
ಹಗರಿಬೊಮ್ಮನಹಳ್ಳಿ: ವಿವಿಧ ಇಲಾಖೆಗಳಲ್ಲಿ ಪ್ರಭಾರಗಳದ್ದೇ ಪಾರುಪತ್ಯ
ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ವಿವಿಧ ಇಲಾಖೆಗಳಲ್ಲಿ ಪ್ರಭಾರಗಳದ್ದೇ ಪಾರುಪತ್ಯ ಮುಂದುವರೆದಿದೆ. ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಬಸವ ರಾಜ ಅಡವಿಬಾವಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬೋರೆಗೌಡ ವರ್ಗಾ ವಣೆಗೊಂಡು ಹಲವು ತಿಂಗಳುಗಳೇ ಕಳೆದರೂ ಇದುವರೆಗೂ ಯಾರೊಬ್ಬರೂ ತಾಲ್ಲೂಕಿಗೆ ಬರುವುದಕ್ಕೆ ಮನಸ್ಸು ಮಾಡುತ್ತಿಲ್ಲ.
ಜಿಲ್ಲೆಯಲ್ಲಿಯೇ ಅತೀ ಹೆಚ್ಚು ವಿದ್ಯಾರ್ಥಿಗಳಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ಗೆ ಹಿರಿಯ ಉಪನ್ಯಾಸಕರುಗಳೇ ಪ್ರಭಾರ ಪ್ರಾಚಾರ್ಯರಾಗಿ ಕಳೆದ ಒಂದು ದಶಕದಿಂದ ಕಾರ್ಯನಿರ್ವಹಿಸುತ್ತಿದ್ದಾರೆ.
ತಾಲ್ಲೂಕಿನಲ್ಲಿ 2 ಬೃಹತ್ ಕಾರ್ಖಾನೆಗಳು ಮತ್ತು ಸಾವಿರಾರು ಜನ ಕಾರ್ಮಿಕರಿದ್ದರೂ ಕಾರ್ಮಿಕ ಇಲಾಖೆಯ ಕಚೇರಿ ಇದ್ದರೂ ಇದುವರೆಗೂ ಕಾಯಂ ಅಧಿಕಾರಿಗಳನ್ನು ನಿಯೋಜಿಸಿಲ್ಲ, ಅರೆಕಾಲಿಕ ಸಿಬ್ಬಂದಿ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ತಾಲ್ಲೂಕಿನಲ್ಲಿ ಹಾಲಿ ಮತ್ತು ಮಾಜಿ ಶಾಸಕರ ಅಣತಿಯಂತೆ ಕೆಲಸ ನಿರ್ವಹಿಸಬೇಕಾಗಿರುವುದು ಇಲ್ಲಿನ ಅಧಿಕಾರಿಗಳಿಗೆ ಸವಾಲಿನ ಮತ್ತು ಒತ್ತಡದ ಕೆಲಸವಾಗಿದೆ. ಈಚೆಗೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರೊಬ್ಬರು ಆಡಳಿತ ಪಕ್ಷದ ಮುಖಂಡರೊಬ್ಬರ ಕೋಪಕ್ಕೆ ತುತ್ತಾಗಿ ವರ್ಗಾವಣೆಯ ಶಿಕ್ಷೆ ಅನುಭವಿಸಬೇಕಾಯಿತು ಎಂದು ಇಲಾಖೆಯ ಸಿಬ್ಬಂದಿಯೊಬ್ಬರು ಹೇಳುತ್ತಾರೆ.
ಇಲ್ಲಿನ ಪೊಲೀಸ್ ಠಾಣೆಯಲ್ಲಿ ಕಾನೂನು ಸುವ್ಯವಸ್ಥೆ ವಿಭಾಗದ ಪಿಎಸ್ಐ ವರ್ಗಾವಣೆಗೊಂಡು 4ತಿಂಗಳಾದರೂ ಮತ್ತೊಬ್ಬರು ಇಲ್ಲಿಗೆ ವರ್ಗಾವಣೆಗೊಂಡು ಬಂದಿಲ್ಲ, ಕ್ರೈಮ್ ಪಿಎಸ್ಐ ಉಮಾಪತಿ ಪ್ರಭಾರ ವಹಿಸಿಕೊಂಡಿದ್ದಾರೆ. ಪಟ್ಟಣದ ಠಾಣೆಯ ವ್ಯಾಪ್ತಿಯಲ್ಲಿ 55ಕ್ಕೂ ಹೆಚ್ಚು ಗ್ರಾಮ ಮತ್ತು ತಾಂಡಾಗಳಿದ್ದು ಕಾನೂನು ಸುವ್ಯವಸ್ಥೆ ಪೊಲೀಸರಿಗೆ ಕಗ್ಗಂಟಾಗಿ ಪರಿಣಮಿಸಿದೆ.
