ಏಕಾಶಿನಿ ಗುಡ್ಡದ ತುದಿ ಮನಸ್ಸನ್ನೇ ಸೂರೆಗೊಳ್ಳುವ ವಿನಾಯಕ ಹೆಗಡೆ ಸಂಗೀತ ಆಲಾಪ

ಏಕಾಶಿನಿ ಗುಡ್ಡದ ತುದಿ ಮನಸ್ಸನ್ನೇ ಸೂರೆಗೊಳ್ಳುವ ವಿನಾಯಕ ಹೆಗಡೆ ಸಂಗೀತ ಆಲಾಪ

ಏಕಾಶಿನಿ ಗುಡ್ಡದ ತುದಿ ಮನಸ್ಸನ್ನೇ ಸೂರೆಗೊಳ್ಳುವ ವಿನಾಯಕ ಹೆಗಡೆ ಸಂಗೀತ ಆಲಾಪ

ಬೆಳಗಿನ ಜಾವ. ಅಘನಾಶಿನಿ ನದಿಯ ಜುಳುಜುಳು ನಿನಾದ. ಇಕ್ಕೆಲಗಳಲ್ಲಿ ಸಾಲಾಗಿ ನಿಂತ ಮರಗಳ ತಂಪು. ಸುತ್ತಲೂ ಗಗನಚುಂಬಿ ಗುಡ್ಡಗಳು. ಅವುಗಳ ತುದಿಯನ್ನು ಸವರುತ್ತ ಸಾಗುವ ಮೋಡಗಳು. ತಣ್ಣನೆಯ ಗಾಳಿ, ಹಕ್ಕಿಗಳ ಕಲರವ... ಈ ಎಲ್ಲದರ ನಡುವೆ ಮನಸ್ಸನ್ನೇ ಸೂರೆಗೊಳ್ಳುವ ಸಂಗೀತದ ಆಲಾಪ.

ಏಕಾಶಿನಿ ಗುಡ್ಡದ ತುತ್ತತುದಿಯಿಂದ ತೇಲಿ ಬರುವ ಆ ಗಾಯನ, ಮಂದ ಮಾರುತದಂತೆ ಊರಿನ ಮನೆಮನೆಗಳಿಗೆ ತಲುಪುತ್ತದೆ. ಅಘನಾಶಿನಿಯ ನಿನಾದದಂತೆಯೇ ಅದು ಆ ಊರಿನ ಬೆಳಗಿನ ಸ್ಥಾಯೀಭಾವ. ಆ ಕಂಠ ಪಂಡಿತ್ ವಿನಾಯಕ ಹೆಗಡೆ ಮುತ್ತುಮುರುಡು ಅವರದು.

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಅಘನಾಶಿನಿ ನದಿಯ ತಟದಲ್ಲಿರುವ ಮುತ್ತುಮುರುಡು ಸುಂದರ ಹಳ್ಳಿ. ಕಾಡು, ಗುಡ್ಡ-ಬೆಟ್ಟಗಳಿಂದ ಆವೃತವಾಗಿರುವ ಈ ಊರು ಅಪರೂಪದ ಸಸ್ಯಸಂಪತ್ತಿನಷ್ಟೇ ಅಪರೂಪದ ಕಲಾಸಂಪತ್ತನ್ನೂ ತನ್ನೊಳಗೆ ಬೆಳೆಸಿಕೊಂಡಿದೆ. ಆ ಕಲಾಸಂಪತ್ತಿನ ಹೆಮ್ಮೆಯ ಪ್ರತಿನಿಧಿಗಳಲ್ಲಿ ಪಂಡಿತ್ ವಿನಾಯಕ ಹೆಗಡೆ ಮುತ್ತುಮುರುಡು ಪ್ರಮುಖರು.

ದತ್ತಾತ್ರೇಯ ಹೆಗಡೆ ಮತ್ತು ಯಶೋದಾ ಹೆಗಡೆ ದಂಪತಿಯ ಮಗನಾದ ವಿನಾಯಕರಿಗೆ ಸಂಗೀತದ ಹುಚ್ಚು ಹಿಡಿಸಿದ್ದು ಅವರ ತಂದೆಯೇ. ಭೀಮಸೇನ ಜೋಶಿಯವರ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿರುವ ಉತ್ತರ ಕನ್ನಡದಲ್ಲಿ, ‘ನೀನು ಭೀಮಸೇನ ಜೋಶಿಯವರಂತೆ ಹಾಡಬೇಕು’ ಎಂದು ಬಾಲ್ಯದಲ್ಲೇ ಮಗನಿಗೆ ಹೇಳಿ ಬೆಳೆಸಿದ ತಂದೆಯ ಕನಸು, ಮುಂದೆ ವಾಸ್ತವವಾಯಿತು.

