ಮಾಗಡಿ: ಮಾವು ಬಿಟ್ಟು ವಿದೇಶಿ ತೆಂಗಿನ ತಳಿಯತ್ತ ರೈತರ ಚಿತ್ತ

ಮಾಗಡಿ: ಮಾವು ಬಿಟ್ಟು ವಿದೇಶಿ ತೆಂಗಿನ ತಳಿಯತ್ತ ರೈತರ ಚಿತ್ತ

ಮಾಗಡಿ: ಮಾವು ಬಿಟ್ಟು ವಿದೇಶಿ ತೆಂಗಿನ ತಳಿಯತ್ತ ರೈತರ ಚಿತ್ತ

ಮಾಗಡಿ: ಜಿಲ್ಲೆಯ ಪ್ರಮುಖ ಬೆಳೆಯಾದ ಮಾವು ಹವಾಮಾನ ವೈಪರೀತ್ಯದಿಂದಾಗಿ ಇತ್ತೀಚಿನ ವರ್ಷಗಳಲ್ಲಿ ರೈತರಿಗೆ ಕೈ ಕೊಡುತ್ತಿದೆ. ಫಸಲು ಹಾಕಿದ ಬಂಡವಾಳವೂ ಕೈ ಸೇರದ ಸ್ಥಿತಿಯಲ್ಲಿರುವ ರೈತರು ಇದೀಗ ನಿರಂತರ ಆದಾಯ ಬರುವ ಪರ್ಯಾಯ ಬೆಳೆಗಳತ್ತ ಚಿತ್ತ ಹರಿಸಿದ್ದಾರೆ. ತಾಲ್ಲೂಕಿನಲ್ಲಿ ಈಗ ವಿದೇಶಿ ತೆಂಗು ತಳಿ ಬೆಳೆಯಲು ರೈತರು ಉತ್ಸಾಹ ತೋರುತ್ತಿದ್ದಾರೆ. ಚಕ್ರಬಾವಿ ಗ್ರಾಮದಲ್ಲಿ ತಾಲ್ಲೂಕಿನಲ್ಲೇ ಮೊದಲ ಬಾರಿಗೆ ವಿದೇಶಿ ತೆಂಗು ತಳಿ ಸಸಿ ನಾಟಿ ಮಾಡಲಾಗಿದೆ.

ಗ್ರಾಮದ ಯುವ ಉದ್ಯೋಗಿ ಸಿ.ಜಿ. ಗುರುರಾಜ್ ಅವರು ತೆಂಗಿಗಾಗಿ, ತಮ್ಮ ಮುಕ್ಕಾಲು ಎಕರೆ ಜಮೀನಿನಲ್ಲಿದ್ದ 40ಕ್ಕೂ ಹೆಚ್ಚು ಮಾವಿನ ಮರಗಳನ್ನು ಕತ್ತರಿಸಿದ್ದಾರೆ. ಪವಿತ್ರ ಭೂಮಿ ಸಂಸ್ಥೆ ಹಾಗೂ ರಾಜ್ಯ ಶ್ರೀಗಂಧ ರಕ್ತ ಚಂದನ ಬೆಳೆಗಾರರ ಸಂಘದ ನಿರ್ದೇಶಕ ಕನ್ನಡ ಕುಮಾರ್ ಮಾರ್ಗದರ್ಶನದಲ್ಲಿ ಕೇರಳದ ಪ್ರಸಿದ್ಧ ಸಿಡಿಜಿಟಿಡಿ ತೆಂಗಿನ ತಳಿಯನ್ನು ನಾಟಿ ಮಾಡಿದ್ದಾರೆ.

‘ಕೇವಲ ಮೂರು ವರ್ಷದಲ್ಲೇ ಫಲ ಬಿಡಲಾರಂಭಿಸುವುದು ಈ ಗಿಡ್ಡ ತಳಿಯ ವಿಶೇಷ. ಇದರ ಸಸಿಗಳನ್ನು 20X20 ಅಳತೆಯಲ್ಲಿ ನಾಟಿ ಮಾಡಬಹುದು. ಕರ್ನಾಟಕದ ಪ್ರಸಿದ್ಧ ತಿಪಟೂರು ಟಾಲ್ ಹಾಗೂ ವಿದೇಶಿ ತಳಿ ಟಾಲ್ ಜೊತೆ ಪಾಲಿನೇಷನ್ ಮೂಲಕ, ಸಿಡಿಜಿಟಿಡಿ ತೆಂಗಿನ ತಳಿ ಟಾಲ್ ಸೃಷ್ಟಿ ಮಾಡಿರುವುದು ವಿಶೇಷ. ಕರ್ನಾಟಕ ತಳಿಯ ಅಂಶದ ಮೂಲಕ ಕೇರಳದಲ್ಲಿ ಈ ತಳಿಯನ್ನು ಸೃಷ್ಟಿ ಮಾಡಲಾಗಿದೆ. 45ಕ್ಕೂ ಹೆಚ್ಚು ಸಸಿಗಳನ್ನು ಒಂದೇ ಕಡೆ ಬೆಳೆಯಲಾಗುತ್ತಿದೆ’ ಎಂದು ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

