ಪಶ್ಚಿಮ ಘಟ್ಟದ ತಪ್ಪಲಲ್ಲಿ ಬರದ ಭೀತಿ ನೀಗಿಸಿದ ಮಳೆ: ನೀರಿನ ಮಟ್ಟ ಏರಿಕೆ

ಪಶ್ಚಿಮ ಘಟ್ಟದ ತಪ್ಪಲಲ್ಲಿ ಬರದ ಭೀತಿ ನೀಗಿಸಿದ ಮಳೆ: ನೀರಿನ ಮಟ್ಟ ಏರಿಕೆ

ಪಶ್ಚಿಮ ಘಟ್ಟದ ತಪ್ಪಲಲ್ಲಿ ಬರದ ಭೀತಿ ನೀಗಿಸಿದ ಮಳೆ: ನೀರಿನ ಮಟ್ಟ ಏರಿಕೆ

ಉಡುಪಿ: ಮಳೆಗಾಲದ ಆರಂಭದ ಎರಡು ತಿಂಗಳುಗಳಲ್ಲಿ ಬಿಸಿಲಿನ ವಾತಾವರಣದಿಂದಾಗಿ ಜಿಲ್ಲೆಯಲ್ಲೂ ಬರದ ಛಾಯೆ ಕಾಡಿದ್ದರೂ ಆಗಸ್ಟ್‌ನಲ್ಲಿ ಸುರಿದ ಮಳೆ ಜನರಲ್ಲಿ ಸಮಾಧಾನ ತಂದಿದೆ.

ಜೂನ್ ತಿಂಗಳಲ್ಲಿ ಶೇ 50 ರಷ್ಟು ಮಳೆ ಕೊರತೆ ಕಾಡಿದ್ದರೂ. ಜುಲೈ ಕೊನೆಯ ವಾರ ಮತ್ತು ಆಗಸ್ಟ್ ತಿಂಗಳಲ್ಲಿ ಸುರಿದ ಬಿರುಸಿನ ಮಳೆಯು ಮಳೆ ಕೊರತೆಯನ್ನು ಶೇ 29ಕ್ಕೆ ಇಳಿಸಿದೆ.

ನಿರಂತರವಾಗಿ ಸುರಿಯದಿದ್ದರೂ ಬಿಟ್ಟು, ಬಿಟ್ಟು ಉತ್ತಮ ಮಳೆ ಸುರಿದ ಕಾರಣ ಉಡುಪಿ ನಗರಕ್ಕೆ ನೀರು ಸರಬರಾಜು ಮಾಡುವ ಬಜೆ ಅಣೆಕಟ್ಟೆಯಲ್ಲೂ ನೀರಿನ ಸಂಗ್ರಹ ಸಮರ್ಪಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜುಲೈ ತಿಂಗಳ ಮಧ್ಯದವರೆಗೂ ತುಂಬಿ ಹರಿಯದ ಜಿಲ್ಲೆಯ ನದಿಗಳಲ್ಲೂ ಇದೀಗ ಜಲರಾಶಿ ತುಂಬಿದೆ.

ಆಗಸ್ಟ್ 1ರಿಂದ 12 ನೇ ತಾರೀಖಿನವರೆಗೆ ಜಿಲ್ಲೆಯಲ್ಲಿ 53.4 ಸೆಂ.ಮೀ ಮಳೆಯಾಗಿದೆ. 49.3 ಸೆಂ.ಮೀ. ವಾಡಿಕೆ ಮಳೆ ಸುರಿಯಬೇಕಿತ್ತು. ಆದರೆ ಶೇ 8 ರಷ್ಟು ಅಧಿಕ ಮಳೆ ಸುರಿದಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮೂಲಗಳು ತಿಳಿಸಿವೆ.

ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶವಾದ ಹೆಬ್ರಿ ಮತ್ತು ಕಾರ್ಕಳ ತಾಲ್ಲೂಕಿನಲ್ಲೂ ಜೂನ್ ಮತ್ತು ಜುಲೈ ತಿಂಗಳಲ್ಲಿ ತೀವ್ರ ಮಳೆ ಕೊರತೆ ಕಾಡಿತ್ತು. ಆದರೆ ಜುಲೈ ಕೊನೆಯ ವಾರ ಮತ್ತು ಆಗಸ್ಟ್ ತಿಂಗಳಲ್ಲಿ ಈ ಪ್ರದೇಶದಲ್ಲಿ ಉತ್ತಮ ಮಳೆಯಾಗಿದೆ.

ಮಳೆ ಕೊರತೆಯಿಂದಾಗಿ ಭತ್ತದ ಕೃಷಿಗೂ ತೊಂದರೆಯಾಗಿತ್ತು. ಜಿಲ್ಲೆಯ ಬಹುತೇಕ ರೈತರು ಪಂಪ್‌ಸೆಟ್‌ ಮೂಲಕ ಬಾವಿ ನೀರು ಬಳಸಿ ಕೃಷಿ ಮಾಡಿದ್ದರು. ಆದರೆ ಅನಂತರ ಸುರಿದ ಮಳೆಯಿಂದಾಗಿ ಭತ್ತದ ಕೃಷಿಗೂ ಅನುಕೂಲವಾಗಿದೆ ಎನ್ನುತ್ತಾರೆ ರೈತರು.