ಬದುಕು ಬದಲಿಸಿದ
‘ಚಯ್ಯಾ ಚಯ್ಯಾ’

ಇಂದು ದೇಶದ ಪ್ರಮುಖ ಹಿಂದೂಸ್ತಾನಿ ಗಾಯಕರಲ್ಲಿ ಒಬ್ಬರೆಂದು ಗುರುತಿಸಿಕೊಂಡಿರುವ ವಿನಾಯಕ ಹೆಗಡೆ ಅವರ ಸಂಗೀತಯಾನ ಹೇಗೆ ಆರಂಭವಾಯಿತು ಎಂಬ ಪ್ರಶ್ನೆಗೆ ಅವರದೇ ಉತ್ತರ ಕುತೂಹಲಕರವಾಗಿದೆ. ‘ಆಗ ನಾನು ಎಂಟನೇ ತರಗತಿಯಲ್ಲಿದ್ದೆ. ರೇಡಿಯೋ ಬಹಳ ಜನಪ್ರಿಯವಾಗಿದ್ದ ಕಾಲ. ಇತರ ಹುಡುಗರಂತೆ ನಾನೂ ಸಿನಿಮಾ ಹಾಡು, ಪಾಪ್ ಮ್ಯೂಸಿಕ್ ಕೇಳಿ ಗುನುಗುತ್ತಿದ್ದೆ. ಅಪ್ಪನಿಗೆ ಅದು ಇಷ್ಟವಾಗುತ್ತಿರಲಿಲ್ಲ. ಒಂದು ದಿನ ರೇಡಿಯೋದಲ್ಲಿ ಬಂದ ಚಯ್ಯಾ ಚಯ್ಯಾ ಹಾಡನ್ನು ಗುನುಗುತ್ತಿದ್ದೆ. ಅದನ್ನು ಕೇಳಿದ ಅಪ್ಪ ಸಿಟ್ಟಿನಿಂದ, 'ಇದೆಲ್ಲ ಸಂಗೀತವಾ? ಸಂಗೀತ ಅಂದ್ರೆ ಇದು' ಎಂದು ಹೇಳಿ, ರೇಡಿಯೋವನ್ನು ಬದಿಗಿಟ್ಟು ಭೀಮಸೇನ ಜೋಶಿಯವರ ಕ್ಯಾಸೆಟ್‌ಗಳನ್ನು ತಂದುಕೊಟ್ಟರು.

ಅವರು ಆಗಲೇ ಭೀಮಸೇನ ಜೋಶಿಯವರ ಪರಮ ಅಭಿಮಾನಿಯಾಗಿದ್ದರು. ಆ ಕ್ಯಾಸೆಟ್‌ಗಳನ್ನು ಪ್ರತಿದಿನ ಕೇಳುತ್ತಾ ಹೋದಂತೆ ನನಗೆ ಪಾಪ್ ಮ್ಯೂಸಿಕ್‌ನ ಆಸಕ್ತಿಯೇ ಕಳೆದುಹೋಯಿತು. ಭೀಮಸೇನ ಜೋಶಿಯವರ ಸಂಗೀತದ ಹುಚ್ಚು ಹಿಡಿಯಿತು. ಅದು ನನ್ನ ಬದುಕನ್ನೇ ಬದಲಿಸಿತು’ ಎಂದು ವಿನಾಯಕ ಹೆಗಡೆ ನೆನಪಿಸಿಕೊಳ್ಳುತ್ತಾರೆ. ಎಸ್‌ಎಸ್‌ಎಲ್‌ಸಿ ನಂತರ ಸೋಮನಮನೆಯ ಶ್ರೀಪಾದ ಭಟ್ಟರ ಬಳಿ ಹಿಂದೂಸ್ತಾನಿ ಸಂಗೀತಾಭ್ಯಾಸ ಆರಂಭಿಸಿದರು. ಆರು ವರ್ಷಗಳ ಕಾಲ ಅವರ ಬಳಿ ಕಲಿತ ಬಳಿಕ ಪಂಡಿತ್ ಜಯತೀರ್ಥ ಮೇವುಂಡಿಯವರ ಬಳಿ ಮತ್ತಷ್ಟು ತರಬೇತಿ ಪಡೆದರು.

