ಚಾಮರಾಜನಗರ: ಪಡಿತರ ಹಂಚಿಕೆಗೆ ಬಯೊಮೆಟ್ರಿಕ್‌ ತೊಡಕು

ಚಾಮರಾಜನಗರ: ಪಡಿತರ ಹಂಚಿಕೆಗೆ ಬಯೊಮೆಟ್ರಿಕ್‌ ತೊಡಕು

ಚಾಮರಾಜನಗರ: ಪಡಿತರ ಹಂಚಿಕೆಗೆ ಬಯೊಮೆಟ್ರಿಕ್‌ ತೊಡಕು

ಚಾಮರಾಜನಗರ: ಜಿಲ್ಲೆಯಲ್ಲಿ ಪಡಿತರ ವಿತರಣೆಗೆ ಸರ್ವರ್ ಸಮಸ್ಯೆ ಅಡ್ಡಿಯಾಗಿದ್ದು, ಪಡಿತರದಾರರು ಕಂಗಾಲಾಗಿದ್ದಾರೆ. ಪ್ರತಿ ನಿತ್ಯ ಬೆಳಿಗ್ಗೆಯಿಂದ ಸಂಜೆಯವರೆಗೂ ಪಡಿತರ ವಿತರಣಾ ಕೇಂದ್ರಗಳ ಮುಂದೆ ‘ಕಾಯುವ’ ಶಿಕ್ಷೆ ಅನುಭವಿಸುತ್ತಿದ್ದಾರೆ.

ಕೇಂದ್ರ ಸರ್ಕಾರ ಆಗಸ್ಟ್‌ ಹಾಗೂ ಸೆಪ್ಟೆಂಬರ್ ತಿಂಗಳ ಪಡಿತರವನ್ನು ಏಕಕಾಲದಲ್ಲಿ ಆಗಸ್ಟ್‌ ಅಂತ್ಯದೊಳಗೆ ವಿತರಿಸುವಂತೆ ಬಿಡುಗಡೆ ಮಾಡಿದೆ. ಈ ತಿಂಗಳ ಆರಂಭದಿಂದಲೇ ಪಡಿತರ ವಿತರಣೆ ನಡೆಯುತ್ತಿದ್ದರೂ ತಾಂತ್ರಿಕ ಸಮಸ್ಯೆಯಿಂದಾಗಿ ಫಲಾನುಭವಿಗಳಿಗೆ ಸಮರ್ಪಕವಾಗಿ ಹಂಚಿಕೆ ಮಾಡಲು ಸಾಧ್ಯವಾಗುತ್ತಿಲ್ಲ. ಗ್ರಾಮೀಣ ಭಾಗಗಳಲ್ಲಂತೂ ಸಮಸ್ಯೆ ಗಂಭೀರವಾಗಿದೆ.

ಅರ್ಧ ತಾಸಿಗೆ ಒಬ್ಬರಿಗೆ ಪಡಿತರ: ಪಡಿತರ ಪಡೆದುಕೊಳ್ಳಲು ಫಲಾನುಭವಿಗಳು ಕಡ್ಡಾಯವಾಗಿ ಬೆರಳಚ್ಚು ನೀಡಬೇಕು. ಬೆರಳಚ್ಚು ಮಾದರಿ ಸ್ವೀಕರಿಸಿದ ಬಳಿಕವಷ್ಟೆ ಕುಟುಂಬ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಪಡಿತರ ಹಂಚಿಕೆಯಾಗುತ್ತದೆ. ಆದರೆ, ಸರ್ವರ್ ಸಮಸ್ಯೆಯಿಂದಾಗಿ ತಂತ್ರಾಂಶವು ಬೆರಳಚ್ಚು ಸ್ವೀಕರಿಸಲು ಸುದೀರ್ಘ ಅವಧಿ ತೆಗೆದುಕೊಳ್ಳುತ್ತಿದೆ.

