ವಿದ್ಯಾರ್ಥಿ ಪ್ರತಿಭಟನೆ | ಲೈಂಗಿಕ ಶೋಷಣೆ ತನಿಖೆಗೆ ಆದ್ಯತೆ ನೀಡಿ: ಸುಪ್ರೀಂ ಸೂಚನೆ

ವಿದ್ಯಾರ್ಥಿ ಪ್ರತಿಭಟನೆ | ಲೈಂಗಿಕ ಶೋಷಣೆ ತನಿಖೆಗೆ ಆದ್ಯತೆ ನೀಡಿ: ಸುಪ್ರೀಂ ಸೂಚನೆ

ವಿದ್ಯಾರ್ಥಿ ಪ್ರತಿಭಟನೆ | ಲೈಂಗಿಕ ಶೋಷಣೆ ತನಿಖೆಗೆ ಆದ್ಯತೆ ನೀಡಿ: ಸುಪ್ರೀಂ ಸೂಚನೆ

ನವದೆಹಲಿ: ಜಂತರ್ ಮಂತರ್‌ನಲ್ಲಿ ಪ್ರತಿಭಟಿಸಿದ ವಿದ್ಯಾರ್ಥಿಗಳ ಮೇಲೆ ಪೊಲೀಸ್ ಬಲಪ್ರಯೋಗದ ಕುರಿತು ತನಿಖೆ ನಡೆಸುತ್ತಿರುವ ಉನ್ನತಾಧಿಕಾರದ ತನಿಖಾ ಸಮಿತಿಗೆ, ‘ಮಹಿಳೆಯರು ಎದುರಿಸಿದ ಲೈಂಗಿಕ ಶೋಷಣೆ ಕುರಿತ ದೂರುಗಳ ತನಿಖೆಗೆ ಆದ್ಯತೆ ನೀಡಿ’ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.

‘ಇಂತಹ ದೂರುಗಳಿಗೆ ಸಂಬಂಧಿಸಿದಂತೆ ಸಾಧ್ಯವಾದಷ್ಟು ಬೇಗ ಮಧ್ಯಂತರ ವರದಿ ಸಲ್ಲಿಸಬೇಕು’ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಅವರ ಪೀಠವು ತಿಳಿಸಿದೆ.

‘ತಾವು ಲೈಂಗಿಕ ಶೋಷಣೆ ಎದುರಿಸಿದ್ದಾಗಿ ಯುವತಿಯರು ಹೇಳಿಕೊಂಡಿದ್ದಾರೆ. ನ್ಯಾಯಪೀಠವು ಸ್ವಯಂ ಪ್ರೇರಿತವಾಗಿ ಈ ವಿಚಾರದತ್ತ ಗಮನಹರಿಸಬೇಕು’ ಎಂದು ಹಿರಿಯ ವಕೀಲೆ ಶೋಭಾ ಗುಪ್ತಾ ಅವರು ನ್ಯಾಯಾಲಯವನ್ನು ಕೋರಿದ್ದರು.

‘ಪೊಲೀಸ್ ಸಿಬ್ಬಂದಿಯಿಂದ ಮಹಿಳೆಯರು ಶೋಷಣೆ ಅನುಭವಿಸಿದ್ದಾರೆ ಎಂಬ ವ್ಯಾಪಕ ದೂರುಗಳು ವರದಿಯಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಈ ವಿಚಾರ ವ್ಯಾಪಕವಾಗಿ ಹರಿದಾಡಿದೆ’ ಎಂದರು.

‘ನೊಂದ ಮಹಿಳೆಯರಿಂದ ನೇರವಾಗಿ ದೂರುಗಳನ್ನು ಸ್ವೀಕರಿಸಲು ಜಿಲ್ಲಾ ನ್ಯಾಯಾಧೀಶರನ್ನು ನೇಮಿಸಬೇಕು ಹಾಗೂ ಈ ದೂರುಗಳನ್ನು ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಬೇಕು’ ಎಂದೂ ಒತ್ತಾಯಿಸಿದ್ದಾರೆ.

