ಕಲಬುರಗಿ| ದಶಕ ಕಳೆದರೂ ಹೊಸ ತಾಲ್ಲೂಕಿಗೆ ಸ್ಥಳಾಂತರವಾಗದ ಕಚೇರಿಗಳು; ತಪ್ಪದ ಅಲೆದಾಟ

ಕಲಬುರಗಿ| ದಶಕ ಕಳೆದರೂ ಹೊಸ ತಾಲ್ಲೂಕಿಗೆ ಸ್ಥಳಾಂತರವಾಗದ ಕಚೇರಿಗಳು; ತಪ್ಪದ ಅಲೆದಾಟ

ಕಲಬುರಗಿ| ದಶಕ ಕಳೆದರೂ ಹೊಸ ತಾಲ್ಲೂಕಿಗೆ ಸ್ಥಳಾಂತರವಾಗದ ಕಚೇರಿಗಳು; ತಪ್ಪದ ಅಲೆದಾಟ

ಕಲಬುರಗಿ: ರಾಜ್ಯ ಸರ್ಕಾರವು ಸುಗಮ ಆಡಳಿತದ ದೃಷ್ಟಿಯಿಂದ ಹಾಗೂ ನಾಗರಿಕರ ಒತ್ತಡಕ್ಕೆ ಮಣಿದು ಹಳೆಯ ತಾಲ್ಲೂಕುಗಳಿಂದ ಪ್ರತ್ಯೇಕಿಸಿ ಶಹಾಬಾದ್, ಕಾಳಗಿ, ಯಡ್ರಾಮಿ ಹಾಗೂ ಕಮಲಾಪುರ ತಾಲ್ಲೂಕುಗಳನ್ನು ಸೃಜಿಸಿ ದಶಕ ಕಳೆಯುತ್ತಾ ಬಂದರೂ ಬಹುತೇಕ ಕಚೇರಿಗಳು ಇನ್ನೂ ಹಳೆಯ ತಾಲ್ಲೂಕು ಕೇಂದ್ರಗಳಲ್ಲಿಯೇ ಉಳಿದಿವೆ.

ಇದರಿಂದಾಗಿ ಕಚೇರಿ ಕೆಲಸಗಳಿಗಾಗಿ ಹಳೆಯ ತಾಲ್ಲೂಕು ಕೇಂದ್ರಗಳಿಗೆ ಸಾರ್ವಜನಿಕರು, ರೈತರು, ಮಹಿಳೆಯರು ಎಡತಾಕುವುದು ತಪ್ಪಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿರುವ ಸಂದರ್ಭದಲ್ಲಿ ಕಂದಾಯ ಖಾತೆಯನ್ನು ನಿರ್ವಹಿಸುತ್ತಿದ್ದ ಕೃಷ್ಣ ಭೈರೇಗೌಡ ಅವರು ರಾಜ್ಯದ ಹೊಸ ತಾಲ್ಲೂಕುಗಳಲ್ಲಿ ಪ್ರಜಾಸೌಧಗಳನ್ನು ನಿರ್ಮಿಸಲು ತೀರ್ಮಾನಿಸಿ ಅದಕ್ಕಾಗಿ ಜಾಗ ಗುರುತಿಸುವಂತೆ ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದ್ದರು. ಅದರಂತೆ ಕಲಬುರಗಿ ಜಿಲ್ಲೆಯಲ್ಲಿಯೂ ಪ್ರಜಾಸೌಧಗಳ ನಿರ್ಮಾಣಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ)ಯ ಅನುದಾನದಲ್ಲಿ ಪ್ರಜಾಸೌಧಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಆದರೆ, ಸೌಧಕ್ಕೆ ಸ್ಥಳಾಂತರವಾಗಬೇಕಿರುವ ಕಚೇರಿಗಳು ಇನ್ನೂ ಹಳೆಯ ತಾಲ್ಲೂಕಿನಲ್ಲಿಯೇ ಉಳಿದಿವೆ.