3 ವರ್ಷಕ್ಕೆ ಫಲ: ಬೆಂಗಳೂರು ದಕ್ಷಿಣ ಹಾಗೂ ತುಮಕೂರು ಜಿಲ್ಲೆಯ ಸುತ್ತಮುತ್ತಲಿನ ರೈತರು ಹೆಚ್ಚಾಗಿ ತಿಪಟೂರು ಟಾಲ್ ತಳಿ ತೆಂಗಿನ ಸಸಿಗಳನ್ನು ಬೆಳೆಯುತ್ತಿದ್ದಾರೆ. ಈ ತೆಂಗಿನ ಸಸಿಯ ನಿರ್ವಹಣೆ ಕಡಿಮೆ ಇದ್ದು, 8–10 ವರ್ಷಕ್ಕೆ ಫಲ ಕೊಡಲಾರಂಭಿಸುತ್ತವೆ. ಆದರೆ ವಿದೇಶಿ ತಳಿಯಾಗಿರುವ ಸಿಡಿಜಿಟಿಡಿ ಸಸಿಯಲ್ಲಿ ಕೇವಲ 3 ವರ್ಷಕ್ಕೆ ಕಾಯಿ ಬಿಡಲು ಶುರುವಾಗುತ್ತದೆ. ವರ್ಷಕ್ಕೆ ಒಂದು ಮರದಲ್ಲಿ 250ರಿಂದ 300 ಕಾಯಿಗಳು ಬಿಡುತ್ತವೆ.

ನಾಟಿ ತಳಿಯ ನಾಲ್ಕು ಪಟ್ಟು ಫಲವನ್ನು ಒಂದೇ ಮರದಲ್ಲಿ ಪಡೆಯುವುದು ಈ ತಳಿಯ ವಿಶೇಷ. ಎಳನೀರು ಮತ್ತು ಕಾಯಿಗಳು ಹೆಚ್ಚು ಗಾತ್ರದಲ್ಲಿ ಬಿಡಲಿವೆ. ರುಚಿಯಾದ ಎಲೆ ನೀರು ಕೊಡುತ್ತದೆ. ವರ್ಷವಿಡಿ ತೆಂಗು ಕಟಾವು ಮಾಡಬಹುದಾಗಿದೆ. ಈ ತಳಿಗೆ ಸಾಕಷ್ಟು ಬೇಡಿಕೆ ಇದ್ದು, ಕೇರಳದಲ್ಲಿ ಮಾತ್ರ ಈ ತಳಿಗಳು ಸಿಗುತ್ತಿವೆ. ಉಳಿದೆಡೆ ಬೇರೆ ಬೇರೆ ಹೆಸರುಗಳಲ್ಲಿ ತೆಂಗಿನ ಸಸಿಗಳು ಮಾರಾಟವಾಗುತ್ತಿವೆ. ಹೆಚ್ಚು ಆದಾಯ, ನಿರಂತರ ಕಾಯಿ ಕಟಾವು ಮಾಡುವ ಹಿನ್ನೆಲೆಯಲ್ಲಿ ಈ ತಳಿಯ ತೆಂಗನ್ನು ಬೆಳೆಯಲು ತಾಲ್ಲೂಕಿನ ರೈತರು ಅಸಕ್ತಿ ತೋರುತ್ತಿದ್ದಾರೆ.

