
‘ಘಾಟಿಯಾನಾ ಕರ್ನಾಟಕ’ ಉಡುಪಿಯಲ್ಲಿ ಹೊಸ ಪ್ರಭೇದದ ಸಿಹಿನೀರಿನ ಏಡಿ ಪತ್ತೆ...
ಪಶ್ಚಿಮ ಘಟ್ಟಗಳು ಜೀವ ವೈವಿಧ್ಯತೆಯ ತಾಣವಾಗಿದ್ದು, ನೂರಾರು ಬಗೆಯ, ವಿವಿಧ ಜೀವಸಂಕುಲಗಳ ಆವಾಸ ಸ್ಥಾನವಾಗಿದೆ. ಇಂತಹ ವೈವಿಧ್ಯಮಯ ತಾಣದಲ್ಲಿ ಹೊಸ ಪ್ರಭೇದದ ಏಡಿಯೊಂದು ಪತ್ತೆಯಾಗಿದ್ದು, ಕರ್ನಾಟಕದ ಜೀವವೈವಿಧ್ಯತೆಗೆ ಮತ್ತೊಂದು ಗರಿಮೆ ಸಿಕ್ಕಂತಾಗಿದೆ.
ಉಡುಪಿಯ ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಬೈಂದೂರು ತಾಲ್ಲೂಕಿನ, ಕೊಲ್ಲೂರು ಸಮೀಪದ, ಮೇಗಿನಿ ವ್ಯಾಲಿ ಮೀಸಲು ಅರಣ್ಯ ಪ್ರದೇಶದಲ್ಲಿ ಈ ಹೊಸ ಪ್ರಭೇದದ ಸಿಹಿ ನೀರಿನ ಏಡಿಯನ್ನು ಗಸ್ತು ಅರಣ್ಯ ಪಾಲಕ ಅಜ್ಮೀರ್.ಕೆ ಅವರು ಪತ್ತೆ ಮಾಡಿದ್ದು, ‘ಪ್ರಜಾವಾಣಿ ಡಿಜಿಟಲ್’ ಜತೆಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಈ ಪ್ರಭೇದಕ್ಕೆ ‘ಘಾಟಿಯಾನಾ ಕರ್ನಾಟಕ’ sp.nov. ಎಂದು ವೈಜ್ಞಾನಿಕವಾಗಿ ಹೆಸರಿಸಲಾಗಿದೆ. ಈ ಸಂಶೋಧನೆಯು ‘ಸ್ಪೀಸಿಸ್’ ಜರ್ನಲ್‌ನ 2026ರ ಸಂಪುಟ 27ರಲ್ಲಿ ಪ್ರಕಟಗೊಂಡಿದೆ.
ಜೂಲಾಜಿಕಲ್ ಸರ್ವೇ ಆಫ್ ಇಂಡಿಯಾದ ಕ್ರಸ್ಟೇಶಿಯಾ ವಿಭಾಗದ ಸಂತನು ಮಿತ್ರ ಮತ್ತು ಕರ್ನಾಟಕ ಅರಣ್ಯ ಇಲಾಖೆಯ ಕೊಲ್ಲೂರು ವಲಯದ ಬೀಟ್ ಫಾರೆಸ್ಟರ್ ಅಜ್ಮೀರ್ ಕೆ. ಅವರ ಸಹಯೋಗದಲ್ಲಿ ಈ ಸಂಶೋಧನೆ ನಡೆಸಲಾಗಿದೆ.
