
ಯಾದಗಿರಿ: ಶ್ರೀಮಂತನಿದ್ದರೂ ಈ ಊರಲ್ಲಿ ಗೋಣಿ ತಟ್ಟಿನಲ್ಲೇ ಅಂತಿಮ ಯಾತ್ರೆ
ಯಾದಗಿರಿ: ಇದು ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ –150ರ ಪಕ್ಕದಲ್ಲಿ ಇರುವ ಧಾರ್ಮಿಕ ಕ್ಷೇತ್ರ ಮೈಲಾಪುರ. ಸುತ್ತಲೂ ಕಲ್ಲು ಬಂಡೆಗಳ ಬೆಟ್ಟಗಳು, ಅದರ ನಡುವೆ ಕುರುಚಲು ಗಿಡಗಳು, ಹಸಿರಿನ ಗದ್ದೆಗಳು, ಶೇಂಗಾ ಬೆಳೆಗಳಿಂದ ಕೂಡಿದ ಭೌಗೋಳಿಕ ಪ್ರದೇಶವಿದು. ದೊಡ್ಡ– ದೊಡ್ಡ ಕಲ್ಲು ಬಂಡೆಗಳಿಂದ ಆವೃತ್ತವಾಗಿರುವ ಗ್ರಾಮದ ಬೆಟ್ಟದ ಗುಹಾಂತರ ದೇವಾಲಯದಲ್ಲಿ ಇರುವುದು ಶಿವನ ಸ್ವರೂಪಿಯಾಗಿರುವ ಮೈಲಾರಲಿಂಗೇಶ್ವರ (ಮಲ್ಲಯ್ಯ) ದೇವಸ್ಥಾನ. ಬೆಟ್ಟದ ಬದಿಯಲ್ಲಿ ಹೊನ್ನಕೆರೆ ಇರುವ ಈ ಊರು ಗ್ರಾಮೀಣ ಸಂಸ್ಕೃತಿ, ಆಚಾರ– ವಿಚಾರ, ದೈವಿಕ ನಂಬಿಕೆ ಹಾಗೂ ಪರಂಪರೆಗಳನ್ನು ನಿಷ್ಠೆಯಿಂದ ಪಾಲಿಸಿಕೊಂಡು ಹೋಗುತ್ತಿದೆ.
ಗ್ರಾಮದಲ್ಲಿ ಪ್ರತಿ ಭಾನುವಾರ, ಅಮಾವಾಸ್ಯೆ, ಹುಣ್ಣಿಮೆಗೆ ಮಲ್ಲಯ್ಯನ ಸ್ಮರಣೆಯೆ ‘ಏಳು ಕೋಟಿ... ಏಳು ಕೋಟಿ... ಏಳು ಕೋಟಿಘೇ’ ಉದ್ಘೋಷಗಳು ಮೊಳಗುತ್ತಲೇ ಇರುತ್ತವೆ. ಅಂತೆಯೇ, ಹಲವು ಸಂಪ್ರದಾಯಗಳನ್ನೂ ಗ್ರಾಮಸ್ಥರು ಚಾಚೂ ತಪ್ಪದೇ ಪಾಲಿಸುತ್ತಿದ್ದಾರೆ.
ಗ್ರಾಮದಲ್ಲಿ ಕೋಳಿ ಸಾಕುವುದಿಲ್ಲ, ಅದರ ಕೂಗೂ ಕೇಳುವುದಿಲ್ಲ. ಮಂಚ ಬಳಸುವುದಿಲ್ಲ. ಬಾಣಂತಿಯಾದರೂ ಸರಿ, ಅನಾರೋಗ್ಯ ಪೀಡಿತರಾದರೂ ಸರಿಯೇ ಮಂಚದ ಮೇಲೆ ಮಲಗುವುದಿಲ್ಲ. ವಿವಾಹ ಮಾಡಿಕೊಟ್ಟ ಮಗಳಿಗೂ ಮಂಚ ಕೊಡುವ ಪದ್ಧತಿಯೂ ಇಲ್ಲ. ಗ್ರಾಮದ ಒಳಗೆ ಮಡಿಕೆಯೂ ಮಾಡುವುದಿಲ್ಲ.
