಥಾನಕ್ಕೆ ಶನಿವಾರ ಚುನಾವಣೆ ನಿಗದಿ

ಕಲಬುರಗಿ ಮೇಯರ್‌, ಉಪಮೇಯರ್ ಸ್ಥಾನಕ್ಕೆ ಶನಿವಾರ ಚುನಾವಣೆ ನಿಗದಿ

ಕಲಬುರಗಿ: ಇಲ್ಲಿನ ಮಹಾನಗರ ಪಾಲಿಕೆಯ 24ನೇ ಅವಧಿಯ ಮೇಯರ್‌, ಉಪಮೇಯರ್ ಸ್ಥಾನಕ್ಕೆ ಶನಿವಾರ ಚುನಾವಣೆ ನಿಗದಿಯಾಗಿದೆ. ಎರಡು ಅವಧಿಗೆ ಮೇಯರ್‌, ಉಪಮೇಯರ್‌ ಹುದ್ದೆಯಲ್ಲಿ ಆಡಳಿತ ನಡೆಸಿರುವ ಕಾಂಗ್ರೆಸ್‌ ಅಧಿಕಾರ ಉಳಿಸಿಕೊಳ್ಳುವ ಆತ್ಮವಿಶ್ವಾಸದಲ್ಲಿದೆ. ಮೈತ್ರಿ ಪಕ್ಷ ಜೆಡಿಎಸ್‌ ಬೆಂಬಲದೊಂದಿಗೆ ಅಧಿಕಾರದ ಗದ್ದುಗೆ ಏರಲು ಬಿಜೆಪಿ ಕಸರತ್ತು ನಡೆಸಿದೆ.

ಮೇಯರ್‌ ಸ್ಥಾನವು ಹಿಂದುಳಿದ ‘ಅ’ ವರ್ಗಕ್ಕೆ ಹಾಗೂ ಉಪಮೇಯರ್‌ ಸ್ಥಾನವು ‘ಸಾಮಾನ್ಯ ಮಹಿಳೆ’ ವರ್ಗಕ್ಕೆ ಮೀಸಲಾಗಿದೆ. ಈ ಚುನಾವಣೆಯಲ್ಲಿ 55 ಪಾಲಿಕೆ ಸದಸ್ಯರು ಸೇರಿದಂತೆ ಒಟ್ಟು 65 ಮಂದಿ ಮತ ಚಲಾಯಿಸುವ ಅಧಿಕಾರ ಹೊಂದಿದ್ದಾರೆ. ಸರಳ ಬಹುಮತಕ್ಕೆ 33 ಮತಗಳು ಬೇಕಿವೆ.

ಕಾಂಗ್ರೆಸ್‌ ಪಕ್ಷವು 27 ಪಾಲಿಕೆ ಸದಸ್ಯರೊಂದಿಗೆ ಒಬ್ಬ ರಾಜ್ಯಸಭೆ ಸದಸ್ಯ, ಒಬ್ಬ ಲೋಕಸಭೆ ಸದಸ್ಯ, ಇಬ್ಬರು ಶಾಸಕರು, ಮೂವರು ವಿಧಾನ ಪರಿಷತ್ ಸದಸ್ಯರು ಸೇರಿದಂತೆ 34 ಸದಸ್ಯರ ಬಹುಮತ ಹೊಂದಿದೆ. ಆದರೆ, ರಾಜ್ಯಸಭೆ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ದೆಹಲಿಯಲ್ಲಿದ್ದು, ಒಟ್ಟು ಮತಬಲ 33 ಆಗುತ್ತದೆ.

ಬಿಜೆಪಿಯು 22 ಪಾಲಿಕೆ ಸದಸ್ಯರು, ಒಬ್ಬ ಶಾಸಕ, ಇಬ್ಬರು ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಒಟ್ಟು 27 ಮತಗಳ ಬಲ ಹೊಂದಿದೆ. ಜೆಡಿಎಸ್‌ ಪಕ್ಷದ ನಾಲ್ವರು ಸದಸ್ಯರು ಹಾಗೂ ಇಬ್ಬರು ಪಕ್ಷೇತರರೂ ಪಾಲಿಕೆಯಲ್ಲಿದ್ದಾರೆ. ಮೈತ್ರಿ ಇರುವುದರಿಂದ ಜೆಡಿಎಸ್‌ ಮತಗಳು ಬಿಜೆಪಿಗೆ ದೊರೆತು, ಪಕ್ಷೇತರರನ್ನು ಸೆಳೆದರೆ ಒಟ್ಟು ಮತಗಳ ಬಲ 33 ಆಗುತ್ತದೆ. ಆಗ ‘ಕಮಲ’ಕ್ಕೂ ಅರಳುವ ಅವಕಾಶವಿದೆ.