ಹೆಚ್ಚಿನ ಆರೈಕೆ ಅಗತ್ಯ: ‘ಹೆಚ್ಚು ಆದಾಯ ಬರುವ ವಿದೇಶಿ ತಳಿ ಸಸಿಗೆ ರೈತರು ಹೆಚ್ಚಿನ ಆರೈಕೆ ಮಾಡಬೇಕು. ನೀರಾವರಿ ವ್ಯವಸ್ಥೆ ಕಡ್ಡಾ. ಮಳೆಗಾಲ ಬಿಟ್ಟು ಬೇಸಿಗೆಯಲ್ಲಿ ಕಡ್ಡಾಯವಾಗಿ ಮೂರು ದಿನಕ್ಕೆ ಒಮ್ಮೆ ಒಂದು ಮರಕ್ಕೆ 60ರಿಂದ 70 ಲೀಟರ್ ನೀರು ಹಾಯಿಸಬೇಕು. ಹೆಚ್ಚು ಎಳನೀರು ಬಿಡುವುದರಿಂದ ಬೇಸಿಗೆಯಲ್ಲಿ ಮರಗಳಿಗೆ ಹೆಚ್ಚು ನೀರಿನ ಅಗತ್ಯವಿದೆ. ನಿರ್ವಹಣೆ ಇಲ್ಲದಿದ್ದರೆ ಫಸಲು ಕಡಿಮೆಯಾಗುತ್ತದೆ’ ಎಂದರು.

‘ಆರು ತಿಂಗಳಿಗೆ ಒಮ್ಮೆ ಫಲವತ್ತಾದ ಸಾವಯವ ಗೊಬ್ಬರವನ್ನು ಪ್ರತಿ ಮರಕ್ಕೂ ನೀಡಬೇಕು. ಆಗ ಮಾತ್ರ ಇದರಿಂದ ಆದಾಯ ನಿರೀಕ್ಷೆ ಮಾಡಬಹುದು. ರೋಗ ನಿಯಂತ್ರಣಕ್ಕೆ ತಜ್ಞರ ಸಲಹೆ ಮೇರೆಗೆ ಕ್ರಮ ಕೈಗೊಳ್ಳಬೇಕಕು. ನಾಟಿ ಮರಗಳು ನೂರು ವರ್ಷಗಳ ಆಯಸ್ಸು ಹೊಂದಿದ್ದರೆ, ವಿದೇಶಿ ತಳಿ ಉತ್ತಮ ಫಸಲಿನೊಂದಿಗೆ ಗರಿಷ್ಠ 60 ವರ್ಷ ಇರಲಿವೆ’ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಅತಿ ಹೆಚ್ಚು ಮಾವು ಬೆಳೆಯಲಾಗುತ್ತಿತ್ತು. ಈಗ ಸ್ಥಿರ ಮಾರುಕಟ್ಟೆ ಕೊರತೆ ಹಾಗೂ ಹವಾಮಾನ ವೈಪಲ್ಯದಿಂದ ಮಾವಿನ ಮರಗಳನ್ನು ಕಟಾವು ಮಾಡಿ ಹೈಬ್ರಿಡ್ ತೆಂಗಿನ ತಳಿ ಬೆಳೆಯುವ ರೈತರು ಒಲವು ತೋರುತ್ತಿದ್ದಾರೆ. ತೆಂಗು ಬೆಳೆಯಲು ಪ್ರಮುಖ ಕಾರಣವೆಂದರೆ ವರ್ಷಪೂರ್ತಿ ಇಳುವರಿ ಸಿಗಲಿದೆ. ಪ್ರತಿ ತಿಂಗಳು ಅಥವಾ ಎರಡು ತಿಂಗಳಿಗೆ ಒಮ್ಮೆ ಕಾಯಿ ಮಾರಾಟ ಮಾಡಬಹುದು. ಮಾವಿಗೆ ಬೇಕಾದಷ್ಟು ಕೀಟನಾಶಕ ಸಿಂಪಡಣೆ ಮತ್ತು ನಿರಂತರ ಕಾಳಜಿ ತೆಂಗಿಗೆ ಬೇಕಿಲ್ಲ. ತೆಂಗಿನ ಎಣ್ಣೆ, ನಾರು, ಮತ್ತು ಒಣಕೊಬ್ಬರಿಗೆ ಮಾರುಕಟ್ಟೆಯಲ್ಲಿ ನಿರಂತರ ಬೇಡಿಕೆ ಇದೆ ಇರುವ ಕಾರಣ ತೆಂಗು ಬೆಳೆಯಲು ಆಸಕ್ತಿ ತೋರಲಾಗುತ್ತದೆ.

