
ಕಡಲತೀರದಲ್ಲಿ ಮಾನವ ಹಸ್ತಕ್ಷೇಪಕ್ಕೆ ಮಿತಿ ಇರಲಿ
ಕರ್ನಾಟಕ ಕರಾವಳಿಯಲ್ಲಿ ಮಳೆಗಾಲದ ಬಂತೆಂದರೆ ಕಡಲತೀರದ ನಿವಾಸಿಗಳು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಾರೆ. ಭೋರ್ಗರೆಯುವ ಕಡಲು, ಭೂಮಿಯೆಡೆಗೆ ನುಗ್ಗಿ ಗಿಡ, ಮರ, ಕಟ್ಟಡಗಳನ್ನೂ ಆಪೋಷನ ತೆಗೆದುಕೊಳ್ಳುತ್ತದೆ. ವರ್ಷದಿಂದ ವರ್ಷಕ್ಕೆ ಕಡಲ್ಕೊರೆತದ ಸಮಸ್ಯೆ ಹೆಚ್ಚುತ್ತಲೇ ಇದೆ. ಸರ್ಕಾರ ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದರೂ, ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಈ ಸಮಸ್ಯೆ ಬಿಗಡಾಯಿಸಲು ಕಾರಣಗಳೇನು ಎಂಬ ಬಗ್ಗೆ ‘ಪ್ರಜಾವಾಣಿ’ ನಡೆಸಿದ ಚರ್ಚೆಯ ಪ್ರಮುಖ ಅಂಶಗಳು ಇಲ್ಲಿವೆ.
ಕಡಲ ತಡಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳು, ಸಮುದ್ರ ಕೊರೆತ ತಡೆಗೆ ಹಾಕುವ ಶಾರ್ಟ್ ಗ್ರಾಯಿನ್ಸ್, ಸಮುದ್ರಕ್ಕೆ ಗೋಡೆ ನಿರ್ಮಾಣದಿಂದ ಆಗಿರುವ ಪರಿಣಾಮಗಳು, ಕಡಲ್ಕೊರೆತ ನಿಯಂತ್ರಣಕ್ಕೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಮೀನುಗಾರಿಕಾ ಅರ್ಥಶಾಸ್ತ್ರಜ್ಞ ಪ್ರೊ. ರಾಮಚಂದ್ರ ಭಟ್ ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಸಮುದ್ರ ಭೂವಿಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ. ಕೆ.ಎಸ್. ಜಯಪ್ಪ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಸರ್ಕಾರ ಸಾವಿರಾರು ಕೋಟಿ ರೂಪಾಯಿ ವ್ಯಯಿಸಿದರೂ ಕಡಲ್ಕೊರೆತದ ಸಮಸ್ಯೆ ವರ್ಷದಿಂದ ವರ್ಷಕ್ಕೆ ಸಮಸ್ಯೆ ಬಿಗಡಾಯಿಸುತ್ತಲೇ ಇದೆ, ಯಾಕೆ?
ಕಡಲ್ಕೊರೆತ ಹೆಚ್ಚಳಕ್ಕೆ ಎರಡು ಕಾರಣಗಳು ಇವೆ. ಮಂಜುಗಡ್ಡೆ ಕರಗುವಿಕೆಯಿಂದ ಸಮುದ್ರದ ನೀರಿನ ಮಟ್ಟ ಹೆಚ್ಚಾಗಿರುವುದು ಭೌಗೋಳಿಕ ಕಾರಣವಾದರೆ, ಕಡಲ ತೀರದಲ್ಲಿ ಕೈಗಾರಿಕೆಗಳು, ಔದ್ಯಮಿಕ ಚಟುವಟಿಕೆಗಳು ಹೆಚ್ಚಿದ ಪರಿಣಾಮವಾಗಿ ಸಮುದ್ರದ ನೀರಿನ ಉಷ್ಣಾಂಶ ಹೆಚ್ಚಾಗಿದೆ. ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರವು ಬ್ಲ್ಯೂ ಇಕಾನಮಿ (ಆರ್ಥಿಕ ಬೆಳವಣಿಗೆ ಉತ್ತೇಜನಕ್ಕೆ ಕರಾವಳಿ ಸಂಪನ್ಮೂಲಗಳ ಸುಸ್ಥಿರ ಬಳಕೆ) ಅನುಷ್ಠಾನಗೊಳಿಸಿದೆ. ಇದರಿಂದಾಗಿ, ಸಮುದ್ರ ತೀರದಲ್ಲಿ ಖನಿಜ ತಗೆಯುವುದು, ಬಂದರು ಕೇಂದ್ರಿತ ಅಭಿವೃದ್ಧಿ, ಬಂದರು ವಿಸ್ತರಣೆಯಿಂದ ಚಟುವಟಿಕೆಗಳು ನಡೆಯುತ್ತಿವೆ. ಇವು ಕೂಡ ಸಮುದ್ರ ಕೊರೆತ ಹೆಚ್ಚಳಕ್ಕೆ ಕಾರಣವಾಗಬಹುದು.