‘ಘಟಿಯಾನಾ ಕರ್ನಾಟಕ’ ಎಂದು ಗುರುತಿಸಿರುವ ಈ ಏಡಿಯ ಪ್ರಭೇದವು ಕೊಲ್ಲೂರು ವನ್ಯಜೀವಿ ವಲಯದ ಮೇಗಿನಿ ವ್ಯಾಲಿ, ಮಾದಿಬರೆ, ಮುರ್ಕೊಡಿಹೊಲ, ಗುಂಡು ಬೇರು, ಕೊರತಿಕಲ್ ಬರೆ, ಕೊರಕೊಪ್ಪದ ಹೊಲ, ಜನ್ನಲಾಣೆ, ಅಬ್ಬಿಗುಡ್ಡೆ ಹಾಗೂ ಚಿತ್ತೂರು ಸುತ್ತಮುತ್ತಲಿನ 35 ಕಿ.ಮೀ ವ್ಯಾಪ್ತಿಯಲ್ಲಿ ಗುರುತಿಸಲಾಗಿದೆ. ಇವು ಸಮುದ್ರಮಟ್ಟದಿಂದ ಸುಮಾರು 60 ರಿಂದ 250 ಮೀಟರ್ ಎತ್ತರದ ಪ್ರದೇಶದಲ್ಲಿ ಪತ್ತೆಯಾಗಿದೆ.
7 ಘಟಿಯಾನಾ ಪ್ರಭೇದದ ಏಡಿಗಳು ಪತ್ತೆ
‘ಕರ್ನಾಟಕದಲ್ಲಿ ಈವರೆಗೆ 7 ಘಟಿಯಾನಾ ಪ್ರಭೇದದ ಏಡಿಗಳು ಪತ್ತೆಯಾಗಿವೆ. ಆದರೆ ಇವು ರಾಜ್ಯದ ಹೆಸರನ್ನು ಸೂಚಿಸುವುದಿಲ್ಲ. ರಾಜ್ಯಕ್ಕೆ ಗೌರವ ಸಮರ್ಪಿಸುವ ಉದ್ದೇಶದಿಂದಾಗಿ ಈ ಹೊಸ ಏಡಿ ಪ್ರಭೇದಕ್ಕೆ ‘ಕರ್ನಾಟಕ’ ಎಂಬ ಹೆಸರನ್ನು ನೀಡಲಾಗಿದೆ. ಇದಕ್ಕೆ ‘ಕರ್ನಾಟಕ ಘಾಟ್ ಏಡಿ’ ಎಂಬ ಸಾಮಾನ್ಯ ಹೆಸರನ್ನು ನೀಡುವಂತೆ ಪ್ರಸ್ತಾಪಿಸಲಾಗಿದೆ’ ಎಂದು ಸಂಶೋಧಕ ಅಜ್ಮೀರ್.ಕೆ ಹೇಳಿದ್ದಾರೆ.
ಇದುವರೆಗೆ 14 ಬಗೆಯ ಘಟಿಯಾನ ಏಡಿ ಪ್ರಭೇದಗಳನ್ನು ಪತ್ತೆ ಮಾಡಲಾಗಿದೆ. ಆ ಪೈಕಿ 7 ಪ್ರಭೇದಗಳು ಕರ್ನಾಟಕದಲ್ಲಿವೆ. ಇವುಗಳ ಜತೆಗೆ ಹೊಸದಾಗಿ ಪತ್ತೆಯಾಗಿರುವ ‘ಘಟಿಯಾನಾ ಕರ್ನಾಟಕ’ 8ನೇ ಹೊಸ ಏಡಿಯ ಪ್ರಭೇದವಾಗಿದೆ. ಮಾತ್ರವಲ್ಲದೆ, ಈ ವರ್ಗದ ಒಟ್ಟು ಪ್ರಭೇದಗಳ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.
ಇತ್ತೀಚೆಗೆ, ಕರ್ನಾಟಕದ ಕಾರವಾರದಲ್ಲಿ ಪತ್ತೆಹಚ್ಚಲಾದ 'ಘಟಿಯಾನಾ ಧೃತಿಯರಮ್' ಪ್ರಭೇದದ ಗಂಡು ಏಡಿಯ ಮೊದಲ ಗೊನೋಪಾಡ್ (G1) ರೂಪದ ವೈಜ್ಞಾನಿಕ ರಚನೆಯನ್ನು ಈ ಪ್ರಭೇದ ಹೋಲುತ್ತದೆ.
