ದಾವಣಗೆರೆ: ಇಂದಿರಾ ಕ್ಯಾಂಟೀನ್‌ಗೂ ದರ ಏರಿಕೆ ಬಿಸಿ

ದಾವಣಗೆರೆ: ಇಂದಿರಾ ಕ್ಯಾಂಟೀನ್‌ಗೂ ದರ ಏರಿಕೆ ಬಿಸಿ

ದಾವಣಗೆರೆ: ಇಂದಿರಾ ಕ್ಯಾಂಟೀನ್‌ಗೂ ದರ ಏರಿಕೆ ಬಿಸಿ

ದಾವಣಗೆರೆ: ಹಸಿದವರಿಗೆ ಕಡಿಮೆ ದರದಲ್ಲಿ ಊಟ, ಉಪಾಹಾರ ನೀಡುವ ಇಂದಿರಾ ಕ್ಯಾಂಟೀನ್‌ಗಳಿಗೂ ಅಗತ್ಯ ಸಾಮಗ್ರಿಗಳ ದರ ಏರಿಕೆಯ ಬಿಸಿ ತಟ್ಟುತ್ತಿದೆ.

ಅಕ್ಕಿ, ವಾಣಿಜ್ಯ ಸಿಲಿಂಡರ್‌, ಅಡುಗೆ ಎಣ್ಣೆ, ತರಕಾರಿ ಸೇರಿದಂತೆ ಇನ್ನಿತರ ಸಾಮಗ್ರಿಗಳ ಬೆಲೆ ಹೆಚ್ಚಳವಾಗಿ ರುವ ಕಾರಣ ಟೆಂಡರ್‌ ಪಡೆದಿರುವ ಏಜೆನ್ಸಿಗಳು ಗುಣಮಟ್ಟದ ಆಹಾರ ಪೂರೈಸಲು ಹೆಣಗಾಡುತ್ತಿವೆ.

ನಗರದ ವಿವಿಧೆಡೆ 10 ಹಾಗೂ ಚನ್ನಗಿರಿ, ಹರಿಹರ, ಹೊನ್ನಾಳಿ ಹಾಗೂ ಜಗಳೂರಿನಲ್ಲಿ ತಲಾ ಒಂದು ಕ್ಯಾಂಟೀನ್‌ಗಳಿವೆ. ದಾವಣಗೆರೆ ನಗರದಲ್ಲಿನ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಸುವ ಗುತ್ತಿಗೆಯನ್ನು ಕಳೆದ 2 ವರ್ಷದಿಂದ ರಾವ್ ರಘುಬೀರ್ ಸಿಂಗ್ ಸೇವಾ ಸಮಿತಿ ಪಡೆದಿದೆ.

ತಾಲ್ಲೂಕು ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟೀನ್‌ಗಳಲ್ಲೇ ಅಡುಗೆ ತಯಾರಿಸಲಾಗುತ್ತದೆ. ಆದರೆ, ನಗರದಲ್ಲಿರುವ ಎಲ್ಲಾ 10 ಕ್ಯಾಂಟೀನ್‌ಗಳಿಗೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಹಿಂಭಾ ಗದಲ್ಲಿರುವ ‘ಮಾಸ್ಟರ್‌ ಕಿಚನ್‌’ನಿಂದ ಆಹಾರ ಪೂರೈಸಲಾಗುತ್ತಿದೆ.

