
ಬಿತ್ತನೆಗೆ ಸಾಲ, ಬೆಳೆ ಕೈಕೊಡುವ ಆತಂಕ ಮಳೆಯ ನಿರೀಕ್ಷೆಯಲ್ಲಿದ್ದ ರೈತನಿಗೆ ನಿರಾಶೆ
ಅಫಜಲಪುರ: ಮುಂಗಾರು ಆರಂಭವಾಗುತ್ತಿದ್ದಂತೆ ಉತ್ತಮ ಮಳೆಯ ನಿರೀಕ್ಷೆಯಲ್ಲಿ ಜಮೀನು ಸಿದ್ಧಪಡಿಸಿ ತೊಗರಿ, ಹತ್ತಿ, ಸೂರ್ಯಕಾಂತಿ ಸೇರಿದಂತೆ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿದ್ದ ರೈತರಿಗೆ ಈ ಬಾರಿ ಪ್ರಕೃತಿಯ ಏರುಪೇರು ದೊಡ್ಡ ಹೊಡೆತ ನೀಡಿದೆ.
ಆರಂಭದಲ್ಲಿ ಮಳೆ ಕೈಕೊಟ್ಟಿದ್ದು, ನಂತರ ಸುರಿದ ಮಳೆಯೂ ಸಮರ್ಪಕವಾಗಿ ಆಗದ ಪರಿಣಾಮ ಮಳೆ ಆಶ್ರಿತ ಪ್ರದೇಶಗಳಲ್ಲಿನ ಬೆಳೆಗಳ ಬೆಳವಣಿಗೆ ಕುಂಠಿತವಾಗಿದೆ. ಈಗಾಗಲೇ ಕೃಷಿಗಾಗಿ ಸಾಲ ಮಾಡಿರುವ ರೈತರು, ಬೆಳೆ ಕೈಕೊಟ್ಟರೆ ಸಾಲ ತೀರಿಸುವುದು ಹೇಗೆ ಎಂಬ ಚಿಂತೆಯಲ್ಲಿದ್ದಾರೆ.
ಬಿತ್ತನೆಗೂ ಮುನ್ನವೇ ರೈತರು ಬೀಜ, ರಸಗೊಬ್ಬರ, ಕ್ರಿಮಿನಾಶಕ ಸೇರಿದಂತೆ ಅಗತ್ಯ ಕೃಷಿ ಪರಿಕರಗಳನ್ನು ಸಾಲ ಮಾಡಿ ಖರೀದಿಸಿದ್ದಾರೆ. ಜಮೀನು ಉಳುಮೆ, ಹದಗೊಳಿಸುವಿಕೆ, ಬಿತ್ತನೆ, ಕಳೆ ತೆಗೆಯುವುದು, ರಸಗೊಬ್ಬರ ಹಾಕುವುದು ಹಾಗೂ ಕ್ರಿಮಿನಾಶಕ ಸಿಂಪಡಣೆ ಸೇರಿದಂತೆ ಪ್ರತಿಯೊಂದು ಹಂತದಲ್ಲೂ ಖರ್ಚು ಹೆಚ್ಚಾಗಿದೆ. ಕೃಷಿ ವೆಚ್ಚ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿರುವ ಸಂದರ್ಭದಲ್ಲಿ ಮಳೆಯ ಅನಿಶ್ಚಿತತೆ ರೈತರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ವಿಮೆ ಮಾಡಿಸಲು ಹಣದ ಕೊರತೆ: ಬೆಳೆ ಹಾನಿಯಾದ ಸಂದರ್ಭದಲ್ಲಿ ರೈತರಿಗೆ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಸರ್ಕಾರ ಬೆಳೆ ವಿಮೆ ಯೋಜನೆ ಜಾರಿಗೊಳಿಸಿದೆ. ಪ್ರಕೃತಿ ವಿಕೋಪ, ಮಳೆ ಕೊರತೆ ಸೇರಿದಂತೆ ವಿವಿಧ ಕಾರಣಗಳಿಂದ ಬೆಳೆ ಹಾನಿಯಾದರೆ ನಿಯಮಾನುಸಾರ ವಿಮೆ ಪರಿಹಾರ ಪಡೆಯಲು ಅವಕಾಶವಿದೆ. ಆದರೆ, ಕೃಷಿ ವೆಚ್ಚವನ್ನೇ ಸಾಲ ಮಾಡಿ ಭರಿಸಿರುವ ಅನೇಕ ರೈತರಿಗೆ ಬೆಳೆ ವಿಮೆಯ ಕಂತು ಪಾವತಿ ಹೆಚ್ಚುವರಿ ಹೊರೆಯಾಗಿದೆ. ಹೀಗಾಗಿ ಕೆಲ ರೈತರು ಬೆಳೆ ವಿಮೆ ಮಾಡಿಸಲು ಸಾಧ್ಯವಾಗದೆ ವಿಮೆ ವ್ಯಾಪ್ತಿಯಿಂದ ಹೊರಗುಳಿದಿದ್ದಾರೆ. ಇದೀಗ ಬೆಳೆ ಹಾನಿಯಾಗುವ ಪರಿಸ್ಥಿತಿ ಎದುರಾಗಿರುವುದರಿಂದ ವಿಮೆ ಮಾಡಿಸಿಕೊಂಡಿರುವ ರೈತರಿಗೆ ಪರಿಹಾರದ ನಿರೀಕ್ಷೆಯಿದ್ದರೆ, ವಿಮೆ ಮಾಡಿಸಿಕೊಳ್ಳದ ರೈತರಿಗೆ ಪರಿಹಾರ ದೊರೆಯದ ಆತಂಕ ಎದುರಾಗಿದೆ.