ಕಾಲೇಜು ದಿನಗಳಲ್ಲೇ ಸಂಗೀತ, ಸಿತಾರ್, ತಬಲಾ ಅವರ ಬದುಕಿನ ಅವಿಭಾಜ್ಯ ಭಾಗಗಳಾದವು.

ಆದರೂ ಅವರಿಗೆ ಅಷ್ಟರಿಂದ ತೃಪ್ತಿಯಾಗಲಿಲ್ಲ. ಭೀಮಸೇನ ಜೋಶಿಯವರ ಸಂಗೀತವನ್ನು ಇನ್ನಷ್ಟು ಆಳವಾಗಿ ಅರಿಯಬೇಕೆಂಬ ಹಂಬಲ ಅವರನ್ನು ಪುಣೆಗೆ ಕರೆದೊಯ್ದಿತು. ಅಲ್ಲಿ ಭೀಮಸೇನ ಜೋಶಿಯವರ ಪುತ್ರ ಶ್ರೀನಿವಾಸ ಜೋಶಿಯವರ ಮಾರ್ಗದರ್ಶನದಲ್ಲಿಯೂ ಅಭ್ಯಾಸ ಮಾಡಿದರು. ಹೀಗಾಗಿ ಭೀಮಸೇನ ಜೋಶಿಯವರ ಸಂಗೀತ ಪರಂಪರೆಯ ಪ್ರಭಾವ ವಿನಾಯಕರ ಗಾಯನದಲ್ಲಿ ಸಹಜವಾಗಿ ಬೆರೆತಿದೆ. ಶುದ್ಧ ಕಿರಾಣಾ ಘರಾಣೆಯ ಶೈಲಿಯಲ್ಲಿ ಅವರು ಹಾಡುವಾಗ ಕೇಳುಗರು ಮೋಹಿತರಾಗದೇ ಇರಲಾರರು.

ದೇಶದಾದ್ಯಂತ ಸಂಗೀತದ ಪಯಣ

ಇಂದು ವಿನಾಯಕ ಹೆಗಡೆ ದೇಶದ ವಿವಿಧ ಭಾಗಗಳಲ್ಲಿ ನಿರಂತರವಾಗಿ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಹಿಂದೂಸ್ತಾನಿ ಸಂಗೀತದ ಖಯಾಲ್, ತುಮ್ರಿ, ಭಜನ್, ಮರಾಠಿ ಅಭಂಗ, ದಾಸವಾಣಿ, ಭಕ್ತಿ ಸಂಗೀತ ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ಅವರು ಸಮಾನ ಪ್ರಾವೀಣ್ಯತೆ ಹೊಂದಿದ್ದಾರೆ. ಕರ್ನಾಟಕ ಸಂಗೀತದ ಕಲಾವಿದರೊಂದಿಗೆ ಜುಗಲ್‌ಬಂದಿಯನ್ನೂ ಯಶಸ್ವಿಯಾಗಿ ನಡೆಸಿದ್ದಾರೆ.

ಭೀಮಸೇನ ಜೋಶಿಯವರು ಹಾಡಿದ ಬಹುತೇಕ ಎಲ್ಲ ಪ್ರಕಾರಗಳಲ್ಲೂ ತಮ್ಮದೇ ಛಾಪು ಮೂಡಿಸಿರುವ ಅವರು, ಗಟ್ಟಿಯಾದ ಧ್ವನಿ, ನಿರಂತರ ಸಾಧನೆ ಮತ್ತು ಶಿಸ್ತಿನ ಅಭ್ಯಾಸದಿಂದ ವಿಶಿಷ್ಟ ಸ್ಥಾನ ಪಡೆದಿದ್ದಾರೆ.