‘ಕೆಲ ತಿಂಗಳ ಹಿಂದೆ ಕೆ.ಜಿ. ಸೋನಾಮಸೂರಿ (ಸ್ಟೀಮ್‌) ಅಕ್ಕಿ ದರ ₹42 ಇತ್ತು. ಇದೀಗ ₹ 48, ₹ 50 ಇದೆ. 6 ತಿಂಗಳ ಹಿಂದೆ ₹ 1,900 ಇದ್ದ ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡರ್ ದರ ಕೆಲ ದಿನಗಳವರೆಗೆ ₹ 3,200ರವರೆಗೆ ಏರಿಕೆಯಾಗಿತ್ತು. ಇದೀಗ ಸ್ವಲ್ಪ ಇಳಿಕೆ ಕಂಡು ₹ 2,820 ರಂತೆ ಮಾರಾಟವಾಗುತ್ತಿದೆ. ನಿತ್ಯವೂ ಕನಿಷ್ಠ 2 ಸಿಲಿಂಡರ್ ಬಳಸುತ್ತೇವೆ’ ಎಂದು ‘ರಾವ್ ರಘುಬೀರ್ ಸಿಂಗ್ ಸೇವಾ ಸಮಿತಿ’ ಏಜೆನ್ಸಿಯ ಮ್ಯಾನೇಜರ್ ವಿಜ್ಞಾನ್‌ ಹೇಳಿದರು.

‘ಅಡುಗೆ ಸಾಮಗ್ರಿಗಳ ದರ ಏರಿಕೆಯಾಗಿದೆ. ತರಕಾರಿಗಳ ದರದಲ್ಲೂ ಏರಿಳಿತ ಉಂಟಾಗುತ್ತಿದೆ. ಏಜೆನ್ಸಿಯ ಅವಧಿ ಮುಗಿದ ಬಳಿಕ ಮರು ಟೆಂಡರ್‌ ಕರೆಯುತ್ತಾರೆ. ಆಗ ಪರಿಷ್ಕೃತ ದರ ಸಲ್ಲಿ ಸಲು ನಿರ್ಧರಿಸಲಾಗಿದೆ. ಸದ್ಯ ದರ ಏರಿಕೆಯಾಗಿದ್ದರೂ, ಆಹಾರದಲ್ಲಿ ಗುಣಮಟ್ಟ ಕಾಪಾಡಿಕೊಳ್ಳುತ್ತಿದ್ದೇವೆ’ ಎಂದರು.

ಸದ್ಯ ಇಂದಿರಾ ಕ್ಯಾಂಟೀನ್‌ಗಳಲ್ಲಿ ಉಪಾಹಾರಕ್ಕೆ ₹ 5 ಹಾಗೂ ಊಟಕ್ಕೆ ₹ 10 ದರ ನಿಗದಿ ಪಡಿಸಲಾಗಿದೆ. ಮೆನು ಪ್ರಕಾರವೇ ವಾರವಿಡೀ ಅಡುಗೆ ತಯಾರಿಸಲಾಗುತ್ತಿದೆ.

ಚಿಗಟೇರಿ ಆಸ್ಪತ್ರೆ ಕ್ಯಾಂಟೀನ್‌ನಲ್ಲೇ ಹೆಚ್ಚು: ನಗರದಲ್ಲಿ ಚಿಗಟೇರಿ ಜಿಲ್ಲಾ ಆಸ್ಪತ್ರೆ ಬಳಿ ಇರುವ ಇಂದಿರಾ ಕ್ಯಾಂಟೀನ್‌ನಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಾಹಾರ, ಊಟ ಸೇವಿಸುತ್ತಿದ್ದಾರೆ. ಇನ್ನುಳಿದಂತೆ ಹೈಸ್ಕೂಲ್‌ ಮೈದಾನ, ಚಾಮರಾಜಪೇಟೆ ಸರ್ಕಲ್‌, ಎಪಿಎಂಸಿ ಬಳಿ ಇರುವ ಕ್ಯಾಂಟೀನ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು, ವಿದ್ಯಾರ್ಥಿಗಳು ಊಟ ಸವಿಯುತ್ತಿದ್ದಾರೆ. ಬೆಳಿಗ್ಗೆ ಹಾಗೂ ಮಧ್ಯಾಹ್ನ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಇಂದಿರಾ ಕ್ಯಾಂಟೀನ್‌ಗಳತ್ತ ಹೆಜ್ಜೆ ಇಡುತ್ತಿದ್ದಾರೆ.

