ಶಿಡ್ಲಘಟ್ಟ: ನಾಲ್ಕು ಎಕರೆಯಲ್ಲಿ ವೈವಿಧ್ಯಮಯ ಬೆಳೆ ಬೆಳೆದು ಯಶಸ್ವಿಯಾದ ರೈತ ದಂಪತಿ

ಶಿಡ್ಲಘಟ್ಟ: ನಾಲ್ಕು ಎಕರೆಯಲ್ಲಿ ವೈವಿಧ್ಯಮಯ ಬೆಳೆ ಬೆಳೆದು ಯಶಸ್ವಿಯಾದ ರೈತ ದಂಪತಿ

ಶಿಡ್ಲಘಟ್ಟ: ನಾಲ್ಕು ಎಕರೆಯಲ್ಲಿ ವೈವಿಧ್ಯಮಯ ಬೆಳೆ ಬೆಳೆದು ಯಶಸ್ವಿಯಾದ ರೈತ ದಂಪತಿ

ಶಿಡ್ಲಘಟ್ಟ: ‘ಒಂದೇ ಬೆಳೆ ಮೇಲೆ ಅವಲಂಬನೆಯಾಗುವುದಕ್ಕಿಂತಲೂ ಕಡಿಮೆ ನೀರಿನಲ್ಲೇ ಹಲವು ಬೆಳೆಗಳನ್ನು ಬೆಳೆದರೆ ಕೃಷಿಯಲ್ಲಿನ ಅಪಾಯ ಕಡಿಮೆ ಮಾಡಬಹುದು. ಒಂದು ಬೆಳೆ ಕೈಕೊಟ್ಟರೂ ಮತ್ತೊಂದು ಬೆಳೆ ಕೈಹಿಡಿಯುತ್ತದೆ. ನೀರಿನ ಸದ್ಬಳಕೆ, ವೈವಿಧ್ಯಮ ಬೆಳೆ ಹಾಗೂ ನಮ್ಮ ಶ್ರಮವೇ ಬರದ ನಡುವೆಯೂ ತೋಟವನ್ನು ಹಚ್ಚ ಹಸಿರಾಗಿಡಲು ನೆರವಾಗಿದೆ’ ಎಂದು ತಾಲ್ಲೂಕಿನ ಗುಡಿಹಳ್ಳಿಯ ರೈತ ದಂಪತಿ ನಾಗರಾಜ್–ಚನ್ನಕೃಷ್ಣಮ್ಮ ಹೇಳುತ್ತಾರೆ.

ನಾಗರಾಜ್–ಚನ್ನಕೃಷ್ಣಮ್ಮ ಅವರು ತಮಗಿರುವ ನಾಲ್ಕು ಎಕರೆ ಜಮೀನಿನಲ್ಲಿ ಮಿತ ನೀರಿನ ಬಳಕೆಯೊಂದಿಗೆ ಹಣ್ಣು, ತರಕಾರಿ, ಹೂವು, ಸಾಂಬರ ಬೆಳೆಗಳ ಜೊತೆಗೆ ಕುರಿ ಸಾಕಾಣಿಕೆಯನ್ನೂ ಮಾಡುತ್ತಿದ್ದಾರೆ. ಮಿತ ನೀರು ಮತ್ತು ಸಂಪನ್ಮೂಲಗಳಲ್ಲಿ ಈ ದಂಪತಿ ಕೃಷಿಯ ಹಲವು ಸಾಧ್ಯತೆಗಳನ್ನು ಕಂಡುಕೊಂಡಿದ್ದಾರೆ. ತೋಟದ ಕೆಲಸದಿಂದ ಹಿಡಿದು ಕೃಷಿ ಉಪಕರಣಗಳ ತಯಾರಿಕೆ, ನಿರ್ವಹಣೆವರೆಗೆ ಸಾಧ್ಯವಿರುವ ಎಲ್ಲ ಪರಿಕರಗಳನ್ನು ಅವರೇ ತಯಾರಿಸಿಕೊಳ್ಳುತ್ತಾರೆ. ಇದರೊಂದಿಗೆ ಈ ದಂಪತಿ ಉತ್ತಮ ಜೀವನ ಕಟ್ಟಿಕೊಂಡಿದ್ದಾರೆ.