ದಕ್ಷಿಣ ಕನ್ನಡ ಮಾತ್ರವಲ್ಲ, ಕರ್ನಾಟಕದ ಕರಾವಳಿಯ 320 ಕಿ.ಮೀ ವ್ಯಾಪ್ತಿಯಲ್ಲಿ ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲೂ ಕಡಲ್ಕೊರೆತದ ಸಮಸ್ಯೆ ಹೆಚ್ಚುತ್ತಿದೆಯಲ್ಲ...
ಕಡಲ್ಕೊರೆತ ಇಂದಿನ ಸಮಸ್ಯೆ ಅಲ್ಲ, ಹಿಂದಿನಿಂದಲೂ ಇದೆ. ಕಡಲತೀರದ ಚಟುವಟಿಕೆ ಹೆಚ್ಚಾಗುತ್ತಿದ್ದಂತೆ ಕಡಲ್ಕೊರೆತ ಸಮಸ್ಯಾತ್ಮಕವಾಯಿತು. ಕಡಲ್ಕೊರೆತ ಹೆಚ್ಚಿದ ಕಡೆಗಳಲ್ಲಿ ಸೀವಾಲ್ ನಿರ್ಮಾಣದ ಪ್ರಯೋಗಗಳು ನಡೆದವು. ಇದು ಮೊದಲು ಆರಂಭವಾದದ್ದು ಕೇರಳದಲ್ಲಿ. ಇದನ್ನು ನೋಡಿ ಮಂಗಳೂರಿನ ಬೆಂಗ್ರೆಯಲ್ಲಿ ಮೊದಲ ಸೀವಾಲ್ ನಿರ್ಮಾಣವಾಯಿತು. ದೊಡ್ಡ ಹಡಗುಗಳು ಬಂದರಿಗೆ ಬರುವ ಮಾರ್ಗದಲ್ಲಿ ನೀರಿನ ಆಳ ಇರಬೇಕು, ಅಲ್ಲಿ ಸೆಡಿಮೆಂಟ್‌ಗಳು ಸಂಗ್ರಹ ಆಗಬಾರದೆಂಬ ಕಾರಣಕ್ಕೆ ಸೀವಾಲ್ ನಿರ್ಮಿಸಲಾಗುತ್ತದೆ. ಸೀವಾಲ್, ಬ್ರೇಕ್ ವಾಟರ್ ನಿರ್ಮಾಣವು ಕಡಲ್ಕೊರೆತದ ಸ್ಥಳವನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಬದಲಾಯಿಸುತ್ತವೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಸುಮಾರು 50ರಷ್ಟು ಕಿಂಡಿ ಅಣೆಕಟ್ಟೆಗಳು ನಿರ್ಮಾಣವಾಗಿದ್ದು, ಇವು ಕೂಡ ಪರೋಕ್ಷ ಕಾರಣಗಳಾಗಿವೆ. ಅಭಿವೃದ್ಧಿಯ ಪರಿಣಾಮ ಕಡಲತೀರಗಳ ಅಗಲ ಕುಗ್ಗಿದೆ. ಸೀವಾಲ್ ನಿರ್ಮಿಸಿದ ಸ್ಥಳಗಳಲ್ಲಿ ಕಡಲತೀರಗಳೇ ಮರೆಯಾಗಿವೆ.
ಬಟ್ಟಪ್ಪಾಡಿ, ಉಳ್ಳಾಲ, ಸೋಮೇಶ್ವರ ಕಡಲತೀರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಮುದ್ರ ಕೊರೆತ ಹೆಚ್ಚಿದೆ. ಸುಮಾರು 600 ಮೀಟರ್ ನೆಲವನ್ನು ಸಮುದ್ರ ತನ್ನ ಒಡಲಿಗೆ ಸೇರಿಸಿಕೊಂಡಿದೆ ಎಂದು ಸ್ಥಳೀಯರು ಹೇಳುತ್ತಾರೆ. ಇದಕ್ಕೆ ನಿರ್ದಿಷ್ಟ ಕಾರಣಗಳಿ ರಬಹುದೇ?
