
‘ಹ್ಯಾಂಡ್ ಇನ್ ಹ್ಯಾಂಡ್ ಇಂಡಿಯಾ’ದಿಂದ ಪೊಲೀಸರಿಗೆ ಹೈಟೆಕ್ ಮೊಬೈಲ್ ಶೌಚಾಲಯ ಕೊಡುಗೆ
ಬೆಂಗಳೂರು: ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಯ ಅನುಕೂಲಕ್ಕಾಗಿ ‘ಹ್ಯಾಂಡ್ ಇನ್ ಹ್ಯಾಂಡ್ ಇಂಡಿಯಾ’ ಸ್ವಯಂ ಸೇವಾ ಸಂಸ್ಥೆಯು ಮೂರು ಹೈಟೆಕ್ ಮೊಬೈಲ್ ಶೌಚಾಲಯ ವಾಹನಗಳನ್ನು ಪೊಲೀಸ್ ಇಲಾಖೆಗೆ ಕೊಡುಗೆಯಾಗಿ ನೀಡಿದೆ.
ಸಮಾವೇಶ, ಉತ್ಸವ, ರಾಷ್ಟ್ರೀಯ ಹಬ್ಬ, ಮೆರವಣಿಗೆ, ಪ್ರತಿಭಟನೆ, ಗಣ್ಯರ ಭೇಟಿ ಸಂದರ್ಭದಲ್ಲಿ ನಿಯೋಜನೆಗೊಳ್ಳುವ ಸಿಬ್ಬಂದಿ ಶೌಚಾಲಯಕ್ಕೆ ತೆರಳಲು ಸಾಧ್ಯವಾಗದೆ ಪರದಾಡುತ್ತಿದ್ದರು. ಅಲ್ಲದೇ, ನಾನಾ ರೀತಿಯ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದರು. ಈ ವಾಹನಗಳಿಂದ ಸಿಬ್ಬಂದಿಗೆ ಅನುಕೂಲವಾಗಿದೆ.
ರೆನಾಲ್ಟ್ ನಿಸಾನ್ ಟೆಕ್ನಾಲಜಿ ಆ್ಯಂಡ್ ಬಿಸಿನೆಸ್ ಸೆಂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಆರ್‌ಎನ್‍ಟಿಬಿಸಿಐ) ಸಿಎಸ್‍ಆರ್ ನೆರವಿನಡಿ ‘ಹೈಜೀನ್ ಆನ್ ಗೋ’ ಹೆಸರಿನ ವಾಹನಗಳನ್ನು ಸಿದ್ಧಪಡಿಸಲಾಗಿದೆ. ಈ ಮೂರು ವಾಹನಗಳ ಮರುವಿನ್ಯಾಸಕ್ಕೆ ಸುಮಾರು ₹80 ಲಕ್ಷ ವ್ಯಯಿಸಲಾಗಿದೆ. 2028ರ ಮಾರ್ಚ್‌ವರೆಗೆ ಈ ವಾಹನಗಳು ಕಾರ್ಯಾಚರಣೆ ಮಾಡಲಿದ್ದು, ವಾಹನಗಳ ನಿರ್ವಹಣೆ ಜವಾಬ್ದಾರಿಯನ್ನು ಹ್ಯಾಂಡ್ ಇನ್ ಹ್ಯಾಂಡ್ ಇಂಡಿಯಾ ಮಾಡಲಿದೆ.
ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕ ಶೌಚಾಲಯವಿದೆ. ಪಾಶ್ಚಿಮಾತ್ಯ ಕಮೋಡ್, ಕನ್ನಡಿ, ಫ್ಯಾನ್, ಹ್ಯಾಂಡ್ ವಾಷ್ ಬೇಸಿನ್, ಹ್ಯಾಂಡ್ ವಾಷ್, ಸ್ಯಾನಿಟರಿ ಪ್ಯಾಡ್ ಸುಡುವ ಯಂತ್ರ, ಸ್ಯಾನಿಟರಿ ಪ್ಯಾಡ್ ಸೌಲಭ್ಯ ಕಲ್ಪಿಸಲಾಗಿದೆ. 150 ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ವ್ಯವಸ್ಥೆಯೂ ವಾಹನದಲ್ಲಿದೆ. ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಅಭಿಪ್ರಾಯ ಹಾಗೂ ಸಲಹೆಯನ್ನು ನೀಡಬಹುದು.
ವಾಹನ ದಟ್ಟಣೆಯ ಮಾರ್ಗಗಳಾದ ಥಣಿಸಂದ್ರ, ಆಡುಗೋಡಿ ಮತ್ತು ಮೈಸೂರು ರಸ್ತೆಯ ನಿಗದಿಪಡಿಸಿದ 90 ಸ್ಥಳಗಳಲ್ಲಿ ಇವು ಕಾಲಕಾಲಕ್ಕೆ ಬಂದು ನಿಲ್ಲುತ್ತವೆ. ನಿತ್ಯ ಬೆಳಿಗ್ಗೆ 8 ರಿಂದ ಸಂಜೆ 6.30ರವರೆಗೆ ಕಾರ್ಯ ನಿರ್ವಹಿಸುತ್ತವೆ.