ದೂರುಗಳನ್ನು ಸ್ವೀಕರಿಸಲು ಸಮಿತಿಯು ಸಾರ್ವಜನಿಕವಾಗಿ ಇ–ಮೇಲ್ ವಿಳಾಸವನ್ನು ನೀಡಬೇಕು ಎಂಬ ವಕೀಲೆಯ ಸಲಹೆಯನ್ನು ನ್ಯಾಯಪೀಠವು ಪರಿಗಣಿಸಿತು.

‘ಹಿಂಬಾಗಿಲಿನ ಮೂಲಕ ಮೀಸಲಾತಿ ಕೊನೆಗೊಳಿಸುವ ಯೋಜನೆ’

ನವದೆಹಲಿ (ಪಿಟಿಐ): ನರೇಂದ್ರ ಮೋದಿ ಸರ್ಕಾರವು ಹಿಂಬಾಗಿಲಿನ ಮೂಲಕ ಮೀಸಲಾತಿಯನ್ನು ಕೊನೆಗೊಳಿಸುವ ಯೋಜನೆಯನ್ನು ರೂಪಿಸಿದೆ ಎಂದು ಕಾಂಗ್ರೆಸ್‌ ಸೋಮವಾರ ಆರೋಪಿಸಿದೆ.

ಮಂಜೂರಾಗಿರುವ ಸುಮಾರು 8.2 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ ಎಂದು ನೀತಿ ಆಯೋಗವು ಈಚೆಗೆ ಬಿಡುಗಡೆ ಮಾಡಿದ ವರದಿಯನ್ನು ಉಲ್ಲೇಖಿಸಿ ಕೇಂದ್ರ ಸರ್ಕಾರವನ್ನು ಟೀಕಿಸಿದ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ‘ಸಂವಿಧಾನ ನೀಡಿರುವ ಹಕ್ಕುಗಳನ್ನು ಕೊನೆಗೊಳಿಸಲು ಪಿತೂರಿ ಮಾಡಿರುವ ಬಿಜೆಪಿ ನೀತಿಯು ಬಹಿರಂಗಗೊಂಡಿದೆ’ ಎಂದರು.

ಶಿಕ್ಷಣದಿಂದ ಉದ್ಯೋಗದವರೆಗಿನ ಹಾದಿ ವಿನಾಶ: ಭಾರತದ ಯುವಜನರ, ಶಿಕ್ಷಣದಿಂದ ಉದ್ಯೋಗದವರೆಗಿನ ಹಾದಿಯನ್ನು ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸಂಪೂರ್ಣ ವಿನಾಶ ಮಾಡಿದೆ ಎಂದು ಖರ್ಗೆ ಆರೋಪಿಸಿದರು.

‘ಸರ್ಕಾರವು ದುಬಾರಿ ಶಿಕ್ಷಣ ವ್ಯವಸ್ಥೆ, ದೇಶದ ಯುವಜನತೆಯು ವಿಶ್ವಾಸವಿಡಲು ಸಾಧ್ಯವಾಗದಂಥ ಪರೀಕ್ಷಾ ವ್ಯವಸ್ಥೆಯನ್ನು ಸೃಜಿಸಿದೆ ಹಾಗೂ ಉದ್ಯೋಗವೇ ದೊರೆಯದಂತಹ ಪದವಿಗಳನ್ನು ಹೆಚ್ಚಿಸಿದೆ’ ಎಂದು ಟೀಕಿಸಿದರು.