ನೇತ್ರಾವತಿ ನದಿಯ ಮುಖಜ ಭೂಮಿಯಲ್ಲಿ ಬೋಟ್‌ಗಳು ಮುಳುಗುತ್ತಿದ್ದವು, ಅಲ್ಲಿ ಹೂಳು ತುಂಬಿತ್ತು, ಇದನ್ನು ತಪ್ಪಿಸಲು ಎರಡೂ ಕಡೆ ಬ್ರೇಕ್ ವಾಟ್ ನಿರ್ಮಿಸಲಾಯಿತು. ಇದರಿಂದ ಉಳ್ಳಾಲ ಭಾಗದಲ್ಲಿ ಕಡಲ್ಕೊರೆತ ಶುರುವಾಗಬಹುದು ಎಂದು ಸೆಂಟ್ರಲ್ ವಾಟರ್ ಆ್ಯಂಡ್ ಪವರ್ ಕನ್ಸಲ್ಟಿಂಗ್ ಇನಸ್ಟಿಟ್ಯೂಟ್ ಎಚ್ಚರಿಸಿತ್ತು. ಜೊತೆಗೆ ಕೆಲವು ಸಲಹೆಗಳನ್ನು ನೀಡಿತ್ತು. ಅದು ಅನುಷ್ಠಾನಕ್ಕೆ ಬರದ ಪರಿಣಾಮ ಉಳ್ಳಾಲ ಭಾಗವು ಮಳೆಗಾಲದಲ್ಲಿ ಕಡಲ್ಕೊರೆತದ ತೀವ್ರ ಪರಿಣಾಮ ಎದುರಿಸಬೇಕಾಗಿದೆ. ಬ್ರೇಕ್ ವಾಟರ್ ನಿರ್ಮಾಣವಾದ ಪ್ರದೇಶದ ಉತ್ತರ ಅಥವಾ ದಕ್ಷಿಣ ದಿಕ್ಕಿನಲ್ಲಿ ಕಡಲ್ಕೊರೆತ ಹೆಚ್ಚಾಗುತ್ತದೆ. ನಮ್ಮಲ್ಲಿ ದಕ್ಷಿಣ ಭಾಗದಲ್ಲಿ ಕಡಲ್ಕೊರೆತ ತೀವ್ರ ಪ್ರಮಾಣದಲ್ಲಿದೆ.
ಸಿಆರ್‌ಜೆಡ್ ಕಾನೂನು ಸಡಿಲಗೊಂಡ ಮೇಲೆ ಸಮುದ್ರದ ತಡಿಯಲ್ಲಿ ರೆಸಾರ್ಟ್‌ಗಳು, ಕಾಂಕ್ರೀಟ್ ಕಟ್ಟಡಗಳ ನಿರ್ಮಾಣ ಹೆಚ್ಚುತ್ತಿದೆ. ಇದಕ್ಕೂ ಕಡಲ್ಕೊರೆತಕ್ಕೂ ಏನಾದರೂ ಸಂಬಂಧವಿದೆಯೇ?
ಸ್ವಲ್ಪ ಮಟ್ಟಿನ ಪರಿಣಾಮ ಬೀರಿದೆ. ಕಟ್ಟುನಿಟ್ಟಿನ ಕಾನೂನು ಜಾರಿಗೊಳಿಸಲು ಮೀನುಗಾರ ಸಮುದಾಯದ ವಿರೋಧ ಇದೆ. ಯಾಕೆಂದರೆ, ಅವರು ಸಮುದ್ರದ ತಡಿಯಲ್ಲಿ ಬದುಕನ್ನು ಕಟ್ಟಿಕೊಂಡವರು, ಮೀನುಗಾರಿಕೆಯೇ ಅವರ ಜೀವನ. ಆದರೆ, ಅಭಿವೃದ್ಧಿ ಹೆಸರಿನಲ್ಲಿ ನಡೆದ ಕಾಮಗಾರಿಗಳು, ನಿರ್ಮಾಣಗಳ ನಕಾರಾತ್ಮಕ ಪರಿಣಾಮವನ್ನು ಅನುಭವಿಸುತ್ತಿದ್ದೇವೆ.
