
ಮುಳ್ಳಯ್ಯನಗಿರಿ ರೋಪ್‌ವೇ ಯೋಜನೆಗೆ ಆರಂಭಿಕ ಜಾಗದ ತೊಡಕು!
ಚಿಕ್ಕಮಗಳೂರು: ಮುಳ್ಳಯ್ಯನಗಿರಿಗೆ ರೋಪ್‌ವೇ ನಿರ್ಮಿಸುವ ಯೋಜನೆಗೆ ಟ್ರಾಂಜಾಕ್ಷನ್ ಅಡ್ವೈಸರ್ (ವಹಿವಾಟು ಸಲಹೆಗಾರ) ಸಂಸ್ಥೆ ನೇಮಿಸಲು ಪ್ರವಾಸೋದ್ಯಮ ಇಲಾಖೆ ಸಿದ್ಧತೆ ನಡೆಸಿದೆ. ಆದರೆ, ಆರಂಭಿಕ ಸ್ಥಳಕ್ಕೆ ಜಾಗ ಅಂತಿಮವಾಗದೆ ಇರುವುದು ಯೋಜನೆಗೆ ತೊಡಕಾಗಿದೆ.
ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ,ಬಾಬಾಬುಡನ್‌ಗಿರಿ, ದೇವೀರಮ್ಮ ಬೆಟ್ಟಗಳ ಸಾಲುಗಳಿವೆ. ಶೋಲಾ ಅರಣ್ಯ ಈ ಗಿರಿಶ್ರೇಣಿಯ ವೈಶಿಷ್ಟ್ಯ. ಯಗಚಿ, ವೇದಾವತಿ ಸೇರಿ ಹಲವು ನದಿಗಳ ಉಗಮ ಸ್ಥಾನ. ಝರಿಗಳು, ಜಲಪಾತಗಳು, ಹಸಿರು ಕಾನನದ ತಾಣ. ಹುಲಿ, ಆನೆ, ಚಿರತೆ, ಜಿಂಕೆ ಸೇರಿ ವನ್ಯಜೀವಿ ಸಂಕುಲದ ಆವಾಸ ಸ್ಥಾನವಾದ ಭದ್ರಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ತಾಣ.
ಈ ತಾಣಕ್ಕೆ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಈ ತಾಣವನ್ನು ಇನ್ನಷ್ಟು ರಮಣೀಯವಾಗಿ ಪ್ರವಾಸಿಗರಿಗೆ ಪರಿಚಯಿಸುವುದು ಪ್ರವಾಸೋದ್ಯಮ ಇಲಾಖೆಯ ಉದ್ದೇಶ. ಅದಕ್ಕಾಗಿ ರೋಪ್‌ವೇ ನಿರ್ಮಿಸುವ ಯೋಜನೆಯನ್ನು ಸರ್ಕಾರ ರೂಪಿಸಿದೆ. 2023ರಲ್ಲಿ ಮುಳ್ಳಯ್ಯನಗಿರಿಗೆ ಭೇಟಿ ನೀಡಿದ್ದ ತಜ್ಞರ ತಂಡ ಐದು ಸ್ಥಳಗಳನ್ನು ಗುರುತು ಮಾಡಿದೆ. ಮುಳ್ಳಯ್ಯನಗಿರಿ,ಕವಿಕಲ್ ಗಂಡಿ, ದತ್ತಪೀಠ ಟವರ್ ಪಾಯಿಂಟ್, ಮಾಣಿಕ್ಯಧಾರಾ ಜಲಪಾತ, ಗಿರಿಯಿಂದ ಕೆಳಗೆ ಕಾಣಿಸುವ ತಿರುವು ರಸ್ತೆಯ ಜಂಕ್ಷನ್ ಸೇರಿ ಐದು ಕಡೆ ಸ್ಥಳ ಪರಿಶೀಲನೆ ನಡೆಸಿತ್ತು.
