ಮಡಿಕೇರಿ | ಕೋಟೆಯಲ್ಲಿಲ್ಲ ಶೌಚಾಲಯ; ವಿದ್ಯಾರ್ಥಿನಿಯರಿಗೆ ತಪ್ಪದ ಸಂಕಟ

ಮಡಿಕೇರಿ | ಕೋಟೆಯಲ್ಲಿಲ್ಲ ಶೌಚಾಲಯ; ವಿದ್ಯಾರ್ಥಿನಿಯರಿಗೆ ತಪ್ಪದ ಸಂಕಟ

ಮಡಿಕೇರಿ | ಕೋಟೆಯಲ್ಲಿಲ್ಲ ಶೌಚಾಲಯ; ವಿದ್ಯಾರ್ಥಿನಿಯರಿಗೆ ತಪ್ಪದ ಸಂಕಟ

ಮಡಿಕೇರಿ: ‘ಮುಂದಿನ ವರ್ಷವೂ ಕೋಟೆಯ ಆವರಣದಲ್ಲೇ ಸ್ವಾತಂತ್ರ್ಯ ದಿನಾಚರಣೆ ನಡೆದರೆ ಖಂಡಿತಾ ನಾನು ಭಾಗವಹಿಸುವುದಿಲ್ಲ ಸರ್’ ಎಂದು ವಿದ್ಯಾರ್ಥಿನಿಯೊಬ್ಬರು ಹೇಳಿದಾಗ ಆಕೆಯ ಮುಖದಲ್ಲಿ ಸಂಕಟ ಕಾಣುತ್ತಿತ್ತು.

ಇದು ಕಳೆದ ವಾರವಷ್ಟೇ ಕೋಟೆಯ ಆವರಣದಲ್ಲಿ ನಡೆದ ಸ್ವಾತಂ‌ತ್ರ್ಯ ದಿನಾಚರಣೆಗಾಗಿ ನಡೆದ ತಾಲೀಮಿನ ವೇಳೆ ಕಂಡುಬಂದ ಚಿತ್ರಣ. ಬಹುತೇಕ ವಿದ್ಯಾರ್ಥಿನಿಯರು ಇದೇ ಬಗೆಯ ಅಭಿಪ್ರಾಯ ವ್ಯಕ್ತಪಡಿಸಿದರು.

ಕೋಟೆಯ ಆವರಣದಲ್ಲಿ ಎಲ್ಲಿಯೂ ಶೌಚಾಲಯ ಇಲ್ಲದೇ ಇರುವುದರಿಂದ ವಿದ್ಯಾರ್ಥಿನಿಯರು ಪರದಾಡಿದರು.

ವಿದ್ಯಾರ್ಥಿನಿಯರು ಮಾತ್ರವಲ್ಲ, ಅಲ್ಲಿಗೆ ಬಂದಿದ್ದ ಶಿಕ್ಷಕರು, ಕಾರ್ಯಕ್ರಮ ಆಯೋಜಕರೂ ಪರದಾಡಿದರು. ಸುಮಾರು 500ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿಯಾಗುವ ಈ ತಾಲೀಮಿನ ವೇಳೆ ಕನಿಷ್ಠ ಪಕ್ಷ ತಾತ್ಕಾಲಿಕ ಶೌಚಾಲಯದ ವ್ಯವಸ್ಥೆಯನ್ನೂ ಜಿಲ್ಲಾಡಳಿತ ಕಲ್ಪಿಸಲಿಲ್ಲ.

ಇದು ಕೇವಲ ವರ್ಷಕ್ಕೆ ಒಮ್ಮೆ ನಡೆಯುವ ಸ್ವಾತಂತ್ರ್ಯ ದಿನಾಚರಣೆಯ ತಾಲೀಮಿನಲ್ಲಿ ವಿದ್ಯಾರ್ಥಿನಿಯರ ಸಂಕಟ ಮಾತ್ರವಲ್ಲ. ಇಲ್ಲಿಗೆ ನಿತ್ಯ ಬರುವ ಪ್ರವಾಸಿಗರ ಸಂಕಟವೂ ಇದೇ ಆಗಿದೆ.

ಪ್ರತಿ ವರ್ಷ 4–5 ಲಕ್ಷ ಮಂದಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಪ್ರವಾಸಿಗರು ಬಂದರೂ ಅವರಿಗೆ ಮೂಲಸೌಕರ್ಯ ಕಲ್ಪಿಸಿಕೊಡುವಲ್ಲಿ ಭಾರತೀಯ ಪ್ರಾಚ್ಯವಸ್ತು ಸರ್ವೇಕ್ಷಣಾಲಯ ಹಾಗೂ ಕೊಡಗು ಜಿಲ್ಲಾಡಳಿತ ಸೋತಿದೆ ಎಂಬುದು ಸ್ಥಳೀಯರ ದೂರು.