ಜಿಲ್ಲೆಯಲ್ಲಿ ಈ ವರ್ಷ ಪೂರ್ವ ಮುಂಗಾರು ಮಳೆ ಕೂಡ ಶೇ 6ರಷ್ಟು ಕಡಿಮೆ ಸುರಿದಿತ್ತು.

ಜೂನ್, ಜುಲೈನಲ್ಲಿ ಬೇಸಿಗೆಯಂತೆ ಅತಿ ಬಿಸಿನ ವಾತಾವರಣವಿದ್ದು, ಬರದ ಭೀತಿ ಜನರನ್ನು ಕಾಡಿತ್ತು.

ಕಳೆದ ವರ್ಷ ಮೇ ತಿಂಗಳ ಎರಡನೇ ವಾರದಲ್ಲಿ ಆರಂಭವಾಗಿದ್ದ ಮಳೆ ಅಕ್ಟೋಬರ್ ತಿಂಗಳವರೆಗೆ ನಿರಂತರವಾಗಿ ಸುರಿದ ಪರಿಣಾಮವಾಗಿ ಜಿಲ್ಲೆಯಲ್ಲಿ ತೋಟಗಾರಿಕಾ ಬೆಳೆಗಳಿಗೆ ರೋಗ ಕಾಡಿತ್ತು. ಈ ಬಾರಿ ಮಳೆಗಾಲದ ಆರಂಭದಲ್ಲಿ ತೀವ್ರ ಬಿಸಿಲಿನ ವಾತಾವರಣವಿದ್ದ ಕಾರಣಕ್ಕೆ ಭತ್ತ, ತೋಟಗಾರಿಕಾ ಬೆಳೆಗಾರರಿಗೆ ಸಂಕಷ್ಟ ಎದುರಾಗಿತ್ತು.

‘ಇಳುವರಿ ಕುಸಿತ ಭೀತಿ ಇದೆ’

‘ಕಳೆದ 15 ದಿನಗಳಿಂದ ಜಿಲ್ಲೆಯ ವಿವಿಧೆಡೆ ಬಿಟ್ಟು ಬಿಟ್ಟು ಉತ್ತಮ ಮಳೆಯಾಗುತ್ತಿರುವುದು ಭತ್ತದ ಬೆಳೆಗೆ ಅನುಕೂಲವಾದರೂ ಮಳೆಗಾಲದ ಆರಂಭದ ದಿನಗಳಲ್ಲಿ ಬಿಸಿಲಿನ ಬೇಗೆ ಕಾಡಿರುವುದರಿಂದ ಭತ್ತದ ಇಳುವರಿ ಕುಸಿಯುವ ಸಾಧ್ಯತೆ ಇದೆ’ ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು ಹೇಳಿದ್ದಾರೆ.

‘ಆಗಸ್ಟ್‌ನಲ್ಲಿ ಉತ್ತಮ ಮಳೆಯಾಗಿರುವುದರಿಂದ ಜಿಲ್ಲೆಯಲ್ಲಿ ಬರದ ಭೀತಿ ಇಲ್ಲ. ಸದ್ಯ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಆದರೆ ಈ ಬಾರಿ ನದಿ ಉಕ್ಕಿ ಹರಿದಿಲ್ಲ’ ಎಂದು ಅವರು ತಿಳಿಸಿದರು.

‘ಕೆಲ ದಿನಗಳಿಂದ ಜಿಲ್ಲೆಯ ವಿವಿಧೆಡೆ ಉತ್ತಮ ಮಳೆಯಾಗಿರುವುದರಿಂದ ಭತ್ತದ ಬೆಳೆಗೆ ಇನ್ನು ನೀರಿನ ಸಮಸ್ಯೆ ಕಾಡದು. ಒಂದು ವೇಳೆ ಸೂಪರ್ ಎಲ್‌ ನಿನೊ ಬಂದರೆ ಮಾತ್ರ ನೀರಿನ ಸಮಸ್ಯೆ ಕಾಡುವ ಸಾಧ್ಯತೆ ಇದೆ’ ಎಂದು ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಧನಂಜಯ್ ತಿಳಿಸಿದರು.

‘ಆರಂಭದಲ್ಲಿ ಕಾಡಿದ ಮಳೆ ಕೊರತೆಯನ್ನು ಈಗ ಬರುತ್ತಿರುವ ಮಳೆ ನೀಗಿಸುತ್ತಿದೆ. ಅದರಿಂದ ಬರದ ಭೀತಿಯೂ ದೂರವಾಗಿದೆ’ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260814-28-1695755881

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