2026ರ ಬಜೆಟ್‌ನಲ್ಲಿ ಮತ್ತೊಮ್ಮೆ ಪ್ರಸ್ತಾಪಿಸಿ ಸೀತಾಳಯ್ಯನಗಿರಿಯಿಂದ ಕೈಮರ ತನಕ ಪಿಪಿಪಿ(ಖಾಸಗಿ ಸಹಭಾಗಿತ್ವ) ಮಾದರಿಯಲ್ಲಿ ಈ ಯೋಜನೆ ಅನುಷ್ಠಾನ ಮಾಡುವುದಾಗಿ ಹೇಳಿದೆ. ಈಗ ಟ್ರಾಂಜಾಕ್ಷನ್ ಅಡ್ವೈಸರ್ ನೇಮಿಸಲು ಸಿದ್ಧತೆ ನಡೆಸಿದೆ. ಟ್ರ್ಯಾಂಜಾಕ್ಷನ್ ಅಡ್ವೈಸರ್(ಟಿ.ಎ) ಸಂಸ್ಥೆಯನ್ನು ನೇಮಿಸಿದರೆ ತಜ್ಞ ಸಂಸ್ಥೆಯು ರೋಪ್‌ವೇ ಯೋಜನೆಯನ್ನು ಸರ್ಕಾರ ಯಾವ ರೀತಿಯಲ್ಲಿ ಅಭಿವೃದ್ಧಿಪಡಿಸಬೇಕು, ಹಣಕಾಸು ವ್ಯವಸ್ಥೆ ಹೇಗೆ ಮಾಡಬೇಕು, ಖಾಸಗಿ ಸಂಸ್ಥೆಯನ್ನು ಹೇಗೆ ಆಯ್ಕೆ ಮಾಡಬೇಕು ಎಂಬುದರ ಕುರಿತು ಸಲಹೆ ನೀಡಲಿದೆ.
ಏಜೆನ್ಸಿಯನ್ನು ನೇಮಕ ಮಾಡಿದರೆ ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ರೋಪ್‌ವೇ ನಿರ್ಮಾಣ ಸಾಧ್ಯವೇ, ಎಷ್ಟು ಪ್ರಯಾಣಿಕರು ಬಳಸಬಹುದು,ಯೋಜನೆಯ ಅಂದಾಜು ವೆಚ್ಚ ಎಷ್ಟು, ಆದಾಯ ಎಷ್ಟು ಬರಬಹುದು ಎಂಬುದನ್ನು ಅಧ್ಯಯನ ಮಾಡಲಿದೆ. ಯೋಜನೆಗೆ ಬೇಕಾದ ಬಂಡವಾಳ, ನಿರ್ವಹಣಾ ವೆಚ್ಚ, ಟಿಕೆಟ್ ದರ, ನಿರೀಕ್ಷಿತ ಆದಾಯ, ಲಾಭ–ನಷ್ಟದ ಅಂದಾಜು ಸೇರಿ ಎಲ್ಲವನ್ನೂ ಸಿದ್ಧಪಡಿಸುತ್ತದೆ.
ಈ ಏಜೆನ್ಸಿ ನೇಮಕ ಮಾಡುವ ಮುನ್ನ ಅದಕ್ಕೆ ಕೈಮರ ಬಳಿ ಬೇಕಿರುವ ಆರಂಭಿಕ ಜಾಗ ಗುರುತು ಮಾಡಬೇಕಿದೆ. ಕೈಮರ ಚೆಕ್‌ಪೋಸ್ಟ್ ಈಗ ಎನ್‌ಎಂಡಿಸಿ ಬಳಿಗೆ ಸ್ಥಳಾಂತರವಾಗಿದೆ. ಆದಿಚುಂಚನಗಿರಿ ಮಠದ ಜಾಗವಿದ್ದು, ಅದರಲ್ಲಿ ಐದು ಎಕರೆ ಜಾಗ ಪಡೆದುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಈ ಜಾಗ ಪಡೆದುಕೊಂಡರೆ ವಾಹನ ನಿಲುಗಡೆ ತಾಣ, ರೋಪ್‌ವೇ ಆರಂಭಿಕ ಸ್ಥಳಕ್ಕೆ ಬೇಕಾದ ಜಾಗ ಸೇರಿ ಎಲ್ಲಾ ಸಮಸ್ಯೆಗಳೂ ಇತ್ಯರ್ಥವಾಗಲಿವೆ. ಆದ್ದರಿಂದ ಬೇರೆಡೆ ಜಾಗ ನೀಡಿ ಆದಿಚುಂಚನಗಿರಿ ಮಠದ ಸ್ವಾಮೀಜಿ ಅವರೊಂದಿಗೆ ಮಾತನಾಡಿ ಜಾಗ ಪಡೆಯಲು ಕಂದಾಯ ಇಲಾಖೆ ಅಧಿಕಾರಿಗಳು ಈ ಪ್ರಯತ್ನ ಮುಂದುವರಿಸಿದ್ದಾರೆ. ಆದರೆ, ಇನ್ನೂ ಅಂತಿಮವಾಗಿಲ್ಲ. ಇದರಿಂದಾಗಿ ಯೋಜನೆ ಪ್ರಗತಿ ಕಂಡಿಲ್ಲ.