ಕಡಲ್ಕೊರೆತಮುಕ್ತ ತೀರ ನಿರ್ಮಾಣದ ನಿರೀಕ್ಷೆಯಲ್ಲಿ ಎಡಿಬಿ ನೆರವಿನಲ್ಲಿ ₹864 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆದಿದೆ. ಇದು ಎಷ್ಟರ ಮಟ್ಟಿಗೆ ಪ್ರಯೋಜನವಾಗಿದೆ?
₹864 ಕೋಟಿ ಎಡಿಬಿಯಿಂದ ಪಡೆದಿರುವ ನೆರವಿನ ಮೊತ್ತ ಬಡ್ಡಿ ಸೇರಿ ಇಂದು ₹1,400 ಕೋಟಿಗೆ ತಲುಪಿದೆ. ಈ ಯೋಜನೆ ಭಾಗವಾಗಿ ಮರಳು ಪೋಷಣೆ ಕಾಮಗಾರಿ ನಡೆಯಬೇಕಿತ್ತು. ಆದರೆ, ಇದು ನಡೆದೇ ಇಲ್ಲ ಎಂಬ ಆರೋಪವಿದೆ. ಈ ಯೋಜನೆ ಬಗ್ಗೆ ಸಾರ್ವಜನಿಕ ಆಡಿಟ್ ನಡೆದಿಲ್ಲ. ಈ ಕಾಮಗಾರಿಯ ನಂತರ ಬಟ್ಟಪ್ಪಾಡಿಯಲ್ಲಿ ಸಮುದ್ರ ಭೂಮಿಯನ್ನು ಕಬಳಿಸಿದೆ. ಮೀನುಗಾರಿಕಾ ರಸ್ತೆಯೇ ಕೊಚ್ಚಿಕೊಂಡು ಹೋಗಿದೆ. ಕಡಲ್ಕೊರೆತದಿಂದ ಅನೇಕರು ಜಮೀನು, ಮನೆ ಕಳೆದುಕೊಳ್ಳುತ್ತಾರೆ. ಅವರ ಆಸ್ತಿ–ಪಾಸ್ತಿ ಸರ್ಕಾರದ ಮಾನದಂಡದ ಪ್ರಕಾರ ಯಾವುದೇ ಯೋಜನೆಯಡಿ ಬರುವುದಿಲ್ಲ. ಇವರನ್ನು ಯೋಜನೆಯಿಂದ ಸಂತ್ರಸ್ತರಾದವರು ಎಂದು ಪರಿಗಣಿಸಿ, ಭೂ ಸ್ವಾಧೀನದ ಮಾದರಿಯಲ್ಲಿ ಪರಿಹಾರ ನೀಡಬೇಕು ಅಥವಾ ಸಂಬಂಧಪಟ್ಟ ಪೋರ್ಟ್ ಕಂಪನಿಗಳಿಂದ ಠೇವಣಿ ಪಡೆದು ನಿರ್ವಸಿತರಿಗೆ ವಸತಿ ಕಲ್ಪಿಸಬೇಕು.
ಮಹಾರಾಷ್ಟ್ರದ ಕೆಲವೆಡೆ ತ್ರಿಕೋನಾಕೃತಿಯ ಕಾಂಕ್ರೀಟ್ ಬ್ಲಾಕ್ ಅಂದರೆ ಟೆಟ್ರಾ ಪಾಡ್ ಅಳವಡಿಸಿದ್ದರಿಂದ ಈ ಬೃಹತ್ ಗಾತ್ರದ ಅಲೆಗಳು ನುಗ್ಗುವಿಕೆ ನಿಯಂತ್ರಣಕ್ಕೆ ಬಂದಿದೆ ಎನ್ನುತ್ತಾರೆ. ಇದು ನಮ್ಮ ಕರಾವಳಿಗೆ ಪರಿಣಾಮಕಾರಿಯಾಗಬಹುದೇ?