ಬರದ ವರ್ಷಗಳಲ್ಲಿ ಕೃಷಿ ಕ್ಷೇತ್ರದಲ್ಲಿ ನೀರಿನ ಲೆಕ್ಕಾಚಾರ, ಬೆಳೆಯ ಆಯ್ಕೆ ಸೇರಿದಂತೆ ಇನ್ನಿತರ ಗೊಂದಲ ಮತ್ತು ಆದಾಯದ ಅನಿಶ್ಚಿತತೆ ಸರ್ವೇ ಸಾಮಾನ್ಯ. ಆದರೆ, ತಾಲ್ಲೂಕಿನ ಗುಡಿಹಳ್ಳಿಯ ನಾಗರಾಜ್‌ ಮತ್ತು ಚನ್ನಕೃಷ್ಣಮ್ಮ ಅವರ ತೋಟವನ್ನು ಕಂಡರೆ, ಕಡಿಮೆ ನೀರು ಮತ್ತು ಸಂಪನ್ಮೂಲಗಳಲ್ಲೇ ಕೃಷಿಯನ್ನು ಅತ್ಯುತ್ತಮ ರೀತಿಯಲ್ಲಿ ನಿರ್ವಹಿಸಬಹುದು ಎಂಬುದು ಮನದಟ್ಟಾಗುತ್ತದೆ.

ಆದಾಯದ ದಾರಿಗಳು: ತೋಟದಲ್ಲಿ ಹಿಪ್ಪುನೇರಳೆ ಸೊಪ್ಪಿನ ನಡುವೆ 45 ಮಾವಿನ ಮರಗಳನ್ನು ಬೆಳೆಸಿದ್ದಾರೆ. ಜತೆಗೆ 160 ಗೋಡಂಬಿ ಮರಗಳು ಮತ್ತು 40 ತೆಂಗಿನ ಮರಗಳು ಇವೆ. ಕಳೆದ ವರ್ಷ 12 ಕ್ವಿಂಟಲ್ ಗೋಡಂಬಿ ಫಸಲು ಪಡೆದಿದ್ದಾಗಿ ದಂಪತಿ ಹೇಳುತ್ತಾರೆ. ತೋಟದ ಒಂದು ಭಾಗದಲ್ಲಿ ಅವರೆಕಾಯಿ, ಮನೆ ಸಮೀಪ ದುಂಡು ಬದನೆ ಸೇರಿದಂತೆ ವಿವಿಧ ಬಗೆಯ ತರಕಾರಿ ಬೆಳೆಗಳಿವೆ. ತೋಟದ ಬದಿಯಲ್ಲಿ ಸೀಮೆಹುಲ್ಲು ಬೆಳೆಸಿದ್ದು, 10 ಕುರಿಗಳ ಸಾಕಾಣಿಕೆಗೆ ಬಳಸಿಕೊಳ್ಳುತ್ತಿದ್ದಾರೆ.

ಮೂರು ವಿಧದ ಮೆಣಸಿನಕಾಯಿ—ಗುಂಟೂರು, ಬ್ಯಾಡಗಿ ಮತ್ತು ಲಿಚಿ ಮೆಣಸಿನಕಾಯಿ ಬೆಳೆಸಿ, ಒಣಗಿಸಿ ಮಾರುತ್ತಾರೆ. ಹೀಗಾಗಿ ಒಂದು ಬೆಳೆಯ ಇಳುವರಿ ಅಥವಾ ಬೆಲೆ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗದೆ, ಬೇರೆ ಬೇರೆ ಬೆಳೆಗಳಿಂದ ಆದಾಯದ ಅವಕಾಶಗಳನ್ನು ಸೃಷ್ಟಿಸಿಕೊಂಡಿದ್ದಾರೆ.

ಬರದ ಮಧ್ಯೆಯೂ ಹಸಿರಾಗಿರುವ ತೋಟ: ಬರದ ನಡುವೆಯೂ ತೋಟವನ್ನು ಹಸಿರಾಗಿಟ್ಟುಕೊಂಡಿದ್ದಾರೆ. ದಂಪತಿ ತೋಟದಲ್ಲಿ ಎರಡು ಕೊಳವೆ ಬಾವಿಗಳಿದ್ದು, ಅವುಗಳಿಂದ ತಲಾ ಸುಮಾರು 2,000 ಗ್ಯಾಲನ್‌ ನೀರು ದೊರೆಯುತ್ತದೆ. ಲಭ್ಯವಿರುವ ನೀರನ್ನು ಹಲವು ಬೆಳೆಗಳಿಗೆ ಬಳಸಲಾಗುತ್ತಿದೆ. ಒಂದೇ ಜಾಗದಲ್ಲಿ ಹೆಚ್ಚಿನ ಪ್ರಮಾಣದ ಒಂದೇ ಬೆಳೆ ಬೆಳೆಸುವ ಬದಲು, ಬೇರೆ ಬೇರೆ ಅವಧಿಯಲ್ಲಿ ಫಸಲು ಕೊಡುವ ಮರ, ಗಿಡ, ತರಕಾರಿ ಮತ್ತು ಇತರ ಬೆಳೆಗಳನ್ನು ಜೋಡಿಸಿದ್ದಾರೆ.

