ಮೈಸೂರು | ‘ಕರುನಾಡ ಸವಿಯೂಟ’ ಸ್ಪರ್ಧೆ: ಘಮ್ಮೆಂದ ಅಡುಗೆಗೆ ತಲೆದೂಗಿದ ತೀರ್ಪುಗಾರರು

ಮೈಸೂರು | ‘ಕರುನಾಡ ಸವಿಯೂಟ’ ಸ್ಪರ್ಧೆ: ಘಮ್ಮೆಂದ ಅಡುಗೆಗೆ ತಲೆದೂಗಿದ ತೀರ್ಪುಗಾರರು

ಮೈಸೂರು | ‘ಕರುನಾಡ ಸವಿಯೂಟ’ ಸ್ಪರ್ಧೆ: ಘಮ್ಮೆಂದ ಅಡುಗೆಗೆ ತಲೆದೂಗಿದ ತೀರ್ಪುಗಾರರು

ಮೈಸೂರು: ಘಮ್ಮೆನ್ನುವ ಬಿರಿಯಾನಿ, ಬಾಯಲ್ಲಿ ನೀರೂರಿಸುವ ಬಗೆಬಗೆಯ ಹೋಳಿಗೆ, ಮೈಸೂರು ಸೀಮೆಯ ನಾಟಿಕೋಳಿ ಸಾರಿನ ಜೊತೆಗೆ ದುಂಡನೆಯ ಮುದ್ದೆ.... ಆಟಿ ಸೊಪ್ಪಿನ ಸಾರು, ಹುರುಳಿ ಪಾಯಸ....

ಹೀಗೆ ಹತ್ತು ಹಲವು ವೈವಿಧ್ಯ ಖಾದ್ಯಗಳು ಒಂದೇ ವೇದಿಕೆಯಲ್ಲಿ ಪ್ರದರ್ಶನವಾವು. ನೂರಕ್ಕೂ ಹೆಚ್ಚು ಸ್ಪರ್ಧಿಗಳು ಸಿದ್ಧ‍ಪಡಿಸಿದ ಅಡುಗೆಯನ್ನು ಸವಿದು ತೀರ್ಪು ಬರೆಯುವಷ್ಟರಲ್ಲಿ ತೀರ್ಪುಗಾರರೇ ಸುಸ್ತಾದರು.

‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಬಳಗವು ‘ಫ್ರೀಡಂ ಕುಕ್ಕಿಂಗ್‌ ಆಯಿಲ್‌’ ಸಹಯೋಗದಲ್ಲಿ ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಶನಿವಾರ ಆಯೋಜಿಸಿದ್ದ ‘ಕರುನಾಡ ಸವಿಯೂಟ’ ಎಂಬ ಅಡುಗೆ ಹಬ್ಬವು ಕೇವಲ ಸ್ಪರ್ಧೆಗೆ ಸೀಮಿತವಾಗದೇ ನಾಡಿನ ಪಾಕ ವೈವಿಧ್ಯವನ್ನು ಬಿಂಬಿಸುವ ವೇದಿಕೆಯಾಯಿತು. ಮೈಸೂರು ಮಾತ್ರವಲ್ಲದೆ, ಮಂಡ್ಯ, ಚಾಮರಾಜನಗರ, ಕೊಡಗು, ಹಾಸನ ಜಿಲ್ಲೆಗಳಿಂದಲೂ ಸ್ಪರ್ಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಸಸ್ಯಾಹಾರದ ಜೊತೆಗೆ ಮಾಂಸಾಹಾರದ ಬಗೆಬಗೆಯ ಆಹಾರಗಳಿದ್ದವು. ಹತ್ತನೇ ತರಗತಿಯ ವಿದ್ಯಾರ್ಥಿನಿಯಿಂದ ಹಿಡಿದು 80–90ರ ಹರೆಯದ ಅಜ್ಜಿಯಂದಿರವರೆಗೆ ವಿವಿಧ ವಯೋಮಾನದವರು ಸ್ಪರ್ಧಿಗಳಾಗಿ ಬಂದಿದ್ದರು. ಪುರುಷರೂ ಪಾಲ್ಗೊಂಡು ಗಮನ ಸೆಳೆದರು.

ಸೆಲೆಬ್ರಿಟಿ ಪಾಕಪ್ರವೀಣರಾದ ಸಿಹಿಕಹಿ ಚಂದ್ರು ಹಾಗೂ ಪ್ರಭು ಶೆಟ್ಟಿ ತೀರ್ಪುಗಾರರಾಗಿ ಸ್ಪರ್ಧಿಗಳ ಉತ್ಸಾಹ ಹೆಚ್ಚಿಸಿದರು. ಪ್ರಭು ಶೆಟ್ಟಿ ಎರಡೇ ನಿಮಿಷದಲ್ಲಿ ಸಿದ್ಧಪಡಿಸಬಹುದಾದ ‘ಗಾರ್ಲಿಕ್ ರೈಸ್’ ಅಡುಗೆ ಹೇಳಿಕೊಟ್ಟರು.

