ಬಂಡವಾಳ ಆಕರ್ಷಣೆಗೆ ಅಮೆರಿಕ ಪ್ರವಾಸ: ಸಚಿವ ಎಂ.ಬಿ.ಪಾಟೀಲ

ಬಂಡವಾಳ ಆಕರ್ಷಣೆಗೆ ಅಮೆರಿಕ ಪ್ರವಾಸ: ಸಚಿವ ಎಂ.ಬಿ.ಪಾಟೀಲ

ಬಂಡವಾಳ ಆಕರ್ಷಣೆಗೆ ಅಮೆರಿಕ ಪ್ರವಾಸ: ಸಚಿವ ಎಂ.ಬಿ.ಪಾಟೀಲ

ಬೆಂಗಳೂರು: ‘ರಾಜ್ಯಕ್ಕೆ ಹೆಚ್ಚು ಬಂಡವಾಳ ಹೂಡಿಕೆಯನ್ನು ಆಕರ್ಷಿಸುವ ಸಲುವಾಗಿ ಇದೇ ಅಕ್ಟೋಬರ್‌ನಲ್ಲಿ ಅಮೆರಿಕ ಪ್ರವಾಸ ಕೈಗೊಂಡು, ಉದ್ಯಮಿಗಳ ಜತೆಗೆ ಮಾತುಕತೆ ನಡೆಸಲಾಗುವುದು’ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ  ಹೇಳಿದರು.

ಭಾರತದಲ್ಲಿನ ಅಮೆರಿಕ ಕಾನ್ಸುಲೇಟ್‌ ಜನರಲ್ ಮರಿಯಾನ ಎಲ್‌.ನೀಸ್ಲರ್‌ ಅವರೊಂದಿಗೆ ಶುಕ್ರವಾರ ನಡೆಸಿದ ಮಾತುಕತೆಯ ನಂತರ ಅವರು ಈ ಕುರಿತು ಮಾಹಿತಿ ನೀಡಿದರು.

‘ಕರ್ನಾಟಕ ಮತ್ತು ಅಮೆರಿಕದ ನಡುವಿನ ವಾಣಿಜ್ಯ–ಕೈಗಾರಿಕಾ ಸಹಯೋಗದ ಬಲವರ್ಧನೆಗೆ ಒತ್ತು ಕೊಡುತ್ತಿದ್ದೇವೆ. ಈ ವಿಚಾರವಾಗಿ ಕಾನ್ಸುಲೇಟ್ ಜನರಲ್ ಕಚೇರಿಯೊಂದಿಗೆ ನಿರಂತರವಾಗಿ ಸಂವಹನದ ಅಗತ್ಯವಿದ್ದು, ಅದಕ್ಕಾಗಿ ಸಾಂಸ್ಥಿಕ ವ್ಯವಸ್ಥೆಯನ್ನು ಅಸ್ತಿತ್ವಕ್ಕೆ ತರಲಾಗುವುದು. ಇದು ಅಮೆರಿಕದ ವಾಣಿಜ್ಯ ಸಚಿವಾಲಯ, ಅಮೆರಿಕ ವಾಣಿಜ್ಯೋದ್ಯಮಿಗಳ ಒಕ್ಕೂಟ ಮತ್ತು ಅಮೆರಿಕ-ಭಾರತ ವಾಣಿಜ್ಯ ಸಮಿತಿ ಹಾಗೂ ನಮ್ಮ ವಾಣಿಜ್ಯ–ಕೈಗಾರಿಕಾ ಇಲಾಖೆಗಳ ಮಧ್ಯೆ ಸೇತುವೆಯಾಗಿ ಕೆಲಸ ಮಾಡಲಿದೆ’ ಎಂದು ವಿವರಿಸಿದರು.

‘ಅಮೆರಿಕದ 700 ಕಂಪನಿಗಳು ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿವೆ. ಇಲ್ಲಿನ ಪ್ರತಿಭೆ–ಮಾನವ ಸಂಪನ್ಮೂಲ, ತಂತ್ರಜ್ಞಾನ, ನಾವೀನ್ಯತೆ ಮತ್ತು ತಯಾರಿಕಾ ವಲಯಗಳ ಪೂರಕ ವಾತಾವರಣದ ಬಗ್ಗೆ ಅಮೆರಿಕದ ಉದ್ಯಮಿಗಳು ಇರಿಸಿರುವ ವಿಶ್ವಾಸವನ್ನು ತೋರಿಸುತ್ತದೆ. ಅಮೆರಿಕದ ಭಾರತದಲ್ಲಿನ ಕಾನ್ಸುಲೇಟ್‌ ಕಚೇರಿಯು 2025ರ ಜನವರಿಯಿಂದ ಬೆಂಗಳೂರಿನಿಂದಲೂ ಕಾರ್ಯನಿರ್ವಹಿಸುತ್ತಿದೆ. ಬಂಡವಾಳ ಆಕರ್ಷಣೆಗೆ ಅಕ್ಟೋಬರ್‌ನಲ್ಲಿ ಕೈಗೊಳ್ಳಲಿರುವ ಅಮೆರಿಕ ಪ್ರವಾಸ ಕಾರ್ಯಕ್ರಮವು ಕಾನ್ಸುಲೇಟ್‌ ಕಚೇರಿಯ ಸಹಯೋಗದಲ್ಲಿಯೇ ನಡೆಯಲಿದೆ’ ಎಂದು ಮಾಹಿತಿ ನೀಡಿದರು.