ಆದರೆ, ಕ್ಯಾರಪೇಸ್‌ನ ರಚನೆ, ಗಂಡಿನ ಪ್ಲಿಯೋನಲ್ ಸೋಮೈಟ್ 6, ಹೆಣ್ಣು ವಲ್ವೆಯ (vulvae) ರಚನೆ ಹಾಗೂ ದೇಹದ ಬಣ್ಣದ ವಿನ್ಯಾಸ ಸೇರಿ ವಿಶಿಷ್ಟ ರೂಪ ವೈಜ್ಞಾನಿಕ ಲಕ್ಷಣಗಳ ಆಧಾರದ ಮೇಲೆ ‘ಘಟಿಯಾನ ಧೃತಿಯರಮ್' ಹಾಗೂ ಇತರೆ ಘಟಿಯಾನ ಪ್ರಭೇದಗಳಿಗಿಂತ ಇದು ಭಿನ್ನವಾಗಿರುವುದು ಸಾಬೀತಾಗಿದೆ.
ಏಡಿಯ ಗಾತ್ರ ಮತ್ತು ಆಕಾರ
ಹೋಲೋಟೈಪ್ ಗಂಡು ಏಡಿಯ ಕ್ಯಾರಪೇಸ್ (ಕವಚ) ಅಗಲ ಸರಿಸುಮಾರು 21.3 ಮಿಮೀ ಆಗಿರುತ್ತದೆ. ಅದರ ಉದ್ದ 13.8 ಮಿಮೀ ಆಗಿದೆ. ಕವಚದ ಉದ್ದ ಮತ್ತು ಅಗಲದ ಅನುಪಾತ ಸುಮಾರು 1.54 ಆಗಿದೆ. ಪ್ಯಾರಾಟೈಪ್ ಹೆಣ್ಣು ಏಡಿಯ ಕ್ಯಾರಪೇಸ್‌ನ ಅಗಲ 24.4 ಮಿಮೀ ಹಾಗೂ ಉದ್ದ 15.4 ಮಿಮೀ ಆಗಿದ್ದು, ಕವಚದ ಉದ್ದ ಮತ್ತು ಅಗಲದ ಅನುಪಾತ ಸುಮಾರು 1.58 ಆಗಿದೆ.
ಗಂಡು ಏಡಿ, ಗಾಢ ನೇರಳೆ ಬಣ್ಣ ಮತ್ತು ಮುಂಭಾಗ ‘ವಿ’ ಆಕಾರದ ತಿಳಿ ಗುಲಾಬಿ ಬಣ್ಣದಿಂದ ಕೂಡಿರುತ್ತದೆ. ಹೆಣ್ಣು ಏಡಿ ಬೂದು, ನೇರಳೆ ಹಾಗೂ ಗಾಢ ಬೂದು, ಕಂದು ಬಣ್ಣಗಳ ಮಿಶ್ರಣದಿಂದ ಕೂಡಿರುತ್ತದೆ. ಇವು ಮಳೆಗಾಲದಲ್ಲಿ ಸಂತಾನೋತ್ಫತ್ತಿ ನಡೆಸುತ್ತವೆ.
