
ಅಂತಿಮ ಹಂತ ತಲುಪಿದ ರಸ್ತೆ ಅಭಿವೃದ್ಧಿ ಕಾಮಗಾರಿ: ತರೀಕೆರೆಯ ಬಹುದಿನಗಳ ಕನಸು–ನನಸು
ತರೀಕೆರೆ: ಪಟ್ಟಣದ ಬಿ.ಎಚ್. ರಸ್ತೆಯು ದ್ವಿಪಥ ರಸ್ತೆಯಾಗಿ ಅಭಿವೃದ್ಧಿಯಾಗುತ್ತಿದ್ದು, ಅಂತಿಮ ಹಂತ ಕಾಮಗಾರಿ ಕೆಲವೇ ದಿನಗಳಲ್ಲಿ ಪೂರ್ಣಗೊಂಡು ಸಾರ್ವಜನಿಕರು ಹಾಗೂ ವಾಹನಗಳ ಸಂಚಾರಕ್ಕೆ ಮುಕ್ತವಾಗಲಿದೆ.
ಪಟ್ಟಣದ ಹಳಿಯೂರಿನಿಂದ ಆರ್‌ಟಿಒ ಕಚೇರಿವರೆಗೆ ರಸ್ತೆ ವಿಸ್ತರಣೆ ಕಾಮಗಾರಿ ಶೇ 90ರಷ್ಟು ಪೂರ್ಣಗೊಂಡಿದೆ. ಕೆಲವು ಸಣ್ಣಪುಟ್ಟ ಕಾಮಗಾರಿಗಳು ಮಾತ್ರ ಬಾಕಿ ಉಳಿದಿವೆ.
ಕೋಡಿಕ್ಯಾಂಪ್‌ನ ಓಂ ಸರ್ಕಲ್‌ನಿಂದ 450 ಮೀಟರ್ ಹಾಗೂ ಮಿನಿ ವಿಧಾನಸೌಧದಿಂದ 450 ಮೀಟರ್‌ವರೆಗಿನ ಹಾಟ್‌ಸ್ಪಾಟ್ ರಸ್ತೆಯಲ್ಲಿ ಈಗಾಗಲೇ ಜಲ್ಲಿ ಮೆಲ್ಟಿಂಗ್ ಮಾಡಲಾಗಿದೆ. ಮಳೆಗಾಲ ಮುಗಿದ ನಂತರ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಸ್ತೆ ಕಾಮಗಾರಿ ನಡೆದಿರುವ ಕೆಲವು ಕಡೆ ಹೊಂಡಗಳು ನಿರ್ಮಾಣವಾಗಿ ನೀರು ನಿಲ್ಲುತ್ತಿದ್ದು, ವಾಹನ ಹಾಗೂ ಪಾದಚಾರಿಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅಂತಹ ಸ್ಥಳಗಳನ್ನು ಗುರುತಿಸಿ, ಸರಿಪಡಿಸುವ ಕೆಲಸ ಮಾಡಬೇಕಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಪಟ್ಟಣದ ಮಹಾತ್ಮ ಗಾಂಧಿ ವೃತ್ತದಲ್ಲಿ ಈ ಹಿಂದೆ 30 ಮೀಟರ್ ವಿನ್ಯಾಸದಲ್ಲಿ ವೃತ್ತ ನಿರ್ಮಿಸಲಾಗಿತ್ತು. ಇದರಿಂದ ರಸ್ತೆಯ ಅಗಲ ಬಹಳಷ್ಟು ಕಡಿಮೆಯಾಗಿ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ಈ ವೃತ್ತದ ಮೂಲಕ ಸಾರ್ವಜನಿಕ ಆಸ್ಪತ್ರೆ, ಎರಡು ಬ್ಯಾಂಕ್‌ಗಳು, ಸರ್ಕಾರಿ ಕಚೇರಿಗಳು, ಶಾಲಾ–ಕಾಲೇಜುಗಳು, ಖಾಸಗಿ ಬಸ್ ನಿಲ್ದಾಣ, ಶಿವಮೊಗ್ಗ ಹಾಗೂ ಬೆಂಗಳೂರು ಕಡೆಗಳಿಂದ ಬರುವ ಕೆಎಸ್‌ಆರ್‌ಟಿಸಿ ಬಸ್‌ಗಳ ಎರಡು ನಿಲ್ದಾಣಗಳು, ರೈಲು ನಿಲ್ದಾಣ, ನ್ಯಾಯಾಲಯ ಸಂಕೀರ್ಣ, ಪುರಸಭೆ, ಬಯಲು ರಂಗಮಂದಿರ, ಅಂಬೇಡ್ಕರ್ ಸಭಾಭವನ, ಪ್ರವಾಸಿ ಮಂದಿರ ಹಾಗೂ ಪೆಟ್ರೋಲ್ ಬಂಕ್‌ಗಳಿಗೆ ಸಾರ್ವಜನಿಕರು ಸಂಚರಿಸುತ್ತಾರೆ. ಹೀಗಾಗಿ ರಸ್ತೆಯು ಕಿರಿದಾಗಿ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿತ್ತು.
