ಹಿಂಸೆಯ ನೆನಪುಗಳನ್ನು ಮೀರಿ ಕನಸುಗಳನ್ನು ಕಟ್ಟುತ್ತಿರುವ ಕಾಶ್ಮೀರದ ಯುವಜನತೆ
ಕೆಲವರು ಮಗನನ್ನು ಕಳೆದುಕೊಂಡಿದ್ದಾರೆ.. ಕೆಲವರು ಮನೆಯನ್ನು, ಹಲವರು ದೃಷ್ಟಿಯನ್ನು… ಮೂರು ದಶಕ ಇಂತಹ ಅನುಭವಗಳೇ ಹಲವರ ಬಾಲ್ಯವನ್ನು ರೂಪಿಸಿದೆ.
1989ರಲ್ಲಿ ಕಾಶ್ಮೀರದಲ್ಲಿ ಉಗ್ರವಾದ ಆರಂಭವಾದ ಬಳಿಕ, ಮೊದಲ ಬಾರಿಗೆ ಕಣಿವೆಯಲ್ಲಿ ಸಂಘರ್ಷದ ಕರಾಳ ದಿನಗಳನ್ನು ನೇರವಾಗಿ ಅನುಭವಿಸದ ಪೀಳಿಗೆಯೊಂದು ಪ್ರೌಢಾವಸ್ಥೆಗೆ ಕಾಲಿಡುತ್ತಿದೆ. ಈ ತಲೆಮಾರು ತಮ್ಮ ಪೋಷಕರ ಬದುಕನ್ನು ಬದಲಿಸಿದ ಹಿಂಸಾಚಾರ ಮತ್ತು ಅಶಾಂತಿಯನ್ನು ಕಂಡಿಲ್ಲ; ಅದರ ನೆನಪುಗಳನ್ನು ಅವರಿಂದ ಇವರಿಗೆ ಬಂದಿದೆ.
2019ರ ಆಗಸ್ಟ್ 5ರಂದು ಸಂವಿಧಾನದ 370ನೇ ವಿಧಿಯಡಿ ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನ ರದ್ದುಗೊಂಡಾಗ ಬರಾಮುಲ್ಲಾದ ಸೋಹೈಬ್ ಮಲಿಕ್ ಐದನೇ ತರಗತಿ ವಿದ್ಯಾರ್ಥಿಯಾಗಿದ್ದರು. ಇಂದು 17 ವರ್ಷದವರಾಗಿರುವ ಅವರಿಗೆ ಆ ನಿರ್ಧಾರದ ರಾಜಕೀಯ ಮಹತ್ವ ಅರ್ಥವಾಗುತ್ತದೆ.
‘ಮೊಬೈಲ್ ಫೋನ್‌ಗಳು ಕೆಲಸ ಮಾಡುತ್ತಿರಲಿಲ್ಲ. ಶಾಲೆ ಮುಚ್ಚಿತ್ತು. ನನ್ನ ನೆಚ್ಚಿನ ಮೊಬೈಲ್ ಆಟಗಳನ್ನೂ ಆಡಲು, ಕಾರ್ಟೂನ್‌ಗಳನ್ನೂ ನೋಡಲು ಸಾಧ್ಯವಾಗಲಿಲ್ಲ. ಆಗ ವಿಧಿ 370 ಎಂದರೇನು ಎಂಬುದು ನನಗೆ ತಿಳಿದಿರಲಿಲ್ಲ’ ಎಂದು ಹೇಳುತ್ತಾರೆ ಅವರು.
ಸ್ವತಂತ್ರ ಭಾರತದ ಅತ್ಯಂತ ಮಹತ್ವದ ರಾಜಕೀಯ ನಿರ್ಧಾರಗಳಲ್ಲಿ ಒಂದಾದ ಆ ಘಟನೆಯ ಬಗ್ಗೆ ಅವರ ನೆನಪು ಸಂವಿಧಾನ ಅಥವಾ ರಾಜಕೀಯಕ್ಕೆ ಸಂಬಂಧಿಸಿದ್ದಲ್ಲ; ಅದು ಬಾಲ್ಯದ ಅನುಭವಕ್ಕೆ ಸೀಮಿತವಾಗಿದೆ.
