ವಿಮಲ್ ಜಾಹೀರಾತು: ಶಾರುಖ್, ಅಜಯ್ ದೇವಗನ್, ಟೈಗರ್ ಶ್ರಾಫ್‌ಗೆ ಎಫ್‌ಡಿಎ ನೋಟಿಸ್

ವಿಮಲ್ ಜಾಹೀರಾತು: ಶಾರುಖ್, ಅಜಯ್ ದೇವಗನ್, ಟೈಗರ್ ಶ್ರಾಫ್‌ಗೆ ಎಫ್‌ಡಿಎ ನೋಟಿಸ್

ವಿಮಲ್ ಜಾಹೀರಾತು: ಶಾರುಖ್, ಅಜಯ್ ದೇವಗನ್, ಟೈಗರ್ ಶ್ರಾಫ್‌ಗೆ ಎಫ್‌ಡಿಎ ನೋಟಿಸ್

ಮುಂಬೈ: ವಿಮಲ್ ಇಲೈಚಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್‌ಗೆ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ(ಎಫ್‌ಡಿಎ) ಕಾರಣ ಕೇಳಿ ನೋಟಿಸ್ ನೀಡಿದೆ.

ಈ ಜಾಹೀರಾತು ನಿಷೇಧಿತ ಪಾನ್ ಮಸಾಲ ಮತ್ತು ತಂಬಾಕು ಉತ್ಪನ್ನಗಳ ಪರೋಕ್ಷ ಅಥವಾ ಸರ್ವೇಗೇಟ್ ಪ್ರಚಾರವಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಜಾಹೀರಾತಿನಲ್ಲಿ ವಿಮಲ್ ಇಲೈಚಿ ಎಂಬ ಹೆಸರನ್ನು ಬಳಸಿರುವುದು 'ವಿಮಲ್ ಪಾನ್ ಮಸಾಲ' ಬ್ರ್ಯಾಂಡ್‌ನೊಂದಿಗೆ ನೇರ ಸಂಪರ್ಕವನ್ನು ಹೊಂದಿದೆ. ಅದು ಗ್ರಾಹಕರನ್ನು ದಾರಿ ತಪ್ಪಿಸಿ ನಿಷೇಧಿತ ಉತ್ಪನ್ನವನ್ನು ಪರೋಕ್ಷವಾಗಿ ಪ್ರಚಾರ ಮಾಡಿದಂತಾಗುತ್ತದೆ ಎಂದು ಎಫ್‌ಡಿಎ ಹೇಳಿದೆ.

ವಿಮಲ್ ಪಾನ್ ಮಸಾಲಗೆ ಸಂಬಂಧಿಸಿದ ಬ್ರ್ಯಾಂಡ್ ಐಡೆಂಟಿಟಿಯನ್ನೇ ಈ ಜಾಹೀರಾತಿನಲ್ಲಿಯೂ ಬಳಸಿರುವುದರಿಂದ ಇದು ಗಂಭೀರ ವಿಷಯವಾಗಿದೆ ಎಂದು ಆಗಸ್ಟ್ 11ರಂದು ನೀಡಿದ ನೋಟಿಸ್‌ನಲ್ಲಿ ಎಫ್‌ಡಿಎ ಮುಂಬೈ ವಿಭಾಗ ತಿಳಿಸಿದೆ. ಬ್ರ್ಯಾಂಡ್ ರಾಯಭಾರಿಗಳಾಗಿರುವ ಈ ಮೂವರು ನಟರು 15 ದಿನಗಳ ಒಳಗೆ ಪ್ರತಿಕ್ರಿಯೆ ನೀಡಬೇಕೆಂದು ಸೂಚಿಸಲಾಗಿದೆ.