ಮಾವು ಬೆಳೆಯಿಂದ ಸತತ ನಷ್ಟ ಅನುಭವಿಸಿರುವ ರೈತರು ಪರ್ಯಾಯ ಬೆಳೆಗಳಿಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ತೋಟಗಾರಿಕೆ ಇಲಾಖೆಯಿಂದ ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ವಿಬಿ ಜಿ ರಾಮ್ ಜಿ ಮೂಲಕ ಜಾಬ್ ಕಾರ್ಡ್ ಹೊಂದಿರುವ ರೈತರು ತೆಂಗು ಮತ್ತು ಇತರ ಬೆಳೆ ಬೆಳೆಯಲು ಸರ್ಕಾರದಿಂದ ಸಿಗುವ ಸಹಾಯಧನ ಪಡೆದುಕೊಳ್ಳಬಹುದು.

ಸಂತೋಷ್, ತೋಟಗಾರಿಕೆ ಸಹಾಯಕ ನಿರ್ದೇಶಕ

ತೆಂಗು ಬೆಳೆಯಲು ಮಾರ್ಗದರ್ಶನ

5ಜಿ ಯುಗದಲ್ಲಿ ಯುವ ರೈತರು ಕೃಷಿಯಲ್ಲಿ ತೊಡಗುವ ನಿಟ್ಟಿನಲ್ಲಿ ಪವಿತ್ರ ಭೂಮಿ ಸಂಸ್ಥೆ ಮೂಲಕ ಕುಣಿಗಲ್, ತುಮಕೂರು, ಬೆಂಗಳೂರು ದಕ್ಷಿಣ ಜಿಲ್ಲೆ, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಹೈಬ್ರಿಡ್ ತೆಂಗು ಬೆಳೆಯಲು ಮಾರ್ಗದರ್ಶನ ಮಾಡಲಾಗುತ್ತಿದೆ. ಚಕ್ರಬಾವಿಯಲ್ಲಿ ಮೊದಲ ಬಾರಿಗೆ ಕೇರಳದ ಪ್ರಸಿದ್ಧ ಸಿಡಿಜಿಟಿಡಿ ತೆಂಗು ನಾಟಿ ಮಾಡಿಸಲಾಗಿದೆ.

ಕನ್ನಡ ಕುಮಾರ್, ನಿರ್ದೇಶಕ, ರಾಜ್ಯ ಶ್ರೀಗಂಧ ರಕ್ತ ಚಂದನ ಬೆಳೆಗಾರರ ಸಂಘ

60 ವರ್ಷ ಆಯಸ್ಸು; ಪ್ರತಿ ಸಸಿಗೆ ₹800

ಸದ್ಯ ಹೆಚ್ಚಾಗಿ ಬೆಳೆಯುವ ತಿಪಟೂರು ಟಾಲ್ ತಳಿ ಸಸಿ ₹150–₹200ಕ್ಕೆ ಮಾರಾಟವಾಗುತ್ತಿದೆ. ಆದರೆ ವಿದೇಶಿ ತಳಿಯ ಒಂದು ಸಸಿಗೆ ₹800– ₹950 ಬೆಲೆ ಇದೆ. ಈ ತಳಿ ಕೇರಳ ಬಿಟ್ಟರೆ ಬೇರೆಲ್ಲೂ ಸಿಗದು. ಇದು ಎಳನೀರು ಮತ್ತು ಕಾಯಿಗೆ ಮಾತ್ರ. ಇದರಿಂದ ಕೊಬ್ಬರಿ ಮಾಡಿಕೊಳ್ಳಲು ಬರುವುದಿಲ್ಲ. ನಾಟಿ ತಳಿ ಎಳನೀರು ಕಾಯಿ ಮತ್ತು ಕೊಬ್ಬರಿಯಾಗಿ ಮಾರಾಟ ಮಾಡಬಹುದಾಗಿತ್ತು. ಕಾಯಿಗೆ ಬೇಡಿಕೆ ಕಡಿಮೆ ಇದ್ದಾಗ, ಕೊಬ್ಬರಿ ಮಾಡಿ ರೈತರು ಮಾರುಕಟ್ಟೆಯಲ್ಲಿ ಹೆಚ್ಚು ಬೆಲೆ ಬಂದ ನಂತರ ಮಾರಬಹುದು. ಆದರೆ ವಿದೇಶಿ ತಳಿಗಳಲ್ಲಿ ಎಳನೀರು ಕಾಯಿಬಿಟ್ಟರೆ ಕೊಬ್ಬರಿಯಾಗಿ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೆಚ್ಚಾಗಿ ಎಳನೀರಿಗೆ ಈ ಮರಗಳನ್ನು ಬೆಳೆಸಲಾಗುತ್ತಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260816-14-1953308876

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