ತಿಂಗಳಿಗೆ ಹತ್ತರಿಂದ ಹದಿನೈದು ಕಾರ್ಯಕ್ರಮಗಳನ್ನು ದೇಶದ ವಿವಿಧ ನಗರಗಳಲ್ಲಿ ನೀಡುವುದು ಅವರ ದಿನಚರಿ. ಮುಂಬೈ, ಪುಣೆ, ಕೋಲ್ಕತ್ತಾ, ದೆಹಲಿ, ಭೋಪಾಲ್, ರಾಜಸ್ಥಾನ ಸೇರಿದಂತೆ ಅನೇಕ ಕಡೆಗಳಿಂದ ಆಹ್ವಾನ ಬರುತ್ತದೆ.

‘ಕೆಲವರು ಖಯಾಲ್ ಕೇಳುತ್ತಾರೆ. ಕೆಲವರಿಗೆ ಭಜನ್ ಬೇಕು. ಇನ್ನೂ ಕೆಲವರು ದಾಸ ಸಾಹಿತ್ಯವನ್ನೇ ಕೇಳುತ್ತಾರೆ’ ಎಂದು ಅವರು ಹೇಳುತ್ತಾರೆ.

ದರ್ಬಾರಿ, ತೋಡಿ, ಮಾಲಕಂಸ್, ಮಿಯಾ ಮಲ್ಹಾರ್, ಮಧುವಂತಿ, ಭಾಗೇಶ್ರಿಯಂತಹ ರಾಗಗಳನ್ನು ಅವರು ತನ್ಮಯತೆಯಿಂದ ಹಾಡುತ್ತಾರೆ. ಭಜನಗಳು, ಅಭಂಗಗಳು ಮೂಡಿ ಬಂದಾಗ ಭೀಮಸೇನ ಜೋಶಿಯವರೇ ಹಾಡುತ್ತಿರುವರೇನೋ ಎಂಬ ಭಾವನೆ ಮೂಡುತ್ತದೆ ಎನ್ನುವುದು ಅಭಿಮಾನಿಗಳ ಅಭಿಪ್ರಾಯ.

ಕಿರಾಣಾ ಘರಾಣೆಯ ಆಲಾಪದ ಸ್ಪಷ್ಟತೆ, ಲಯದ ಮೇಲಿನ ಹಿಡಿತ ಮತ್ತು ಸೃಜನಾತ್ಮಕ ಸರಗಮ್‌ಗಳು ಅವರ ಗಾಯನದ ಪ್ರಮುಖ ವೈಶಿಷ್ಟ್ಯಗಳೆಂದು ಸಂಗೀತ ವಿದ್ವಾಂಸರು ಹೇಳುತ್ತಾರೆ.

ದೇಶದಾದ್ಯಂತ ಸಂಚರಿಸುವ ವಿನಾಯಕರಿಗೆ ಅತ್ಯಂತ ಪ್ರಿಯವಾದ ಎರಡು ಸ್ಥಳಗಳಿವೆ–ಮುತ್ತುಮುರುಡಿನ ಏಕಾಶಿನಿ ಅಣೆಕಟ್ಟಿನ ತುತ್ತತುದಿ ಮತ್ತು ಗೋಳಿ ಸಿದ್ಧಿವಿನಾಯಕ ದೇವಸ್ಥಾನ.

‘ಊರಲ್ಲಿದ್ದರೆ ವಾರಕ್ಕೊಮ್ಮೆ ಗೋಳಿ ದೇವಸ್ಥಾನಕ್ಕೆ ಹೋಗಿ ಹಾಡುತ್ತೇನೆ. ಪ್ರತಿದಿನ ಸಾಧ್ಯವಾದರೆ ಏಕಾಶಿನಿ ಅಣೆಕಟ್ಟಿಗೆ ಏರುತ್ತೇನೆ. ಅಲ್ಲಿ ಹೋದರೆ ನನ್ನನ್ನೇ ನಾನು ಮರೆತುಬಿಡುತ್ತೇನೆ’ ಎಂದು ಅವರು ಹೇಳುತ್ತಾರೆ.