ಗುಟ್ಟು ಬಿಡದ ಪಕ್ಷಗಳು:ಮೇಯರ್‌, ಉಪಮೇಯರ್‌ ಚುನಾವಣೆ ಅಂಗವಾಗಿ ಕಾಂಗ್ರೆಸ್‌ ಹಾಗೂ ಬಿಜೆಪಿ–ಜೆಡಿಎಸ್‌ ಪಕ್ಷಗಳು ಶುಕ್ರವಾರ ತಡರಾತ್ರಿವರೆಗೂ ಬಿರುಸಿನ ಸಭೆ ನಡೆಸಿ ಚುನಾವಣೆಯ ಲೆಕ್ಕಾಚಾರ ಹಾಕಿದವು. ಆದರೆ, ಯಾವುದೇ ಪಕ್ಷವು ತನ್ನ ‘ಗುಟ್ಟು’ ಬಿಟ್ಟುಕೊಟ್ಟಿಲ್ಲ.

ಕಾಂಗ್ರೆಸ್‌ ಪಕ್ಷದಲ್ಲಿ ಮೂವರು ಸ್ಪರ್ಧಿಗಳು ಮೇಯರ್‌ ರೇಸ್‌ನಲ್ಲಿ ಇದ್ದಾರೆ. ಹಿಂದಿನ ಎರಡು ಅವಧಿಗೆ ಮೇಯರ್‌ ಹುದ್ದೆಯು ಕಲಬುರಗಿ ದಕ್ಷಿಣ ಕ್ಷೇತ್ರಕ್ಕೆ ದಕ್ಕಿತ್ತು. ಈ ಸಲ ಕಲಬುರಗಿ ಉತ್ತರ ಮತಕ್ಷೇತ್ರಕ್ಕೆ ನೀಡಲು ಕಾಂಗ್ರೆಸ್ ಹೈಕಮಾಂಡ್‌ ನಿರ್ಧರಿಸಿದೆ. ಅದರಂತೆ 18ನೇ ವಾರ್ಡ್ ಸದಸ್ಯ ಸೈಯದ್‌ ಅಹ್ಮದ್, 21ನೇ ವಾರ್ಡ್‌ನ ಅಜ್ಮಲ್‌ ಗೋಲಾ ಹಾಗೂ 14ನೇ ವಾರ್ಡ್‌ನ ಅಲಿಖಾನ್‌ ಹೆಸರುಗಳು ಚಾಲ್ತಿಯಲ್ಲಿವೆ.

ಮೃದುಭಾಷಿಯಾದ ಸೈಯದ್ ಅಹ್ಮದ್‌ 4ನೇ ಅವಧಿಗೆ ಪಾಲಿಕೆ ಸದಸ್ಯರಾಗಿದ್ದಾರೆ. ಈ ಹಿಂದೆ ಒಮ್ಮೆ ಮೇಯರ್‌ ಆಗಿರುವ ಅನುಭವ ಜೊತೆಗಿದೆ. ಅಜ್ಮಲ್ ಗೋಲಾ 2ನೇ ಅವಧಿಗೆ ಪಾಲಿಕೆ ಸದಸ್ಯರು. ಆದರೆ, ಶಾಸಕಿ ಕನೀಜ್‌ ಫಾತಿಮಾ ಅವರ ಕುಟುಂಬಕ್ಕೆ ಬಹುಆಪ್ತರು. ಅಲಿಖಾನ್ ಅವರು ಬೀದರ್‌ನ ಮಾಜಿ ಸಚಿವ ರೆಹಮಾನ್‌ ಖಾನ್ ಅವರ ಸಹೋದರ. ಹೀಗಾಗಿ ಕಾಂಗ್ರೆಸ್‌ನಲ್ಲಿ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಈ ಮೂವರ ಪೈಕಿ ಒಬ್ಬರು ಮೇಯರ್‌ ಹುದ್ದೆ ಅಲಂಕರಿಸುವುದು ಖಚಿತ ಎಂದು ಮೂಲಗಳು ಹೇಳಿವೆ.

ಉಪಮೇಯರ್‌ ಹುದ್ದೆಗೆ ಫರ್ಹಾ ಖುಸ್ರೋ ಜಾಗೀರದಾರ ಹೆಸರು ಚಾಲ್ತಿಯಲ್ಲಿದೆ.

