
ಗ್ರಾಮಗಳ ನಕಾಶೆಯನ್ನು ಪರಿಷ್ಕರಿಸುವ ಪ್ರಸ್ತಾವ ಸರ್ಕಾರದ ಮುಂದೆ ಇದೆ: ಜಿ.ಪರಮೇಶ್ವರ
ಬೆಂಗಳೂರು: ‘ಗ್ರಾಮಗಳ ನಕಾಶೆಯನ್ನು ಪರಿಷ್ಕರಿಸುವ ಪ್ರಸ್ತಾವ ಸರ್ಕಾರದ ಮುಂದೆ ಇದೆ‘ ಎಂದು ಕಂದಾಯ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಅವರು ವಿಧಾನಪರಿಷತ್ತಿಗೆ ತಿಳಿಸಿದರು.
ಪರಿಷತ್ತಿನ ಪ್ರಶ್ನೋತ್ತರ ವೇಳೆಯಲ್ಲಿ, ಕಾಂಗ್ರೆಸ್ನ ಎಂ.ಎಲ್.ಅನಿಲ್ ಕುಮಾರ್ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು. ‘ಬ್ರಿಟಿಷರ ಆಳ್ವಿಕೆಯ ಅವಧಿಯಲ್ಲಿ ಗ್ರಾಮಗಳ ನಕಾಶೆ ರೂಪಿಸಲಾಗಿತ್ತು. ಯಾವುದೇ ಸರ್ವೆಗೆ 30 ವರ್ಷಗಳ ಗ್ಯಾರಂಟಿ ಅವಧಿ ಇರುತ್ತದೆ. ಆ ಅವಧಿ ಮುಕ್ತಾಯವಾದ ನಂತರ ಸರ್ವೆಯನ್ನು ಪರಿಷ್ಕರಿಸಬೇಕಿತ್ತು’ ಎಂದರು.
‘ಗ್ರಾಮ ನಕಾಶೆಗಳನ್ನು ಇಂತಿಷ್ಟೇ ವರ್ಷಗಳಿಗೆ ಕಡ್ಡಾಯವಾಗಿ ಪರಿಷ್ಕರಿಸಬೇಕು ಎಂಬ ನಿಯಮ ಇಲ್ಲ. ಆದರೆ, ಗ್ರಾಮಗಳ ಸ್ವರೂಪದಲ್ಲಿ ವ್ಯಾಪಕ ಬದಲಾವಣೆ ಆಗಿದೆ. ಹೀಗಾಗಿ ನಕಾಶೆಗಳನ್ನು ಪರಿಷ್ಕರಿಸಬೇಕಿತ್ತು. ಆ ಕೆಲಸ ಆಗಿಲ್ಲ. ಈಗ ನಕಾಶೆ ಪರಿಷ್ಕರಣೆಯ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ’ ಎಂದರು.
‘ಗ್ರಾಮಠಾಣಾ ವ್ಯಾಪ್ತಿಗೆ ಹೊಂದಿಕೊಂಡಿರುವ ಜಮೀನುಗಳನ್ನು, ಗ್ರಾಮಠಾಣಾ ಎಂದು ಪರಿವರ್ತಿಸಲು ಸಾಧ್ಯವಿಲ್ಲ’ ಎಂದು ಉಪಪ್ರಶ್ನೆಗೆ ಉತ್ತರಿಸಿದರು.
‘ಸರ್ಕಾರಿ ಫಡಾ ತೆಗೆಯಲು ಕ್ರಮ’
‘ಕಂದಾಯ ಕಟ್ಟದ ಕೃಷಿ ಭೂಮಿಯನ್ನು ಮುಟ್ಟುಗೋಲು ಮಾಡಿಕೊಳ್ಳಲು ಅವಕಾಶವಿದ್ದು, ಅವುಗಳ ಪಹಣಿಯಲ್ಲಿ ಸರ್ಕಾರಿ ಫಡಾ ಎಂದು ಇದೆ. ಪಹಣಿಗಳಲ್ಲಿ ರೈತರ ಹೆಸರನ್ನು ಪುನಃಸ್ಥಾಪಿಸಲು 2012ರ ಡಿಸೆಂಬರ್ 7ರಿಂದ 2014ರ ಸೆಪ್ಟೆಂಬರ್ 6ರವರೆಗೆ ಅವಕಾಶ ನೀಡಲಾಗಿತ್ತು. ಈಗ ಮತ್ತೆ ಅವಕಾಶ ಕಲ್ಪಿಸಲಾಗುತ್ತದೆ’ ಎಂದು ಜಿ.ಪರಮೇಶ್ವರ ಉತ್ತರಿಸಿದರು.
ಕಾಂಗ್ರೆಸ್ನ ಎಸ್.ರವಿ ಅವರು ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ ಅವರು, ‘ಈಗಾಗಲೇ ಕರಡು ನಿಯಮಗಳನ್ನು ಹೊರಡಿಸಲಾಗಿದೆ. ಶೀಘ್ರವೇ ಅಂತಿಮ ಅಧಿಸೂಚನೆ ಹೊರಡಿಸಲಾಗುತ್ತದೆ’ ಎಂದರು.