ಒಬ್ಬರಿಗೆ ಪಡಿತರ ನೀಡಲು ಅರ್ಧ ತಾಸಿಗೂ ಹೆಚ್ಚು ಸಮಯ ವ್ಯಯವಾಗುತ್ತಿದೆ. ಕೆಲವೊಮ್ಮೆ ಒಂದು ತಾಸು ಕಾದರೂ ಪ್ರಕ್ರಿಯೆ ಪೂರ್ಣಗೊಳ್ಳುವುದಿಲ್ಲ. ಪ್ರತಿದಿನ 10 ರಿಂದ 15 ಮಂದಿಗಷ್ಟೆ ಪಡಿತರ ವಿತರಣೆ ಮಾಡಲು ಸಾಧ್ಯವಾಗುತ್ತಿದ್ದು ಸಾರ್ವಜನಿಕರಿಂದ ಬೈಗುಳ ಎದುರಿಸಬೇಕಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ ಪಡಿತರ ವಿತರಕರು.

ಪಡಿತರದಾರರು ನಿತ್ಯದ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಸೊಸೈಟಿಗಳ ಎದುರು ಪಡಿತರಕ್ಕಾಗಿ ಸರತಿ ಸಾಲಿನಲ್ಲಿ ನಿಂತು ಕಾಯಬೇಕಾಗಿದೆ. ಮನೆಯ ಮುಖ್ಯಸ್ಥರಲ್ಲೊಬ್ಬರು ಖುದ್ದು ಕೇಂದ್ರಕ್ಕೆ ಬಂದು ಬೆರಳಚ್ಚು ನೀಡಿ ಪಡಿತರ ಪಡೆಯಬೇಕಿರುವುದರಿಂದ ನಿತ್ಯ ಕೆಲಸ ಕಾರ್ಯಗಳಿಗೆ ತೆರಳಲಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಪಡಿತರದಾರ ರಮೇಶ್‌.

ಎಲ್ಲಿ ಸಮಸ್ಯೆ: ಎರಡು ತಿಂಗಳ ಪಡಿತರ ಪಡೆದುಕೊಳ್ಳಲು ಎರಡೆರಡು ಬಾರಿ ಬಯೋಮೆಟ್ರಿಕ್ ನೀಡಬೇಕಾಗಿದೆ. ಒಂದು ತಿಂಗಳ ಪಡಿತರ ಪಡೆಯಲು ಕನಿಷ್ಠ 10 ರಿಂದ 15 ನಿಮಿಷ ಹಿಡಿಯುತ್ತಿದ್ದು, ಎರಡನೇ ತಿಂಗಳ ಪಡಿತರ ಪಡೆಯುವಾಗ ಸಮಸ್ಯೆ ಗಂಭೀರ ಸ್ವರೂಪ ಪಡೆಯುತ್ತಿದೆ. ಅರ್ಧ ತಾಸು ಕಳೆದರೂ ಪ್ರಕ್ರಿಯೆ ಪೂರ್ಣಗೊಳ್ಳುವುದಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ಜಿಲ್ಲೆಯಲ್ಲಿ 2.82 ಲಕ್ಷ ಪಡಿತರ ಕಾರ್ಡ್‌ಗಳಿದ್ದು ಕೇಂದ್ರ ಸರ್ಕಾರದ ಯೋಜನೆಯಂತೆ ಪ್ರತಿ ತಿಂಗಳು ಕುಟುಂಬದ ಒಬ್ಬ ಸದಸ್ಯರಿಗೆ 2 ಕೆ.ಜಿ ಅಕ್ಕಿ ಹಾಗೂ 3 ಕೆ.ಜಿ ರಾಗಿ ಸಿಗಲಿದೆ. ಈ ಬಾರಿ ಎರಡು ತಿಂಗಳಿನ ಪಡಿತರ ನೀಡುತ್ತಿರುವುದರಿಂದ ಒಬ್ಬರಿಗೆ 4 ಕೆ.ಜಿ ಅಕ್ಕಿ, 6 ಕೆ.ಜಿ ರಾಗಿ ದೊರೆಯಲಿದೆ.