ತೋಟಗಾರಿಕೆ ಕಚೇರಿ, ಲೋಕಿಕೆರೆ ಕೈಗಾರಿಕಾ ಪ್ರದೇಶ, ಬೂದಾಳ್ ರಸ್ತೆ, ಮಂಡಕ್ಕಿ ಬಟ್ಟಿ ಲೇಔಟ್‌, ಆರ್‌ಟಿಒ ಕಚೇರಿ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿಯೂ ಇಂದಿರಾ ಕ್ಯಾಂಟೀನ್‌ಗಳಿವೆ.

ನಗರದ 10 ಇಂದಿರಾ ಕ್ಯಾಂಟೀನ್‌ಗಳಲ್ಲಿ ನಿತ್ಯವೂ ಅಂದಾಜು 3,500 ಪ್ಲೇಟ್‌ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಕ್ರಮವಾಗಿ 2,700 ಪ್ಲೇಟ್‌ ಹಾಗೂ 500 ಪ್ಲೇಟ್‌ ಊಟ ಖರ್ಚಾಗುತ್ತಿದೆ.

ಡಿಜಿಟಲ್ ಪಾವತಿಗೆ ಆಗ್ರಹ: ‘ಕ್ಯಾಂಟೀನ್‌ಗಳಲ್ಲಿ ಡಿಜಿಟಲ್‌ ಪಾವತಿಗೆ ಅವಕಾಶ ಇಲ್ಲ. ಫೋನ್‌ಪೇ, ಗೂಗಲ್‌ಪೇ ಮೂಲಕ ಅವಕಾಶ ಕಲ್ಪಿಸಿದರೆ ಚಿಲ್ಲರೆ ಸಮಸ್ಯೆ ಬಗೆಹರಿಯುತ್ತದೆ. ಈ ಬಗ್ಗೆ ಮಹಾನಗರ ಪಾಲಿಕೆ ಹಾಗೂ ಏಜೆನ್ಸಿಯವರು ಗಮನಹರಿಸಬೇಕು’ ಎಂದು ಗುಡಾಳ್‌ನ ವಿದ್ಯಾರ್ಥಿಗಳಾದ ವಿಜಯ್, ಓಬಳೇಶ್ ಒತ್ತಾಯಿಸಿದರು.

ಹರಿಹರ: ಕಟ್ಟಿಗೆ ಒಲೆಯೇ ಆಧಾರ

ಹರಿಹರ: ಇಲ್ಲಿನ ಇಂದಿರಾ ಕ್ಯಾಂಟೀನ್ ಇದ್ದೂ ಇಲ್ಲದಂ ತಾಗಿದೆ. ಗ್ಯಾಸ್ ಸಿಲಿಂಡರ್ ಇಲ್ಲದೆ ಕಟ್ಟಿಗೆ ಒಲೆಯಲ್ಲಿ ಆಹಾರ ತಯಾರಿಸಲಾಗುತ್ತಿದೆ. ಮೆನು ಪ್ರಕಾರ ಆಹಾರ ನೀಡುತ್ತಿಲ್ಲ. ಇದರಿಂದಾಗಿ ಗ್ರಾಹಕರ ಸಂಖ್ಯೆ ಕ್ರಮೇಣ ಕ್ಷೀಣಿಸುತ್ತಿದೆ.

ಇಲ್ಲಿನ ತಹಶೀಲ್ದಾರ್ ಕಚೇರಿ ಪಕ್ಕದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಈ ಕ್ಯಾಂಟೀನ್‌ ಉದ್ಘಾಟಿಸಿದ್ದರು. ಒಳಭಾಗದಲ್ಲಿ ವ್ಯವಸ್ಥೆ ಇಲ್ಲದ ಕಾರಣ ಕ್ಯಾಂಟೀನ್‌ನ ಹಿಂಭಾಗದಲ್ಲಿ ಕಟ್ಟಿಗೆ ಒಲೆಯಲ್ಲಿ ಸಿಬ್ಬಂದಿ ಅಡುಗೆ ತಯಾರಿಸುತ್ತಿದ್ದಾರೆ.