ತಹಶೀಲ್ದಾರ್ ಮತ್ತು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿ ಸೇರಿದಂತೆ ಕೇವಲ ಬೆರಳೆಣಿಕೆಯ ಕಚೇರಿಗಳಷ್ಟೇ ಹೊಸ ತಾಲ್ಲೂಕಿಗೆ ಸ್ಥಳಾಂತರವಾಗಿವೆ. ಉಳಿದಂತೆ ಜಮೀನು, ನಿವೇಶನಗಳ ಖರೀದಿ ಮಾರಾಟಕ್ಕೆ ಅಗತ್ಯವಾದ ಉಪ ನೋಂದಣಾಧಿಕಾರಿಗಳ ಕಚೇರಿ, ಶಿಕ್ಷಕರು, ವಿದ್ಯಾರ್ಥಿಗಳ ಅನುಕೂಲಕ್ಕಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ವಸತಿ ನಿಲಯಗಳ ನಿರ್ವಹಣೆ, ಇಲಾಖೆಯ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ, ಬಿಸಿಎಂ ಹಾಗೂ ಅಲ್ಪಸಂಖ್ಯಾತರ ಇಲಾಖೆ ವಿಸ್ತೀರ್ಣಾಧಿಕಾರಿಗಳ ಕಚೇರಿ, ಮಕ್ಕಳ ಅಭಿವೃದ್ಧಿ ಕಾರ್ಯಕ್ರಮ ಅಧಿಕಾರಿಗಳ (ಸಿಡಿಪಿಒ) ಕಚೇರಿ ಸ್ಥಳಾಂತರಗೊಂಡಿಲ್ಲ.

ರೈತರ ಬೆಳೆ ವಿಮೆ, ಕೃಷಿ ಹೊಂಡ, ಬೀಜ, ಗೊಬ್ಬರಗಳ ವಿತರಣೆ ಕುರಿತ ಕೆಲಸಗಳನ್ನು ಮೇಲ್ವಿಚಾರಣೆ ನಡೆಸುವ ಕೃಷಿ ಸಹಾಯಕ ನಿರ್ದೇಶಕರ ಕಚೇರಿ, ತೋಟಗಾರಿಕೆಯಲ್ಲಿ ತೊಡಗಿರುವ ರೈತರಿಗೆ ಸವಲತ್ತುಗಳನ್ನು ಒದಗಿಸುವ ತೋಟಗಾರಿಕೆ ಇಲಾಖೆ ಕಚೇರಿ, ತಾಲ್ಲೂಕು ಆಸ್ಪತ್ರೆ, ಸಮಯದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾಮೀಣ ಪ್ರದೇಶದಲ್ಲಿನ ಆರೋಗ್ಯ ಉಪಕೇಂದ್ರಗಳ ಮೇಲ್ವಿಚಾರಣೆ ನಡೆಸುವ ಹಾಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆರೋಗ್ಯ ಕಾರ್ಯಕ್ರಮಗಳು, ಲಸಿಕೆಗಳ ನೀಡುವಿಕೆ ಸೇರಿದಂತೆ ಆರೋಗ್ಯ ಸಿಬ್ಬಂದಿ ಸೇವೆಗಳ ಉಸ್ತುವಾರಿ ವಹಿಸುವ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಕಾರ್ಮಿಕ, ಅಗ್ನಿಶಾಮಕ, ಅರಣ್ಯ, ಆರ್‌ಡಿಪಿಆರ್ ಇಲಾಖೆಯಡಿ ಬರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ವಿದ್ಯುತ್ ಅವಘಡ ಸಂಭವಿಸಿದ ಸಂದರ್ಭದಲ್ಲಿ ಅಗತ್ಯವಾಗಿರುವ ಅಗ್ನಿಶಾಮಕ ಠಾಣೆ, ತಾಲ್ಲೂಕಿನ ಹಸಿರೀಕರಣ, ವನ್ಯಜೀವಿಗಳ ಪಾಲನೆಗೆ ನೆರವಾಗುವ ಅರಣ್ಯ ಇಲಾಖೆ, ಎಪಿಎಂಸಿ ಮಾರುಕಟ್ಟೆ, ಪಶು ವೈದ್ಯಕೀಯ ಇಲಾಖೆ ಸೇರಿದಂತೆ ರೈತರು, ಮಹಿಳೆಯರು, ಸಾರ್ವಜನಿಕರಿಗೆ ನೆರವಾಗುವ ಬಹುತೇಕ ಇಲಾಖೆಗಳ ಕಚೇರಿಗಳು ಇನ್ನೂ ಸ್ಥಳಾಂತರಗೊಂಡಿಲ್ಲ.

