
ನಾಳೆಯ ಸ್ಪೀಕರ್ ಚುನಾವಣೆ ಬಹಿಷ್ಕರಿಸಲು ಬಿಜೆಪಿ ನಿರ್ಧಾರ: ಇದು ಕಾಂಗ್ರೆಸ್ ವಿರುದ್ಧದ ಹೋರಾಟ ಎಂದ ಆರ್.ಅಶೋಕ್
ಬೆಂಗಳೂರು: ಇಂದಿನಿಂದ ವಿಧಾನಮಂಡಲ ಅಧಿವೇಶನ ಶುರುವಾಗಿದ್ದು, ನಾಳೆ ಎರಡನೇ ದಿನ ಶುಕ್ರವಾರ (ಆಗಸ್ಟ್ 14) ವಿಧಾನಸಭೆಯ ಸಭಾಧ್ಯಕ್ಷರ ಚುನಾವಣೆ ನಡೆಯಲಿದೆ. ಈ ಉಚನಾವಣೆಯನ್ನು ಬಹಿಷ್ಕರಿಸುವುದಾಗಿ ವಿಪಕ್ಷ ಬಿಜೆಪಿ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ. ಆದರೆ ಚುನಾವಣೆಯ ಬಳಿಕ ಪೀಠಕ್ಕೆ ಎಂದಿನಂತೆಯೇ ಗೌರವದಿಂದ ನಡೆದುಕೊಳ್ಳುತ್ತೇವೆ. ಇದು ಕಾಂಗ್ರೆಸ್‌ನ ಸರ್ವಾಧಿಕಾರದ ವಿರುದ್ಧದ ಪ್ರತಿಭಟನೆ ಎಂದಿದ್ದಾರೆ.
ಇತ್ತೀಚೆಗೆ ವಿಧಾನ ಪರಿಷತ್ ಸಭಾಧ್ಯಕ್ಷ ಸ್ಥಾನದಲ್ಲಿದ್ದ ಬಸವರಾಜ ಹೊರಟ್ಟಿ ಅವರ ವಿರುದ್ಧ ಅವಿಶ್ವಾಸ ಮತ ಮಂಡನೆಗೆ ಕಾಂಗ್ರೆಸ್ ಸರ್ಕಾರ ಮುಂದಾಗಿತ್ತು. ಬಳಿಕ ಹೊರಟ್ಟಿ ಅವರೇ ರಾಜೀನಾಮೆ ನೀಡಿದರು. ತೆರವಾದ ಆ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಸಲೀಂ ಅಹ್ಮದ್ ಅವರನ್ನು ಸೂಚಿಸಿದರೆ, ಉಪಸಭಾ ಕ್ಷೇತ್ರ ಸ್ಥಾನಕ್ಕೆ ವಿರಾಪೇಟೆಯ ಶಾಸಕ ಎ.ಎಸ್. ಪೊನ್ನಣ್ಣ ಅವರನ್ನು ಸೂಚಿಸಲಾಗಿದೆ. ಇನ್ನೂ ವಿಧಾನಸಭಾ ಸ್ಪೀಕರ್ ಆಗಿ ರೋಣ ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ್ ಅವರು ಕಣದಲ್ಲಿರಲಿದ್ದಾರೆ. ಬಹುತೇಕ ಇವರೇ ಆ ಸ್ಥಾಪನೆ ಆಯ್ಕೆ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ.
ಗುರುವಾರ ವಿಧಾನಸಭೆ ಕಲಾಪದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆರ್. ಅಶೋಕ್ ಅವರು, ವಿಧಾನಸಭೆಯ ಸಭಾಧ್ಯಕ್ಷರ ಚುನಾವಣೆ ಶುಕ್ರವಾರ ನಡೆಯಲಿದೆ. ಸದನಕ್ಕೆ ಸಾರ್ವಭೌಮತ್ವ ಇದೆ ಹಾಗೂ ವಿಧಾನಸಭಾ ಸದಸ್ಯರಿಗೆ ಹಕ್ಕು ಇದೆ. ಆದರೆ ಕಾಂಗ್ರೆಸ್ ಪಕ್ಷ ಸಂವಿಧಾನ ಬಾಹಿರವಾಗಿ ತನ್ನ ಲೆಟರ್‌ಹೆಡ್‌ನಲ್ಲಿ ಆಯ್ಕೆ ಮಾಡಲಾಗುವ ಸಭಾಧ್ಯಕ್ಷರ ಹೆಸರನ್ನು ಉಲ್ಲೇಖ ಮಾಡಿದೆ.
