ಉತ್ತರಾಖಂಡದಲ್ಲಿ ಜಾಗ ಖರೀದಿಗೆ ಮುಖ್ಯಮಂತ್ರಿ ಸಹಾಯ ಕೇಳಿದ ರಿಷಬ್ ಪಂತ್
‘ದೆಹಲಿಯಲ್ಲಿ ವಾಸವಾಗಿರುವ ನಾನು, ನನ್ನ ತವರು ರಾಜ್ಯವಾದ ಉತ್ತರಾಖಂಡದಲ್ಲಿ ಬಂದು ನೆಲೆಸಬೇಕೆಂದು ಬಯಸಿದ್ದೇನೆ. ಆದರೆ ಸರಿಯಾದ ಜಾಗ ಸಿಗುತ್ತಿಲ್ಲ. ಜಮೀನು ಖರೀದಿಸಲು ಸಹಾಯ ಮಾಡಿ’ ಎಂದು ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್, ಬ್ಯಾಟರ್ ರಿಷಬ್ ಪಂತ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಲ್ಲಿ ಮನವಿ ಮಾಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡ ಪಂತ್, ‘ನಮಸ್ಕಾರ ಸರ್, ಹೇಗಿದ್ದೀರಿ? ನಾನು ಮೂಲತಃ ಉತ್ತರಾಖಂಡದವನಾಗಿದ್ದು, ದೆಹಲಿಯಿಂದ ಬಂದು ನೆಲೆಸಲು ಜಮೀನು ಖರೀದಿಸಲು ಪ್ರಯತ್ನಿಸುತ್ತಿದ್ದೇನೆ. ಆದರೆ, ಉತ್ತರಾಖಂಡದಲ್ಲಿ ನೆಲೆಸಲು ಸೂಕ್ತವಾದ ಮತ್ತು ವಿಶಾಲವಾದ ಜಾಗ ಸಿಗುತ್ತಿಲ್ಲ. ನನಗೆ ನನ್ನ ಉತ್ತರಾಖಂಡವೆಂದರೆ ತುಂಬಾ ಇಷ್ಟ. ಜಮೀನು ಖರೀದಿಸುವ ವಿಷಯದಲ್ಲಿ ದಯವಿಟ್ಟು ನನಗೆ ಸಹಾಯ ಮಾಡಿ ಎಂದು ನಿಮ್ಮಲ್ಲಿ ವಿನಂತಿಸುತ್ತೇನೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಜಮೀನಿನ ದಾಖಲೆಗಳ ಸ್ಪಷ್ಟತೆ ಮತ್ತು ಇತರ ವಿಷಯಗಳು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿವೆ. ರಾಜ್ಯದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾಗ ನನಗೆ ಸಿಗಬೇಕಿದ್ದ ಜಮೀನು ಕೂಡ ಇನ್ನೂ ಸಿಕ್ಕಿಲ್ಲ. ಎಲ್ಲವನ್ನೂ ಬದಿಗಿಟ್ಟು, ನನ್ನ ತವರು ನಾಡಿಗೆ ಮರಳಿ ಉತ್ತರಾಖಂಡದ ಅಭಿವೃದ್ಧಿಗೆ ಕೊಡುಗೆ ನೀಡಲು ಮತ್ತು ನನ್ನ ಜನರೊಂದಿಗೆ ನೆಲೆಸಲು ನಾನು ಬಯಸುತ್ತಿದ್ದೇನೆ. ದಯವಿಟ್ಟು ಈ ವಿಷಯವನ್ನು ಪರಿಗಣಿಸಿ. ಕಳೆದ ಮೂರು ವರ್ಷಗಳಿಂದ ಪ್ರಯತ್ನಿಸುತ್ತಿದ್ದರೂ ಇನ್ನೂ ಜಮೀನು ಸಿಕ್ಕಿಲ್ಲ, ನಿಮ್ಮ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇನೆ’ ಎಂದಿದ್ದರು.
ರಿಷಬ್ ಪಂತ್ ಮನವಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಧಾಮಿ
ತವರು ರಾಜ್ಯವಾದ ಉತ್ತರಾಖಂಡದಲ್ಲಿ ನೆಲೆಸಲು ರಿಷಬ್ ಪಂತ್ ಮಾಡಿರುವ ಮನವಿಗೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಂದ ಪ್ರತಿಕ್ರಿಯೆ ದೊರೆತಿದೆ.
‘ರಿಷಬ್, ನೀವು ಉತ್ತರಾಖಂಡದ ಹೆಮ್ಮೆ. ನಿಮ್ಮ ಅದ್ಭುತ ಪ್ರದರ್ಶನ ಮತ್ತು ಸಾಧನೆಗಳ ಮೂಲಕ ನೀವು ದೇಶ ಹಾಗೂ ವಿಶ್ವದಾದ್ಯಂತ ‘ದೇವಭೂಮಿ’ಯ ಕೀರ್ತಿಯನ್ನು ಹೆಚ್ಚಿಸಿದ್ದೀರಿ. ಮಾತೃಭೂಮಿಯ ಮೇಲಿನ ನಿಮ್ಮ ಪ್ರೀತಿ ಮತ್ತು ಇಲ್ಲಿಗೆ ಮರಳಿ ಕೊಡುಗೆ ನೀಡುವ ನಿಮ್ಮ ಭಾವನೆ ಅತ್ಯಂತ ಶ್ಲಾಘನೀಯ. ನೀವು ಪ್ರಸ್ತಾಪಿಸಿರುವ ವಿಷಯಕ್ಕೆ ಸಂಬಂಧಿಸಿದಂತೆ, ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗುತ್ತಿದೆ. ಅವರು ಶೀಘ್ರದಲ್ಲೇ ನಿಮ್ಮನ್ನು ಸಂಪರ್ಕಿಸಿ, ನಿಯಮಗಳಿಗನುಗುಣವಾಗಿ ಎಲ್ಲ ರೀತಿಯ ಸಹಕಾರವನ್ನು ನೀಡಲಿದ್ದಾರೆ’ ಎಂದಿದ್ದಾರೆ.