ಚಿಕ್ಕಮಗಳೂರು:ಮುಳ್ಳಯ್ಯನಗಿರಿ ರಸ್ತೆಯಲ್ಲಿ ಹೊಂಡ, ಕೆಸರುಗದ್ದೆಯಾದ ಪಾರ್ಕಿಂಗ್ ತಾಣ

ಚಿಕ್ಕಮಗಳೂರು:ಮುಳ್ಳಯ್ಯನಗಿರಿ ರಸ್ತೆಯಲ್ಲಿ ಹೊಂಡ, ಕೆಸರುಗದ್ದೆಯಾದ ಪಾರ್ಕಿಂಗ್ ತಾಣ

ಚಿಕ್ಕಮಗಳೂರು:ಮುಳ್ಳಯ್ಯನಗಿರಿ ರಸ್ತೆಯಲ್ಲಿ ಹೊಂಡ, ಕೆಸರುಗದ್ದೆಯಾದ ಪಾರ್ಕಿಂಗ್ ತಾಣ

ಚಿಕ್ಕಮಗಳೂರು: ರಾಜ್ಯದ ಅತೀ ಎತ್ತರದ ಪ್ರದೇಶವಾಗಿರುವ ಮುಳ್ಳಯ್ಯನಗಿರಿ ತಲುಪಲು ಪ್ರವಾಸಿಗರು ಪ್ರಯಾಸ ಕಡಿಮೆಯಾಗಿಲ್ಲ. ರಸ್ತೆ ಅಲ್ಲಲ್ಲಿ ಗುಂಡಿ ಬಿದ್ದಿದ್ದು, ಗಿರಿಯ ಕೊನೆಯಲ್ಲಿನ ಪಾರ್ಕಿಂಗ್ ತಾಣವಂತೂ ಕೆಸರುಗದ್ದೆಯಾಗಿದೆ.

ಚಿಕ್ಕಮಗಳೂರಿನಿಂದ ಮುಳ್ಳಯ್ಯನಗಿರಿ ಮಾರ್ಗದಲ್ಲಿ ಕೆಲವೆಡೆ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಬಾಬಾಬುಡನ್‌ಗಿರಿ ರಸ್ತೆಯಿಂದ ಮುಳ್ಳಯ್ಯನಗಿರಿ ಕಡೆಗೆ ತಿರುಗುವ ರಸ್ತೆ ಸ್ಥಳದಿಂದ ಸ್ವಲ್ಪ ದೂರು ಅಭಿವೃದ್ಧಿಪಡಿಸಲಾಗಿದ್ದು, ಉತ್ತಮವಾದ ರಸ್ತೆ ಇದೆ.

ಮುಂದೆ ಸಾಗಿದ ನಂತರ ಮತ್ತೆ ಹಳೇ ರಸ್ತೆ ಎದುರಾಗುತ್ತದೆ. ಈ ರಸ್ತೆಯಲ್ಲಿದ್ದ ಗುಂಡಿಗಳು ಮಳೆಗಾಲದಲ್ಲಿ ಇನ್ನಷ್ಟು ದೊಡ್ಡದಾಗಿದ್ದು, ಪ್ರವಾಸಿಗರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಕೆಲವೆಡೆ ಮರದ ಬಡ್ಡೆಗಳು ಮುರಿದು ರಸ್ತೆ ಬದಿಗೆ ಬಿದ್ದಿದ್ದು, ಅವುಗಳನ್ನು ಪೂರ್ಣ ಪ್ರಮಾಣದಲ್ಲಿ ತೆರವುಗೊಳಿಸುವ ಕಾರ್ಯವಾಗಿಲ್ಲ.

ಸೀತಾಳಯ್ಯನಗಿರಿ ತನಕ ಸಾಹಸಪಟ್ಟು ಹೋದರೂ ಮುಂದೆ ಸಾಗಲು ಖಾಸಗಿ ಕಾರುಗಳಿಗೆ ಅವಕಾಶ ಇಲ್ಲ. ಈ ಹಿಂದೆ ಮುಳ್ಳಯ್ಯನಗಿರಿ ಪಾರ್ಕಿಂಗ್ ತಾಣದ ತನಕ ಹೋಗುತ್ತಿದ್ದ ಕಾರುಗಳನ್ನು ಈಗ ಸೀತಾಳಯ್ಯನಗಿರಿ ಬಳಿಯೇ ತಡೆಯಲಾಗುತ್ತಿದೆ. ಸೀತಾಳ ಮಲ್ಲಿಕಾರ್ಜುನ ದೇಗುಲದ ಸುತ್ತಲ ಆವರಣ ಈಗ ವಾಹನ ನಿಲುಗಡೆಯ ತಾಣವಾಗಿದೆ.