ಇವೆಲ್ಲದಕ್ಕೂ ಮುಖ್ಯವಾಗಿ ಗ್ರಾಮದಲ್ಲಿ ಯಾರೇ ಸಾವನ್ನಪ್ಪಿದರೂ ಅವರ ಅಂತಿಮ ಯಾತ್ರೆಗೆ ಚೌಕಿಯನ್ನು ಕಟ್ಟಿ, ಅದರಲ್ಲಿ ಶವ ಇರಿಸಿಕೊಂಡು ಹೋಗುವುದಿಲ್ಲ. ಬಡವ, ಶ್ರೀಮಂತ, ದೇವಸ್ಥಾನದ ಧರ್ಮದರ್ಶಿ, ಪೂಜಾರಿಯಾದರೂ ಸರಿಯೇ ಅವರ ಅಂತಿಮ ಯಾತ್ರೆ ಸಾಗುವುದು ಗೋಣಿಯ ತಟ್ಟಿನಲ್ಲೇ (ಹಳೆಯ ಗೋಣಿ ಚೀಲ). ಇದಕ್ಕೆ ಮೂಲ ಕಾರಣ ಮೈಲಾರಲಿಂಗೇಶ್ವರ ದೇವರ ಸುತ್ತಲೂ ಆವರಿಸಿಕೊಂಡಿರುವ ಗ್ರಾಮಸ್ಥರ ನಂಬಿಕೆಗಳು.
‘ದೀಪಾವಳಿಯ ಬೆಳಕಿನ ಹಬ್ಬದ ವೇಳೆ ಮೈಲಾಪುರ ಮಲ್ಲಯ್ಯ– ಗಂಗಿಮಾಳಮ್ಮನ ವಿವಾಹ ಪೂಜಾ ಕೈಂಕರ್ಯಗಳು ನೆರವೇರುತ್ತವೆ. ಮದುವೆಗೆ ಮಂಚ, ಗಾದಿಗೆ, ದಿಂಬು, ಚೌಕಿಗಳನ್ನು ಅರ್ಪಣೆ ಮಾಡಲಾಗುತ್ತದೆ. ಹೀಗಾಗಿ, ದೇವರು ಬಳಸುವ ಮಂಚ, ಗಾದಿಯನ್ನು ಹುಲುಮಾನವರಾದ ನಾವು ಬಳಸುವುದು ಎಷ್ಟು ಸರಿ ಎಂಬುದು ಗ್ರಾಮಸ್ಥರ ನಂಬಿಕೆ. ಹೀಗಾಗಿ, ಗ್ರಾಮದಲ್ಲಿ ಯಾರ ಮನೆಯಲ್ಲಿಯೂ ಮಂಚವಿಲ್ಲ. ಮನೆ ಮಗಳನ್ನು ಮದುವೆ ಮಾಡಿ ಗಂಡನೆ ಮನೆಗೆ ಕಳುಹಿಸುವಾಗ ಪಾತ್ರೆ, ಮನೆ ಬಳಕೆಯ ಸಾಮಗ್ರಿಗಳನ್ನು ಉಡುಗೊರೆಯಾಗಿ ಕೊಡುವುದು ವಾಡಿಕೆ ಇದೆ. ಆದರೆ, ಮಂಚವನ್ನು ಕೊಡುವುದಿಲ್ಲ. ಮನೆಗೆ ಬರುವ ಸೋಸೆಯ ತವರು ಮನೆಯಿಂದಲೂ ಮಂಚವನ್ನು ಪಡೆಯುವುದಿಲ್ಲ’ ಎನ್ನುತ್ತಾರೆ ಮೈಲಾರಲಿಂಗೇಶ್ವರ ದೇವಸ್ಥಾನದ ಪೂಜಾರಿ ಖಂಡಪ್ಪ ಪೂಜಾರ.
‘ಶಿವನ ಸ್ವರೂಪವಾದ ಮೈಲಾರಲಿಂಗೇಶ್ವರರಿಗೆ ಬೆಳಗಿನ ಪೂಜೆ ವೇಳೆ ಶಂಖನಾದ, ಘಂಟೆ, ಜಾಗಟೆ ಸದ್ದು ಕೇಳಬೇಕೆ ಹೊರತು ಕೋಳಿಯ ಕೂಗಲ್ಲ. ಹೀಗಾಗಿ, ನಮ್ಮ ಪೂರ್ವಿಕರಿಂದಲೂ ಕೋಳಿಯನ್ನು ಗ್ರಾಮದಲ್ಲಿ ಸಾಕುವುದಿಲ್ಲ. ಮಡಿಕೆಯ ಶಬ್ದವೂ ಕೇಳದಂತೆ ಗ್ರಾಮದ ಹೊರಗಡೆ ಮಡಿಕೆ ತಯಾರು ಮಾಡಲಾಗುತ್ತದೆ’ ಎಂದರು.