ಸಂಚಾರ ನಿರ್ವಹಣೆ ಮಾಡುವಾಗ ಶೌಚಾಲಯಕ್ಕೆ ಹೋಗುವುದಕ್ಕೂ ಬಿಡುವು ಸಿಗುವುದಿಲ್ಲ. ಜತೆಗೆ, ಸಮೀಪದಲ್ಲಿ ಶೌಚಾಲಯ ಸಿಗುವುದು ಕಷ್ಟ. ಶೌಚ ಬಾಧೆ ತೀರಿಸಿಕೊಳ್ಳಲು ಪರದಾಡಬೇಕು. ನಿರ್ಜಲೀಕರಣ, ಮೂತ್ರನಾಳದ ಸೋಂಕು ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಮಹಿಳಾ ಸಿಬ್ಬಂದಿ ಜನನಿಬಿಡ ರಸ್ತೆಗಳಲ್ಲಿ ಕಾರ್ಯ ನಿರ್ವಹಿಸುವಾಗ ಇನ್ನೂ ಹೆಚ್ಚು ಕಷ್ಟ ಅನುಭವಿಸುತ್ತಾರೆ.
ನಗರದಲ್ಲಿ ತೀವ್ರ ವಾಹನ ದಟ್ಟಣೆಯ ವಿವಿಧ ರಸ್ತೆಗಳಲ್ಲಿ ಕರ್ತವ್ಯ ನಿರ್ವಹಿಸುವ ಸಂಚಾರ ಪೊಲೀಸರು, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪೊಲೀಸರು, ಗೃಹ ರಕ್ಷಕ ದಳ ಸಿಬ್ಬಂದಿ ಈ ವಾಹನಗಳ ಸೇವೆಯನ್ನು ಬಳಸಿಕೊಳ್ಳುತ್ತಿದ್ದಾರೆ.
ವಾಹನಗಳ ಸಂಖ್ಯೆ ಹೆಚ್ಚಿಸಲು ಬೇಡಿಕೆ
‘ಪೊಲೀಸರು ಸಂಚಾರ ನಿರ್ವಹಣೆ ಮಾಡುವ ಸಮೀಪದಲ್ಲಿ ಶೌಚಾಲಯದ ವ್ಯವಸ್ಥೆಯೂ ಇರಲಿಲ್ಲ. ಈ ಸಮಸ್ಯೆ ಬಗೆಹರಿಸುವ ಸಲುವಾಗಿ ಮೂರು ಹೈಟೆಕ್ ಮೊಬೈಲ್ ಶೌಚಾಲಯ ವಾಹನಗಳನ್ನು ನೀಡಲಾಗಿದೆ. ಥಣಿಸಂದ್ರ, ಆಡುಗೋಡಿ, ಕೋರಮಂಗಲ–ಸಿಲ್ಕ್‌ಬೋರ್ಡ್, ಚಾಮರಾಜಪೇಟೆ–ಬನಶಂಕರಿ ವ್ಯಾಪ್ತಿಯ ವಿವಿಧ ಜಂಕ್ಷನ್ ಮತ್ತು ಪ್ರಮುಖ ಸ್ಥಳಗಳಲ್ಲಿ ವಾಹನಗಳ ನಿಲುಗಡೆ ಮಾಡಲಾಗುತ್ತದೆ. ಇದರಿಂದ ಸಾಕಷ್ಟು ಅನುಕೂಲವಾಗಿದ್ದು, ಸಮಾವೇಶ, ದೊಡ್ಡ ಸಮಾರಂಭ ನಡೆಯುವ ಸ್ಥಳಕ್ಕೆ ವಾಹನ ಕಳುಹಿಸುವಂತೆ ಅಧಿಕಾರಿಗಳು ಕೇಳುತ್ತಾರೆ’ ಎಂದು ಹ್ಯಾಂಡ್ ಇನ್ ಹ್ಯಾಂಡ್ ಇಂಡಿಯಾ ಯೋಜನಾ ನಿರ್ದೇಶಕಿ ಎಂ.ಅಂಬಿಕಾ ‘ಪ್ರಜಾವಾಣಿ‘ಗೆ ತಿಳಿಸಿದರು.
‘ಮಾರತ್‌ಹಳ್ಳಿ ಸೇರಿ ಇನ್ನೂ ಹಲವು ಜಂಕ್ಷನ್‌ಗಳಿಗೆ ಈ ವಾಹನ ಅಗತ್ಯವಿದೆ. ಈ ವಾಹನಗಳ ಸಂಖ್ಯೆ ಹೆಚ್ಚಿಸುವಂತೆ ಬೇಡಿಕೆ ಬಂದಿದೆ. ನಾಲ್ಕು ಚಾಲಕರು, ಸಂಬಳ, ಇಂಧನ ವೆಚ್ಚ ಸೇರಿ ತಿಂಗಳಿಗೆ ಒಂದು ಲಕ್ಷಕ್ಕೂ ಹೆಚ್ಚು ಖರ್ಚಾಗಲಿದೆ. ವರ್ಷವಿಡೀ ಈ ವಾಹನ ಕಾರ್ಯನಿರ್ವಹಿಸಲಿದೆ’ ಎಂದು ಹೇಳಿದರು.
ವಾಹನದಲ್ಲಿರುವ ಸೌಕರ್ಯಗಳು
ಬೆಂಕಿ ನಂದಿಸುವ ಸಾಧನ
ಜಿಪಿಎಸ್ ಟ್ರ್ಯಾಕಿಂಗ್ ವ್ಯವಸ್ಥೆ
ಪ್ರಥಮ ಚಿಕಿತ್ಸಾ ಕಿಟ್
ಹೊರ ಭಾಗದಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆ
ಎಲ್ಇಡಿ ಪರದೆಯಲ್ಲಿ ಸಂಚಾರ ನಿಯಮ ಜಾಗೃತಿ
ಜಿಪಿಎಸ್ ಟ್ರ್ಯಾಕಿಂಗ್ ವ್ಯವಸ್ಥೆ
ಹೊರ ಭಾಗದಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆ
ಎಲ್ಇಡಿ ಪರದೆಯಲ್ಲಿ ಸಂಚಾರ ನಿಯಮ ಜಾಗೃತಿ
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260825-16-121078340