ಮೈಸೂರು: ಸೊರಗಿದ ಬೇಸಾಯ; ಕೃಷಿಕರು ಕಂಗಾಲು

ಮೈಸೂರು: ಸೊರಗಿದ ಬೇಸಾಯ; ಕೃಷಿಕರು ಕಂಗಾಲು

ಮೈಸೂರು: ಸೊರಗಿದ ಬೇಸಾಯ; ಕೃಷಿಕರು ಕಂಗಾಲು

ಮೈಸೂರು: ‌ಜಿಲ್ಲೆಯಲ್ಲಿ ಮಳೆ ಕೊರತೆಯಿಂದಾಗಿ ಕೃಷಿ ಚಟುವಟಕೆಗಳು ಸೊರಗಿವೆ. ಬೆಳೆಗಳು ಒಣಗುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಹ ಸ್ಥಿತಿಯಲ್ಲಿ ರೈತರಿದ್ದಾರೆ. ಇಡೀ ಜಿಲ್ಲೆಯನ್ನು ‘ಬರಪೀಡಿತ ಪ್ರದೇಶ’ ಎಂದು ಘೋಷಿಸುವಂತೆ ಒತ್ತಾಯಗಳು ಕೇಳಿಬಂದಿವೆ.

ಮುಂಗಾರು ಹಂಗಾಮಿನಲ್ಲಿ ಜೂನ್‌, ಜುಲೈ ಹಾಗೂ ಆಗಸ್ಟ್‌ನಲ್ಲಿ ಈವರೆಗೆ ಇಲ್ಲಿಯವರೆಗೆ ಮಳೆ ಕೊರತೆ ಉಂಟಾಗಿದ್ದು, ಬಿತ್ತನೆಗೆ ತೀವ್ರ ಹಿನ್ನಡೆಯಾಗಿದೆ.

‌‌ಒಂದೆರಡು ದಿನ ಚದುರಿದಂತೆ ಅಲ್ಲಲ್ಲಿ ಮಳೆ ಬಿದ್ದಿದ್ದು ಬಿಟ್ಟರೆ ದೊಡ್ಡ ಪ್ರಮಾಣದಲ್ಲಿ ಮಳೆಯೇ ಈ ಬಾರಿ ಆಗಲಿಲ್ಲ. ಇದರಿಂದಾಗಿ ಮಳೆಯಾಶ್ರಿತ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಬಿರುಸು ಪಡೆದುಕೊಳ್ಳಲಿಲ್ಲ. ಮಳೆ ಬಾರದಿರುವ ಈ ಸಂದರ್ಭದಲ್ಲಿ ಬಿತ್ತನೆ ಮಾಡಿದರೆ ನಷ್ಟ ಅನುಭವಿಸಬೇಕಾದ ಸ್ಥಿತಿ ಇದೆ ಎಂದು ರೈತರು ತಿಳಿಸುತ್ತಾರೆ. ಉತ್ತಮ ಮಳೆಗಾಗಿ ಚಾತಕ ಪಕ್ಷಿಯಂತೆ ಕಾಯುವ ಸ್ಥಿತಿ ನಮ್ಮದಾಗಿದೆ ಎಂದು ತಿಳಿಸುತ್ತಾರೆ. ಮುಂದಿನ ದಿನಗಳಲ್ಲಿ ಮಳೆ ಬಂದರೆ ಅದಕ್ಕೆ ತಕ್ಕಂತೆ ಬೆಳೆ ಹಾಕಬೇಕಾಗುತ್ತದೆ. ಜಲಾಶಯಗಳಿಂದ ನಾಲೆಗಳಿಗೆ ನೀರು ಹರಿಸಬೇಕೆಂಬ ಬೇಡಿಕೆಯೂ ಕೃಷಿಕರದಾಗಿದೆ.