ಸದನದ ಸಾರ್ವಭೌಮತ್ವವನ್ನು ಕಸಿಯುವ ಕೆಲಸವನ್ನು ದೆಹಲಿಯ ನಕಲಿ ಗಾಂಧಿ ಕುಟುಂಬ ಮಾಡಿದೆ. ಪಕ್ಷದ ಪಟ್ಟಿಯಲ್ಲಿ ಸ್ಪೀಕರ್ ಹೆಸರನ್ನು ಪ್ರಕಟಿಸುವ ಹೊಸ ಸಂಪ್ರದಾಯವನ್ನು ಹುಟ್ಟುಹಾಕಲಾಗಿದೆ. ಸಭಾಧ್ಯಕ್ಷರು ಸದನದಿಂದ ಚುನಾಯಿತರಾಗಬೇಕಿದ್ದರೂ, ಪಕ್ಷದಿಂದಲೇ ಚುನಾಯಿತರನ್ನಾಗಿ ಮಾಡಲಾಗಿದೆ. ಇದು ಪ್ರಜಾಪ್ರಭುತ್ವ ವಿರೋಧಿ ನೀತಿ ಎಂದು ಅವರು ದೂರಿದರು.
ಒತ್ತಾಯದಿಂದ ಹೊರಟ್ಟಿ ರಾಜೀನಾಮೆ! ಸಂವಿಧಾನಕ್ಕೆ ಅಪಚಾರ
ವಿಧಾನಪರಿಷತ್ ಸಭಾಪತಿಯಾಗಿದ್ದ ಬಸವರಾಜ ಹೊರಟ್ಟಿ ಅವರು ರಾಜೀನಾಮೆ ನೀಡುತ್ತೇನೆ ಎಂದಿದ್ದರೂ ಅವರ ಕಚೇರಿಗೆ ಶಾಸಕರು ನುಗ್ಗಿ ರಾಜೀನಾಮೆ ಪಡೆದಿದ್ದಾರೆ. ಇದು ಕೂಡ ಸಂವಿಧಾನಕ್ಕೆ ಮಾಡಿರುವ ಅಪಚಾರ. ಇಲ್ಲಿನ ಹೊಸ ಸಭಾಪತಿ ಹಾಗೂ ಉಪಸಭಾಪತಿಗಳ ಹೆಸರನ್ನು ಕೂಡ ಪಕ್ಷದ ಪಟ್ಟಿಯಲ್ಲಿ ತೋರಿಸಲಾಗಿದೆ. ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಉಪ ಸಭಾಧ್ಯಕ್ಷ ಎಂದು ತೋರಿಸಲಾಗಿತ್ತು.
ನಂತರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ರಾಜಕೀಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಇದರಲ್ಲಿ ಯಾವುದು ಸರಿ ಎಂದು ತಿಳಿಸದೆ ಗೊಂದಲದ ಗೂಡು ಮಾಡಿದ್ದಾರೆ. ಇವೆಲ್ಲವೂ ಸದನದ ನೀತಿ ನಿಯಮಗಳನ್ನು ಮೀರಿದ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದರು.
ಕಾಂಗ್ರೆಸ್ ವಿರುದ್ಧ ಕೈಗೊಂಡ ನಿರ್ಧಾರ
ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಕಾಂಗ್ರೆಸ್ ಅಪಚಾರ ಮಾಡಿರುವುದರಿಂದ ವಿಧಾನಸಭಾಧ್ಯಕ್ಷರ ಆಯ್ಕೆಯ ಚುನಾವಣೆಯನ್ನು ಬಿಜೆಪಿಯಿಂದ ಬಹಿಷ್ಕಾರ ಮಾಡಲಾಗುತ್ತಿದೆ. ಚುನಾವಣೆಯಲ್ಲಿ ನಾವು ಭಾಗಿಯಾಗುವುದಿಲ್ಲ. ಆದರೆ ಚುನಾವಣೆಯ ನಂತರ ಮಾತ್ರ ಪೀಠಕ್ಕೆ ಗೌರವದಿಂದ ನಡೆದುಕೊಳ್ಳುತ್ತೇವೆ. ಇದು ಪೀಠದ ವಿರುದ್ಧವಲ್ಲ, ಆದರೆ ಕಾಂಗ್ರೆಸ್‌ನ ಲೆಟರ್‌ಹೆಡ್ ಹಾಗೂ ಸರ್ವಾಧಿಕಾರದ ವಿರುದ್ಧ ಮಾಡುತ್ತಿರುವ ಪ್ರತಿಭಟನೆ ಎಂದು ಅವರು ಹೇಳಿದರು.