ಬೆಳೆ ಹಾನಿ, ಕಡಿಮೆ ಇಳುವರಿ ಹಾಗೂ ಮಾರುಕಟ್ಟೆ ಬೆಲೆ ಕುಸಿತ—ಈ ಮೂರು ಸಮಸ್ಯೆಗಳು ಎದುರಾದರೆ ರೈತರ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆ ಇದೆ. ಕೃಷಿ ಸಾಲದ ಜೊತೆಗೆ ಕುಟುಂಬದ ದಿನನಿತ್ಯದ ಖರ್ಚು, ಮಕ್ಕಳ ಶಿಕ್ಷಣ, ಆರೋಗ್ಯ ಹಾಗೂ ಇತರ ಅಗತ್ಯಗಳ ವೆಚ್ಚವನ್ನೂ ನಿಭಾಯಿಸಬೇಕಿರುವುದರಿಂದ ರೈತರ ಮೇಲೆ ಒತ್ತಡ ಹೆಚ್ಚಾಗಿದೆ.
‘ಪ್ರಕೃತಿ ವಿಕೋಪದಿಂದ ಬೆಳೆ ಹಾನಿಯಾದರೆ ವಿಮೆಯಿಂದ ಹೊರಗುಳಿದಿರುವ ರೈತರಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಮೂಲಕ ಪರಿಹಾರ ನೀಡಬೇಕು. ಬೆಳೆ ನಷ್ಟದ ನಿಖರ ಸಮೀಕ್ಷೆ ನಡೆಸಿ, ಹಾನಿಗೊಳಗಾದ ಎಲ್ಲ ರೈತರಿಗೂ ಸೂಕ್ತ ಪರಿಹಾರ ಒದಗಿಸಬೇಕು. ವಿಮೆ ಮಾಡಿಸಿಕೊಂಡವರು ಮತ್ತು ವಿಮೆ ಮಾಡಿಸಿಕೊಳ್ಳಲು ಸಾಧ್ಯವಾಗದವರು ಎಂಬ ಭೇದ ಮಾಡದೆ ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಧಾವಿಸಬೇಕು’ ಎಂದು ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಶ್ರೀಮಂತ ಬಿರಾದಾರ ಆಗ್ರಹಿಸಿದ್ದಾರೆ.
‘ಈ ಬಾರಿ ಮಳೆ ಕೊರತೆಯ ಹಿನ್ನೆಲೆಯಲ್ಲಿ ರೈತರು ಬಿತ್ತನೆ ಮಾಡಿರುವ ಬೆಳೆಗಳಿಗೆ ಬೆಳೆ ವಿಮೆ ಮಾಡಿಸುವಂತೆ ಕೃಷಿ ಇಲಾಖೆಯಿಂದ ರೈತರಿಗೆ ಖುದ್ದಾಗಿ ಕರೆ ಮಾಡಿ ಮನವರಿಕೆ ಮಾಡಲಾಗಿದೆ. ಬೆಳೆ ವಿಮೆಯ ಮಹತ್ವದ ಕುರಿತು ರೈತರಿಗೆ ಮಾಹಿತಿ ನೀಡಲಾಗಿದ್ದು, ಕಳೆದ ವರ್ಷಕ್ಕಿಂತ ಈ ಬಾರಿ ವಿಮೆ ಮಾಡಿಸಿಕೊಂಡಿರುವ ರೈತರ ಸಂಖ್ಯೆ ಹೆಚ್ಚಾಗಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಎಸ್.ಎಚ್. ಗಡಿಗಿಮನಿ ತಿಳಿಸಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260826-31-1811980007