ಮುಂಬೈ ಜುಹು ಬೀಚ್‌ನಲ್ಲಿ ಟೆಟ್ರಾ ಪಾಡ್ ಅಳವಡಿಸಲಾಗಿದೆ. ಇದರ ತಾಳಿಕೆ ಹೆಚ್ಚು. ಬಂದರು ಚಟುವಟಿಕೆ ಹೆಚ್ಚಿರುವ ಕಾರಣ ದುಬಾರಿ ವೆಚ್ಚದ ಈ ವ್ಯವಸ್ಥೆಯನ್ನು ಅಲ್ಲಿ ಅಳವಡಿಸಲಾಯಿತು. ಮಂಗಳೂರಿನ ಹಳೆ ಬಂದರಿನಲ್ಲಿ ರಾಕ್ ಬೌಲ್ಡರ್ಸ್ ಬಳಸಿ ಬ್ರೇಕ್ ವಾಟರ್ ಕಟ್ಟಲಾಗಿತ್ತು. ಅಲೆಯ ಹೊಡೆತಕ್ಕೆ ಅರ್ಧಕ್ಕಿಂತ ಹೆಚ್ಚು ಭಾಗ ಹಾನಿಗೊಳಗಾಯಿತು. ನಂತರ ಇಲ್ಲಿಯೂ ಈಗ ಟೆಟ್ರಾ ಪಾಡ್ ಬಳಕೆ ಮಾಡಲಾಗಿದೆ. ಒಂದು ಕಿ.ಮೀ. ಟೆಟ್ರಾ ಪಾಡ್ ನಿರ್ಮಾಣಕ್ಕೆ ತಗಲುವ ವೆಚ್ಚ ಅಂದಾಜು ₹10 ಕೋಟಿ. ಅಲ್ಲದೆ, ಕರಾವಳಿಯುದ್ದಕ್ಕೂ ಇಂತಹ ನಿರ್ಮಾಣಗಳಾದರೆ, ನೈಸರ್ಗಿಕ ಸಂಪನ್ಮೂಲ ಕಳೆದುಕೊಳ್ಳಬೇಕಾಗುತ್ತದೆ.
ಸೀವಾಲ್ ಬದಲಾಗಿ ಗ್ರೀನ್ ವಾಲ್
1980ರ ದಶಕದಲ್ಲಿ ಆಂಧ್ರ ಪ್ರದೇಶದಲ್ಲಿ ಭೀಕರ ಚಂಡಮಾರುತ ಉಂಟಾದ ಸಂದರ್ಭದಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ವೈಮಾನಿಕ ಸಮೀಕ್ಷೆ ನಡೆಸಿದ್ದರು. ತಾಳೆ ಮರ, ಕಾಂಡ್ಲಾ ಗಿಡಗಳು ಇದ್ದ ಪೂರ್ವ ಕರಾವಳಿಯಲ್ಲಿ ಕಡಲ್ಕೊರೆತ ವ್ಯತಿರಿಕ್ತ ಪರಿಣಾಮ ಕಡಿಮೆ ಇರುವುದು ದಾಖಲಾಗಿತ್ತು. ಹಸಿರು ಗೋಡೆ ಹೆಚ್ಚಿಸುವುದರಿಂದ ಉತ್ತಮ ಪರಿಣಾಮ ನಿರೀಕ್ಷಿಸಬಹುದು. ಆದರೆ, ಇದನ್ನು ಅಳಿವೆ ಬಾಗಿಲು ಸೇರಿದಂತೆ ನಿರ್ದಿಷ್ಟ ಪ್ರದೇಶಗಳಲ್ಲಿ ಮಾತ್ರ ಮಾಡಲು ಸಾಧ್ಯವಿದೆ ಎನ್ನುತ್ತಾರೆ ಪ್ರೊ. ರಾಮಚಂದ್ರ ಭಟ್. ಸೀವಾಲ್‌ಗೆ ಪರ್ಯಾಯವಾಗಿ ಗ್ರೀನ್ ವಾಲ್ ನಿರ್ಮಾಣ ಹೆಚ್ಚು ಪ್ರಯೋಜನಕಾರಿ. ಈಗಲೂ ಅನೇಕ ಕಡೆಗಳಲ್ಲಿ ಕಾಣಬಹುದಾದ ಗಾಳಿ ಮರಗಳು, ಗಾಳಿ ಮತ್ತು ಕಡಲ್ಕೊರೆತ ಎರಡನ್ನೂ ತಡೆಯುತ್ತವೆ. ಬೈಲೋಬಾ ಪೆಸ್‌ಕಾರ್ಪೆ (Biloba Pescarpe) (ಬಂಗಡಿ ಬಳ್ಳಿ, ಆಡು ಹೆಜ್ಜೆ ಗಿಡ) ಇದು ಹರಡುವ ಜಾತಿಯ ಬಳ್ಳಿ. ಇದಕ್ಕೆ ಮರಳನ್ನು ಹಿಡಿದಿಟ್ಟುಕೊಳ್ಳುವ ಗುಣವಿದೆ. ಸಸಿಹಿತ್ಲು, ಮುಕ್ಕ ಕಡಲತೀರಗಳಲ್ಲಿ ಇದನ್ನು ಕಾಣಬಹುದು. ಸಾಧ್ಯತೆ ಇರುವ ಜಾಗಗಳಲ್ಲಿ ಇದನ್ನು ಸಹ ಬೆಳೆಸಬಹುದು ಎನ್ನುತ್ತಾರೆ ಪ್ರೊ. ಜಯಪ್ಪ.