ನೋಟಿಸ್ ತಲುಪಿದ 15 ದಿನಗಳ ಒಳಗೆ ಲಿಖಿತ ವಿವರಣೆ ಮತ್ತು ಪೂರಕ ದಾಖಲೆಗಳನ್ನು ಸಲ್ಲಿಸಲು ನಟರಿಗೆ ಸಮಯ ನೀಡಲಾಗಿದೆ. ಅವರು ಖುದ್ದಾಗಿ ಅಥವಾ ತಮ್ಮ ಅಧಿಕೃತ ಪ್ರತಿನಿಧಿಯ ಮೂಲಕ ವೈಯಕ್ತಿಕ ವಿಚಾರಣೆಗೂ ವಿನಂತಿಸಬಹುದು. ನಿಗದಿತ ಸಮಯದೊಳಗೆ ವಿವರಣೆ ಬಾರದಿದ್ದರೆ ಅಥವಾ ನೀಡಿರುವ ವಿವರಣೆ ಅತೃಪ್ತಿಕರವಾಗಿದ್ದರೆ, ಯಾವುದೇ ಮುನ್ಸೂಚನೆ ನೀಡದೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಫ್‌ಡಿಎ ಎಚ್ಚರಿಸಿದೆ.

ಈ ನೋಟಿಸ್ ಅನ್ನು ಅಂತಿಮ ಎಚ್ಚರಿಕೆ ಎಂದು ಕರೆದಿರುವ ಎಫ್‌ಡಿಎ, ಈ ಜಾಹೀರಾತು ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ 2006ರ ನಿಯಮಗಳಿಗೆ ವಿರುದ್ಧವಾಗಿದ್ದು, ಗ್ರಾಹಕರನ್ನು ದಾರಿತಪ್ಪಿಸುವಂತಿದೆ ಎಂದು ಹೇಳಿದೆ.

ನಟರು ವಿಮಲ್ ಪಾನ್ ಮಸಾಲ ಜಾಹೀರಾತಿನಲ್ಲಿ ಭಾಗವಹಿಸುವುದನ್ನು ಮತ್ತು ಅದರ ಪ್ರಚಾರ ಮಾಡುವುದನ್ನು ತಕ್ಷಣವೇ ನಿಲ್ಲಿಸಬೇಕು ಹಾಗೂ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳು, ವೆಬ್‌ಸೈಟ್‌ಗಳು ಮತ್ತು ಇತರ ಡಿಜಿಟಲ್ ವೇದಿಕೆಗಳಿಂದ ಇದನ್ನು ತೆಗೆದುಹಾಕಬೇಕು. ಈ ಜಾಹೀರಾತಿನ ಪ್ರಸಾರ, ಪ್ರಕಟಣೆ ಅಥವಾ ಯಾವುದೇ ರೀತಿಯ ಪ್ರಚಾರಕ್ಕೆ ಇನ್ನು ಮುಂದೆ ಯಾವುದೇ ಸಹಕಾರ ನೀಡಬಾರದು ಎಂದೂ ಸೂಚಿಸಲಾಗಿದೆ.

ಮಹಾರಾಷ್ಟ್ರದಲ್ಲಿ 'ವಿಮಲ್' ಬ್ರ್ಯಾಂಡ್ ಪಾನ್ ಮಸಾಲದೊಂದಿಗೆ ಗುರುತಿಸಿಕೊಂಡಿದ್ದು, ಪ್ರಸ್ತುತ ರಾಜ್ಯದಲ್ಲಿ ನಿಷೇಧಿತ ಪದಾರ್ಥಗಳನ್ನು ಒಳಗೊಂಡಿರುವ ಪಾನ್ ಮಸಾಲವನ್ನು ಬ್ಯಾನ್ ಮಾಡಲಾಗಿದೆ. ಟಿವಿ ಚಾನೆಲ್‌ಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದ್ದ ವಿಮಲ್ ಜಾಹೀರಾತನ್ನು ಪರಿಶೀಲಿಸಿದ ನಂತರ ಎಫ್‌ಡಿಎ ಈ ಕ್ರಮ ಕೈಗೊಂಡಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