ಕೋಲಾರ | ಬೀದಿದೀಪದಲ್ಲೂ ಅಕ್ರಮ, ಸಮಗ್ರ ತನಿಖೆಗೆ ಆದೇಶ

ಕೋಲಾರ | ಬೀದಿದೀಪದಲ್ಲೂ ಅಕ್ರಮ, ಸಮಗ್ರ ತನಿಖೆಗೆ ಆದೇಶ

ಕೋಲಾರ | ಬೀದಿದೀಪದಲ್ಲೂ ಅಕ್ರಮ, ಸಮಗ್ರ ತನಿಖೆಗೆ ಆದೇಶ

ಕೋಲಾರ: ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ (ನಗರಸಭೆ, ಪುರಸಭೆ) ಜಾರಿಗೆ ತರಲಾದ ಸಿಸಿಎಂಎಸ್ (ಸೆಂಟ್ರಲೈಸ್ಡ್‌ ಕಂಟ್ರೋಲ್‌ ಅಂಡ್‌ ಮಾನಿಟರಿಂಗ್‌ ಸಿಸ್ಟಮ್) ಎಲ್‌ಇಡಿ ವಿದ್ಯುತ್‌ ಬೀದಿ‌ದೀಪ ಯೋಜನೆಯ ಅನುಷ್ಠಾನ, ಅನುದಾನ ಬಳಕೆ ಮತ್ತು ಪ್ರಗತಿಯಲ್ಲಿ ನ್ಯೂನತೆ, ಆಡಳಿತಾತ್ಮಕ ಲೋಪ ಹಾಗೂ ಹಣಕಾಸು ದುರುಪಯೋಗ ನಡೆದಿರುವ ಆರೋಪ ಕೇಳಿಬಂದಿದೆ.

ಗುತ್ತಿಗೆದಾರ ಸಂಸ್ಥೆಗೆ ಅನುಕೂಲ ಮಾಡಿಕೊಡಲು ಸರ್ಕಾರದ ಅನುದಾನ ದುರ್ಬಳಕೆ ಮಾಡಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಪೌರಾಡಳಿತ ನಿರ್ದೇಶನಾಲಯವು ಸಮಗ್ರ ತನಿಖೆಗೆ ಆದೇಶಿಸಿದೆ.

ಹಿಂದಿನ ಜಿಲ್ಲಾಧಿಕಾರಿಯ ವರದಿ ಹಾಗೂ ಯೋಜನೆ ಸಂಬಂಧ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ನೀಡಿದ ಸೂಚನೆಯಂತೆ ಈ ಕ್ರಮ ವಹಿಸಿದೆ.

ಯೋಜನೆಯ ಅನುಷ್ಠಾನ ಹಾಗೂ ಪ್ರಗತಿ ವಿಚಾರದಲ್ಲಿ ಅಧಿಕಾರಿಗಳು ಗುತ್ತಿಗೆದಾರ ಸಂಸ್ಥೆಯೊಂದಿಗೆ ಶಾಮೀಲಾಗಿ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ. 2022–23ನೇ ಸಾಲಿನಲ್ಲಿ ಯೋಜನೆಯ ಕರಾರು ಮಾಡಿಕೊಳ್ಳಲಾಗಿತ್ತು.

ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಾಂಪ್ರದಾಯಿಕ ಬೀದಿದೀಪಗಳ ಬದಲು ಅತ್ಯಾಧುನಿಕ ತಂತ್ರಜ್ಞಾನದ ಎಲ್‌ಇಡಿ ದೀಪಗಳು ಹಾಗೂ ಸಿಸಿಎಂಎಸ್ ನಿಯಂತ್ರಣ ವ್ಯವಸ್ಥೆಯನ್ನು ಅಳವಡಿಸುವ ಯೋಜನೆಯನ್ನು ಗುತ್ತಿಗೆ ಸಂಸ್ಥೆಗೆ ವಹಿಸಲಾಗಿತ್ತು. ‌‌ಶೇ 66ರಷ್ಟು ವಿದ್ಯುತ್ ಬಳಕೆಯನ್ನು ಕಡಿತಗೊಳಿಸಿ, ಸ್ಥಳೀಯ ಸಂಸ್ಥೆಗಳ ವಿದ್ಯುತ್ ವೆಚ್ಚವನ್ನು ಭಾರಿ ಪ್ರಮಾಣದಲ್ಲಿ ಉಳಿತಾಯ ಮಾಡುವುದು ಈ ಯೋಜನೆಯ ಪ್ರಮುಖ ಷರತ್ತು ಆಗಿತ್ತು.

ಹಿಂದಿನ ಸಾಂಪ್ರದಾಯಿಕ ಪದ್ಧತಿಯಲ್ಲಿ ವಾರ್ಷಿಕ 1.81 ಕೋಟಿ ಕಿಲೊ ವ್ಯಾಟ್‌ ವಿದ್ಯುತ್ ಬಳಸಲಾಗುತ್ತಿದ್ದರೆ, ಈ ಯೋಜನೆಯಿಂದ ಕೇವಲ 61.51 ಲಕ್ಷ ಕಿಲೊ ವ್ಯಾಟ್‌ ವಿದ್ಯುತ್‌ ಸಾಕು ಎಂಬುದಾಗಿಯೂ ತೋರಿಸಲಾಗಿತ್ತು.