2008ರಿಂದ 2011ರ ನಡುವೆ ಜನಿಸಿದ ಕಾಶ್ಮೀರದ ಅನೇಕ ಯುವಕರ ಕಥೆಯೂ ಇದೇ. 1990ರ ದಶಕದ ಉಗ್ರ ಚಟುವಟಿಕೆಗಳು, 2008 ಮತ್ತು 2010ರ ಪ್ರತಿಭಟನೆಗಳು ಅಥವಾ 2016ರಲ್ಲಿ ಉಗ್ರ ನಾಯಕ ಬುರ್ಹಾನ್ ವಾನಿ ಹತ್ಯೆಯ ನಂತರದ ಅಶಾಂತಿಯ ಬಗ್ಗೆ ಕೇಳಿದರೆ, ಅವರ ಉತ್ತರ ಒಂದೇ:
‘ಅದರ ಬಗ್ಗೆ ನಮ್ಮ ಪೋಷಕರು ಹೇಳಿದ್ದು ಮಾತ್ರ ಗೊತ್ತು‘
ಕುಪ್ವಾರದ 12ನೇ ತರಗತಿ ವಿದ್ಯಾರ್ಥಿಯೊಬ್ಬನ ಕುಟುಂಬದ ಇತಿಹಾಸವೇ ಸಂಘರ್ಷದೊಂದಿಗೆ ಬೆಸೆದುಕೊಂಡಿದೆ.
‘ನನ್ನ ಚಿಕ್ಕಪ್ಪ 1990ರ ದಶಕದಲ್ಲಿ ಉಗ್ರ ಸಂಘಟನೆ ಸೇರಿ ಮೃತಪಟ್ಟಿದ್ದರು. ಭಯ, ಹತ್ಯೆಗಳು ಮತ್ತು ಸಂಘರ್ಷದಿಂದ ಜನ ಕಳೆದುಕೊಂಡ ವರ್ಷಗಳ ಬಗ್ಗೆ ಮನೆಯವರು ಹೇಳುವುದನ್ನು ಕೇಳುತ್ತಾ ಬೆಳೆದಿದ್ದೇನೆ. ಅವು ನಮ್ಮ ಕುಟುಂಬದ ಕಥೆಗಳು; ಆದರೆ ಅವು ನನ್ನ ಅನುಭವಗಳಲ್ಲ’ ಎನ್ನುತ್ತಾನೆ.
‘ನಮ್ಮ ಹಿರಿಯರು ಅನುಭವಿಸಿದ ನೋವನ್ನು ನಾವು ಗೌರವಿಸುತ್ತೇವೆ. ಆದರೆ ಆ ಹಿಂಸೆಯನ್ನು ನಾವು ಮುಂದುವರಿಸಲು ಬಯಸುವುದಿಲ್ಲ’ ಅವರ ಮಾತಿನಲ್ಲಿ ಆತ್ಮವಿಶ್ವಾಸ ತುಂಬಿತ್ತು.
