
ಅಳವಂಡಿ: ಮುಸ್ಲಿಂ ಕುಟುಂಬದಿಂದ ವರಮಹಾಲಕ್ಷ್ಮಿ ಪೂಜೆ
ಅಳವಂಡಿ: ವರಮಹಾಲಕ್ಷ್ಮೀ ಹಬ್ಬವನ್ನು ಹಿಂದೂ ಕುಟುಂಬಗಳು ಶ್ರದ್ಧಾಭಕ್ತಿಯಿಂದ ಆಚರಿಸುತ್ತಾರೆ. ಆದರೆ ಧರ್ಮದ ಎಲ್ಲೆಗಳನ್ನು ಮೀರಿ, ಮುಸ್ಲಿಂ ಕುಟುಂಬವೊಂದು ಕಳೆದ 8 ವರ್ಷಗಳಿಂದ ವರಮಹಾಲಕ್ಷ್ಮೀ ದೇವಿಯನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಿದ್ದು, ಕೊಪ್ಪಳ ತಾಲ್ಲೂಕಿನ ಅಳವಂಡಿ ಗ್ರಾಮದಲ್ಲಿ ಭಾವೈಕ್ಯತೆ ಹಾಗೂ ಧಾರ್ಮಿಕ ಸೌಹಾರ್ದತೆಗೆ ಸಾಕ್ಷಿಯಾಗಿದೆ.
ಗ್ರಾಮದ ನಜುರುದ್ದೀನ್ ಬಿಸರಳ್ಳಿ ಅವರ ಕುಟುಂಬ ಕಳೆದ 8 ವರ್ಷಗಳಿಂದ ವರಮಹಾಲಕ್ಷ್ಮೀ ಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡು ಬರುತ್ತಿದೆ. ಈ ಬಾರಿಯೂ ಮನೆಯ ಆವರಣವನ್ನು ತಳಿರು-ತೋರಣ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಿ, ವರಮಹಾಲಕ್ಷ್ಮೀ ದೇವಿಯ ಪ್ರತಿಷ್ಠಾಪನೆ ಮಾಡಿ ಸಂಪ್ರದಾಯ ಬದ್ಧವಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು.
‘ಧರ್ಮಗಳು ಬೇರೆಬೇರೆ ಇರಬಹುದು. ಆದರೆ ಮಾನವೀಯತೆ, ಪ್ರೀತಿ, ಸ್ನೇಹ ಮತ್ತು ಸಹೋದರತ್ವಕ್ಕೆ ಧರ್ಮದ ಗಡಿಗಳಿಲ್ಲ. ನಜುರುದ್ದೀನ್ ಅವರ ಕುಟುಂಬದ ಆಚರಣೆ ಸಮಾಜ ದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಬದುಕಬೇಕು ಎಂಬ ಸಂದೇಶ ನೀಡುತ್ತಿದೆ’ ಎಂದು ಸ್ನೇಹಿತರು ಮೆಚ್ಚುಗೆ ವ್ಯಕ್ತಪಡಿಸಿದರು.
ಗೃಹ ಪ್ರವೇಶದ ದಿನದಿಂದಲೇ ವರಮಹಾಲಕ್ಷ್ಮೀ ಪೂಜೆ: ‘8 ವರ್ಷಗಳ ಹಿಂದೆ ಗೃಹಪ್ರವೇಶದ ದಿನದಿಂದ ವರಮಹಾಲಕ್ಷ್ಮೀ ಪೂಜೆ ಆರಂಭಿಸಿದ್ದೇವೆ. ಪ್ರತಿವರ್ಷ ಶ್ರದ್ಧೆಯಿಂದ ಪೂಜೆ ಮಾಡಿಕೊಂಡು ಬರುತ್ತಿದ್ದೇವೆ. ನನ್ನ ಕುಟುಂಬಕ್ಕೂ ಸುಖ, ಶಾಂತಿ, ನೆಮ್ಮದಿ ದೊರೆತಿದೆ. ಪೂಜಾ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತೇವೆ’ ಎಂದು ಹೇಳಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260830-35-1066190663