ರಿಯಾಲಿಟಿ ಶೋಗಳ ಯುಗದಲ್ಲಿ ಶಾಸ್ತ್ರೀಯ ಸಂಗೀತದ ಭವಿಷ್ಯದ ಬಗ್ಗೆ ಕೇಳಿದರೆ ಅವರು ಸ್ಪಷ್ಟವಾಗಿ ಹೇಳುತ್ತಾರೆ:

‘ಪಾಪ್ ಮ್ಯೂಸಿಕ್ ಇರಬಹುದು, ಸಿನಿಮಾ ಹಾಡುಗಳಿರಬಹುದು, ರಿಯಾಲಿಟಿ ಶೋಗಳ ಅಬ್ಬರ ಇರಬಹುದು. ಆದರೆ ಶುದ್ಧ ಶಾಸ್ತ್ರೀಯ ಸಂಗೀತ ಎಂದಿಗೂ ಸಾಯುವುದಿಲ್ಲ. ಅದಕ್ಕೆ ಅದರದೇ ಆದ ಮೌಲ್ಯವಿದೆ. ಯಾವುದೇ ಸಂಗೀತ ಪ್ರಕಾರಕ್ಕೂ ಶಾಸ್ತ್ರೀಯ ಸಂಗೀತವೇ ತಾಯಿಬೇರು’.

ಅವರ ಸಂಗೀತ ಸಾಧನೆಗೆ ಹಲವು ಪ್ರಶಸ್ತಿಗಳು ಸಂದಿವೆ. 2006ರಲ್ಲಿ ಕರ್ನಾಟಕ ರಾಜ್ಯ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಪ್ರತಿಭಾ ಪುರಸ್ಕಾರ ಮತ್ತು ನಿಶ್ಚಯ ಪುರಸ್ಕಾರ, ಕೇಂದ್ರ ಸಂಸ್ಕೃತಿ ಸಚಿವಾಲಯದ ಸಿಸಿಆರ್‌ಟಿ ವಿದ್ಯಾರ್ಥಿವೇತನ, 2020ರ ಶಾರದ ಪುರಸ್ಕಾರ, ಪಂಡಿತ್ ಬುವ ಹರಗುಪ್ಪಿ ಯುವ ಪುರಸ್ಕಾರ, 2025ರ ಸ್ವರ ಕನಕ ಹಾಗೂ ಡಾ. ಮಲ್ಲಿಕಾರ್ಜುನ ಮನ್ಸೂರ್ ರಾಷ್ಟ್ರೀಯ ಯುವ ಪುರಸ್ಕಾರ ಪ್ರಮುಖವಾಗಿವೆ.

ಇದರ ಜೊತೆಗೆ ದೇಶ-ವಿದೇಶದ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ಸಂಗೀತವನ್ನೂ ಬೋಧಿಸುತ್ತಿದ್ದಾರೆ.

ಪ್ರತಿ ವರ್ಷ ಕಾರ್ತಿಕ ಏಕಾದಶಿಯಂದು ತಮ್ಮೂರಾದ ಮುತ್ತುಮುರುಡಿನಲ್ಲಿ ದೇವರ ಆರಾಧನೆಯ ಜೊತೆಗೆ ಸಂಗೀತ ಸಮಾರಾಧನೆಯನ್ನೂ ನಡೆಸುತ್ತಾರೆ. ವಿವಿಧ ಕಲಾವಿದರನ್ನು ಆಹ್ವಾನಿಸಿ ತಮ್ಮ ಮನೆಯಲ್ಲಿ ಸಂಗೀತ ಬೈಠಕ್ ಆಯೋಜಿಸುವುದು ಅವರ ವಿಶೇಷ ಸಂಪ್ರದಾಯ.

ಇಂದಿಗೂ ಏಕಾಶಿನಿ ಗುಡ್ಡದ ತುದಿಯಿಂದ ಬೆಳಗಿನ ಗಾಳಿಯಲ್ಲಿ ಕಿರಾಣಾ ಘರಾಣೆಯ ಆಲಾಪ ತೇಲಿ ಬಂದರೆ, ಅದು ಬಹುತೇಕ ವಿನಾಯಕ ಹೆಗಡೆಯವರದೇ ಆಗಿರುತ್ತದೆ.

ಭೀಮಸೇನ ಜೋಶಿಯವರ ಸಂಗೀತ ಪರಂಪರೆಯನ್ನು ಗೌರವದಿಂದ ಮುಂದುವರಿಸುತ್ತಿರುವ ಈ ಮುತ್ತುಮುರುಡಿನ ಮುತ್ತು, ಕಿರಾಣಾ ಘರಾಣೆಯ ಘನತೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿ ಎಂಬುದು ಸಂಗೀತಾಸಕ್ತರ ಹಾರೈಕೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260816-51-320536807

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