ಬಯಲು ಸೀಮೆಯಲ್ಲಿ ಇಲ್ಲ ಮಳೆ: ಮುಂದುವರೆದ ಬರದ ಛಾಯೆ

ಬಯಲು ಸೀಮೆಯಲ್ಲಿ ಇಲ್ಲ ಮಳೆ: ಮುಂದುವರೆದ ಬರದ ಛಾಯೆ

ಬಯಲು ಸೀಮೆಯಲ್ಲಿ ಇಲ್ಲ ಮಳೆ: ಮುಂದುವರೆದ ಬರದ ಛಾಯೆ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮೂರು ದಿನ ಸುರಿದ ಮಳೆ ಮಲೆನಾಡಿನಲ್ಲಿ ಭತ್ತದ ನಾಟಿಗೆ ಅನುಕೂಲವಾಗಿದ್ದರೆ, ಕಾಫಿಗೆ ಕಂಟಕವಾಗಿದೆ. ಇನ್ನು ಬಯಲು ಸೀಮೆಯಲ್ಲಿ ಹದ ಮಳೆಯೂ ಆಗದೆ ಬರದ ಛಾಯೆ ಮುಂದುವರಿದಿದೆ.

ಜಿಲ್ಲೆಯಲ್ಲಿ ಕಳೆದ ವಾರದ ತನಕ ಎಲ್ಲೆಡೆ ಬರದ ವಾತಾವರಣ ಇತ್ತು. ಶುಕ್ರವಾರ, ಶನಿವಾರ ಮತ್ತು ಭಾನುವಾರ ಸುರಿದ ಮಳೆ ಮಲೆನಾಡಿನಲ್ಲಿ ನದಿಗಳ ಉಕ್ಕಿ ಹರಿಯುವಂತೆ ಮಾಡಿತು. ಗದ್ದೆ ಮತ್ತು ತೋಟಗಳು ಜಲಾವೃತವಾಗಿದ್ದವು. ಏಕಾಏಕಿ ಮೂರು ದಿನ ಭಾರಿ ಮಳೆ ಸುರಿದಿದ್ದರಿಂದ ಕಾಫಿಗೆ ಕೊಳೆರೋಗ ಆರಂಭವಾಗಿದೆ.

ಹವಾಮಾನ ವೈಪರೀತ್ಯ ದಿಂದ ಮೂರು ತಿಂಗಳು ಮೊದಲೇ ಹಣ್ಣಾಗುವ ಹಂತಕ್ಕೆ ಕಾಫಿ ತಲುಪಿತ್ತು. ಈಗ ಮಳೆಯಿಂದ ಕೆಲವೆಡೆ ನೆಲಕ್ಕೆ ಉದಿರಿದೆ. ಇನ್ನೂ ಹಲವೆಡೆ ಕೊಳೆರೋಗ ಕಾಣಿಸಿಕೊಂಡು ಬೆಳೆ ಹಾಳಾಗುತ್ತಿದೆ.

ಮಲೆನಾಡಿನಲ್ಲಿ ಧಾರಾಕಾರ ಮಳೆ ಇದ್ದರೂ ಬಯಲು ಸೀಮೆಯಲ್ಲಿ ಅಲ್ಲಲ್ಲಿ ತುಂತುರು ಮಳೆಯಷ್ಟೇ ಸುರಿಯಿತು. ಎರಡು ದಿನಗಳಿಂದ ಬಿಸಿಲಿನ ಜತೆಗೆ ಆಗಾಗ ಮೋಡದ ವಾತಾವರಣವಿದೆ. ಇದರಿಂದಾಗಿ ಕಡೂರು, ಅಜ್ಜಂಪುರ ಮತ್ತು ತರೀಕೆರೆ ತಾಲ್ಲೂಕು ಮತ್ತು ಚಿಕ್ಕಮಗಳೂರಿನ ಅಂಬಳೆ ಮತ್ತು ಲಕ್ಯಾ ಹೋಬಳಿಯಲ್ಲಿ ಬರದ ಛಾಯೆ ಮುಂದುವರಿದೆ.

ಜಿಲ್ಲೆಯಲ್ಲಿ ಕಳೆದ ವಾರ ಸರಾಸರಿ ಮುಂಗಾರು ಮಳೆ ಕೊರತೆ ಶೇ 43ರಷ್ಟು ಇತ್ತು. ಈಗ ಶೇ 33ಕ್ಕೆ ಇಳಿಕೆಯಾಗಿದೆ. ಆದರೆ, ಕಡೂರು, ಅಜ್ಜಂಪುರ ಮತ್ತು ತರೀಕೆರೆ ತಾಲ್ಲೂಕುಗಳಲ್ಲಿ ಕೊರತೆಯ ಪ್ರಮಾಣ ಕಡಿಮೆಯಾಗಿಲ್ಲ. ಕಳೆದ ವಾರ ಕಡೂರು ತಾಲ್ಲೂಕಿನಲ್ಲಿ ಶೇ 32ರಷ್ಟು ಮಳೆ ಕೊರತೆಯಿತ್ತು, ಈಗಲೂ ಅಷ್ಟೇ ಇದೆ. ಅಜ್ಜಂಪುರ ತಾಲ್ಲೂಕಿನಲ್ಲಿ ಕಳೆದ ವಾರ ಶೇ 47ರಷ್ಟು ಮಳೆ ಕೊರತೆ ಇತ್ತು. ಈಗ ಶೇ 46ರಷ್ಟು ಕೊರತೆ ಇದೆ. ತರೀಕೆರೆ ತಾಲ್ಲೂಕಿನಲ್ಲಿ ಶೇ 35ರಷ್ಟಿದ್ದ ಮಳೆ ಕೊರತೆ ಶೇ 30ಕ್ಕೆ ಇಳಿಕೆಯಾಗಿದೆ. ಇದರಿಂದಾಗಿ ಕೃಷಿ ಚಟುವಟಿಕೆ ಬಯಲು ಸೀಮೆಯಲ್ಲಿ ಗರಿಗೆದರಲು ಸಾಧ್ಯವಾಗಿಲ್ಲ.