ಸ್ಥಳೀಯ ಸಂಘ–ಸಂಸ್ಥೆಗಳು ಇದನ್ನು ವಿರೋಧಿಸಿದ ಹಿನ್ನೆಲೆಯಲ್ಲಿ ವೃತ್ತದ ವಿನ್ಯಾಸವನ್ನು 20 ಮೀಟರ್‌ಗೆ ಕಡಿತಗೊಳಿಸಲಾಯಿತು. ಈ ವಿಸ್ತೀರ್ಣವೂ ಹೆಚ್ಚಾಗಿದ್ದು, ಇನ್ನಷ್ಟು ಕಡಿಮೆ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
‘ಪಟ್ಟಣದಲ್ಲಿ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ಶೇ 90ರಷ್ಟು ಪೂರ್ಣಗೊಂಡಿದೆ. ಮಳೆ ಕಡಿಮೆಯಾದ ಬಳಿಕ 15ರಿಂದ 20 ದಿನಗಳಲ್ಲಿ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಲಿದೆ’ ಎಂದು ಪಿಡಬ್ಲ್ಯುಡಿ ಎಇಇ ಸೋಮಶೇಖರ್ ತಿಳಿಸಿದ್ದಾರೆ.
‘ಮಹಾತ್ಮ ಗಾಂಧಿ ವೃತ್ತದ ವ್ಯಾಸವನ್ನು ಇನ್ನಷ್ಟು ಕಡಿಮೆ ಮಾಡಬೇಕು. ರಸ್ತೆ ಕಾಮಗಾರಿ ಜೊತೆಗೇ ಯುಜಿಡಿ ಕಾಮಗಾರಿಯನ್ನೂ ಕೈಗೊಂಡಿದ್ದರೆ ಅನುಕೂಲವಾಗುತ್ತಿತ್ತು. ರಸ್ತೆಯ ಇಕ್ಕೆಲದಲ್ಲಿ ಗಿಡಗಳನ್ನು ನೆಡಲು ಅವಕಾಶವಿಲ್ಲದ ಕಾರಣ ಡಿವೈಡರ್‌ನಲ್ಲಿರುವ ಜಾಗದಲ್ಲಿ ಸಸಿಗಳನ್ನು ನೆಟ್ಟರೆ ನಗರದ ಸೌಂದರ್ಯ ಹೆಚ್ಚಲಿದೆ’ ಎಂದು ಶ್ರೀಗಜಾನನ ಟ್ಯಾಕ್ಸಿ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಮಿಲ್ಟ್ರಿ ಶ್ರೀನಿವಾಸ್ ತಿಳಿಸಿದ್ದಾರೆ.
‘ಕೇಬಲ್ ಅಳವಡಿಕೆಗೆ ₹8.5 ಕೋಟಿ ಬಿಡುಗಡೆ’
‘ಪಟ್ಟಣದ ರಸ್ತೆ ವಿಸ್ತರಣೆ ಕಾಮಗಾರಿಗೆ ಈವರೆಗೆ ₹57.5 ಕೋಟಿ ವೆಚ್ಚವಾಗಿದೆ. ಕಾಮಗಾರಿ ಪೂರ್ಣಗೊಳಿಸಲು ಅಗತ್ಯವಿರುವ ಹೆಚ್ಚುವರಿ ಅನುದಾನವನ್ನು ಸರ್ಕಾರದಿಂದ ಮಂಜೂರು ಮಾಡಿಸಲಾಗುವುದು. ಲೈಟಿಂಗ್ ವ್ಯವಸ್ಥೆಗಾಗಿ ನೆಲದಡಿ ವಿದ್ಯುತ್ ಕೇಬಲ್ ಅಳವಡಿಸಲು ₹8.5 ಕೋಟಿ ಅನುದಾನ ಬಿಡುಗಡೆ ಮಾಡಿಸಲಾಗಿದೆ. ಕೆಲವೇ ದಿನಗಳಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಲಿದೆ’ ಎಂದು ಶಾಸಕ ಜಿ.ಎಚ್. ಶ್ರೀನಿವಾಸ್ ತಿಳಿಸಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260812-126-1694969046