ರಾಜಕೀಯಕ್ಕಿಂತ ಶಿಕ್ಷಣ, ಉದ್ಯೋಗವೇ ಆದ್ಯತೆ
18 ವರ್ಷದ ನೀಟ್ ಪರೀಕ್ಷಾ ಅಭ್ಯರ್ಥಿ ಇಕ್ರಾ ಶಫಿಗೆ ಹಿರಿಯರು ತಮ್ಮ ಯೌವನದ ಬಗ್ಗೆ ಮಾತನಾಡುವಾಗ ದೊಡ್ಡ ವ್ಯತ್ಯಾಸ ಗೋಚರಿಸುತ್ತದೆ. ‘ಅವರು ಬೇರೆಯದೇ ಕಾಶ್ಮೀರದಲ್ಲಿ ಬದುಕಿದವರಂತೆ ಅನಿಸುತ್ತದೆ. ರಾಜಕೀಯ ಸಮಸ್ಯೆಗಳು ಇನ್ನೂ ಇವೆ. ಆದರೆ ನಮ್ಮ ತಲೆಮಾರು ಹೆಚ್ಚು ಮಾತನಾಡುವುದು ಪರೀಕ್ಷೆಗಳು, ವೃತ್ತಿ ಮತ್ತು ಉದ್ಯೋಗಗಳ ಬಗ್ಗೆ’ ಎಂದು ಅವರು ಹೇಳುತ್ತಾರೆ.
ಅಂಕಿಅಂಶಗಳು ಹೇಳುವುದೇನು?
ಸರ್ಕಾರದ ಅಂಕಿಅಂಶಗಳೂ ಈ ಬದಲಾವಣೆಯನ್ನು ಸೂಚಿಸುತ್ತವೆ. 2018ರಲ್ಲಿ ಜಮ್ಮು-ಕಾಶ್ಮೀರದಲ್ಲಿ 1,328 ಸಂಘಟಿತ ಕಲ್ಲುತೂರಾಟ ಘಟನೆಗಳು, 52 ಬಂದ್‌ಗಳು ಮತ್ತು 228 ಉಗ್ರ ದಾಳಿಗಳು ದಾಖಲಾಗಿದ್ದವು. ಆದರೆ 2023ರಲ್ಲಿ ಸಂಘಟಿತ ಕಲ್ಲುತೂರಾಟ ಮತ್ತು ಬಂದ್‌ಗಳು ಶೂನ್ಯಕ್ಕೆ ಇಳಿದಿದ್ದು, ಉಗ್ರ ದಾಳಿಗಳ ಸಂಖ್ಯೆ 46ಕ್ಕೆ ಕುಸಿದಿದೆ. ನಾಗರಿಕರ ಸಾವಿನ ಸಂಖ್ಯೆ 55ರಿಂದ 14ಕ್ಕೆ ಇಳಿದಿದೆ. ಆದಾಗ್ಯೂ, ಸಂಘರ್ಷ ಸಂಪೂರ್ಣ ಅಂತ್ಯಗೊಂಡಿದೆ ಎಂದಲ್ಲ. 2025ರ ಏಪ್ರಿಲ್‌ನಲ್ಲಿ ನಡೆದ ಪಹಲ್ಗಾಮ್ ಉಗ್ರ ದಾಳಿ ಉಗ್ರ ಚಟುವಟಿಕೆಗಳು ಇನ್ನೂ ಮುಂದುವರಿದಿರುವುದನ್ನು ತೋರಿಸಿದೆ. ವಿಧಿ 370, ರಾಜ್ಯದ ಸ್ಥಾನಮಾನ ಹಾಗೂ ರಾಜಕೀಯ ಪ್ರತಿನಿಧಿತ್ವ ಕುರಿತ ಚರ್ಚೆಗಳೂ ಇನ್ನೂ ಮುಂದುವರಿದಿವೆ.