‘ಭಾರತದಲ್ಲಿ 20ರಿಂದ 29ರ ವಯೋಮಾನದ ಶೇ 67ರಷ್ಟು ಜನರು ನಿರುದ್ಯೋಗಿಗಳಾಗಿದ್ದಾರೆ. ಪದವಿ ನಂತರ ಉದ್ಯೋಗಗಳು ಎಲ್ಲಿ? 15ರಿಂದ 20 ವರ್ಷದೊಳಗಿನವರಲ್ಲಿ ನಿರುದ್ಯೋಗ ಪ್ರಮಾಣವು ಶೇ 40ರಷ್ಟು ಇದೆ. ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವ ನಿಮ್ಮ ಭರವಸೆ ಏನಾಯಿತು’ ಎಂದು ಪ್ರಶ್ನಿಸಿದ್ದಾರೆ.

‘ನಿಮ್ಮ ಮಾತಿನಂತೆ 12 ವರ್ಷಗಳ ಅಧಿಕಾರಾವಧಿಯಲ್ಲಿ 24 ಕೋಟಿ ಜನರಿಗೆ ಉದ್ಯೋಗ ಸಿಗಬೇಕಿತ್ತು. ಆದರೆ ಲಕ್ಷಗಟ್ಟಲೆ ಸರ್ಕಾರಿ ಹುದ್ದೆಗಳು ಖಾಲಿ ಬಿದ್ದಿದ್ದು, ಆ ಜಾಗವನ್ನು ಗುತ್ತಿಗೆ ಮತ್ತು ಅರೆಕಾಲಿಕ ಉದ್ಯೋಗಗಳು ಆಕ್ರಮಿಸುತ್ತಿವೆ’ ಎಂದು ‘ಎಕ್ಸ್’ ಖಾತೆಯಲ್ಲಿ ಬರೆದಿದ್ದಾರೆ.

‘ಬಂಗಲೆಗಲ್ಲ, ಶಾಲೆಗೆ ಖರ್ಚು ಮಾಡಿ’

‘ಕೇಂದ್ರ ಸಚಿವರ ಅಧಿಕೃತ ನಿವಾಸಗಳ ನಿರ್ವಹಣೆಗೆ ಕಳೆದ ಆರ್ಥಿಕ ವರ್ಷದಲ್ಲಿ ₹92.35 ಕೋಟಿ ಬಳಸಲಾಗಿದೆ. ಈ ಹಣದಲ್ಲಿ 10 ಹೊಸ ಸರ್ಕಾರಿ ಶಾಲೆಗಳನ್ನು ನಿರ್ಮಾಣ ಮಾಡಬಹುದಿತ್ತು’ ಎಂದು ಸಿಜೆಪಿ ಹೇಳಿದೆ.

‘ನಿಮ್ಮ ಐಷಾರಾಮಿ ಮನೆಗಳನ್ನು ಸರಿಪಡಿಸುವುದನ್ನು ನಿಲ್ಲಿಸಿ, ಶಾಲೆಗಳನ್ನು ಸರಿಪಡಿಸಿ. ಕೇಂದ್ರ ಸರ್ಕಾರದ ಆದ್ಯತೆಗಳೇ ಸರಿಯಾಗಿಲ್ಲ’ ಎಂದು ‘ಎಕ್ಸ್‌’ನಲ್ಲಿ ಹೇಳಿದೆ.

‘₹92 ಕೋಟಿ= 10 ಹೊಸ ವಿಶ್ವ ದರ್ಜೆಯ ಸರ್ಕಾರಿ ಶಾಲೆಗಳು. ಹಣ ಲಭ್ಯವಿದೆ. ಆದರೆ, ಅದನ್ನು ಸರ್ಕಾರಿ ಶಾಲೆಗೆ ಬಳಸುವ ಉದ್ದೇಶ ಕಾಣೆಯಾಗಿದೆ’ ಎಂದು ಅದು ಹೇಳಿದೆ.

ಪ್ರಸ್ತುತ ಸರ್ಕಾರಿ ಶಾಲೆಗಳ ಸುಧಾರಣೆ ಮೇಲೆ ಸಿಜೆಪಿ ಗಮನ ಕೇಂದ್ರೀಕರಿಸಿ ಚಳವಳಿ ನಡೆಸುತ್ತಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260825-51-1931068263

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