
ಹುಣಸಗಿ: 15 ತಾಸಲ್ಲಿ 29 ಎಕರೆ ಕುಂಟಿ ಹೊಡೆದರು
ಹುಣಸಗಿ: ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಶ್ರಾವಣ ಮಾಸದ ಅಂಗವಾಗಿ ಎತ್ತುಗಳಿಂದ ಗಳೆ (ಕುಂಟಿ) ಹೊಡೆಯುವ ಸ್ಪರ್ಧೆ ಜಿದ್ದಾಜಿದ್ದಿನಿಂದ ನಡೆಯುತ್ತಿದೆ.
ಮಾರಲಬಾವಿ ಗ್ರಾಮದಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ಜೋಡೆತ್ತುಗಳಿಂದ 12 ತಾಸುಗಳಲ್ಲಿ 24 ಎಕರೆ ಗಳೆ (ಕುಂಟಿ) ಹೊಡೆದ ಘಟನೆ ನಡೆದಿತ್ತು. ಇದಕ್ಕಿಂತ ಹೆಚ್ಚಿನ ಸಾಧನೆ ಮಾಡಬೇಕು ಎಂದು ಗುಳಬಾಳ ಗ್ರಾಮದ ಯುವಕರು ತಮ್ಮಲ್ಲಿಯೇ ಪಣ ತೊಟ್ಟಿದ್ದರು. ಅದರಂತೆ ಶುಕ್ರವಾರ ಬೆಳಗಿನ ಜಾವ 1.30ಕ್ಕೆ ಎತ್ತುಗಳಿಗೆ ಕೊರಳು ಕಟ್ಟಿ ಕೆಲಸ ಆರಂಭಿಸಿ ಶುಕ್ರವಾರ ಸಂಜೆ 4.30ರವರೆಗೆ ನಿರಂತರವಾಗಿ ಹತ್ತು ಕುಂಟಿ (ಕುಂಟಿ ದಿಂಡಿನ ಮೇಲೆ ನಿಂತು ಗಳೆ ಹೊಡೆಯುವುದು) ಹೊಡೆಯುವ ಮೂಲಕ ಸಾಧನೆ ಮಾಡಿದ್ದಾರೆ
ಜೋಡೆತ್ತುಗಳು ಮಂಜುನಾಥ ಸಿದ್ದಣ್ಣ ಗೌಡಗೇರಿ ಎಂಬುವರಿಗೆ ಸೇರಿದ್ದು, ನಿಂಗಣ್ಣ ಗೌಡಗೇರಿ ಎಂಬ ಯುವಕ ಗುಳಬಾಳ ಗ್ರಾಮದ ಅಣಿ ಮೇಲಿರುವ, ರಾಜನಕೋಳೂರು ಗ್ರಾಮದ 21 ಎಕರೆ ಹತ್ತಿ ಹೊಲದಲ್ಲಿ ಹಾಗೂ 8 ಎಕರೆ ತೊಗರಿ ಹೊಲದಲ್ಲಿ ಕುಂಟಿ ಹೊಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಇವರಿಗೆ ಪ್ರಜ್ವಲ ಸಾಹೇಬಗೌಡ ಎಂಬುವರು ಸಹಾಯಕರಾಗಿ ಕಾರ್ಯನಿರ್ವಹಿಸಿದರು. ವಿಷಯ ತಿಳಿದು ಹುಣಸಗಿಯ ನಾನಾಗೌಡ ಪಾಟೀಲ ಅವರು ಹೊಲಕ್ಕೆ ಭೇಟಿ ನೀಡಿ, ‘ಗ್ರಾಮೀಣ ಭಾಗದಲ್ಲಿ ಇಂತಹ ಸ್ಪರ್ಧೆಗಳ ಮೂಲಕ ಯುವಕರಲ್ಲಿ ಕೃಷಿಯಲ್ಲಿ ಆಸಕ್ತಿ ಹೆಚ್ಚುವಂತೆ ಮಾಡಿರುವುದು ವಿಶೇಷ. ಶ್ರಮ ಸಂಸ್ಕೃತಿಯಿಂದ ಮಾತ್ರ ಇಂತಹ ಸಾಧನೆ ಮಾಡಲು ಸಾಧ್ಯ ಎಂಬುದನ್ನು ಇಲ್ಲಿನ ಯುವಕರು ನಿರೂಪಿಸುತ್ತಿದ್ದಾರೆ’ ಎಂದು ಸಂತಸ ವ್ಯಕ್ತಪಡಿಸಿದರು.
ಎತ್ತುಗಳಿಗೆ ಆಗಾಗ ಎಳನೀರು ಮತ್ತು ಬಾಳೆಹಣ್ಣು ತಿನ್ನಿಸುವ ಮೂಲಕ ಅವುಗಳನ್ನು ಹುರಿದುಂಬಿಸುವ ಕಾರ್ಯ ಸ್ಥಳೀಯ ಯುವಕರಿಂದ ನಡೆದಿತ್ತು. ಇದು ಅಲ್ಲಿನ ವಾತಾವರಣಕ್ಕೆ ಹೆಚ್ಚಿನ ಕಳೆ ಕಟ್ಟುವಂತೆ ಮಾಡಿತ್ತು.
ಈ ವಿಷಯ ಗ್ರಾಮದಲ್ಲಿ ಹರಡುತ್ತಿದ್ದಂತೆ ಗ್ರಾಮದ ಜನರು, ಸುತ್ತಮುತ್ತಲಿನ ಗ್ರಾಮಗಳಾದ ರಾಜನಕೋಳೂರು, ಮಾಳನೂರು, ತೀರ್ಥ ಮಾರಲಬಾವಿ ಸೇರಿದಂತೆ ಇತರ ಗ್ರಾಮಗಳ ಜನರು ತಂಡೋಪತಂಡವಾಗಿ ಆಗಮಿಸಿದ್ದರು. ಗ್ರಾಮದ ಹುಲಗಪ್ಪ ಹಂಚಿನಾಳ, ಸಂತೋಷ ಹಂಚಿನಾಳ, ಮೌನೇಶ ಕಕ್ಕೇರಿ, ಶ್ರೀನಿವಾಸ ಬೊಮ್ಮನಳ್ಳಿ, ಹಣಮಂತ್ರಾಯ ಮಾಲಿಪಾಟಿಲ, ಬಸವರಾಜ ಮೇಟಿ ಸೇರಿದಂತೆ ಇತರರು ಹಾಜರಿದ್ದರು. ಕುಂಟೆ ಹೊಡೆದು ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಸಂಜೆ ಎತ್ತುಗಳ ಭವ್ಯ ಮೆರವಣಿಗೆ ಗ್ರಾಮದಲ್ಲಿ ನಡೆಯಿತು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260830-30-2017687875