ಮೇಯರ್‌, ಉಪ ಮೇಯರ್‌ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಪಕ್ಷದ ವೀಕ್ಷಕ, ವಿಧಾನ ಪರಿಷತ್ ಸದಸ್ಯ ವಸಂತಕುಮಾರ ಅವರು, ನಗರದ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ಪಾಲಿಕೆ ಸದಸ್ಯರ, ಮುಖಂಡರು, ಶಾಸಕರು, ಸಚಿವರ ಅಭಿಪ್ರಾಯ ಆಲಿಸಿದ್ದಾರೆ. ಕ್ರೋಡೀಕೃತ ಅಭಿಪ್ರಾಯವನ್ನು ಪಕ್ಷದ ಉನ್ನತ ನಾಯಕರಿಗೆ ತಿಳಿಸಲಿದ್ದು, ಶನಿವಾರ ಬೆಳಿಗ್ಗೆ ಅಭ್ಯರ್ಥಿ ಹೆಸರು ಅಂತಿಮಗೊಳ್ಳಲಿದೆ ಎಂದು ಅದೇ ಮೂಲಗಳು ಹೇಳಿವೆ.

ಬಿಜೆಪಿಯಿಂದ ಮೇಯರ್‌ ಹುದ್ದೆಗೆ ಗುರುರಾಜ ಪಟ್ಟಣ ಹಾಗೂ ಮೇಘನಾ ಕಳಸ್ಕರ ಹೆಸರುಗಳು ಚಾಲ್ತಿಯಲ್ಲಿವೆ. ಜೆಡಿಎಸ್‌ ತನ್ನ ನಡೆ ಬಿಟ್ಟುಕೊಟ್ಟಿಲ್ಲ.

ಬಿಜೆಪಿಗೆ ಸಿಗುತ್ತಾ ಮೈತ್ರಿ ಬೆಂಬಲ?

ಹಿಂದಿನ ಎರಡು ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷದ ಮತಗಳು ಬಿಜೆಪಿಗೆ ಸಿಕ್ಕಿರಲಿಲ್ಲ. ಹೀಗಾಗಿ ಜೆಡಿಎಸ್‌ ನಿಲುವು ಅರಿಯಲು ಬಿಜೆಪಿ ನಾಯಕರಾದ ಚಂದು ಪಾಟೀಲ, ದತ್ತಾತ್ರೇಯ ಪಾಟೀಲ ರೇವೂರ ಸೇರಿದಂತೆ ಕೆಲ ನಾಯಕರು ಜೆಡಿಎಸ್‌ ಮುಖಂಡರೊದಿಗೆ ಶುಕ್ರವಾರ ರಾತ್ರಿ ಸಭೆ ನಡೆಸಿ ಚರ್ಚಿಸಿದ್ದಾರೆ.

‘ಮೇಯರ್‌, ಉಪ ಮೇಯರ್‌ ಚುನಾವಣೆಗೆ ಸಂಬಂಧಿಸಿದಂತೆ ತಮ್ಮ ನಿಲುವು ತಿಳಿಸುವಂತೆ ಮೈತ್ರಿಪಕ್ಷ ಜೆಡಿಎಸ್‌ ನಾಯಕರನ್ನು ಕೇಳಿದ್ದೇವೆ. ಕಳೆದ ಮೇಯರ್‌, ಉಪಮೇಯರ್‌ ಚುನಾವಣೆಯಲ್ಲಿ ಜೆಡಿಎಸ್‌ ಸದಸ್ಯರ ಮತಗಳು ಕೈತಪ್ಪಿದ್ದವು. ಈ ಸಲ ನೀವೇ ಸ್ಪರ್ಧಿಸುವುದಾದರೆ ಬಿಜೆಪಿಯ ಅಷ್ಟೂ ಸದಸ್ಯರ ಮತಗಳು ನೀಡುತ್ತೇವೆ. ಇಲ್ಲವೆಂದಾರೆ ನಿಮ್ಮ ಒಂದೂ ಮತ ಕೈ ತಪ್ಪದಂತೆ ನಮ್ಮನ್ನು ಬೆಂಬಲಿಸಬೇಕು ಎಂದು ಕೋರಿದ್ದೇವೆ’ ಎಂದು ಬಿಜೆಪಿ ನಾಯಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

4 ಸ್ಥಾಯಿ ಸಮಿತಿಗಳಿಗೂ ಚುನಾವಣೆ

ಮೇಯರ್, ಉಪಮೇಯರ್‌ ಜತೆಗೆ ನಾಲ್ಕು ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಗೂ ಶನಿವಾರವೇ ಚುನಾವಣೆ ನಡೆಯಲಿದೆ. ತೆರಿಗೆ ನಿರ್ಧರಣೆ ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ, ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಮಿತಿ, ನಗರ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿ ಮತ್ತು ಲೆಕ್ಕಪತ್ರ ಸ್ಥಾಯಿ ಸಮಿತಿಗೆ ಚುನಾವಣೆ ನಡೆಯಲಿದೆ ಎಂದು ಚುನಾವಣಾಧಿಕಾರಿ ಝಹೀರಾ ನಸೀಮ್‌ ಆದೇಶದಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260829-34-905287916

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