ಆದರೆ ಏಪ್ರಿಲ್ ತಿಂಗಳಲ್ಲಿ ವರ್ಗಾವಣೆಗೊಂಡಿದ್ದ ಸ್ಥಳಕ್ಕೆ ಇದುವರೆಗೂ ಸರ್ಕಾರ ಯಾರನ್ನೂ ನಿಯೋಜಿಸಿಲ್ಲ. ಪಟ್ಟಣಕ್ಕೆ ಬರುವುದಕ್ಕೆ ಅಧಿಕಾರಿಗಳೂ ಆಸಕ್ತಿ ತೋರಿಸುತ್ತಿಲ್ಲ ಎನ್ನುತ್ತಾರೆ ಹೆಸರನ್ನು ಹೇಳಲು ಇಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು.
ಜೂನ್ 16ರಂದು ರಾಯಚೂರು ಜಿಲ್ಲೆಯ ತುರ್ವಿಹಾಳ ಪೊಲೀಸ್ ಠಾಣೆಯ ಪಿಎಸ್ಐ ಸುಜಾತ ಎನ್ನುವವರಿಗೆ ಇಲ್ಲಿನ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗಕ್ಕೆ ವರ್ಗಾವಣೆ ಆಗಿತ್ತಾದರೂ ಅವರು ಬಂದು ವರದಿ ಮಾಡಿಕೊಳ್ಳಲಿಲ್ಲ.
ಈಚೆಗಷ್ಟೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಲಾಕಪ್ ಸಾವು ಪ್ರಕರಣ ನಡೆದಿರುವುದು ಇಲ್ಲಿಗೆ ಅಧಿಕಾರಿಗಳು ವರ್ಗಾವಣೆ ಆಗಿ ಬರುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎನ್ನುವ ಮಾತು ಬಲವಾಗಿ ಕೇಳಿಬಂದಿದೆ. ಕಚೇರಿಯ ಸೂಪರಿಂಟೆಂಡೆಂಟ್ ಪ್ರಭಾರ ಸಿಡಿಪಿಒ ಜವಾಬ್ದಾರಿಯ ಹೊಣೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.
ತಾಲ್ಲೂಕಿನ ರಾಮ್ಸರ್ ಪ್ರದೇಶ ಖ್ಯಾತಿಯ ಪಕ್ಷಿಧಾಮ ಹಾಗೂ 7500 ಹೆಕ್ಟೇರ್ ಗೂ ಹೆಚ್ಚು ಅರಣ್ಯ ಪ್ರದೇಶ ಇದ್ದರೂ ಅರಣ್ಯ ಇಲಾಖೆಯ ಕಚೇರಿ ಇಲ್ಲಿಲ್ಲ.
ಹೂವಿನಹಡಲಿಯ ವಲಯ ಅರಣ್ಯ ಅಧಿಕಾರಿ ಇಲ್ಲಿನ ಹೆಚ್ಚುವರಿ ಹೊಣೆ ಹೊತ್ತಿದ್ದಾರೆ. ಮಾಲವಿ ಜಲಾಶಯ ಹಾಗೂ ಹತ್ತಾರು ಏತನೀರಾವರಿ ಘಟಕಗಳಿದ್ದರೂ ನೀರಾವರಿ ಇಲಾಖೆಯ ಕಚೇರಿ ಇಲ್ಲಿಲ್ಲ. ಮಾಲವಿ ಜಲಾಶಯದ ಶಾಖಾಧಿಕಾರಿ ಕಚೇರಿ ಸದಾ ಮುಚ್ಚಿರುತ್ತದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260818-25-50437856