97,045 ಹೆಕ್ಟೇರ್ ಬಿತ್ತನೆ ಗುರಿಯಲ್ಲಿ 8,170 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದ್ದು, ಶೇ 8ರಷ್ಟು ಮಾತ್ರ ಸಾಧನೆಯಾಗಿದೆ. ಕಳೆದ ವರ್ಷ ಈ ವೇಳೆಗಾಗಲೇ 27,510 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿತ್ತು. ಭತ್ತ, ರಾಗಿ, ಜೋಳ, ಮುಸುಕಿನ ಜೋಳ ಸೇರಿ ಏಕದಳ ಬೆಳೆಗಳ ಬಿತ್ತನೆ ಶೇ 6ರಷ್ಟು ಮಾತ್ರ ಸಾಧ್ಯವಾಗಿದೆ.

ಈ ವರ್ಷ ಆರಂಭದಿಂದಲೂ ಮಳೆ ಕೈಕೊಟ್ಟಿರುವುದರಿಂದ ರೈತರು ಬಿತ್ತನೆಗೆ ಹಿಂದೇಟು ಹಾಕುತ್ತಿದ್ದಾರೆ. ಬಿತ್ತನೆ ಮಾಡಿದ ಬಳಿಕ ಮಳೆ ಕೈಕೊಟ್ಟರೆ ಏನು ಮಾಡಬೇಕು ಎಂಬ ಆತಂಕ ಅವರಲ್ಲಿದೆ. ಕೊಳವೆಬಾವಿ ಸಂಪರ್ಕ ಇರುವ ರೈತರಷ್ಟೇ ಬಿತ್ತನೆಗೆ ಮನಸ್ಸು ಮಾಡಿದ್ದು, ಮಳೆ ಆಶ್ರಯದ ರೈತರು ಬಿತ್ತನೆಯ ಗೋಜಿಗೆ ಹೋಗುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.

ಬಯಲು ಸೀಮೆಯ ರಾಗಿಯೇ ಪ್ರಮುಖ ಬೆಳೆಯಾಗಿದ್ದು, 59 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿಯನ್ನು ಕೃಷಿ ಇಲಾಖೆ ಹೊಂದಿದೆ. ಆದರೆ, ಈವರೆಗೆ 1,296 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದ್ದು, ಶೇ 2ರಷ್ಟು ಸಾಧನೆಯಾಗಿದೆ. ರಾಗಿ ಬಿತ್ತನೆಗೆ ಆಗಸ್ಟ್‌ ಅಂತ್ಯದ ತನಕ ಅವಕಾಶ ಇದೆ. ಆದರೆ, ಕಳೆದ ವರ್ಷ ಈ ವೇಳೆಗೆ 12,678 ಹೆಕ್ಟೇರ್‌ನಲ್ಲಿ ಬಿತ್ತನೆ ಪೂರ್ಣವಾಗಿತ್ತು.

ಕಡೂರು ತಾಲ್ಲೂಕಿನಲ್ಲಿ ಅತೀ ಹೆಚ್ಚು 46 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆಯ ಗುರಿ ಹೊಂದಿದ್ದು, ಈವರೆಗೆ ಒಂದೇ ಒಂದು ಹೆಕ್ಟೇರ್‌ನಲ್ಲೂ ಬಿತ್ತನೆಯಾಗಿಲ್ಲ ಎಂದು ಕೃಷಿ ಇಲಾಖೆ ಅಂಕಿ ಅಂಶಗಳು ಹೇಳುತ್ತಿವೆ. ಅಜ್ಜಂಪುರ ತಾಲ್ಲೂಕಿನಲ್ಲಿ 8,100 ಹೆಕ್ಟೇರ್‌ನಲ್ಲಿ ಬಿತ್ತನೆಯ ಗುರಿ ಇದ್ದು, 1,230 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ತರೀಕೆರೆ ತಾಲ್ಲೂಕಿನಲ್ಲಿ 2,500 ಹೆಕ್ಟೇರ್‌ನಲ್ಲಿ ಬಿತ್ತನೆಯ ಗುರಿ ಇದ್ದು, ಈವರೆಗೆ 58 ಹೆಕ್ಟೇರ್ ಮಾತ್ರ ಬಿತ್ತನೆಯಾಗಿದೆ. ಇನ್ನು ಚಿಕ್ಕಮಗಳೂರು ತಾಲ್ಲೂಕಿನಲ್ಲಿ 2,350 ಹೆಕ್ಟೇರ್‌ನಲ್ಲಿ ಬಿತ್ತನೆಯ ಗುರಿ ಇದ್ದು, 8 ಹೆಕ್ಟೇರ್ ಮಾತ್ರ ಬಿತ್ತನೆಯಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260805-126-46332232

Post a Comment

If u have any queries, Please let us know

Previous Post Next Post
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