ಕಳೆ ಕಾಣದಂತೆ ನಿರ್ವಹಣೆ: ನಾಲ್ಕು ಎಕರೆ ತೋಟದಲ್ಲಿ ಕಳೆ ಗಿಡಗಳು ಕಾಣದಂತೆ ನಿರ್ವಹಣೆ ಮಾಡಲಾಗಿದೆ. ಬೆಳೆಗಳ ನಡುವೆ ಖಾಲಿ ಜಾಗ ಬಿಡದೆ, ವಿವಿಧ ಸಸ್ಯಗಳನ್ನು ಹೊಂದಿಸಿಕೊಂಡಿರುವುದರಿಂದ ತೋಟವು ವರ್ಷವಿಡೀ ಹಸಿರು ಹೊದಿಕೆಯಲ್ಲಿರುವಂತೆ ಕಾಣುತ್ತದೆ.

ಹಣ್ಣು, ತರಕಾರಿ, ಹೂವು, ಸಾಂಬಾರ ಪದಾರ್ಥ, ಮೇವು, ಕುರಿ ಸಾಕಣೆ ಹೀಗೆ ಒಂದಕ್ಕೊಂದು ಪೂರಕವಾಗುವ ಕೃಷಿ ಚಟುವಟಿಕೆಗಳನ್ನು ಒಂದೇ ಜಾಗದಲ್ಲಿ ನಿರ್ವಹಿಸಲಾಗುತ್ತಿದೆ. ಬರವನ್ನು ಗೆಲ್ಲುವುದು ಎಂದರೆ ಬರವೇ ಇಲ್ಲದಂತೆ ಕೃಷಿ ಮಾಡುವುದು ಅಲ್ಲ; ಇರುವ ನೀರು, ಶ್ರಮ ಮತ್ತು ಸಂಪನ್ಮೂಲಗಳಿಗೆ ತಕ್ಕಂತೆ ಕೃಷಿಯ ಸ್ವರೂಪವನ್ನೇ ಬದಲಿಸಿಕೊಳ್ಳುವುದು ಎಂಬುದನ್ನು ನಾಗರಾಜ್‌–ಚನ್ನಕೃಷ್ಣಮ್ಮ ದಂಪತಿಯ ತೋಟ ಹೇಳುತ್ತದೆ.

ಕಂಗೊಳಿಸುವ ಹೂವು, ಹಣ್ಣಿನ ಗಿಡಗಳು

ನಾಗರಾಜ್‌ ಮತ್ತು ಚನ್ನಕೃಷ್ಣಮ್ಮ ಅವರು ತೋಟದಲ್ಲೇ ಮನೆ ಮಾಡಿಕೊಂಡಿದ್ದಾರೆ. ಮನೆಯ ಸುತ್ತಲೂ ವೈವಿಧ್ಯಮಯ ಗಿಡಗಳಿವೆ. 20ಕ್ಕೂ ಹೆಚ್ಚು ಬಗೆಯ ಹಣ್ಣಿನ ಗಿಡಗಳು ಹಾಗೂ 40ಕ್ಕೂ ಹೆಚ್ಚು ಹೂವಿನ ಗಿಡಗಳು ಮನೆಯ ಪರಿಸರ ಆವರಿಸಿದೆ.

ಕಸ್ತೂರಿ ಬಾಳೆ, ಚಂದ್ರಬಾಳೆ, ಕಾಫಿ, ಹಲಸು, ಸೇಬು, ಕಬ್ಬು, ಶುಂಠಿ, ಪೈನಾಪಲ್‌, ಎರಡು ಬಗೆಯ ಸೀಬೆ, ನೇರಳೆ, ಸಪೋಟ, ಮೋಸಂಬಿ, ದಾಳಿಂಬೆ, ನಿಂಬೆ, ಅಡಿಕೆ, ಏಲಕ್ಕಿ, ಲವಂಗ, ಮೆಣಸು, ಬಳ್ಳಿ ಆಲೂಗಡ್ಡೆ, ಬಟರ್‌ಫ್ರೂಟ್‌, ಎಗ್‌ಫ್ರೂಟ್‌, ಡ್ರಾಗನ್‌ಫ್ರೂಟ್‌, ಕಿತ್ತಳೆ, ಸೀತಾಫಲ, ರಾಮಫಲ, ಹನುಮಫಲ, ಸ್ಟಾರ್‌ಫ್ರೂಟ್‌, ಕರಿಬೇವು, ಸೋಂಪು, ನುಗ್ಗೆ, ಪನ್ನೇರಳೆ, ಸ್ಟ್ರಾಬೆರಿ, ಲಿಚ್ಚಿ ಸೇರಿದಂತೆ ಹಲವು ಬಗೆಯ ಸಸ್ಯಗಳನ್ನು ಬೆಳೆಸಿದ್ದಾರೆ.

