
ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಛಲವಾದಿ ನಾರಾಯಣಸ್ವಾಮಿಗೆ ರೈತರ ಆಗ್ರಹ
ಕವಿತಾಳ: ‘ಜಮೀನುಗಳಿಗೆ ಸಂಪರ್ಕಿಸುವ ರಸ್ತೆ ನಿರ್ಮಾಣ ಮಾಡುವಲ್ಲಿ ಹೆದ್ದಾರಿ ಪ್ರಾಧಿಕಾರ ಮತ್ತು ಗುತ್ತಿಗೆ ಕಂಪನಿ ಅಧಿಕಾರಿಗಳು ಕಾಳಜಿ ವಹಿಸುತ್ತಿಲ್ಲ, ಹೀಗಾಗಿ ಕೃಷಿ ಚಟುವಟಿಕೆಗೆ ತೊಂದರೆಯಾಗಿದೆ’ ಎಂದು ಸಮೀಪದ ಹಿರೇಹಣಿಗಿ ಬಳಿ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರಿಗೆ ರೈತರು ಗುರುವಾರ ಸಮಸ್ಯೆ ಹೇಳಿಕೊಂಡರು.
ರಾಯಚೂರಿನಿಂದ ಲಿಂಗಸುಗೂರಿಗೆ ತೆರಳುವ ಮಾರ್ಗ ಮಧ್ಯೆ ಹಿರೇಹಣಿಗಿ ಬಳಿ ನಾರಾಯಣ ಸ್ವಾಮಿ ಅವರಿಗೆ ರಸ್ತೆ ಸಮಸ್ಯೆ ಕುರಿತು ಮಾಹಿತಿ ನೀಡಿದ ರೈತರು, ‘ಬಾಕ್ಸ್ ಕಲ್ವರ್ಟ್ ಬದಲಿಗೆ ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಂಡಿಲ್ಲ, ರಸ್ತೆ ನಿರ್ಮಿಸದ ಕಾರಣ ಪ್ರಸ್ತುತ ಕಾಮಗಾರಿ ತಡೆಯಲಾಗಿದೆ. ಜಮೀನುಗಳಿಗೆ ಸಂಪರ್ಕಿಸುವ ರಸ್ತೆ ನಿರ್ಮಾಣಕ್ಕೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ತುರ್ತು ಕ್ರಮ ವಹಿಸಬೇಕು’ ಎಂದರು.
ಈ ಕುರಿತು ಕ್ರಮ ಕೈಗೊಳ್ಳುವುದಾಗಿ ನಾರಾಯಣಸ್ವಾಮಿ ಭರವಸೆ ನೀಡಿದರು.
ಆದಪ್ಪಗೌಡ, ಶಿವಪ್ಪ ಮಿಲ್ಟ್ರಿ, ಮಾಳಪ್ಪ, ಶಿವಪ್ಪ ಪೂಜಾರಿ, ಮಲ್ಲಯ್ಯ, ಪಂಪಣ್ಣ ಮೂಲಿಮನಿ, ಶಿವು ಕಾವಲಿ, ಅರುಣ ಕಾವಲಿ, ಲಿಂಗಣ್ಣ ಮತ್ತು ಬಿಜೆಪಿ ಮುಖಂಡರಾದ ರವೀಂದ್ರ ಜಲ್ದಾರ್, ಆರ್. ರುದ್ರಯ್ಯ, ಚಂದ್ರು ಜಾನೇಕಲ್ , ಶಿವರಾಜ ಮತ್ತಿತರರು ಉಪಸ್ಥಿತರಿದ್ದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260828-32-328323657