
ತುಂಗಭದ್ರಾ ಜಲಾಶಯದಲ್ಲಿ ನೀರು ಸಂಗ್ರಹ: ನೂರಾರು ಪ್ರಶ್ನೆ– ಮಳೆಯಿಂದಷ್ಟೇ ಉತ್ತರ
ಹೊಸಪೇಟೆ (ವಿಜಯನಗರ):ತುಂಗಭದ್ರಾ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸುವ ಸಂಬಂಧ 11ರಂದು ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆ ನಡೆಯಲಿದ್ದು, ಮೂರೂ ರಾಜ್ಯಗಳ 13 ಲಕ್ಷ ಎಕರೆಯಷ್ಟು ಕೃಷಿ ಭೂಮಿಗೆ ಯಾವಾಗ ನೀರು ಹರಿಯುತ್ತದೆ ಎಂಬ ಕುತೂಹಲ ನೆಲೆಸಿದೆ. ಸಭೆ ನಡೆದರೂ ಮಳೆಯಿಂದ ಮಾತ್ರ ಸ್ಪಷ್ಟ ಉತ್ತರ ಸಿಗಲಿದೆ ಎಂಬ ವಾಸ್ತವ ಇಲ್ಲಿ ನೆಲೆಸಿದೆ.
ಸದ್ಯ ಜಲಾಶಯದಲ್ಲಿ 72.26 ಟಿಎಂಸಿ ಅಡಿಯಷ್ಟು ನೀರಿನ ಸಂಗ್ರಹ ಇದ್ದು, ಒಂದು ಬೆಳೆಗೆ ನೀರು ಹರಿಸಲು ಕನಿಷ್ಠ 90 ಟಿಎಂಸಿ ಅಡಿಯಷ್ಟು ನೀರಿನ ಲಭ್ಯತೆಯನ್ನು ಖಚಿತ ಪಡಿಸಬೇಕಾಗುತ್ತದೆ.
ಮೇಲಾಗಿ ಕುಡಿಯಲು ಸೇರಿದಂತೆ 130 ಟಿಎಂಸಿ ಅಡಿಯಷ್ಟು ನೀರಿನ ಲಭ್ಯತೆಯನ್ನು ಸಾಬೀತುಪಡಿಸಬೇಕಾಗುತ್ತದೆ. ತಜ್ಞರು ಇದೆಲ್ಲವನ್ನೂ ಲೆಕ್ಕಹಾಕಿಯೇ ಕಾಲುವೆಗಳಿಗೆ ನೀರು ಬಿಡುವ ವಿಚಾರವನ್ನು ಚರ್ಚಿಸಲಿದ್ದು, ಮಳೆ ಪ್ರಮಾಣ ಕುಸಿತವಾದರೆ ನೀರು ಹರಿಯುವ ದಿನಾಂಕ ಮುಂದೂ ಡಬಹುದು ಎಂದು ಹೇಳಲಾಗುತ್ತಿದೆ.
ಅಣೆಕಟ್ಟೆ ನಿರ್ಮಾಣಗೊಂಡ ಬಳಿಕದ 73 ವರ್ಷಗಳ ಇತಿಹಾಸದಲ್ಲಿ 10 ಬಾರಿ ಜಲಾಶಯ ಭರ್ತಿಯಾಗಿಲ್ಲದ್ದು ದಾಖಲಾಗಿದೆ. 2023ರಲ್ಲಿ 89 ಟಿಎಂಸಿ ಅಡಿಯಷ್ಟೇ ನೀರು ಸಂಗ್ರಹವಾಗಿತ್ತು. ಆಗಲೂ ಒಂದು ಬೆಳೆಗೆ, ಕುಡಿಯಲು ನೀರು ಲಭಿಸಿತ್ತು.
ಈ ಬಾರಿ ಮುಂಗಾರು ಮಳೆ ವಿಳಂಬದಿಂದಾಗಿ ಈ ಹಿಂದೆ ಎಂದೂ ಕಂಡಿರದಂತಹ ಬರ ಪರಿಸ್ಥಿತಿ ಎದುರಾಗಿದ್ದು, ಜಲಾಶಯದಿಂದ ಕೃಷಿಗೆ ನೀರು ಸಿಗಲಾರದು ಎಂಬ ಭಾವನೆ ಜುಲೈ ಅಂತ್ಯದ ತನಕವೂ ಇತ್ತು. ಆದರೆ ಮಲೆನಾಡಿನಲ್ಲಿ ಸುರಿದ ಭರ್ಜರಿ ಮಳೆಯಿಂದಾಗಿ ಕೇವಲ 10 ದಿನಗಳಲ್ಲಿ ಪರಿಸ್ಥಿತಿ ಬದಲಾಗಿದೆ.