ಅಲ್ಲದೆ ಐದು ವಿಧದ ಮಲ್ಲಿಗೆ, ನಂದಿವರ್ಧನ, ಹಲವು ಬಗೆಯ ದಾಸವಾಳ, ಡೇರಾ, ಪುದೀನಾ, ಮೂರು ವಿಧದ ತುಳಸಿ, ಪಾರಿಜಾತ, ಬ್ರಹ್ಮಕಮಲ, ಸದಾಪುಷ್ಪ, ಶಂಖಪುಷ್ಪ, ಅಷ್ಟಲಕ್ಷ್ಮಿ ಗಿಡ, ಗ್ಲಾಡಿಯೋಲಸ್‌ ಸೇರಿದಂತೆ ವಿವಿಧ ಹೂ ಹಾಗೂ ಅಲಂಕಾರಿಕ ಸಸ್ಯಗಳು ತೋಟದಲ್ಲಿವೆ.

ತಾವೇ ನಿರ್ವಹಿಸುವ ತೋಟದ ಕೆಲಸ

ಕೃಷಿ ಕೆಲಸದ ಜತೆಗೆ ಉಪಕರಣಗಳ ವಿಚಾರದಲ್ಲೂ ನಾಗರಾಜ್‌ ಸ್ವಾವಲಂಬನೆ ದಾರಿ ಹಿಡಿದಿದ್ದಾರೆ. ಮನೆಯ ಹಿಂಭಾಗದಲ್ಲಿ ಕುಲುಮೆ ಮಾಡಿಕೊಂಡಿದ್ದು, ಚನಕೆ, ಗುದ್ದಲಿ, ಹಾರೆ ಸೇರಿದಂತೆ ಕೆಲವು ಕೃಷಿ ಉಪಕರಣಗಳನ್ನು ತಾವೇ ತಯಾರಿಸಿಕೊಳ್ಳುತ್ತಾರೆ. ಕಟಿಂಗ್‌ ಮೆಷಿನ್‌, ಡ್ರಿಲ್ಲಿಂಗ್‌ ಮೆಷಿನ್‌, ಸಾಣೆ ಮೆಷಿನ್‌ ಸೇರಿದಂತೆ ಮರಗೆಲಸ ಮತ್ತು ಕಬ್ಬಿಣದ ಕೆಲಸಕ್ಕೆ ಬೇಕಾದ ಹಲವು ಉಪಕರಣಗಳು ಅವರಲ್ಲಿವೆ. ಕೃಷಿಗೆ ಬೇಕಾದ ದುರಸ್ತಿ ಹಾಗೂ ಸಣ್ಣಪುಟ್ಟ ತಯಾರಿ ಕೆಲಸಗಳನ್ನು ತಾವೇ ಮಾಡಿಕೊಳ್ಳುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ.

ತೋಟಕ್ಕೆ ಗೊಬ್ಬರ ಹಾಗೂ ಔಷಧಿ ಸಿಂಪಡಿಸುವ ಕೆಲಸಕ್ಕೂ ಟ್ರ್ಯಾಕ್ಟರ್‌ ಬಳಸುತ್ತಾರೆ. ಸಾಧ್ಯವಾದಷ್ಟು ತೋಟದ ಕೆಲಸಗಳನ್ನು ನಾಗರಾಜ್‌ ಮತ್ತು ಚನ್ನಕೃಷ್ಣಮ್ಮ ಅವರೇ ನಿರ್ವಹಿಸುತ್ತಾರೆ. ಕೃಷಿಯಲ್ಲಿನ ಶ್ರಮದ ಜತೆಗೆ, ಕೃಷಿಗೆ ಬೇಕಾದ ಸಾಧನಗಳನ್ನೂ ಸ್ವತಃ ನಿರ್ವಹಿಸಿಕೊಳ್ಳುವ ಈ ಕ್ರಮ ಅವರ ಖರ್ಚು ಮತ್ತು ಹೊರಗಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಎನ್ನುತ್ತಾರೆ ದಂಪತಿ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260813-16-235094016

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