ನಿತ್ಯದ ಕೆಲಸಗಳಿಗಾಗಿ ಕಚೇರಿಗಳಿಗೆ ಹಳೆಯ ತಾಲ್ಲೂಕು ಕೇಂದ್ರಗಳಿಗೆ ಅಲೆಯುವುದು ತಪ್ಪಿಲ್ಲ ಎನ್ನುತ್ತಾರೆ ಹೊಸ ತಾಲ್ಲೂಕಿಗೆ ಸೇರ್ಪಡೆಯಾಗಿರುವ ಗ್ರಾಮಸ್ಥರು.

ಚಿತ್ತಾಪುರ ತಾಲ್ಲೂಕನ್ನು ವಿಭಜಿಸಿ ಕೆಲ ಗ್ರಾಮಗಳನ್ನು ಶಹಾಬಾದ್‌ಗೆ ಇನ್ನೂ ಕೆಲ ಗ್ರಾಮಗಳನ್ನು ಕಾಳಗಿ ತಾಲ್ಲೂಕಿಗೆ ಸೇರಿಸಲಾಗಿದೆ. ಹೀಗಾಗಿ, ಎರಡೂ ತಾಲ್ಲೂಕಿನ ನಾಗರಿಕರು ಚಿತ್ತಾಪುರಕ್ಕೆ ಹೋಗಬೇಕಿದೆ. ಚಿತ್ತಾಪುರ–ಕಾಳಗಿ ಸಂಪರ್ಕಿಸುವ ರಸ್ತೆ ತೀವ್ರವಾಗಿ ಹದಗೆಟ್ಟಿದ್ದು, ಬಹುತೇಕ ಸಮಯ ಪ್ರಯಾಣದಲ್ಲಿ ಕಳೆಯಬೇಕಾಗುತ್ತದೆ. ಕಾಳಗಿ ತಾಲ್ಲೂಕು ವ್ಯಾಪ್ತಿಯಲ್ಲಿನ ಇನ್ನಷ್ಟು ಗ್ರಾಮಗಳು ಮೊದಲು ಚಿಂಚೋಳಿ ತಾಲ್ಲೂಕಿನಲ್ಲಿದ್ದವು. ಹೀಗಾಗಿ, ಅಲ್ಲಿಗೂ ಅಲೆದಾಟ ತಪ್ಪಿಲ್ಲ.

ನನೆಗುದಿಗೆ ಬಿದ್ದ ಪ್ರಜಾಸೌಧ ಕಟ್ಟಡ

ಒಂದು ಕಾಲದಲ್ಲಿ ಭಾರಿ ಕೈಗಾರಿಕೆಗಳ ತಾಣವಾಗಿದ್ದ ಶಹಾಬಾದ್‌ನಲ್ಲಿ ನಗರಸಭೆ ಇದ್ದರೂ ತಾಲ್ಲೂಕು ಕೇಂದ್ರವಾಗಿರಲಿಲ್ಲ. ಕೆಲ ವರ್ಷಗಳ ಹಿಂದೆ ಶಹಾಬಾದ್ ತಾಲ್ಲೂಕು ಎಂದು ಘೋಷಣೆ ಮಾಡಲಾಗಿದೆ. ಆದರೆ, ಪ್ರಜಾಸೌಧ ನಿರ್ಮಾಣಕ್ಕೆ ಗುರುತಿಸಲಾಗಿದ್ದ ಜಾಗದ ಕುರಿತ ವಿವಾದ ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಬಾಕಿ ಇರುವುದರಿಂದ ಇನ್ನೂ ಪ್ರಜಾಸೌಧ ಕಟ್ಟಡ ನಿರ್ಮಾಣವಾಗಿಲ್ಲ.