‘ಕಡಲ ತೀರಗಳೆಂದರೆ ಅಲೆಗಳಿಗೆ ಆಟದ ಮೈದಾನವಿದ್ದಂತೆ. ಈ ಮೈದಾನವನ್ನು ನಾವು ಅತಿಕ್ರಮಿಸಿದರೆ ಅಲೆಗಳು ಉನ್ಮಾದಗೊಂಡಾಗ ನಮ್ಮ ಮನೆಯಂಗಳವನ್ನು ಅತಿಕ್ರಮಿಸುತ್ತವೆ’ ಎಂದು ಕಡಲ ವಿಜ್ಞಾನಿಗಳು ಹೇಳುತ್ತಾರೆ. ನಾವು ಈ ಮೈದಾನವನ್ನು ಅತಿಕ್ರಮಿಸಿದ್ದೇವೆಯೇ?
ಸಂಪೂರ್ಣವಾಗಿ ಅತಿಕ್ರಮಿಸಿಲ್ಲ, ಆದರೆ ಅತಿಕ್ರಮಣ ಆಗುತ್ತಿವೆ. ಎಲ್ಲೆಲ್ಲಿ ಕಡಲತೀರಗಳು ಅತಿಕ್ರಮಣವಾಗಿವೆಯೋ ಅಲ್ಲಿನ ದುಷ್ಪರಿಣಾಮವನ್ನು ನಾವು ಎದರಿಸುತ್ತಿದ್ದೇವೆ. ಬಟ್ಟಪ್ಪಾಡಿಯಲ್ಲಿ ಅಂತರರಾಷ್ಟ್ರೀಯ ಕ್ರೂಸ್ ಟರ್ಮಿನಲ್ ನಿರ್ಮಾಣಕ್ಕೆ ಯೋಜನೆ ಸಿದ್ಧವಾಗಿದೆ. ಇನ್ನೂ ಅನೇಕ ಯೋಜನೆಗಳು ಸಿದ್ಧವಾಗುತ್ತಿವೆ. ವೈಜ್ಞಾನಿಕ ದೃಷ್ಟಿಕೋನ ಇಲ್ಲದಿದ್ದರೆ, ಭವಿಷ್ಯದಲ್ಲಿ ದುಷ್ಪರಿಣಾಮ ಅನುಭವಿಸಬೇಕಾಗುತ್ತದೆ.
ಬೀಚ್‌ಗಳು ಕುಶನ್‌ನಂತೆ ಕೆಲಸ ಮಾಡುತ್ತವೆ. ದಡಕ್ಕೆ ಬರುವ ಅಲೆಗಳು ಸೆಡಿಮೆಂಟ್ ತರುತ್ತವೆ. ಅದು ನಿಂತು ಹಿಂದಕ್ಕೆ ತೆರಳಿದ ಸ್ಥಳದಲ್ಲಿ ಮರಳಿನ ಗೆರೆ ನಿರ್ಮಾಣವಾಗುತ್ತದೆ. ದಡದೆಡೆಗೆ ಬರುವಾಗ ಇರುವ ವೇಗ ಮರಳುವಾಗ ಇರುವುದಿಲ್ಲ. ಇದು ನಿತ್ಯ ಕಾಣುವ ವಿದ್ಯಮಾನ. ಕಡಲ ತೀರಗಳು ಇದ್ದ ಕಡೆಗಳಲ್ಲಿ ಕಟ್ಟಡಗಳು, ತೆಂಗಿನ ಮರಗಳಿಗೆ ಅಪಾಯ ಇರುವುದಿಲ್ಲ. ತೀರ ಇಲ್ಲದ ಪ್ರದೇಶಗಳಲ್ಲಿ ಅಲೆಗಳು ರಭಸದಲ್ಲಿ ಬಡಿಯುತ್ತವೆ. ಇದರಿಂದ ಹಾನಿಯಾಗುವ ಅಪಾಯ ಹೆಚ್ಚು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260831-29-966942073