
ಕೊಪ್ಪಳ: ಮದ್ಯ ಮಾರಾಟ ಮುಕ್ತವಾದ ಹಟ್ಟಿ ಗ್ರಾಮ, ಮಹಿಳೆಯರ ಹೋರಾಟಕ್ಕೆ ಜಯ
ಕೊಪ್ಪಳ: ‘ಮದ್ಯ ಕುಡಿಯುವವರು ಊರಿನ ಹೊರಗಡೆ ಇದ್ದುಕೊಂಡು ಏನಾದರೂ ಮಾಡಲಿ. ಶಾಲೆಗೆ ಹೋಗುವ ಮಕ್ಕಳಿಂದಲೂ ಬಾಟಲಿ ತರಿಸುತ್ತಿದ್ದರು. ಈಗ ಮಕ್ಕಳು ಅವರ ಪಾಡಿಗೆ ಓದಿಕೊಳ್ಳುತ್ತಾರೆ. ಹಿಂದಿನ ಒಂದು ವರ್ಷಕ್ಕಿಂತ ಈಗ ಪರಿಸ್ಥಿತಿ ಸಾಕಷ್ಟು ಬದಲಾವಣೆಯಾಗಿದೆ. ಊರಾದರೂ ಈಗ ತಣ್ಣಗಿದೆ’
ಇದು ತಾಲ್ಲೂಕಿನ ಹಟ್ಟಿ ಗ್ರಾಮದ ಭಾಗ್ಯಮ್ಮ ಅವರ ಮಾತುಗಳು. ಮೇಲಿನ ಮಾತುಗಳನ್ನು ಹೇಳುವಾಗ ಅವರ ಮನದಲ್ಲಿ ದುಖಃ ಉಮ್ಮಳಿಸಿ ಬರುತ್ತಿತ್ತು. ಮನೆಯವರು ಮದ್ಯ ಕುಡಿದು ಬಂದಾಗ ಆಗುತ್ತಿದ್ದ ಗಲಾಟೆಗಳನ್ನು ನೆನೆದು ಮನಸ್ಸು ಸಂಕಟ ಪಡುತ್ತಿತ್ತು. ನೋವಿನ ನಡುವೆಯೂ ಗ್ರಾಮ ಮದ್ಯ ಮಾರಾಟ ಮುಕ್ತವಾಗಿದೆ ಎಂದು ಹೇಳುವಾಗ ಖುಷಿಯಾಗುತ್ತಿತ್ತು.
ಗ್ರಾಮದಲ್ಲಿ ವ್ಯಾಪಕವಾಗಿದ್ದ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿದ ಹಲವು ಮಹಿಳೆಯರಲ್ಲಿ ಒಬ್ಬರಾದ ಮಹಾದೇವಿ ’ಮನೆಯವರು ಮದ್ಯ ಕುಡಿದು ಮನೆಯಲ್ಲಿ ಸಾಕಷ್ಟು ಜಗಳವಾಡಿದ್ದರು. ನಮಗೂ ಬದುಕು ರೋಸಿ ಹೋಗಿತ್ತು. ರಾತ್ರಿಪೂರ್ತಿ ಜಾಗರಣೆ. ನೋವು ತಡೆಯದೆ ಊರಿನ ದೈವದವರ ಮುಂದೆ ಸಮಸ್ಯೆ ಹೇಳಿಕೊಂಡಾಗ ಈ ಬದಲಾವಣೆ ಆರಂಭವಾಯಿತು’ ಎಂದರು.
ಹಟ್ಟಿ ಎನ್ನುವ ಪುಟ್ಟ ಗ್ರಾಮದಲ್ಲಿ ಅಂದಾಜು 1500 ಜನಸಂಖ್ಯೆಯಿದ್ದು ಏಳು ಮದ್ಯದ ಅಂಗಡಿಗಳು ಇದ್ದವು. ಮದ್ಯಸೇವನೆಯ ಹಾವಳಿ ವ್ಯಾಪಕವಾಗಿದ್ದರಿಂದ ಗ್ರಾಮದ ಮಹಿಳೆಯರು ಆಕ್ರೋಶಗೊಂಡ ಇದನ್ನು ಗ್ರಾಮದ ಹಿರಿಯರ ಗಮನಕ್ಕೆ ತಂದರು. ಬಳಿಕ ಹಿರಿಯರು ಇದಕ್ಕೆ ಲಗಾಮು ಹಾಕಿದರು. ಒಂದು ವರ್ಷದ ಹಿಂದೆ ನಡೆದ ಈ ಘಟನೆ ಹಟ್ಟಿ ಗ್ರಾಮದಲ್ಲಿ ಬದಲಾವಣೆಗೆ ಕಾರಣವಾಗಿದ್ದು, ರಾಜ್ಯ ಮದ್ಯಪಾನ ಸಂಯಮ ಮಂಡಳಿ ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಮಂಡಳಿ ಭಾನುವಾರ ಸಂಜೆ 4.30ಕ್ಕೆ ಹಟ್ಟಿ ಗ್ರಾಮದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಇದಕ್ಕಾಗಿ ಸಿದ್ಧತೆಗಳು ಚುರುಕುಗೊಂಡಿವೆ. ಬೃಹತ್ ವೇದಿಕೆ ನಿರ್ಮಿಸಲಾಗಿದ್ದು ಗ್ರಾಮಸ್ಥರೇ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಿದ್ದಾರೆ.