ಸದ್ಯ, ಕೋಟೆಗೆ ಹಾಗೂ ಅದರೊಳಗಿನ ಅರಮನೆಗೆ ಯಾವುದೇ ಪ್ರವೇಶ ಶುಲ್ಕ ಪಡೆಯುತ್ತಿಲ್ಲ. ಸರ್ಕಾರದ ಬಳಿ ಹಣ ಇಲ್ಲವಾದರೂ, ಪ್ರವೇಶ ಶುಲ್ಕ ವಿಧಿಸಿಯಾದರೂ ಹಣ ಸಂಗ್ರಹಿಸಿ ಶೌಚಾಲಯ ನಿರ್ಮಿಸಲಿ ಎಂದು ಹೊಸಪೇಟೆಯಿಂದ ಬಂದಿದ್ದ ಪ್ರವಾಸಿಗ ರಾಮು ಹೇಳಿದರು.

ಕೋಟೆಯ ಹಿಂಭಾಗ ಒಂದು ಶೌಚಾಲಯ ಇದೆಯಾದರೂ ಅದಕ್ಕೆ ನೀರಿನ ಸಂಪರ್ಕ ಇಲ್ಲ. ಜೊತೆಗೆ, ಅದು ದೂರದಲ್ಲಿದೆ. ಅಲ್ಲಿಗೆ ಹೋಗಲೂ ಸಾಧ್ಯವಾಗದ ಸ್ಥಿತಿ ಇದೆ. ಹಾಗಾಗಿ, ಅದು ಇದ್ದರೂ ಇಲ್ಲದಂತಿದೆ.

ಕೋಟೆಯ ಆವರಣದಲ್ಲಿಯೇ ಕನಿಷ್ಠ ಒಂದು ಶೌಚಾಲಯ ನಿರ್ಮಿಸಬೇಕು. ಶುಲ್ಕ ಪಡೆಯುವಂತಹ ಶೌಚಾಲಯ ನಿರ್ಮಿಸಿದರೂ ಅಡ್ಡಿಯಿಲ್ಲ ಎಂಬುದು ಪ್ರವಾಸಿಗರ ಅಭಿಪ್ರಾಯ.

ಇಲಾಖೆಗಳ ಮಧ್ಯೆ ಇಲ್ಲ ಸಮನ್ವಯ

ಕೋಟೆ ವಿಷಯದಲ್ಲಿ ವಿವಿಧ ಇಲಾಖೆಗಳ ಸಮನ್ವಯ ಇಲ್ಲದೇ ಇರುವುದು ಗೋಚರಿಸುತ್ತಿದೆ. ಕೋಟೆಯು ಭಾರತೀಯ ಪ್ರಾಚ್ಯವಸ್ತು ಸರ್ವೇಕ್ಷಣಾಲಯಕ್ಕೆ ಸೇರಿದ್ದಾದರೆ, ಅದರ ಆವರಣದಲ್ಲಿರುವ ಸರ್ಕಾರಿ ವಸ್ತುಸಂಗ್ರಹಾಲಯವನ್ನು ರಾಜ್ಯ ಸರ್ಕಾರಕ್ಕೆ ಸೇರಿದ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಗೆ ನಿರ್ವಹಿಸುತ್ತಿದೆ. ಜಿಲ್ಲಾಡಳಿತಕ್ಕೆ ಕೋಟೆ ನೆನಪಾಗುವುದು ಕೇವಲ ವರ್ಷಕ್ಕೆ ಒಂದು ಬಾರಿ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಮಾತ್ರ. ನಗರಸಭೆಯಂತೂ ಕೋಟೆ ಎಂಬುದು ಇದೆ ಎನ್ನುವುದನ್ನೇ ಮರೆತಂತಿದೆ ಎಂಬುದು ಸ್ಥಳೀಯರ ಆರೋಪ.

ನಗರಸಭೆಯಿಂದ ನೀರಿನ ಸಂಪರ್ಕ ನೀಡಿದರೆ ತಕ್ಷಣವೇ ಶೌಚಾಲಯ ನಿರ್ಮಿಸಲಾಗುವುದು ಎಂದು ಭಾರತೀಯ ಪ್ರಾಚ್ಯವಸ್ತು ಸರ್ವೇಕ್ಷಣಾಲಯದ ಬೆಂಗಳೂರಿನ ಅಧಿಕಾರಿಗಳು ಹೇಳುತ್ತಾರೆ. ನೀರಿಲ್ಲದೇ ಶೌಚಾಲಯ ನಿರ್ಮಿಸುವುದಾದರೂ ಹೇಗೆ ಎಂದೂ ಅವರು ಪ್ರಶ್ನಿಸುತ್ತಾರೆ. ಆದರೆ, ನಗರಸಭೆಯಿಂದ ಕುಡಿಯುವ ನೀರಿನ ಸಂಪರ್ಕ ನೀಡಲಾಗಿದೆ.

ಈ ಕುರಿತು ಜಿಲ್ಲಾಡಳಿತ ವಿವಿಧ ಇಲಾಖೆಗಳ ನಡುವೆ ಸಮನ್ವಯತೆ ಸಾಧಿಸಿ, ನೀರಿನ ಸಂಪರ್ಕ ಇರುವ ಶೌಚಾಲಯ ನಿರ್ಮಿಸಿಕೊಡಬೇಕು ಎಂಬುದು ಪ್ರವಾಸಿಗರ ಒತ್ತಾಯ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260820-51-645485722

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