‘ಸಂಕ್ರಾಂತಿ, ದೀಪಾವಳಿ ವೇಳೆ ಪಲ್ಲಕ್ಕಿ ಉತ್ಸವ ನಡೆಯುತ್ತದೆ. ಪಲ್ಲಕ್ಕಿಯಲ್ಲಿ ದೇವರ ಮೂರ್ತಿ ಇರಿಸಿ ಮೆರವಣಿಗೆ ಮಾಡಲಾಗುತ್ತದೆ. ಜತೆಗೆ ಶಿವರಾತ್ರಿಯಾದ ಐದು ದಿನಗಳ ನಂತರದಿಂದ ಯುಗಾದಿ ಬಳಿಕದ ಚೈತ್ರ ಹುಣ್ಣಿಮೆ ವರೆಗಿನ 45 ದಿನಗಳ ಕಾಲ ಚೌಕಿಯಲ್ಲಿ ಮಲ್ಲಯ್ಯನ ಪ್ರದಕ್ಷಿಣೆ ಹಾಕಲಾಗುತ್ತದೆ. ಮೂರ್ತಿಯನ್ನು ಚೌಕಿಯಲ್ಲಿ ಇರಿಸಿ ನಿತ್ಯ ದೇವಸ್ಥಾನದ ಸುತ್ತಲೂ ಐದು ಸುತ್ತು ಪ್ರದಕ್ಷಿಣೆ ಹಾಕಿ ಪೂಜೆ ಸಲ್ಲಿಸಲಾಗುತ್ತದೆ. ಹೀಗಾಗಿ, ದೇವರು ಬಳಸುವ ಚೌಕಿಯನ್ನು ನಾವು ಯಾರೂ ಬಳಸುವುದಿಲ್ಲ. ಬಡವ, ಶ್ರೀಮಂತನಾದರೂ ಗೋಣಿ ತಟ್ಟಿನಲ್ಲಿಯೇ ಅವರ ಅಂತಿಮ ಯಾತ್ರೆ ಮಾಡಲಾಗುತ್ತದೆ’ ಎಂದು ಮತ್ತೊಬ್ಬ ಪೂಜಾರಿಯಾದ ಈಶ್ವರಪ್ಪ ಅಡಗಿಮನಿ ತಿಳಿಸಿದರು.
ತಲೆಮಾರುಗಳಿಂದ ಸಂಪ್ರದಾಯಗಳ ಪಾಲನೆ
‘ಗ್ರಾಮದಲ್ಲಿನ ಸಂಪ್ರದಾಯಗಳನ್ನು ತಲೆ ಮಾರುಗಳಿಂದ ಚಾಚೂತಪ್ಪದೆ ನಡೆಸಿಕೊಂಡು ಹೋಗುತ್ತಿದ್ದೇವೆ. ಯಾರೂ ಅವುಗಳ ಬಗ್ಗೆ ತಕರಾರರು ಎತ್ತಿಲ್ಲ, ಎತ್ತುವುದೂ ಇಲ್ಲ. ಸಂಪ್ರದಾಯಗಳನ್ನು ಪಾಲಿಸದೆ ಇದ್ದರೆ ಗ್ರಾಮಕ್ಕೆ ಕೆಡುಕು ಆಗಬಹುದು ಎಂಬ ನಂಬಿಕೆ ಇದೆ’ ಎನ್ನುತ್ತಾರೆ ಖಂಡಪ್ಪ ಪೂಜಾರ.
‘ಮೇಲು– ಕೀಳು, ಬಡವ– ಶ್ರೀಮಂತ ಎಂಬ ವ್ಯತ್ಯಾಸ ಇಲ್ಲದೆ, ದೇವಸ್ಥಾನದ ಧರ್ಮದರ್ಶಿ ಅಗಲಿದರೂ ಗೋಣಿ ತಟ್ಟಿನಲ್ಲಿಅಂತಿಮ ಯಾತ್ರೆ ಒಯ್ಯುವು ಪದ್ಧತಿ ಈಗಲೂ ಗ್ರಾಮದಲ್ಲಿದೆ. ಈ ಸಂಪ್ರದಾಯಗಳನ್ನು ಮುಂದೆಯೂ ನಡೆಸಿಕೊಂಡು ಹೋಗುತ್ತೇವೆ. ಗ್ರಾಮದಲ್ಲಿನ ಆಚರಣೆಗಳ ಬಗ್ಗೆ ನಮ್ಮಲ್ಲಿ ತಕರಾರುಗಳು ಇದುವರೆಗೂ ಬಂದಿಲ್ಲ. ದೇವರಿಗೆ ದೊಡ್ಡವರು ಯಾರೂ ಇಲ್ಲ ಎಂಬ ಗಟ್ಟಿ ಭಾವನೆ ನಮ್ಮೂರಲ್ಲಿದೆ’ ಎಂದರು.