‘ಮುಂದಿನ ವರ್ಷ ಆಯೋಜಿಸಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಅಮೆರಿಕದ ಉದ್ಯಮಿಗಳನ್ನು ಆಹ್ವಾನಿಸಲಾಗುವುದು’ ಎಂದು ತಿಳಿಸಿದರು.

ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಖುಷ್ಬು ಗೋಯಲ್ ಅವರು ಸಭೆಯಲ್ಲಿ ಹಾಜರಿದ್ದರು.

‘ಸೆಂಟಮ್ ಎಲೆಕ್ಟ್ರಾನಿಕ್ಸ್‌ನಿಂದ ₹500ಕೋಟಿ ಹೂಡಿಕೆ’ 

‘ರಕ್ಷಣಾ ವಲಯದ ಸಲಕರಣೆಗಳ ತಯಾರಿಕಾ ಕಂಪನಿ ಸೆಂಟಮ್‌ ಎಲೆಕ್ಟ್ರಾನಿಕ್ಸ್‌ ರಾಜ್ಯದಲ್ಲಿ ₹500 ಕೋಟಿ ಹೂಡಿಕೆ ಮಾಡಲಿದೆ. ನಾಲ್ಕು ವರ್ಷಗಳಲ್ಲಿ ಅನುಷ್ಠಾನಕ್ಕೆ ಬರಲಿರುವ ಈ ಹೂಡಿಕೆಯಿಂದ ಒಟ್ಟು 1500 ಉದ್ಯೋಗ ಸೃಷ್ಟಿಯಾಗುತ್ತದೆ’ ಎಂದು ಎಂ.ಬಿ.ಪಾಟೀಲ ತಿಳಿಸಿದರು. ಕಂಪನಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ನಿಖಿಲ್‌ ಮಲ್ಲವರಪು ಅವರ ಜತೆಗಿನ ಸಭೆಯ ನಂತರ ಅವರು ಈ ಮಾಹಿತಿ ನೀಡಿದರು. ‘ರಾಜ್ಯದಲ್ಲಿ ಹೂಡಿಕೆ ವಿಸ್ತರಣೆಗೆ ಕಂಪನಿಯು 2025ರ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಒಪ್ಪಂದಕ್ಕೆ ಸಹಿ ಹಾಕಿತ್ತು. ದೇವನಹಳ್ಳಿ ಸಮೀಪದ ವೈಮಾಂತರಿಕ್ಷ ಮತ್ತು ರಕ್ಷಣಾ ಪಾರ್ಕ್‌ನಲ್ಲಿ ಕಂಪನಿಯು ಈಗಾಗಲೇ ಭೂಮಿ ಹೊಂದಿದೆ. ಆ ಭೂಮಿಯಲ್ಲಿಯೇ ಮುಂದಿನ ಆರು ತಿಂಗಳಲ್ಲಿ ತಯಾರಿಕಾ ಘಟಕದ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ’ ಎಂದು ಮಾಹಿತಿ ನೀಡಿದರು. ‘ಕಂಪನಿಯು ಡಿಆರ್‌ಡಿಒ ರಕ್ಷಣಾ ವಲಯದ ಸಾರ್ವಜನಿಕ ಉದ್ದಿಮೆಗಳು ಮತ್ತು ಇಸ್ರೊದಂತಹ ಸಂಸ್ಥೆಗಳೊಂದಿಗೆ ಸಹಭಾಗಿತ್ವ ಹೊಂದಿದ್ದು ದೇಶದ ಪ್ರಮುಖ ಕ್ಷಿಪಣಿ ಮತ್ತು ಉಪಗ್ರಹ ಯೋಜನೆಗಳಿಗೆ ಕೊಡುಗೆ ನೀಡಿದೆ. ನೂತನ ಘಟಕದಲ್ಲಿ ರೇಡಾರ್‌ ಎಲೆಕ್ಟ್ರಾನಿಕ್ಸ್‌ ಸಮರ ಸಾಧನಗಳನ್ನು ತಯಾರಿಸಲಿದೆ’ ಎಂದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