ಉಪಾಹಾರಕ್ಕೆ ಇಡ್ಲಿ ಸಿಗುತ್ತಿಲ್ಲ. ಭಾನುವಾರಕ್ಕೊಮ್ಮೆ ಉಪ್ಪಿಟ್ಟು, ಕೇಸರಿಬಾತ್ ಇರುತ್ತದೆ. ಉಳಿದ ದಿನ ಚಿತ್ರಾನ್ನ, ಟೊಮೊಟೊ ರೈಸ್ ಇರುತ್ತದೆ. ಊಟಕ್ಕೆ ಚಪಾತಿ, ಅನ್ನ–ಸಾಂಬಾರು ನೀಡಲಾಗುತ್ತಿದೆ.

‘ಈ ಮುಂಚೆ ಮೆನು ಪ್ರಕಾರ ವೈವಿಧ್ಯಮಯ ಉಪಾಹಾರ, ಊಟ ಲಭ್ಯವಿದ್ದಾಗ ದಿನಕ್ಕೆ 500ಕ್ಕೂ ಹೆಚ್ಚು ಗ್ರಾಹಕರು ಬರುತ್ತಿದ್ದರು. ಈಗ ಈ ಸಂಖ್ಯೆ 100 ದಾಟುವುದೂ ಕಷ್ಟವಾಗಿದೆ. ಹಲವು ಬಾರಿ ಗ್ರಾಹಕರಿಲ್ಲದೆ, ತಯಾರು ಮಾಡಿದ ಆಹಾರ ಚೆಲ್ಲುವಂತಹ ಸ್ಥಿತಿ ಎದುರಾಗಿದೆ’ ಎನ್ನುತ್ತಾರೆ ಹೆಸರು ಬಹಿರಂಗಪಡಿಸಲು ಇಚ್ಛಿಸದ ಸಿಬ್ಬಂದಿ.

‘ಆರಂಭದಲ್ಲಿ ಬಡವರು, ಕೂಲಿ ಕಾರ್ಮಿಕರ ಹಸಿವು ನೀಗಿಸುವ ತಾಣವಾಗಿದ್ದ ಇಂದಿರಾ ಕ್ಯಾಂಟೀನ್, ಈಗ ಜನ ಮಾನಸದಿಂದ ದೂರವಾಗುತ್ತಿದೆ’ ಎನ್ನುತ್ತಾರೆ ಕೈಗಾಡಿ ಎಳೆಯುವ ಹನುಮಂತಪ್ಪನವರ್.

ಹೊನ್ನಾಳಿ: ರಾತ್ರಿ ಊಟ ಇಲ್ಲ

ಹೊನ್ನಾಳಿ: ಇಲ್ಲಿನ ಇಂದಿರಾ ಕ್ಯಾಂಟೀನ್‌ನ ಸ್ವಚ್ಛತೆ ಹಾಗೂ ಆಹಾರದ ಗುಣಮಟ್ಟದ ಬಗ್ಗೆ ಆರಂಭದಲ್ಲಿ ದೂರುಗಳು ವ್ಯಕ್ತವಾಗಿದ್ದವು. ಆ ಬಳಿಕ ಪುರಸಭೆ ಮುಖ್ಯಾಧಿಕಾರಿ ಟಿ. ಲೀಲಾವತಿ ಅವರು ಅಡುಗೆ ಸಿಬ್ಬಂದಿ ಹಾಗೂ ವ್ಯವಸ್ಥಾಪಕರನ್ನು ಬದಲಾಯಿಸಿದ್ದರು.

