
ಸಿದ್ದರಾಮಯ್ಯ ಆಪ್ತ ಸಂತೋಷ್ ಲಾಡ್‌ಗೆ ಮತ್ತೆ ಒಲಿದ ಸಚಿವ ಸ್ಥಾನ
ಧಾರವಾಡ: ಕಲಘಟಗಿ ವಿಧಾನಸಭಾ ಕ್ಷೇತ್ರದ ಶಾಸಕ ಸಂತೋಷ್ ಎಸ್.ಲಾಡ್ ಅವರಿಗೆ ಮತ್ತೆ ಸಚಿವ ಸ್ಥಾನ ಒಲಿದಿದೆ. ಈ ಹಿಂದೆ ಸಿದ್ದರಾಮಯ್ಯ ಸಂಪುಟದಲ್ಲಿ ಅವರು ಕಾರ್ಮಿಕ ಸಚಿವರಾಗಿ ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
ಲಾಡ್ ಅವರು ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ಧಾರೆ. ತೀವ್ರ ಪೈಪೋಟಿ ನಡುವೆಯೂ ಮತ್ತೊಮ್ಮೆ ಸಚಿವ ಸ್ಥಾನವನ್ನು ಅವರಿಗೆ ಪಕ್ಷ ಕರುಣಿಸಿದೆ.
ಹುಬ್ಬಳ್ಳಿ–ಧಾರವಾಡ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ, ನವಲಗುಂದ ಕ್ಷೇತ್ರದ ಶಾಸಕ ಎನ್.ಎಚ್.ಕೋನರಡ್ಡಿ, ವಿಧಾನ ಪರಿಷತ್ ಸದಸ್ಯ ಸಲೀಂ ಅಹಮದ್ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದರು. ಆದರೆ, ಅವರ ಪ್ರಯತ್ನ ಫಲಿಸಿಲ್ಲ.
‘ಲಾಡ್ ಅವರು ಕಾರ್ಮಿಕ ಸಚಿವರಾಗಿದ್ದಾಗ ಹಲವು ಜನಪರ ಯೋಜನೆ ಕಾರ್ಯಗತಗೊಳಿಸಿದ್ಧಾರೆ. ಪಕ್ಷದವರು ಎಲ್ಲ ಲೆಕ್ಕ ಹಾಕಿರುತ್ತಾರೆ. ನಾಯಕರ ಜತೆಗಿನ ಒಡನಾಟ, ವರ್ಚಸ್ಸು, ಸಮುದಾಯ ಮೊದಲಾದವು ಲಾಡ್ ಅವರ ಕೈಹಿಡಿದಿವೆ’ ಎಂದು ಕಾಂಗ್ರೆಸ್ ಮುಖಂಡರೊಬ್ಬರು ತಿಳಿಸಿದರು.
ಲಾಡ್ ಅವರು ಬಳ್ಳಾರಿ ಜಿಲ್ಲೆಯ ಸಂಡೂರಿನವರು. ಶಿವಾಜಿ ವಿ.ಲಾಡ್ ಮತ್ತು ಶೈಲಜಾ ಲಾಡ್ ದಂಪತಿಯ ಪುತ್ರ. ಮರಾಠ ಸಮುದಾಯದ ಅವರು, ಬಿ.ಕಾಂ ಪದವಿ ಪಡೆದಿದ್ಧಾರೆ.
2002ರಲ್ಲಿ ಸಂಡೂರು ಪಟ್ಟಣ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿ ರಾಜಕೀಯ ಪ್ರವೇಶಿಸಿದರು. 2004ರಲ್ಲಿ ಜೆಡಿಎಸ್ ಪಕ್ಷದಿಂದ ಸಂಡೂರು ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾದರು. 2007ರಲ್ಲಿ ಕಾಂಗ್ರೆಸ್ ಸೇರಿದರು. ಕ್ಷೇತ್ರ ಪುನರ್ವಿಂಗಡಣೆಯಲ್ಲಿ ಸಂಡೂರು ಮೀಸಲು ಕ್ಷೇತ್ರವಾಯಿತು. 2008ರಲ್ಲಿ ಧಾರವಾಡ ಜಿಲ್ಲೆಯ ಕಲಘಟಗಿ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾದರು. 2013ರಲ್ಲಿ ಅದೇ ಕ್ಷೇತ್ರದಿಂದ ಮತ್ತೆ ಶಾಸಕರಾಗಿ ಆಯ್ಕೆಯಾದರು. ಆದರೆ, 2018ರ ಚುನಾವಣೆಯಲ್ಲಿ ಸೋತರು. 2023ರಲ್ಲಿ ಮತ್ತೆ ಶಾಸಕರಾಗಿ ಆಯ್ಕೆಯಾದರು.
2013ರಲ್ಲಿ ಮೊದಲ ಬಾರಿಗೆ ಸಚಿವರಾದರು. ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಖಾತೆ ನಿಭಾಯಿಸಿದರು. 2016ರಲ್ಲಿ ಕಾರ್ಮಿಕ ಸಚಿವರಾದರು. 2023ರಲ್ಲೂ ಮತ್ತೆ ಕಾರ್ಮಿಕ ಖಾತೆ ಒಲಿದಿತ್ತು. ಒಮ್ಮೆ ಬಳ್ಳಾರಿ ಮತ್ತು ಎರಡು ಬಾರಿ ಧಾರವಾಡ ಜಿಲ್ಲಾ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.
