
ಕನಿಷ್ಠ ವೇತನ ಪರಿಷ್ಕರಣೆ ಮರುಪರಿಶೀಲನೆಗೆ ಖಂಡನೆ
ಕಲಬುರಗಿ: ರಾಜ್ಯದಲ್ಲಿ ಕನಿಷ್ಠ ವೇತನ ಪರಿಷ್ಕರಣೆಯನ್ನು ಮರುಪರಿಶೀಲಿಸಲು ಸಚಿವ ಸಂಪುಟ ನಿರ್ಧರಿಸಿರುವುದು ಖಂಡನೀಯ ಎಂದು ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಪ್ರಭುದೇವ ಯಳಸಂಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಷ್ಕರಣೆಯ ಪ್ರಮಾಣದ ಬಗ್ಗೆ ಹಣಕಾಸು ಇಲಾಖೆಯು ಕಳವಳ ವ್ಯಕ್ತಪಡಿಸಿರುವುದು, ಅದರ ಆಧಾರದಲ್ಲಿ ಸಚಿವ ಸಂಪುಟದ ಉಪ ಸಮಿತಿ ರಚಿಸಿರುವುದು ಕಾನೂನು ಬಾಹಿರ’ ಎಂದು ದೂರಿದರು.
‘ಕಾನೂನು ಪ್ರಕಾರ, ಕನಿಷ್ಠ ವೇತನ ಪರಿಷ್ಕರಣೆ 5 ವರ್ಷಗಳಿಗೊಮ್ಮೆ ಮಾಡಬೇಕು. ರಾಜ್ಯದಲ್ಲಿ 8 ವರ್ಷಗಳಿಂದ ಆಗಿಲ್ಲ. ಈಗ, ಸುಪ್ರೀಂ ಕೋರ್ಟ್ ಆದೇಶದಂತೆ ಪರಿಷ್ಕರಿಸಲಾಗಿದೆ. ಇದಕ್ಕೂ ಆಕ್ಷೇಪ ವ್ಯಕ್ತಪಡಿಸಿರುವುದು ಸರಿಯಲ್ಲ. ಸಚಿವ ಸಂಪುಟದ ನಿರ್ಧಾರ, ಕನಿಷ್ಠ ವೇತನ ಜಾರಿಯನ್ನು ಬಹಿರಂಗವಾಗಿ ನಿರಾಕರಿಸಲು ಖಾಸಗಿ ವಲಯದ ಉದ್ಯೋಗದಾತರನ್ನು ಪ್ರೋತ್ಸಾಹಿಸಿದಂತಾಗಿದೆ’ ಎಂದು ಆರೋಪಿಸಿದರು.
‘ಕಾರ್ಮಿಕ ಇಲಾಖೆ, ಕೆಪಿಟಿಸಿಎಲ್, ಜಲಮಂಡಳಿ ಮುಂತಾದ ಇಲಾಖೆಗಳು ಮತ್ತು ನಿಗಮಗಳು ಈಗಾಗಲೇ ಕನಿಷ್ಠ ವೇತನ ಪರಿಷ್ಕರಣೆ ಜಾರಿಗೆ ತಂದಿವೆ. ಕರ್ನಾಟಕ ಹೈಕೋರ್ಟ್ ಕೂಡ ಅಧಿಸೂಚನೆಗೆ ಯಾವುದೇ ತಡೆಯಾಜ್ಞೆ ನೀಡಿಲ್ಲ. ಯಾವುದೇ ತಡೆಯಾಜ್ಞೆ ಇಲ್ಲದಿದ್ದರೂ ಸರ್ಕಾರ ಮರುಪರಿಶೀಲನೆಗೆ ಮುಂದಾಗಿರುವುದು ಖಂಡನೀಯ’
‘ಸರ್ಕಾರವು ಕನಿಷ್ಠ ವೇತನ ಪರಿಷ್ಕರಣೆಯನ್ನು ಜಾರಿಗೊಳಿಸುವ ವರೆಗೆ ಹೋರಾಟ ತೀವ್ರಗೊಳಿಸಲಾಗುವುದು. ಜೊತೆಗೆ ಹೈಕೋರ್ಟ್ ಮೆಟ್ಟಿಲೇರುತ್ತೇವೆ’ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎಚ್.ಎಸ್ ಪತಕಿ, ಸಿದ್ದಪ್ಪ ಪಾಲ್ಕಿ, ವಿಶಾಲ ನಂದೂರಕರ್, ಶಿವಲಿಂಗಮ್ಮ ಇದ್ದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260827-34-1851177401