ಮುಳ್ಳಯ್ಯನಗಿರಿ ಕಡೆಯ ರಸ್ತೆಗೆ ಬ್ಯಾರಿಕೇಡ್ ಹಾಕಲಾಗಿದ್ದು, ಖಾಸಗಿ ಕಾರುಗಳ ಸಂಚಾರ ನಿರ್ಬಂಧಿಸಲಾಗಿದೆ. ಅಲ್ಲಿರುವ ಖಾಸಗಿ ಜೀಪು ಗಳಲ್ಲಿ ಪ್ರವಾಸಿಗರು ಮುಳ್ಳಯ್ಯನಗಿರಿ ತಲು ಪಬೇಕಾಗಿದೆ. ರಸ್ತೆ ಹಾಳಾಗಿದ್ದ ಕಾರಣಕ್ಕೆ ಕಾರುಗಳ ಪ್ರವೇಶ ಹಿಂದೆ ನಿರ್ಬಂಧಿಸಲಾಗಿತ್ತು. ನಂತರ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲು ಎಲ್ಲಾ ವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತು.

ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿದ್ದರೂ ಅದು ಪೂರ್ಣ ಪ್ರಮಾಣದಲ್ಲಿ ಆಗಿಲ್ಲ. ಸ್ವಲ್ಪ ದೂರ ಮಾತ್ರ ಸಿಮೆಂಟ್ ರಸ್ತೆ ಇದ್ದು, ಉಳಿದೆಡೆ ಹಳೇಯ ಗುಂಡಿಮಯ ಕಾಂಕ್ರೀಟ್ ರಸ್ತೆಯೇ ಇದೆ. ಪ್ರವಾಸಿಗರು ಕಾರುಗಳನ್ನು ನಿಲ್ಲಿಸಿ ಖಾಸಗಿ ಜೀಪುಗಳಲ್ಲಿ ಹಣ ಕೊಟ್ಟು ಪ್ರಯಾಣ ಮಾಡುವುದು ತಪ್ಪಿಲ್ಲ.

ಇನ್ನು ಮುಳ್ಳಯ್ಯನಗಿರಿ ಮೆಟ್ಟಿಲುಗಳ ಬಳಿ ಇರುವ ಪಾರ್ಕಿಂಗ್ ತಾಣವಂತೂ ಕೆಸರುಗದ್ದೆಯಾಗಿ ಮಾರ್ಪಟ್ಟಿದೆ. ರಸ್ತೆಯಿಂದ ಪಾರ್ಕಿಂಗ್ ತಾಣಕ್ಕೆ ವಾಹನಗಳನ್ನು ಇಳಿಸಿ ಮತ್ತೆ ರಸ್ತೆಗೆ ಹತ್ತಿಸಲು ಸಾಧ್ಯವಾಗದ ಸ್ಥಿತಿ ಇದೆ. ಸದ್ಯ ಜೀಪು ಮತ್ತು ಟಾಟಾಸುಮೊ ವಾಹನಗಳು ಮಾತ್ರ ಹೋಗುತ್ತಿದ್ದು, ಅವುಗಳನ್ನು ಕೂಡ ಕೂಡ ಕಷ್ಟಪಟ್ಟು ಚಾಲನೆ ಮಾಡಬೇಕಾದ ಸ್ಥಿತಿ ಇದೆ.

ಗುಂಡಿ ಬಿದ್ದಿರುವ ರಸ್ತೆ ಮತ್ತು ಹಾಳಾಗಿರುವ ಪಾರ್ಕಿಂಗ್ ತಾಣ ಅಭಿವೃದ್ಧಿಪಡಿಸಬೇಕು. ಇಲ್ಲದಿದ್ದರೆ ಜೀಪು ಯಾವುದೇ ವಾಹನಗಳ ಸಂಚಾರ ಕಷ್ಟವಾಗಲಿದೆ ಎಂದು ಜೀಪ್ ಚಾಲಕರು ಹೇಳುತ್ತಾರೆ.