ಹೊಸ ತಲೆಮಾರಿನ ಹೊಸ ಆದ್ಯತೆಗಳು
ಕಾಶ್ಮೀರ ವಿಶ್ವವಿದ್ಯಾಲಯದ ಸಮಾಜಶಾಸ್ತ್ರಜ್ಞ ಡಾ. ಫಾರೂಖ್ ಫಹೀಮ್ ಅವರ ಪ್ರಕಾರ, ಕುಟುಂಬಗಳ ಮೂಲಕ ಸಂಘರ್ಷದ ನೆನಪುಗಳು ಹೊಸ ತಲೆಮಾರಿಗೆ ತಲುಪುತ್ತಿವೆ. ಆದರೆ ಆ ಹಿಂಸಾಚಾರ ಅವರ ಬಾಲ್ಯವನ್ನು ರೂಪಿಸಿಲ್ಲ. ‘ಯುವಕರು ಹಿಂಸಾಚಾರ, ಭಯ ಮತ್ತು ರಾಜಕೀಯ ಅನಿಶ್ಚಿತತೆಯ ಕಥೆಗಳನ್ನು ಕೇಳಿ ಬೆಳೆದಿದ್ದಾರೆ. ಆದರೆ ಅವು ಅವರ ಸ್ವಂತ ಅನುಭವಗಳಲ್ಲ’ ಎಂದು ಅವರು ಹೇಳುತ್ತಾರೆ.
ಇದರಿಂದ ಅವರ ಆದ್ಯತೆಗಳೂ ಬದಲಾಗಿವೆ. ಗುಣಮಟ್ಟದ ಶಿಕ್ಷಣ, ಉದ್ಯೋಗ, ವಲಸೆ ಅವಕಾಶಗಳು ಮತ್ತು ಆರ್ಥಿಕ ಭದ್ರತೆ ಈಗ ಅವರ ಪ್ರಮುಖ ಚಿಂತನೆಗಳಾಗಿವೆ. ‘ಇದರಿಂದ ರಾಜಕೀಯ ಆಶಯಗಳು ಮಾಯವಾಗಿವೆ ಎಂದರ್ಥವಲ್ಲ. ಆದರೆ ಈ ಪೀಳಿಗೆ ಕಾಶ್ಮೀರವನ್ನು ನೋಡುವ ದೃಷ್ಟಿಕೋನ ಹಿಂದಿನ ತಲೆಮಾರಿಗಿಂತ ಭಿನ್ನವಾಗಿದೆ’ ಎಂದು ಅವರು ವಿವರಿಸುತ್ತಾರೆ.
ಹಿರಿಯ ತಲೆಮಾರಿಗೆ ಭಯ ಎಂದರೆ ಹಿಂಸಾಚಾರ ಮತ್ತು ಜೀವಭೀತಿ. ಆದರೆ ಇಂದಿನ ಯುವಕರಿಗೆ ಭಯ ಎಂದರೆ ಉದ್ಯೋಗ ಸಿಗದಿರುವುದು. ಇದರಿಂದ ಕಾಶ್ಮೀರದ ರಾಜಕೀಯ ಸಮಸ್ಯೆಗಳು ಅಥವಾ ಹಿಂದಿನ ತಲೆಮಾರು ಅನುಭವಿಸಿದ ನೋವು ಅಳಿಸಿಹೋಗಿಲ್ಲ. ಆ ನೆನಪುಗಳು ಕುಟುಂಬದ ಮಾತುಕತೆಗಳಲ್ಲಿ, ಹಳೆಯ ಚಿತ್ರಗಳಲ್ಲಿ ಮತ್ತು ಇನ್ನೂ ಜನ ಭೇಟಿ ನೀಡುವ ಸಮಾಧಿಗಳಲ್ಲಿ ಜೀವಂತವಾಗಿವೆ.
ಆದರೆ, ಉಗ್ರವಾದ ಕಣಿವೆಯನ್ನು ಬದಲಿಸಿದ 37 ವರ್ಷಗಳ ಬಳಿಕ, ಕಾಶ್ಮೀರ ಮೊದಲ ಬಾರಿಗೆ ಸಂಘರ್ಷವನ್ನು ಬದುಕದೆ, ಅದರ ನೆನಪುಗಳನ್ನು ಮಾತ್ರ ಪರಂಪರೆಯಾಗಿ ಪಡೆದಿರುವ ಹೊಸ ತಲೆಮಾರನ್ನು ಕಾಣುತ್ತಿದೆ.