ಅಕ್ಕಿರೊಟ್ಟಿ, ಶ್ಯಾವಿಗೆ ನಾಟಿಕೋಳಿ ಸಾರಿನ ಜೊತೆಗೆ ಕ್ಯಾರೆಟ್ ಬದಾಮಿ ಹಲ್ವಾ ಉಣಬಡಿಸಿದ ಬೋಗಾದಿಯ ಪುಷ್ಪಲತಾ ಅವರು ತೀರ್ಪುಗಾರರ ಮನಗೆದ್ದರು. ಮೊದಲ ಬಹುಮಾನವಾಗಿ ₹18 ಸಾವಿರ ನಗದಿನ ಜೊತೆಗೆ ಸೀರೆಯನ್ನೂ ಉಡುಗೊರೆಯಾಗಿ ಪಡೆದರು. ಈಚೆಗಷ್ಟೇ ಅಡುಗೆ ಕಲಿತು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಫೈಜಾ ಸಿದ್ದಿಕ್‌ ಮೊದಲ ಪ್ರಯತ್ನದಲ್ಲೇ ದ್ವಿತೀಯ ಬಹುಮಾನದ ಜೊತೆಗೆ ₹15 ಸಾವಿರ ನಗದು ಪುರಸ್ಕಾರ ಪಡೆದರು. ವಿ.ಎ. ವಿಜಯಾ ತೃತೀಯ ಬಹುಮಾನವಾಗಿ ₹10 ಸಾವಿರ ಪಡೆದರು. ಇದಲ್ಲದೇ ಏಳು ಮಂದಿಗೆ ಸಮಾಧಾನಕರ ಬಹುಮಾನವಾಗಿ ನಗದು ಜೊತೆಗೆ ಉಡುಗೊರೆ ನೀಡಲಾಯಿತು. ಭಾಗವಹಿಸಿದ್ದ ಎಲ್ಲರಿಗೂ ಗಿಫ್ಟ್‌ ಕೂಪನ್‌ ಜೊತೆಗೆ ಪ್ರಮಾಣಪತ್ರವನ್ನೂ ನೀಡಲಾಯಿತು.

ಸ್ಪರ್ಧೆಯನ್ನು ‘ಎಲ್‌.ಜಿ. ಸಂಯೋಜಿತ ಹಿಂಗು’ ಪ್ರಸ್ತುತಪಡಿಸಿದ್ದು, ಸ್ಪರ್ಧೆಗೆ ಡೇರಿ ಪಾರ್ಟನರ್‌ ಪ್ರಾಯೋಜಕರಾಗಿ ‘ನಂದಿನಿ’, ಕುಕ್ಕಿಂಗ್ ಗ್ಯಾಸ್ ಪಾರ್ಟ್‌ನರ್‌ ಆಗಿ ‘ಗೇಲ್‌ ಗ್ಯಾಸ್’, ರೆಸ್ಟೊರೆಂಟ್ ಪಾರ್ಟ್‌ನರ್‌ ಆಗಿ ‘ದಕ್ಷಿಣ ಪಾಕ’, ಸಹ ಪ್ರಾಯೋಜಕರಾಗಿ ‘ದಿ ಚೆನ್ನೈ ಸಿಲ್ಕ್ಸ್‌–ಶ್ರೀಕುಮರನ್‌ ಜ್ಯುವೆಲರ್ಸ್‌’, ‘ಪೂರ್ವಿಕಾ ಮೊಬೈಲ್’, ‘ವೆಂಕೋಬ್ ಚಿಕನ್’, ‘ಶುಭಪ್ರದ ಮೈಸೂರು’ ಸಹಯೋಗ ನೀಡಿದವು.