ಆರಂಭಿಕ ಸ್ಥಳ ಎಂದರೆ ಲೋಯರ್ ಟ್ರಾಂಜಾಕ್ಷನ್ ಪಾಯಿಂಟ್(ಎಲ್‌ಟಿಪಿ) ಎಂದು ಕರೆಯಲಾಗುತ್ತದೆ. ಸೀತಾಳಯ್ಯನಗಿರಿಯಲ್ಲಿ ಅಪ್ಪರ್ ಟ್ರಾಂಜಾಕ್ಷನ್ ಪಾಯಿಂಟ್(ಯುಟಿಪಿ) ನಿರ್ಮಿಸಲು ಉದ್ದೇಶಿಸಲಾಗಿದೆ. ಮೊದಲಿಗೆ ಎಲ್‌ಟಿಪಿ ನಿರ್ಮಾಣಕ್ಕೆ ಜಾಗ ನಿಗದಿಯಾಗಬೇಕಿದೆ. ಜಾಗದ ವಿವಾದ ಇತ್ಯರ್ಥವಾದರೆ ಮುಂದಿನ ಕಾರ್ಯಗಳು ಆರಂಭವಾಗಲಿವೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಎಲ್‌ಟಿಪಿಗೆ ಜಾಗ ದೊರಕದೆ ಟ್ರಾಂಜಾಕ್ಷನ್ ಅಡ್ವೈಸರ್(ಟಿ.ಎ) ಸಂಸ್ಥೆಯನ್ನು ನೇಮಿಸಿಕೊಳ್ಳುವುದು ಕಷ್ಟ. ಸ್ಥಳದ ಲಭ್ಯತೆ ಇಲ್ಲದೆ ಡಿಪಿಆರ್ ಸಿದ್ಧಪಡಿಸಲು ಕೂಡ ಆಗುವುದಿಲ್ಲ ಎಂದು ಅವರು ತಿಳಿಸಿದರು.
ಜಾಗ ಅಂತಿಮ ವಾದರೆ ಎಲ್ಲ ಸಮಸ್ಯೆ ಇತ್ಯರ್ಥ
ಆದಿಚುಂಚನಗಿರಿ ಮಠದಿಂದ ಜಾಗ ಪಡೆದುಕೊಳ್ಳುವ ಪ್ರಯತ್ನ ಸಾಕಾರವಾದರೆ ವಾಹನ ನಿಲುಗಡೆ ತಾಣ ಸೇರಿ ಎಲ್ಲಾ ಸಮಸ್ಯೆಗಳೂ ಇತ್ಯರ್ಥವಾಗಲಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಜಾಗ ಪಡೆದುಕೊಳ್ಳುವ ಭರವಸೆಯಲ್ಲಿ ಎನ್‌ಎಂಡಿಸಿ ಬಳಿಗೆ ಚೆಕ್‌ಪೋಸ್ಟ್ ಕೂಡ ಸ್ಥಳಾಂತರ ಮಾಡಲಾಗಿದೆ. ಚೆಕ್‌ಪೋಸ್ಟ್ ಬಳಿಯೇ ವಾಹನ ನಿಲುಗಡೆ ತಾಣ ನಿರ್ಮಿಸಿ ಅಲ್ಲಿಂದ ಮುಂದಕ್ಕೆ ಗಿರಿ ಪ್ರದೇಶಕ್ಕೆ ಖಾಸಗಿ ವಾಹನಗಳ ಸಂಚಾರ ತಡೆಯುವ ಯೋಜನೆಯನ್ನು ಪ್ರವಾಸೋದ್ಯಮ ಇಲಾಖೆ ರೂಪಿಸಿದೆ. ಗಿರಿ ಪ್ರದೇಶಕ್ಕೆ ಸರ್ಕಾರದಿಂದಲೇ ವಾಹನ ವ್ಯವಸ್ಥೆ ರೂಪಿಸಿ ನಿಗದಿತ ಸ್ಥಳದಲ್ಲಿ ನಿಲುಗಡೆ ಮಾಡಿದರೆ ಗಿರಿ ಭಾಗದಲ್ಲಿ ದಟ್ಟಣೆ ಸಮಸ್ಯೆಗೆ ಪರಿಹಾರ ದೊರಕಲಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260826-126-266830823