‘ಎಂತಹ ಬರಗಾಲ ಇದ್ದರೂ ತುಂಗಭದ್ರಾ ಜಲಾಶಯ ತನ್ನನ್ನು ನೆಚ್ಚಿಕೊಂಡ ರೈತರನ್ನು ಕೈಬಿಟ್ಟಿದ್ದು ಇಲ್ಲ. ಒಂದು ಬೆಳೆಗಂತೂ ನೀರು ಸಿಕ್ಕೇ ಸಿಕ್ಕಿದೆ. ಈ ಬಾರಿಯೂ ಸಹ ಅದೇ ಆಗಿದೆ. ಪ್ರತಿದಿನ ಎರಡು ಟಿಎಂಸಿ ಅಡಿಯಷ್ಟು ನೀರು ಹರಿದುಬರುವುದು ಇನ್ನು ಕೆಲವು ದಿನ ಮುಂದುವರಿಯಲಿದ್ದು, ಒಂದು ಬೆಳೆಗೆ ನೀರು ಖಂಡಿತ ಸಿಗುತ್ತದೆ. ನಾವೆಲ್ಲ ಆಶಾಭಾವನೆಯಿಂದ ಇದ್ದೇವೆ’ ಎಂದು ತುಂಗಭದ್ರಾ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮ ಗೌಡ ಹೇಳಿದರು.
ಸೂಕ್ತ ನಿರ್ಧಾರ: ‘ಮಳೆ ಮುನ್ಸೂಚನೆ, ಲಭ್ಯ ಇರುವ ನೀರು, ಒಳಹರಿವು ಮೊದಲಾದ ಅಂಶಗಳನ್ನು ಗಮನಿಸಿ ಕಾಲುವೆಗಳಿಗೆ ನೀರು ಹರಿಸುವ ನಿರ್ಧಾರವನ್ನು ಐಸಿಸಿ ಸಭೆಯಲ್ಲಿ ತೆಗೆದು ಕೊಳ್ಳಲಾಗುತ್ತದೆ. ಮೂರೂ ರಾಜ್ಯಗಳ ಕುಡಿಯುವ ನೀರಿನ ಸಲುವಾಗಿ 35 ಟಿಎಂಸಿ ಅಡಿಯಷ್ಟು ನೀರನ್ನು ಮೀಸಲು ಇಡಬೇಕಾಗುತ್ತದೆ. ಆರೇಳು ಟಿಎಂಸಿ ಅಡಿ ನೀರು ಬಿಸಿಲಿಗೆ ಆವಿಯಾಗಿ ಹೋಗ ಬಹುದು. ಕೈಗಾರಿಕೆಗಳಿಗೆ ಹರಿಸುವ ನೀರಿನ ಪ್ರಮಾಣ ಬಹಳ ಕಡಿಮೆ ಇದೆ. ಸದ್ಯದ ಸ್ಥಿತಿಯಲ್ಲಿ ಒಂದು ಬೆಳೆಗೆ ನೀರು ಲಭಿಸುವುದು ನಿಶ್ಚಿತ’ ಎಂದು ತುಂಗಭದ್ರಾ ಮಂಡಳಿಯ ಅಧೀಕ್ಷಕ ಎಂಜಿನಿಯರ್ ನಾರಾಯಣ ನಾಯ್ಕ ‘ಪ್ರಜಾವಾಣಿ’ಗೆ ತಿಳಿಸಿದರು.
ಜಲಾಶಯ ಭರ್ತಿಯಾಗದ ವರ್ಷಗಳು
1953ರಲ್ಲಿ ತುಂಗಭದ್ರಾ ಅಣೆಕಟ್ಟೆ ಲೋಕಾರ್ಪಣೆಗೊಂಡ ಬಳಿಕ 10 ಬಾರಿ ಜಲಾಶಯ ಭರ್ತಿಯಾಗಿಲ್ಲ. ಮಳೆ ಅಭಾವವೇ ಅದಕ್ಕೆ ಕಾರಣವಾಗಿತ್ತು. ಆ ವರ್ಷಗಳೆಂದರೆ 1976, 1987, 1995, 2001, 2002, 2003, 2015, 2016, 2017 ಮತ್ತು 2023.
2024ರಲ್ಲಿ 19ನೇ ಕ್ರೆಸ್ಟ್ಗೇಟ್ ಕೊಚ್ಚಿಕೊಂಡು ಹೋಗಿ ಸುಮಾರು 36 ಟಿಎಂಸಿ ಅಡಿಯಷ್ಟು ನೀರು ಪೋಲಾಗಿ ಹೋದರೂ ಬಳಿಕ ಉತ್ತಮ ಮಳೆಯಾಗಿದ್ದರಿಂದ ಎರಡನೇ ಬೆಳೆಗೂ ನೀರು ಸಿಕ್ಕಿತ್ತು. 2025ರಲ್ಲಿ ಉತ್ತಮ ಮಳೆ ಆಗಿದ್ದರೂ, ಕ್ರೆಸ್ಟ್ಗೇಟ್ಗಳು ಶಿಥಿಲಗೊಂಡಿದ್ದರಿಂದ 80 ಟಿಎಂಸಿ ಅಡಿ ಮಟ್ಟದಲ್ಲೇ ನೀರು ಸಂಗ್ರಹವನ್ನು ಕಾಪಾಡಿಕೊಂಡಿದ್ದರಿಂದ ಒಂದು ಬೆಳೆಗಷ್ಟೇ ನೀರು ಹರಿಸುವಂತಾಯಿತು. ಈ ಬಾರಿ ಹೊಸ ಕ್ರೆಸ್ಟ್ಗೇಟ್ ಸಿದ್ಧವಾಗಿ ಮಳೆಗಾಗಿ ಅಣೆಕಟ್ಟು ಕಾಯುತ್ತಿದೆ.
ಪುರುಷೋತ್ತಮ ಗೌಡ, ಅಧ್ಯಕ್ಷ ತುಂಗಭದ್ರಾ ರೈತ ಸಂಘಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260809-25-429543233