ನಗರದ ಕಾಲೇಜೊಂದಕ್ಕೆ ಸರ್ಕಾರದಿಂದ ಭೋಗ್ಯಕ್ಕೆ ನೀಡಲಾದ ನಾಲ್ಕು ಎಕರೆ ಜಾಗದಲ್ಲಿಯೇ ಪ್ರಜಾಸೌಧ ನಿರ್ಮಿಸುವ ಪ್ರಸ್ತಾವ ಇದೆ ಎಂದು ಮೂಲಗಳು ತಿಳಿಸಿವೆ.

‍ಪ್ರಸ್ತುತ ಶಹಾಬಾದ್ ತಹಶೀಲ್ದಾರ್ ಕಚೇರಿಯು ಹಳೆಯ ಪೊಲೀಸ್ ಠಾಣೆಗೆ ಸೇರಿದ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿದೆ. ತಾಲ್ಲೂಕು ಪಂಚಾಯಿತಿ ಕಚೇರಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿದೆ.

ಕಮಲಾಪುರಕ್ಕೆ ಬೇಕು 100 ಹಾಸಿಗೆ ಆಸ್ಪತ್ರೆ

ಕಲಬುರಗಿ–ಬೀದರ್ ಮಧ್ಯದಲ್ಲಿರುವ ಕಮಲಾ‍ಪುರ ತಾಲ್ಲೂಕಿನ ಹೆದ್ದಾರಿಯಲ್ಲಿ ಆಗಾಗ್ಗೆ ಭೀಕರ ರಸ್ತೆ ಅಪಘಾತಗಳು ನಡೆಯುತ್ತವೆ. ಅಂತಹ ಸಂದರ್ಭದಲ್ಲಿ ಸುಮಾರು 42 ಕಿ.ಮೀ. ದೂರದಲ್ಲಿರುವ ಕಲಬುರಗಿ ಆಸ್ಪತ್ರೆಗೆ ಗಾಯಾಳುಗಳನ್ನು ತರಬೇಕು. ಹೈದರಾಬಾದ್‌ನಿಂದ ಗೋವಾಕ್ಕೆ ಹೋಗುತ್ತಿದ್ದ ಖಾಸಗಿ ಬಸ್ ಬೆಂಕಿಗೆ ಆಹುತಿಯಾದಾಗ ಗಾಯಾಳುಗಳನ್ನು ಕಲಬುರಗಿಗೆ ತರಲಾಗಿತ್ತು. ಇತ್ತೀಚೆಗೆ ಎರಡು ಕೆಕೆಆರ್‌ಟಿಸಿ ಬಸ್‌ಗಳ ಮಧ್ಯೆ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಚಾಲಕನನ್ನು ಕಲಬುರಗಿಗೆ ತರುವಷ್ಟರಲ್ಲಿ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು. ಕಮಲಾಪುರದಲ್ಲಿಯೇ ಟ್ರಾಮಾ ಕೇರ್ ಸೌಲಭ್ಯವನ್ನು ಒಳಗೊಂಡ 100 ಬೆಡ್ ತಾಲ್ಲೂಕು ಆಸ್ಪತ್ರೆಯನ್ನು ಆರಂಭಿಸಿದರೆ ಎಷ್ಟೋ ಪ್ರಾಣಗಳನ್ನು ಉಳಿಸಬಹುದು ಎನ್ನುತ್ತಾರೆ ಕಮಲಾಪುರ ತಾಲ್ಲೂಕಿನ ಕಲಮೂಡ ನಿವಾಸಿ ಚನ್ನಬಸಪ್ಪ ರುಮ್ಮಾ.

ಸದ್ಯಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರವಿರುವ ಜಾಗದಲ್ಲಿಯೇ ಆಸ್ಪತ್ರೆ ನಿರ್ಮಾಣವಾಗುತ್ತಿದ್ದು, ಅದನ್ನು ಮೇಲ್ದರ್ಜೆಗೆ ಏರಿಸುವಂತೆ ತಾಲ್ಲೂಕಿನ ಜನರು ಬೇಡಿಕೆ ಇಟ್ಟಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260817-34-157781759

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