
ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಶಿಲ್ಪಕಲಾವಿದ ಚಂದ್ರಶೇಖರ ಶಿಲ್ಪಿ ಇನ್ನಿಲ್ಲ
ಕಲಬುರಗಿ: ಹಿರಿಯ ಶಿಲ್ಪ ಹಾಗೂ ಕಾಷ್ಟ ಕಲಾವಿದ ಚಂದ್ರಶೇಖರ ವೈ. ಶಿಲ್ಪಿ (72) ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ಬೆಳಗಿನ ಜಾವ ನಿಧನರಾದರು.
ನ್ಯುಮೋನಿಯಾ ಸೋಂಕಿನಿಂದಾಗಿ ಗುರುವಾರ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಪಡೆಯುವಾಗಲೇ ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದರು.
ಸುರಪುರ ಶೈಲಿಯ ಸೂಕ್ಷ್ಮ ಕಲಾ ಕೆತ್ತನೆಯಲ್ಲಿ ಹೆಸರು ಮಾಡಿದ್ದ ಚಂದ್ರಶೇಖರ ಶಿಲ್ಪಿ ಅವರಿಗೆ ಜವಳಿ ಸಚಿವಾಲಯದಿಂದ ನೀಡಲಾಗುವ ರಾಷ್ಟ್ರೀಯ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಡಿಸೆಂಬರ್‌ನಲ್ಲಿ ಪ್ರದಾನ ಮಾಡಿದ್ದರು.
2012ರಲ್ಲಿ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಗೌರವ ಪ್ರಶಸ್ತಿಯನ್ನು ಪಡೆದಿದ್ದರು. 2014ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದರು.
ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕಕ್ಕೇರಾ ಗ್ರಾಮದವರಾದ ಚಂದ್ರಶೇಖರ ಶಿಲ್ಪಿ ಅವರು ನಾಲ್ಕು ದಶಕಗಳಿಂದ ಕಲಬುರಗಿಯಲ್ಲಿ ನೆಲೆಸಿ ಹಲವು ಕಲಾಕೃತಿಗಳ ಕೆತ್ತನೆಯಲ್ಲಿ ತೊಡಗಿದ್ದರು.
ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದ ಚಂದ್ರಶೇಖರ ಅವರು ಅಮರಶಿಲ್ಪಿ ಜಕಣಾಚಾರಿ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿ ಕೆಲಸ ಮಾಡಿದ್ದರು.
ಅವರಿಗೆ ಪತ್ನಿ ದೇವಕ್ಕೆಮ್ಮ, ಪುತ್ರ ವಿನಾಯಕ, ಪುತ್ರಿ ಗಾಯತ್ರಿ ಶಿಲ್ಪಿ ಇದ್ದಾರೆ.
ಕೇಂದ್ರ ಸರ್ಕಾರದ ಜವಳಿ ಸಚಿವಾಲಯ ಸೌದಿ ಅರೇಬಿಯಾದ ರಿಯಾದ್ ನಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಕಾರ್ಯಾಗಾರದಲ್ಲಿ ಚಂದ್ರಶೇಖರ ಶಿಲ್ಪಿ ಅವರು ಭಾಗವಹಿಸಬೇಕಿತ್ತು.
ಇಂದು ಸಂಜೆ 6ಕ್ಕೆ ನ್ಯೂ ರಾಘವೇಂದ್ರ ಕಾಲೊನಿ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.