ಗ್ರಾಮದ ಯುವತಿಯರಾದ ಅಕ್ಷತಾ ಹಾಗೂ ರೇಖಾ ಮಾತನಾಡಿ, ‘ನಮ್ಮೂರಿನಲ್ಲಿ ಮೊದಲಿಗಿಂತಲೂ ಹೆಚ್ಚು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಆದರೆ ಆಗಬೇಕಾದ ಅಭಿವೃದ್ಧಿ ಕೆಲಸಗಳು ಕೂಡ ಸಾಕಷ್ಟಿವೆ. ಮದ್ಯದ ಹಾವಳಿಯಿಂದ ಗ್ರಾಮದ ವಾತಾವರಣ ಹಾಳಾಗಿತ್ತು. ಬೇರೆಯವರ ಮೇಲೆ ರೇಗಾಡುತ್ತಿದ್ದರು. ಈಗ ಸುಧಾರಣೆಯಾಗಿದೆ’ ಎಂದರು.
ಮತ್ತೊಬ್ಬ ಮಹಿಳೆ ಅಕ್ಕಮಹಾದೇವಿ ’ಹಟ್ಟಿಯಲ್ಲಿ ಮದ್ಯ ಮಾರಾಟ ಬಂದ್ ಆಗಿದ್ದು ಉತ್ತಮ ವಾತಾವರಣವಿದೆ. ಪ್ರಶಸ್ತಿಗೆ ಮಾತ್ರ ಇದು ಸೀಮಿತವಾಗಬಾರದು. ಕೊನೆಯವರೆಗೂ ಬಂದ್ ಆಗಿರಬೇಕು’ ಎಂದು ಹೇಳಿದರು.
ಅಭಿನಂದನೆಗೆ ಆಯ್ಕೆಯಾದ ಗ್ರಾಮಗಳು: ಕೊಪ್ಪಳ ತಾಲ್ಲೂಕಿನ ತಾಳ ಕನಕಾಪುರ, ಕಾಮನೂರು, ಲೇಬಗೇರಿ, ಹನುಮನಹಳ್ಳಿ, ಕುಕನೂರು ತಾಲ್ಲೂಕಿನ ಬಿನ್ನಾಳ, ಚಿಕ್ಕೇನಕೊಪ್ಪ, ಕುಷ್ಟಗಿ ತಾಲ್ಲೂಕಿನ ಮದ್ನಾಳ, ನಾಗರಾಳ, ಬೋದೂರುತಾಂಡಾ ಹಾಗೂ ಹಿರೇಬನ್ನಿಗೋಳ ಗ್ರಾಮಗಳು ಆಯ್ಕೆಯಾಗಿವೆ. ಈ ಗ್ರಾಮಗಳಿಗೆ ಮಂಡಳಿಯೇ ಅಭಿನಂದನಾ ಪತ್ರ ನೀಡಿ ಗೌರವಿಸಲಿದೆ ಎಂದು ಶರಣಪ್ಪ ಸಲಾದಪುರ ತಿಳಿಸಿದ್ದಾರೆ.
ಕೊಪ್ಪಳ: ಮದ್ಯ ಮಾರಾಟ ಮುಕ್ತವಾದ ಗ್ರಾಮಗಳಲ್ಲಿ ಪಾದಯಾತ್ರೆ ಮಾಡುವ ಸಂಪ್ರದಾಯ ರೂಢಿಸಿಕೊಂಡಿರುವ ಕೊಪ್ಪಳದ ಗಾಂಧಿ ಬಳಗ ಭಾನುವಾರ ಮಧ್ಯಾಹ್ನ 3 ಗಂಟೆಗೆ ಕಾಮನೂರು ಗ್ರಾಮದಿಂದ ಹಟ್ಟಿಗೆ ಪಾದಯಾತ್ರೆ ಹಮ್ಮಿಕೊಂಡಿದೆ.
ಪಾದಯಾತ್ರೆ ಕಾಮನೂರಿನಿಂದ ಹಟ್ಟಿಗೆ ಬಂದು ಊರಿನಲ್ಲಿ ಜಾಗೃತಿ ಮೂಡಿಸಿ ವೇದಿಕೆ ಬಳಿ ಬರಲಿದೆ.
ಗವಿಶ್ರೀ ಕಾರ್ಯಕ್ರಮದ ಕೇಂದ್ರಬಿಂದು
ಕೊಪ್ಪಳ: ಮಂಡಳಿ ತಮಗೆ ನೀಡಲು ಮುಂದಾಗಿದ್ದ ಪ್ರಶಸ್ತಿಯನ್ನು ಹಟ್ಟಿ ಗ್ರಾಮಕ್ಕೆ ನೀಡುವಂತೆ ಸಲಹೆ ಮಾಡಿದ್ದ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಕಾರ್ಯಕ್ರಮದ ಕೇಂದ್ರಬಿಂದು. ಇಳಕಲ್‌ನ ವಿಜಯಮಹಾಂತೇಶ್ವರ ಸಂಸ್ಥಾನ ಮಠದ ಗುರುಮಹಾಂತ ಸ್ವಾಮೀಜಿ, ಸಚಿವರಾದ ಶಿವರಾಜ ತಂಗಡಗಿ, ಬಸವರಾಜ ರಾಯರಡ್ಡಿ, ಶಾಸಕ ರಾಘವೇಂದ್ರ ಹಿಟ್ನಾಳ, ಸಂಸದ ರಾಜಶೇಖರ ಹಿಟ್ನಾಳ ಸೇರಿದಂತೆ ಹಲವು ಜನಪ್ರತಿನಿಧಿಗಳು ಪಾಲ್ಗೊಳ್ಳುವರು. ಇದೇ ವೇಳೆ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ. ಕೃಷ್ಣ ಅವರು ಬರೆದ ಪಾನನಿರೋಧ ಚಳವಳಿ ಪುಸ್ತಕ ಲೋಕಾರ್ಪಣೆಯಾಗಲಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260816-35-1055438212