ಎಲ್‌ಜಿ ಇಂಗು ಕಂಪನಿಯ ಪ್ರಾದೇಶಿಕ ಮಾರಾಟ ವ್ಯವಸ್ಥಾಪಕ ಅಶೋಕ್‌ಕುಮಾರ್, ಫ್ರೀಡಂ ಆಯಿಲ್ ಕಂಪನಿಯ ಬ್ರ್ಯಾಂಡ್ ಮ್ಯಾನೇಜರ್ ಹರ್ಷ್ ರಸ್ತೋಗಿ, ಶುಭಪ್ರದ ಕಂಪನಿಯ ಸಂಸ್ಥಾಪಕಿ ದಿವ್ಯಶ್ರೀ ಹಾಗೂ ‘ಪ್ರಜಾವಾಣಿ’ ಮೈಸೂರು ಬ್ಯುರೊ ಮುಖ್ಯಸ್ಥ ಗವಿ ಬ್ಯಾಳಿ, ‘ಡೆಕ್ಕನ್‌ ಹೆರಾಲ್ಡ್‌’ ಬ್ಯುರೊ ಮುಖ್ಯಸ್ಥ ಟಿ.ಆರ್. ಸತೀಶ್‌ಕುಮಾರ್, ಪ್ರಸರಣ ವಿಭಾಗದ ಹಿರಿಯ ವ್ಯವಸ್ಥಾಪಕ ಎಸ್. ಪ್ರಕಾಶ್, ಜಾಹೀರಾತು ವಿಭಾಗದ ಹಿರಿಯ ಶಾಖಾ ವ್ಯವಸ್ಥಾಪಕ ಕೆ.ಎನ್. ಸ್ಕಂದನ್ ರಾವ್‌, ರೂಪದರ್ಶಿ ನಂದಿನಿ ಬಹುಮಾನ ವಿತರಿಸಿದರು. ಟಿಪಿಎಂಎಲ್ ಬ್ರಾಂಡ್ ವಿಭಾಗದ ಪ್ರಮೋದ್, ಅಂಗಿರಾ ಬಿಸ್ವಾಸ್‌, ಐಶ್ವರ್ಯಾ ಜೊತೆಗಿದ್ದರು. ಯಶಸ್ವಿನಿ ನಿರೂಪಿಸಿದರು.

ಸಮಾಧಾನಕರ ಬಹುಮಾನ ಪಡೆದವರು

ಎಂ. ಪ್ರಜ್ವಲ್‌ಸುಜಾತಾ ರಾಮಕೃಷ್ಣಸಾವಿತ್ರಿ ಎ.ಪಿ. ಗೌಡಎಂ.ಆರ್. ಚಂಚಲಾಆರ್. ರೇಖಾಹನೊಚ್‌ ಫ್ರಾಂಕ್ಲಿನ್‌ಎಂ.ಎಸ್. ಸೀಮಾ

ತೀರ್ಪುಗಾರರು ಹೇಳಿದ್ದೇನು?

ಇಂದಿನ ಸ್ಪರ್ಧೆಯಲ್ಲಿ ನೂರಕ್ಕೂ ಹೆಚ್ಚು ಬಗೆಯ ಆಹಾರಗಳನ್ನು ಸವಿದು ತೀರ್ಪು ನೀಡುವುದು ನಮಗೆ ಸವಾಲಾಯಿತು. ಸ್ಪರ್ಧೆಗಳಲ್ಲಿ ನಾವು ಸಿದ್ಧಪಡಿಸುವ ಆಹಾರ ವಿಶೇಷ ಆಗಿರಬೇಕು. ಅದರಲ್ಲಿ ಸೃಜನಶೀಲತೆ ಇರಬೇಕು. ಅಷ್ಟೇ ಚೆಂದವಾಗಿ ಪ್ರಸ್ತುತಪಡಿಸಬೇಕು. ನಾಲಿಗೆಗಿಂತ ಮೊದಲು ನಮ್ಮ ಕಣ್ಣು, ಮೂಗು ಆಹಾರವನ್ನು ಗಮನಿಸುತ್ತವೆ. ನಾಲಿಗೆ ಇಷ್ಟಪಟ್ಟದ್ದನ್ನು ಮನಸ್ಸು ಇಷ್ಟಪಡುತ್ತದೆ–ಸಿಹಿಕಹಿ ಚಂದ್ರು

ಅಡುಗೆಮನೆ ದೇವಸ್ಥಾನ ಇದ್ದಂತೆ. ಅಡುಗೆ ಚೆನ್ನಾಗಿದ್ದರೆ ನಮ್ಮ ಆರೋಗ್ಯವೂ ಚೆನ್ನಾಗಿರುತ್ತದೆ. ಪ್ರೀತಿಯಿಂದ ಮಾಡಿದರೆ ಸುಮಾರಾದ ಅಡುಗೆಯೂ ಸೂಪರ್ ಆಗುತ್ತದೆ. ಏನ್ನನ್ನೇ ಮಾಡಿದರೂ ವಿಭಿನ್ನವಾಗಿರಬೇಕು. ಆಗ ತೀರ್ಪುಗಾರರ ಗಮನ ಸೆಳೆಬಹುದು. ಜನರಿಗೂ ಇಷ್ಟ ಆಗುತ್ತದೆ –ಪ್ರಭು ಶೆಟ್ಟಿ, ಪಾಕಪ್ರವೀಣ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260816-36-223828743

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