ತಿಂಗಳಾಂತ್ಯಕ್ಕೆ ಪಡೆಯದಿದ್ದರೆ ವ್ಯರ್ಥ: ಆ.31ರೊಳಗೆ ಫಲಾನುಭವಿಗಳು ಕಡ್ಡಾಯವಾಗಿ ಪಡಿತರ ಪಡೆಯಲೇಬೇಕು, ಇಲ್ಲವಾದರೆ ಎರಡು ತಿಂಗಳ ಪಡಿತರ ವ್ಯ‌ರ್ಥವಾಗಲಿದೆ. ಹಾಗಾಗಿ, ಬಡವರು, ಮಧ್ಯಮ ವರ್ಗದವರು ಪಡಿತರಕ್ಕಾಗಿ ಕೇಂದ್ರಗಳ ಮುಂದೆ ದಿನಪೂರ್ತಿ ಕಾಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಿರುವ ಆಹಾರ ಧಾನ್ಯಗಳನ್ನು ಅರ್ಹರಿಗೆ ತಲುಪಿಸುವ ಸಲುವಾಗಿ ಜಿಲ್ಲೆಯಲ್ಲಿ ಪಡಿತರ ವಿತರಕರು ಶಕ್ತಿಮೀರಿ ಶ್ರಮಿಸುತ್ತಿದ್ದಾರೆ. ಬೆಳಿಗ್ಗೆ 6 ರಿಂದ ರಾತ್ರಿ 10ರವರೆಗೂ ಅವಿರತವಾಗಿ ಪಡಿತರ ವಿತರಣೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೂ ಸರ್ವರ್ ಸಮಸ್ಯೆಯಿಂದ ಪ್ರತಿದಿನ ಗರಿಷ್ಠ 20 ಮಂದಿಗಷ್ಟೆ ವಿತರಣೆ ಮಾಡಲು ಸಾಧ್ಯವಾಗುತ್ತಿದೆ ಎಂದು ಪಡಿತರ ವಿತರಕರ ಸಂಘದ ಕೊಳ್ಳೇಗಾಲ ತಾಲ್ಲೂಕು ಅಧ್ಯಕ್ಷ ವೃಷಬೇಂದ್ರಪ್ಪ ಅಸಹಾಯಕತೆ ವ್ಯಕ್ತಪಡಿಸಿದರು.

ಪಡಿತರ ವಿತರಣೆಗೆ ಸರ್ವರ್ ಸಮಸ್ಯೆಯಾಗಿರುವ ವಿಚಾರವನ್ನು ಹಿರಿಯ ಅಧಿಕಾರಿಗಳಿಗೆ ತಿಳಿಸಲಾಗಿದೆ. ಜಿಲ್ಲೆಯಲ್ಲಿ 2.82 ಲಕ್ಷ ಪಡಿತರ ಕಾರ್ಡ್‌ಗಳಿದ್ದು ಇದುವರೆಗೂ ಶೇ 65ರಷ್ಟ ಫಲಾನುಭವಿಗಳಿಗೆ ವಿತರಣೆ ಮಾಡಲಾಗಿದೆ. ಇನ್ನೆರಡು ದಿನಗಳಲ್ಲಿ ಗರಿಷ್ಠ ಫಲಾನುಭವಿಗಳಿಗೆ ಪಡಿತರ ಹಂಚಿಕೆ ಮಾಡಲು ಬೆಳಿಗ್ಗೆ 6 ರಿಂದ ರಾತ್ರಿ 10ವರೆಗೂ ಕೇಂದ್ರಗಳನ್ನು ತೆರೆಯಲು ಸೂಚನೆ ನೀಡಲಾಗಿದೆ. ಪಡಿತರ ವಿತರಣೆ ದಿನಾಂಕವನ್ನು ವಿಸ್ತರಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ.

– ಡಾ.ವಸುಂಧರಾ ಹೆಗಡೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕಿ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260830-37-1786074821

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