‘ಕೆಲ ತಿಂಗಳ ಹಿಂದೆ ಅಡುಗೆ ಅನಿಲ ಕೊರತೆ ಕಾಣಿಸಿಕೊಂಡಾಗ 20 ದಿನ ತೊಂದರೆಯಾಗಿತ್ತು. ಸದ್ಯ ಯಾವುದೇ ಸಮಸ್ಯೆ ಇಲ್ಲ’ ಎನ್ನುತ್ತಾರೆ ಕ್ಯಾಂಟೀನ್‌ ಸಿಬ್ಬಂದಿ.

‘ಮೆನು ಪ್ರಕಾರ ಉಪಾಹಾರ ಹಾಗೂ ಮಧ್ಯಾಹ್ನದ ಊಟ ನೀಡಲಾಗುತ್ತಿದೆ. ಆದರೆ, ರಾತ್ರಿ ಊಟ ಕೊಡುತ್ತಿಲ್ಲ. ಗ್ರಾಮೀಣ ಭಾಗದ ಸಾಕಷ್ಟು ವಿದ್ಯಾರ್ಥಿಗಳು ಬೆಳಿಗ್ಗೆ ಉಪಾಹಾರ ಹಾಗೂ ಮಧ್ಯಾಹ್ನದ ಊಟಕ್ಕೆ ಇಂದಿರಾ ಕ್ಯಾಂಟೀನ್‌ನತ್ತ ಹೆಜ್ಜೆ ಹಾಕುತ್ತಾರೆ. ಕಡಿಮೆ ದರಕ್ಕೆ ಊಟ ನೀಡುತ್ತಿರುವುದರಿಂದ ಅನುಕೂಲವಾಗಿದೆ’ ಎನ್ನುತ್ತಾರೆ ವಿದ್ಯಾರ್ಥಿಗಳು.

ಚನ್ನಗಿರಿ: ಮೆನುವಿನಲ್ಲಿ ಬದಲಾವಣೆ

ಚನ್ನಗಿರಿ: ಪಟ್ಟಣದಲ್ಲಿರುವ ಇಂದಿರಾ ಕ್ಯಾಂಟೀನ್‌ಗೆ 6 ತಿಂಗಳಿಂದ ಅಡುಗೆ ಅನಿಲದ ಕೊರತೆಯ ಸಮಸ್ಯೆ ಕಾಡಿದರೂ, ಗ್ರಾಹಕರಿಗೆ ಉಪಾಹಾರ, ಊಟ ನೀಡುವ ಕೆಲಸ ನಿಂತಿಲ್ಲ.

ಆರಂಭದಲ್ಲಿ ಅಡುಗೆ ಅನಿಲ ಕೊರತೆಯಾದಾಗ ಕಟ್ಟಿಗೆ ಒಲೆಯಲ್ಲಿ ಅಡುಗೆ ತಯಾರಿಸಲಾಗುತ್ತಿತ್ತು. ಮೊದಲು ಇಡ್ಲಿ, ಚಿತ್ರಾನ್ನ, ಪಲಾವ್, ಮೊಸರನ್ನ, ಪುಳಿಯೊಗರೆ, ಟೊಮೆಟೊ ಬಾತ್, ಖಾರಾಬಾತ್ ಮುಂತಾದ ತಿನಿಸುಗಳನ್ನು ಉಪಾಹಾರದಲ್ಲಿ ನೀಡಲಾಗುತ್ತಿತ್ತು.