ಅಬ್ಬಯ್ಯಗೆ ಮತ್ತೆ ನಿರಾಸೆ
ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಪ್ರಸಾದ ಅಬ್ಬಯ್ಯ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲ. ಇದರಿಂದ ಅವರ ಅಭಿಮಾನಿಗಳು ನಿರಾಸೆಗೊಂಡಿದ್ದಾರೆ.
ಪ್ರಸಾದ ಅಬ್ಬಯ್ಯ ಅವರು 2013, 2018 ಮತ್ತು 2023ರಲ್ಲಿ ಸತತವಾಗಿ ಜಯ ಗಳಿಸಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡುವಂತೆ ವಿವಿಧ ದಲಿತ ಸಂಘ ಸಂಸ್ಥೆಗಳ ಮುಖಂಡರು, ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.
ಕ್ಷೇತ್ರ ಮರುವಿಂಗಡಣೆಯಾಗಿ ಹುಬ್ಬಳ್ಳಿ–ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರ ರಚನೆಯಾದ ನಂತರ 2008ರಲ್ಲಿ ಬಿಜೆಪಿಯಿಂದ ವೀರಭದ್ರಪ್ಪ ಹಾಲಹರವಿ ಗೆದ್ದಿದ್ದರು. ಆ ನಂತರ ಈ ಕ್ಷೇತ್ರದಲ್ಲಿ ಪ್ರಸಾದ ಅಬ್ಬಯ್ಯ ಅವರು ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ
ಪೂರ್ವ ಕ್ಷೇತ್ರ ರಚನೆಯಾಗುವುದಕ್ಕೂ ಮುನ್ನ ಹುಬ್ಬಳ್ಳಿ ನಗರ ಕ್ಷೇತ್ರದಿಂದ ಗೆದ್ದಿದ್ದ ಜಬ್ಬಾರ್ ಖಾನ್ ಹೊನ್ನಳ್ಳಿ ಅವರು ಧರ್ಮಸಿಂಗ್ ನೇತೃತ್ವದ ಕಾಂಗ್ರೆಸ್–ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ (2004–06) ಸಚಿವರಾಗಿದ್ದರು.
ಅದಕ್ಕೂ ಹಿಂದೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದ ಎ.ಎಂ.ಹಿಂಡಸಗೇರಿ ಅವರಿಗೆ ವೀರಪ್ಪ ಮೊಯಿಲಿ (1992–94) ಮತ್ತು ಎಸ್.ಎಂ ಕೃಷ್ಣ (1999–2004) ನೇತೃತ್ವದ ಸರ್ಕಾರದಲ್ಲಿ ಸಚಿವ ಸ್ಥಾನ ಒಲಿದಿತ್ತು.
2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ಬಂದು ಸರ್ಕಾರ ರಚನೆಯಾದ ನಂತರ ಪ್ರಸಾದ ಅಬ್ಬಯ್ಯ ಅವರು ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ, ಅವರನ್ನು ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ನೇಮಿಸಲಾಗಿತ್ತು. ಈ ಹಿಂದೆ ಅವರು ಡಾ. ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.
‘ವರಿಷ್ಠರ ನಿರ್ಧಾರಕ್ಕೆ ಬದ್ಧ’
ಕಿತ್ತೂರು ಕರ್ನಾಟಕ ಭಾಗದಲ್ಲಿ ಹಿಂದೂ ಚಲವಾದಿ (ಪರಿಶಿಷ್ಟ ಜಾತಿ) ಸಮುದಾಯದವರಿಗೆ ಹಲವು ವರ್ಷಗಳಿಂದ ಪ್ರಾತಿನಿಧ್ಯ ನೀಡಿಲ್ಲ. ಹೀಗಾಗಿ ಈ ಬಾರಿ ನೀಡಬಹುದು ಎಂಬ ನಿರೀಕ್ಷೆ ಇತ್ತು. ನಮ್ಮ ಸಮುದಾಯದ ಸಾಕಷ್ಟು ಜನ ಆಕಾಂಕ್ಷಿಗಳಿದ್ದುದರಿಂದ ಅವಕಾಶ ಸಿಕ್ಕಿಲ್ಲ. ಅಂತಿಮವಾಗಿ ಪಕ್ಷದ ವರಿಷ್ಠರ ನಿರ್ಧಾರಕ್ಕೆ ಬದ್ಧವಾಗಿದ್ದೇನೆ. 2028ರಲ್ಲಿ ಪಕ್ಷ ಅಧಿಕಾರಕ್ಕೆ ಬರಬೇಕು. ಆಗ ಇನ್ನೂ ಹೆಚ್ಚು ಅವಕಾಶಗಳು ಸಿಗುತ್ತವೆ. ಆ ನಿಟ್ಟಿನಲ್ಲಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತೇನೆ
– ಪ್ರಸಾದ ಅಬ್ಬಯ್ಯ, ಶಾಸಕ