
ಚಿತ್ತಾಪುರ: ಪರೀಕ್ಷಾರ್ಥಿ ಮೇಲೆ ಜೂಜಾಟದ ಎಫ್‌ಐಆರ್, ಹೈಕೋರ್ಟ್ ತಡೆ
ಚಿತ್ತಾಪುರ: ಕಲಬುರಗಿಯಲ್ಲಿ ಸಿವಿಲ್ ಕಾನ್‌ಸ್ಟೆಬಲ್ ಪರೀಕ್ಷೆ ಬರೆಯುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಚಿತ್ತಾಪುರದಲ್ಲಿ ತಮ್ಮ ವಿರುದ್ಧ ದಾಖಲಿಸಿರುವ ಜೂಜಾಟದ ಸುಳ್ಳು ಪ್ರಕರಣವನ್ನು ರದ್ದುಪಡಿಸಬೇಕು ಎಂದು ಕೋರಿ ಸಂತ್ರಸ್ತ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಆಲಿಸಿದ ಕರ್ನಾಟಕ ಹೈಕೋರ್ಟ್‌ನ ಕಲಬುರಗಿ ಪೀಠವು ಎಫ್‌ಐಆರ್‌ಗೆ ತಡೆಯಾಜ್ಞೆ ನೀಡಿದೆ.
ಆಗಸ್ಟ್ 2ರಂದು ನಡೆದಿದ್ದ ಪೊಲೀಸ್ ಕಾನ್‌ಸ್ಟೆಬಲ್ ಪರೀಕ್ಷೆಗೆ ಹಾಜರಾಗಿದ್ದ ಚಂದ್ರಕಾಂತ್ ಎಂಬುವವರ ವಿರುದ್ಧ ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಜೂಜಾಟ ನಡೆದಿದೆ ಎಂದು ದಾಖಲಿಸಿಕೊಂಡಿರುವ ಎಫ್‌ಐಆರ್‌ನಲ್ಲಿ ತಿಳಿಸಿದ ಸಮಯದಲ್ಲಿ ಕಲಬುರಗಿಯ ದರ್ಗಾ ರಸ್ತೆಯಲ್ಲಿರುವ ಸಾಥ್ ಗುಂಬಜ್ ಹತ್ತಿರದ ನ್ಯಾಷನಲ್ ರಿಲೀಜಿಯಸ್ ಮೈನಾರಿಟಿ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರ ಸಂಖ್ಯೆ 450ರಲ್ಲಿ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12ರವರೆಗೆ ‘ಸಾಮಾನ್ಯ ಜ್ಞಾನ’ ವಿಷಯದ ಪರೀಕ್ಷೆ ಬರೆದಿರುವುದಾಗಿ ದಾಖಲೆಗಳನ್ನು ಸಲ್ಲಿಸಿದ್ದರು.
ಚಿತ್ತಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸೇಂದಿ ಡಿಪೊ ಹತ್ತಿರ ಮುಳ್ಳುಕಂಟಿಗಳಲ್ಲಿ ಕುಳಿತು ಕೆಲವರ ಜೊತೆ ಇಸ್ಪೀಟ್ ಜೂಜಾಟ ಆಡಿದ್ದಾನೆ. ಆತನೂ ಸೇರಿದಂತೆ ಐವರನ್ನು ವಶಕ್ಕೆ ಪಡೆಯಲಾಗಿದೆ. ಅವರಿಂದ ಹಣ ಜಪ್ತಿ ಮಾಡಲಾಗಿದೆ ಎಂದು ಪಿಎಸ್ಐ ಮಂಜುನಾಥ ರೆಡ್ಡಿ ಆಗಸ್ಟ್ 2ರಂದು ಪ್ರಕರಣ ದಾಖಲಿಸಿಕೊಂಡಿದ್ದರು.
‘ಎಫ್‌ಐಆರ್ ರದ್ದುಗೊಳಿಸಬೇಕು ಎಂದು ಕೋರಿ ಚಂದ್ರಕಾಂತ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ತ್ಯಾಗರಾಜ್ ಅವರು ತಡೆಯಾಜ್ಞೆ ಆದೇಶ ನೀಡಿ, ವಿಚಾರಣೆಯನ್ನು ಸೆ.18ಕ್ಕೆ ಮುಂದೂಡಿದ್ದಾರೆ’ ಎಂದು ಅರ್ಜಿದಾರರ ಪರವಾಗಿ ವಾದ ಮಂಡಿಸಿರುವ ಹೈಕೋರ್ಟ್ ವಕೀಲರಾದ ಅಂಬಿಕಾ ಪಾಟೀಲ ಮತ್ತು ಪ್ರಸಾದ್ ಅವಂತಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಚಂದ್ರಕಾಂತ ಕಾನ್‌ಸ್ಟೆಬಲ್ ಪರೀಕ್ಷೆ ಬರೆದಿರುವ ಹಾಲ್ ಟಿಕೆಟ್, ಪರೀಕ್ಷೆ ಬರೆದಿರುವ ಓಎಂಆರ್ ಶೀಟ್ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿವೆ.
ಕಲಬುರಗಿಯಲ್ಲಿ ಪರೀಕ್ಷೆ ಬರೆಯುತ್ತಿದ್ದ ಯುವಕನ ಮೇಲೆ ಚಿತ್ತಾಪುರದಲ್ಲಿ ಜೂಜಾಟದ ಪ್ರಕರಣ ದಾಖಲಾಗಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ ಅಡ್ಡೂರು ಶ್ರೀನಿವಾಸಲು ಕಲಬುರಗಿ ಎಸ್ಪಿ
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260830-34-1034150441