‘ಸಿಲಿಂಡರ್ ಕೊರತೆ ಉಂಟಾದ ಬಳಿಕ ಮೆನುವಿನಲ್ಲಿ ಬದಲಾವಣೆಗಳಾಗಿವೆ. ಉಪಾಹಾರಕ್ಕೆ ಇಡ್ಲಿ, ಸಾಂಬಾರು, ಚಟ್ನಿ, ಚಿತ್ರಾನ್ನ ನೀಡಲಾಗುತ್ತಿದೆ. ಊಟಕ್ಕೆ ರಾಗಿ ಮುದ್ದೆ ಹಾಗೂ ಅನ್ನ ಸಾಂಬಾರು ಕೊಡಲಾಗುತ್ತಿದೆ. ವಾರದಲ್ಲಿ ಐದು ದಿನ ರಾಗಿ ಮುದ್ದೆ ಊಟ ನೀಡಲಾಗುತ್ತಿದೆ. ಪ್ರತಿ ದಿನ 300ರಿಂದ 400 ಜನರು ಊಟ– ಉಪಾಹಾರ ಸೇವಿಸುತ್ತಿದ್ದಾರೆ’ ಎಂದು ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ತಿಳಿಸಿದರು.

‘ಮೂರು ವರ್ಷಗಳಿಂದ ಈ ಕ್ಯಾಂಟೀನ್‌ನಲ್ಲಿ ಉಪಾಹಾರ ಹಾಗೂ ಊಟ ಮಾಡುತ್ತಿದ್ದೇನೆ. ₹ 10ಕ್ಕೆ ನೀಡುವ ಊಟದ ರುಚಿಯು ಪರವಾಗಿಲ್ಲ ಎಂಬಂತಿರುತ್ತದೆ’ ಎನ್ನುತ್ತಾರೆ ಹಮಾಲಿ ಕೆಲಸ ಮಾಡುವ ಪಟ್ಟಣದ ನಿವಾಸಿ ಮಹಮದ್ ಇರ್ಫಾನ್.

ನ್ಯಾಮತಿಯಲ್ಲಿಲ್ಲ ಇಂದಿರಾ ಕ್ಯಾಂಟಿನ್

ನ್ಯಾಮತಿ: ಇಂದಿರಾ ಕ್ಯಾಂಟಿನ್ ಸೌಲಭ್ಯದಿಂದ ನ್ಯಾಮತಿ ತಾಲ್ಲೂಕು ವಂಚಿತವಾಗಿದೆ.

ಬಡವರು, ಕೂಲಿ ಕಾರ್ಮಿಕರು, ರೈತರೇ ಹೆಚ್ಚಿರುವ ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್‌ನ ಅವಶ್ಯಕತೆ ಇದೆ. ಕ್ಯಾಂಟೀನ್ ಆರಂಭಿಸುವಂತೆ ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳು ಆಗ್ರಹಿಸಿದ್ದವು. ಆದರೆ, ಇದುವರೆಗೂ ಬೇಡಿಕೆ ಈಡೇರಿಲ್ಲ.

‘ಇಂದಿರಾ ಕ್ಯಾಂಟೀನ್ ತೆರೆಯುವಂತೆ ಪಟ್ಟಣ ಪಂಚಾಯಿತಿಯಿಂದ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದು, ನಿವೇಶನ ಗುರುತಿಸಲಾಗಿದೆ. ಪಟ್ಟಣದಲ್ಲಿ ಕ್ಯಾಂಟೀನ್ ಆರಂಭಿಸಲು ಶಾಸಕರು ವಿಶೇಷ ಆಸಕ್ತಿ ವಹಿಸಿದ್ದಾರೆ’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪಿ. ಗಣೇಶರಾವ್ ಹೇಳುತ್ತಾರೆ.

‘ತಾಲ್ಲೂಕು ಕೇಂದ್ರದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸುವ ಬಗ್ಗೆ ಶಾಸಕರು ಮತ್ತು ಅಧಿಕಾರಿಗಳು ವಿಶೇಷ ಕಾಳಜಿ ವಹಿಸಬೇಕು. ಇದರಿಂದ ಬಡ ಜನತೆಗೆ ಉಪಯೋಗವಾಗುತ್ತದೆ’ ಎಂದು ನಾಗರಿಕ ಹಿತ ರಕ್ಷಣಾ ಸಮಿತಿ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260803-43-1996785932

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