ಮುಳ್ಳಯ್ಯನಗಿರಿಗೆ ಆನ್‌ಲೈನ್ ವ್ಯವಸ್ಥೆ ಜಾರಿಗೆ ಬಂದ ಬಳಿಕ ₹100 ಪಾವತಿಸಿ ವಾಹನಗಳನ್ನು ಕೊಂಡೊಯ್ಯುತ್ತಿದ್ದೇವೆ. ಸೀತಾಳಯ್ಯನಗಿರಿಯಲ್ಲೇ ಕಾರು ನಿಲ್ಲಿಸಿ ಮತ್ತೆ ಹಣ ಕೊಟ್ಟು ಹೋಗಬೇಕಾದ ಸ್ಥಿತಿ ಇದೆ. ರಸ್ತೆ ಅಭಿವೃದ್ಧಿಪಡಿಸಿ ಎಲ್ಲಾ ವಾಹನಗಳಿಗೆ ಅವಕಾಶ ನೀಡಬೇಕು ಎಂಬುದು ಪ್ರವಾಸಿಗರ ಆಗ್ರಹ.

ನನೆಗುದಿಗೆ ಬಿದ್ದ ಪಾರ್ಕಿಂಗ್ ತಾಣ

ಕೈಮರ ಬಳಿ ಇದ್ದ ಚೆಕ್‌ಪೋಸ್ಟ್‌ ಈಗ ಎನ್ಎಂಡಿಸಿ ಬಳಿಗೆ ಸ್ಥಳಾಂತರವಾಗಿದೆ. ಆದಿಚುಂಚನಗಿರಿ ಮಠಕ್ಕೆ ಹೊಂದಿಕೊಂಡಿರುವ ಜಾಗದಲ್ಲಿ ಪಾರ್ಕಿಂಗ್ ತಾಣ ನಿರ್ಮಿಸಲು ಉದ್ದೇಶಿಸಲಾಗಿದೆ. ಆದರೆ, ಜಾಗದ ಗೊಂದಲ ಇತ್ಯರ್ಥವಾಗದ ಕಾರಣ ಯೋಜನೆ ಸದ್ಯಕ್ಕೆ ಸಾಕಾರವಾಗುವ ಲಕ್ಷಣಗಳು ಕಾಣಿಸುತ್ತಿಲ್ಲ.

ಜಾಗ ದೊರೆತರೆ ಸುಸಜ್ಜಿತ ಪಾರ್ಕಿಂಗ್ ತಾಣ ನಿರ್ಮಿಸಿ. ಎಲ್ಲಾ ಖಾಸಗಿ ವಾಹನಗಳನ್ನು ಇಲ್ಲಿಯೇ ನಿಲ್ಲಿಸಿ ಪ್ರವಾಸೋದ್ಯಮ ಇಲಾಖೆಗೆ ನಿಗದಿಪಡಿಸುವ ವಾಹನಗಳಲ್ಲೇ ಗಿರಿ ದರ್ಶನ ಮಾಡಿಸುವುದು ಇಲಾಖೆಯ ಉದ್ದೇಶ.

ಪಾರ್ಕಿಂಗ್ ತಾಣದ ಜಾಗದ ಗೊಂದಲ ಬಗೆಹರಿದರೆ ಎಲ್ಲಾ ಸಮಸ್ಯೆ ಪರಿಹಾರವಾಗಲಿದೆ. ಆದರೆ, ವಿವಾದ ಬೇರೆ ಬೇರೆ ಸ್ವರೂಪ ಪಡೆದುಕೊಳ್ಳುತ್ತಿದೆ.

ಗೊಂದಲ ಇತ್ಯರ್ಥಪಡಿಸಲು ಪ್ರಯತ್ನ ಮುಂದುವರಿದಿದೆ. ಆದಿಚುಂಚನಗಿರಿ ಮಠದ ಸ್ವಾಮೀಜಿ ಅವರೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260820-126-498506192

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