ಮಳೆಗಾಲದಲ್ಲೂ ಬಿರುಬಿಸಿಲು: ಜೂನ್‌ 1ರಿಂದ ಈವರೆಗೆ 233.5 ಮಿ.ಮೀ. ವಾಡಿಕೆ ಮಳೆಯಲ್ಲಿ, ವಾಸ್ತವವಾಗಿ 98.7 ಮಿ.ಮೀ. ಮಾತ್ರ ಮಳೆಯಾಗಿದೆ. ಅಂದರೆ ಶೇ 58ರಷ್ಟು ಮಳೆ ಕೊರತೆ ಉಂಟಾಗಿರುವುದು ಕೃಷಿ ವಲಯದ ಮೇಲೆ ತೀವ್ರ ಪರಿಣಾಮ ಬೀರಿದೆ. 2025ರ ಮುಂಗಾರು ಹಂಗಾಮಿನಲ್ಲಿ ಜೂನ್‌ನಿಂದ ಆಗಸ್ಟ್‌ ಆರಂಭದವರೆಗೆ 198 ಮಿ.ಮೀ. ಮಳೆ ಬಿದ್ದಿತ್ತು. ಬಿತ್ತನೆ ಕಾರ್ಯವೂ ಚುರುಕಾಗಿತ್ತು. ಆದರೆ, ಈ ಬಾರಿ ಮಳೆಗಾಲದಲ್ಲೂ ಬಿರುಬಿಸಿಲಿನ ವಾತಾವರಣ ಇರುತ್ತಿರುವುದು ಬೆಳೆಗಳಿಗೆ ಪೂರಕವಾಗಿಲ್ಲ.

ಜಿಲ್ಲೆಯಲ್ಲಿ 9 ತಾಲ್ಲೂಕುಗಳಿಂದ ಸೇರಿ ಈ ಹಂಗಾಮಿನಲ್ಲಿ ಒಟ್ಟು 3,76,609 ಹೆಕ್ಟೇರ್‌ ವಿಸ್ತೀರ್ಣದ ಕೃಷಿ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಇದರಲ್ಲಿ ಈವರೆಗೆ ಕೇವಲ 1,66,141 ಹೆಕ್ಟೇರ್‌ (ಶೇ 44.11) ಬಿತ್ತನೆಯಾಗಿದೆ. ಹೋದ ವರ್ಷ ಇದೇ ಅವಧಿಗೆ ಶೇ 60ರಷ್ಟು ಬಿತ್ತನೆಯಾಗಿತ್ತು; ಉತ್ತಮ ಮಳೆಯೂ ಆಗಿತ್ತು.

ಗಾಯದ ಮೇಲೆ ಬರೆ: ಈಗ, ಬಿತ್ತನೆಯಾದ ಪ್ರದೇಶದಲ್ಲೂ ಬಹುಪಾಲು ಬೀಜಗಳು ಮೊಳಕೆ ಯಾಗಿಲ್ಲ. ಮೊಳಕೆ ಬಂದಿರುವುದು ತೇವಾಂಶದ ಕೊರತೆಯಿಂದ ಒಣಗಲಾರಂಭಿಸಿದ್ದು, ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿರುವ ಅನ್ನದಾತರು ತಲೆಮೇಲೆ ಕೈಹೊತ್ತು ಕುಳಿತಿದ್ದಾರೆ.

ಎಚ್‌.ಡಿ. ಕೋಟೆ, ಸರಗೂರು ಭಾಗದ ಕೆಲವು ಕಡೆಗಳಲ್ಲಿ ಮುಸುಕಿನಜೋಳಕ್ಕೆ ರೋಗಬಾಧೆಯೂ ಕಾಣಿಸಿಕೊಂಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಮೈಸೂರು ಉಪ ವಿಭಾಗದ ಮೈಸೂರು, ನಂಜನಗೂಡು, ತಿ.ನರಸೀಪುರ ತಾಲ್ಲೂಕುಗಳಲ್ಲಿ ಅತಿ ಕಡಿಮೆ ಅಂದರೆ ಶೇ 34.12ರಷ್ಟು ಮಾತ್ರ ಬಿತ್ತನೆಯಾಗಿದೆ. ಹುಣಸೂರು ಉಪ ವಿಭಾಗದಲ್ಲಿ ಶೇ 48.65ರಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿದೆ.

ಹುಣಸೂರು ತಾಲ್ಲೂಕೊಂದರಲ್ಲೇ 21 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಳೆ ಕೊರತೆಯಿಂದ ಹೊಗೆಸೊಪ್ಪು ಬೆಳೆ ಇಳುವರಿ ಕಡಿಮೆಯಾಗಿದೆ. ಅವರೆ, ಅಲಸಂದೆ ಮೊದಲಾದ ಬೆಳೆಗಳು ಹಾಳಾಗಿವೆ. ಈ ಭಾಗದ ಪ್ರಮುಖ ಬೆಳೆಯಾದ ಮುಸುಕಿನಜೋಳಕ್ಕೆ ತೀವ್ರ ರೋಗಬಾಧೆ ಆವರಿಸಿದೆ. ನಷ್ಟ ಅನುಭವಿಸಿದ ರೈತರು ಸರ್ಕಾರದಿಂದ ನೀಡಲಾಗುವ ಪರಿಹಾರಕ್ಕಾಗಿ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