’ಇವುಗಳ ಆವಾಸಸ್ಥಾನವು ನಿತ್ಯಹರಿದ್ವರ್ಣ ಮತ್ತು ಅರೆ ನಿತ್ಯಹರಿದ್ವರ್ಣ ಕಾಡುಗಳಿಂದ ಕೂಡಿರುವುದರಿಂದ, ಬೇಸಿಗೆಯಲ್ಲಿಯೂ ಇಲ್ಲಿ ತೇವಾಂಶದ ಪ್ರಮಾಣವು ಹೆಚ್ಚಾಗಿರುತ್ತದೆ. ಮಾವಿನಕಾರು, ಜಡ್ಕಲ್ ಮತ್ತು ಸೌಪರ್ಣಿಕಾ ನದಿಗಳು ಹಲವು ತಿಂಗಳುಗಳ ಕಾಲ ಹರಿಯುವುದರಿಂದ, ಮರಗಳ ರಂಧ್ರಗಳು ಹಾಗೂ ಇತರೆ ನೈಸರ್ಗಿಕ ಕುಳಿಗಳಲ್ಲಿ ಬೇಸಿಗೆಯ ಅವಧಿಯಲ್ಲಿಯೂ ನೀರು ಸಂಗ್ರಹವಾಗಿರುತ್ತದೆ. ಇಂತಹ ರಂಧ್ರಗಳಲ್ಲಿ ಈ ಏಡಿ ಬದುಕಲು ಅನುಕೂಲಕರವಾಗಿರುತ್ತದೆ. ಸುತ್ತಮುತ್ತಲಿನ ಪ್ರದೇಶಗಳು ಒಣಗಿದರು ಸಹ, ಈ ಸೂಕ್ಷ್ಮ ಆವಾಸಸ್ಥಳಗಳಲ್ಲಿ ಅಗತ್ಯವಾದ ತೇವಾಂಶ ಮತ್ತು ನೀರು ಲಭ್ಯವಿರುವುದರಿಂದ, ಈ ಏಡಿಗಳು ಬೇಸಿಗೆಯಲ್ಲಿಯೂ ಕಂಡುಬರುತ್ತವೆ’ ಎನ್ನುತ್ತಾರೆ ಅಜ್ಮೀರ್.ಕೆ.
ನೀರು ತುಂಬಿದ ರಂಧ್ರಗಳಲ್ಲಿ ಹೆಚ್ಚಿನ ತೇವಾಂಶ ಇರುವುದರಿಂದ, ಅವು ತಮ್ಮ ಕಿವಿರುಗಳಲ್ಲಿರುವ ತೇವಾಂಶವನ್ನು ಕಾಪಾಡಿಕೊಳ್ಳುವುದರೊಂದಿಗೆ, ಉಸಿರಾಟಕ್ಕೂ ಸಹಾಯವಾಗುತ್ತದೆ. ಈ ರಂಧ್ರಗಳು ನೇರ ಸೂರ್ಯನ ಬೆಳಕು, ಅಧಿಕ ತಾಪಮಾನ ಮತ್ತು ಪರಭಕ್ಷಕಗಳಿಂದ ರಕ್ಷಣೆ ನೀಡುತ್ತವೆ.
‘ಈ ಏಡಿಗಳು ಆಳವಾದ ರಂಧ್ರಗಳನ್ನು ಕೊರೆಯುತ್ತವೆ. ಹೀಗಾಗಿ ಅಂತರ್ಜಲ ವೃದ್ಧಿಗೂ ಕೊಡುಗೆ ನೀಡುತ್ತವೆ ಎಂಬುದು ಅಧ್ಯಯನದಲ್ಲಿ ತಿಳಿದು ಬಂದಿದೆ. ಈ ಕುಳಿಗಳಲ್ಲಿ ಸಂಗ್ರಹವಾಗುವ ಎಲೆ, ಕೊಳೆಯುತ್ತಿರುವ ಸಸ್ಯದ ಭಾಗ, ತೊಗಟೆ, ಪಾಚಿ ಹಾಗೂ ಇತರ ಸಾವಯವ ಪದಾರ್ಥಗಳು ಆಹಾರವಾಗಿ ಸೇವಿಸಿ ಈ ಏಡಿಗಳು ಬದುಕುತ್ತವೆ’ ಎಂದು ಅಜ್ಮೀರ್.ಕೆ ಹೇಳುತ್ತಾರೆ.