ಆದರೆ, ಯೋಜನೆ ಜಾರಿಯಾಗಿ ದೀರ್ಘ ಅವಧಿ ಕಳೆದಿದ್ದರೂ ಒಪ್ಪಂದದಂತೆ ಶೇ 66 ರಷ್ಟು ವಿದ್ಯುತ್ ಉಳಿತಾಯವಾಗಿರುವ ಬಗ್ಗೆ ಯಾವುದೇ ಸ್ಪಷ್ಟ ತಾಂತ್ರಿಕ ದಾಖಲೆಗಳು ಅಥವಾ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ ಎಂಬ ದೂರು ಕೇಳಿಬಂದಿದೆ. ಸರ್ಕಾರದ ಖಜಾನೆಯಿಂದ ಕೋಟ್ಯಂತರ ರೂಪಾಯಿ ಬಿಡುಗಡೆಯಾಗುತ್ತಿದ್ದರೂ, ವಿದ್ಯುತ್ ಉಳಿತಾಯದ ನಿಗದಿತ ಗುರಿ ತಲುಪುವಲ್ಲಿ ಯೋಜನೆ ವಿಫಲವಾಗಿದೆ ಎಂಬುದಾಗಿ ನಗರಸಭೆಯ ಮಾಜಿ ಸದಸ್ಯರು ಆರೋಪಿಸಿದ್ದಾರೆ.

ಈ ಯೋಜನೆ ನ್ಯೂನತೆ, ಅನುದಾನ ಬಳಕೆಯ ವ್ಯತ್ಯಾಸಗಳು ಈ ಹಿಂದಿನ ಜಿಲ್ಲಾಧಿಕಾರಿ ಎಂ.ಆರ್.ರವಿ ‌ಗಮನಕ್ಕೆ ಬಂದಿದ್ದು, ಗಂಭೀರವಾಗಿ ಪರಿಗಣಿಸಿದ್ದರು. ಯೋಜನೆಯಲ್ಲಿ ನಿಗದಿತ ಪ್ರಗತಿ ಸಾಧಿಸದೆ ಇರುವುದು ಮತ್ತು ಹಣಕಾಸಿನ ಅಕ್ರಮಗಳ‌ ಶಂಕೆಯ ಸುಳಿವು ಸಿಗುತ್ತಿದ್ದಂತೆ, ಈ ಬಗ್ಗೆ ಸ್ಪಷ್ಟನೆ ಕೋರಿ ಪೌರಾಡಳಿತ ನಿರ್ದೇಶನಾಲಯಕ್ಕೆ ಪತ್ರ ಬರೆದಿದ್ದರು.

ಯೋಜನೆಯಲ್ಲಿ ನ್ಯೂನತೆ ಇರುವ ಹಾಗೂ ತೃಪ್ತಿದಾಯಕವಾಗಿ ಇಲ್ಲದಿರುವ ಬಗ್ಗೆ ಕೆಲ ನಗರಸಭೆ ಆಯುಕ್ತರು ಕೂಡ ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದರು.

ಈ ಹಿನ್ನೆಲೆಯಲ್ಲಿ ಪೌರಾಡಳಿತ ನಿರ್ದೇಶನಾಲಯದ ‌ನಿರ್ದೇಶಕರು ಆ.10ರಂದು ಐವರ ಸದಸ್ಯರ ಉನ್ನತ ಮಟ್ಟದ ತಂಡ ರಚಿಸಿ ತನಿಖೆಗೆ ಆದೇಶಿಸಿದ್ದಾರೆ. ತನಿಖಾ ವರದಿ ಸಲ್ಲಿಸಲು 10 ದಿನಗಳ ಗಡುವು ನೀಡಿದ್ದಾರೆ. ಈ ತನಿಖಾ ತಂಡವು ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಿಗೆ ಭೇಟಿ ನೀಡುತ್ತಿದ್ದು, ಯೋಜನೆಗೆ ಸಂಬಂಧಿಸಿದ ಮೂಲ ಕಡತಗಳು, ತಾಂತ್ರಿಕ ವಿವರಗಳು, ವಿದ್ಯುತ್ ಬಿಲ್‌ಗಳು ಹಾಗೂ ಬ್ಯಾಂಕ್ ವಹಿವಾಟುಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದೆ.

ಕಳೆದ ಬಜೆಟ್‌ನಲ್ಲಿ ಕೋಲಾರ ನಗರಸಭೆಯೊಂದರಲ್ಲೇ ಬೀದಿದೀಪ ವಿದ್ಯುತ್ ಬಿಲ್‌ಗೆ ವಾರ್ಷಿಕ ₹ 3.93 ಕೋಟಿ ಹಾಗೂ ನಿರ್ವಹಣೆ ಖರ್ಚಿಗೆ ₹40 ಲಕ್ಷ ನಿಗದಿ ಮಾಡಲಾಗಿದೆ.

ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಿಎಂಎಸ್‌ ಎಲ್‌ಇಡಿ ಯೋಜನೆ

ಸ್ಥಳೀಯ ಸಂಸ್ಥೆ; ಬೀದಿ‌ದೀಪಗಳು

ಪೌರಾಡಳಿತ ನಿರ್ದೇಶನಾಲಯ ನೇಮಿಸಿರುವ ತನಿಖಾ ತಂಡ

l ಪುರುಷೋತ್ತಮ ದಾಸ್ ಹೆಗ್ಡೆ (ಮುಖ್ಯ ಎಂಜಿನಿಯರ್‌)

l ಅಭಿಷೇಕ್ ಇ. (ಉಪನಿರ್ದೇಶಕ–ಹಣಕಾಸು)‌

l ನಿರಂಜನಮೂರ್ತಿ ಎಚ್.ಎಸ್. (ಕಾರ್ಯಪಾಲಕ ಎಂಜಿನಿಯರ್‌)

l ಸುರೇಖಾ ಅಂಕಿತ್ (ಸಹಾಯಕ ಎಂಜಿನಿಯರ್)

l ಸುರೇಶ್ ಬಿ. (ಲೆಕ್ಕಾಧೀಕ್ಷಕ)

ನಗರಸಭೆಗೆ ತನಿಖಾ ತಂಡ ಭೇಟಿ

ಕೋಲಾರ ನಗರಸಭೆ ಸೇರಿದಂತೆ ವಿವಿಧ ನಗರ ಸ್ಥಳೀಯ ಸಂಸ್ಥೆಗಳಿಗೆ ತನಿಖಾ ತಂಡ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದೆ. ಕಾಮಗಾರಿ ಕೈಗೊಂಡ ಗುತ್ತಿಗೆ ಸಂಸ್ಥೆಯಿಂದಲೂ ದಾಖಲೆ ಕೇಳಿದೆ. ಕೋಲಾರ ನಗರಸಭೆಗೆ ಭೇಟಿ ನೀಡಿದ್ದ ತಂಡಕ್ಕೆ ಸಮರ್ಪಕ ಮಾಹಿತಿ ಸಿಕ್ಕಿಲ್ಲ ಎಂಬುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಭೇಟಿ ನೀಡಲಿದ್ದು, ಅಷ್ಟರೊಳಗೆ ಮಾಹಿತಿ ನೀಡುವಂತೆ ಸೂಚನೆ ನೀಡಿದೆ.

‘ಎಷ್ಟು ವಿದ್ಯುತ್ ಉಳಿತಾಯ? ಸ್ಪಷ್ಟ ಮಾಹಿತಿ ಕೊಡುತ್ತಿಲ್ಲ’

‌ಸಿಸಿಎಂಎಸ್ ಎಲ್‌ಇಡಿ ಬೀದಿದೀಪ ಯೋಜನೆಯಡಿ ಕೋಲಾರ ನಗರಸಭೆಗೆ ವಿದ್ಯುತ್‌ ಬಳಕೆ ಹಾಗೂ ಶುಲ್ಕ ಕಡಿಮೆ ಆಗಲಿದೆ ಎಂಬುದಾಗಿ ಟೆಂಡರ್‌ ವೇಳೆ ಒಪ್ಪಂದ ಆಗಿತ್ತು. ಆದರೆ, ಬೆಳಕಿನ ಪ್ರಮಾಣ ಕಡಿಮೆ ಇರುವ (ಕಡಿಮೆ ವೋಲ್ಟ್‌) ಎಲ್‌ಇಡಿ ಅಳವಡಿಸಿದ್ದಾರೆ. ಎಷ್ಟು ವಿದ್ಯುತ್‌ ಉಳಿತಾಯವಾಗುತ್ತಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸಿಲ್ಲ. ಹಿಂದೆ ಎಷ್ಟು ಬಿಲ್‌ ಬರುತಿತ್ತು, ಈಗ ಎಷ್ಟು ಬಿಲ್‌ ಬರುತ್ತಿದೆ ಎಂಬ ಮಾಹಿತಿಯೂ ಸರಿಯಾಗಿಲ್ಲ. ವಾರ್ಷಿಕ ಶೇ 5ರಷ್ಟು ಹೆಚ್ಚುವರಿ ಎಲ್‌ಇಡಿ ವಿದ್ಯುತ್‌ ದೀಪ ಅಳವಡಿಸಬೇಕಿದ್ದು, ಆ ಕೆಲಸವೂ ನಡೆದಿಲ್ಲ. ಕರಾರು ಉಲ್ಲಂಘನೆ ಆಗಿದೆ ಎಂದು ಕೋಲಾರ ನಗರಸಭೆ ಮಾಜಿ ಸದಸ್ಯ ಎಸ್‌.ಆರ್.ಮುರಳಿಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260820-18-1854638691

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