
ಕಾರವಾರ | ‘ದುಬಾರಿ ಹಡಗು ಕಟ್ಟೆ’: ನಿರ್ವಹಣೆಯೇ ಸವಾಲು!
ಕಾರವಾರ: ವಾಣಿಜ್ಯ ಬಂದರಿನಲ್ಲಿರುವ ಹಡಗು ಕಟ್ಟೆಯ ಅಲ್ಪಭಾಗ ನಿರ್ವಹಿಸಲು ಖಾಸಗಿ ಕಂಪನಿ ಜೊತೆ ಕರ್ನಾಟಕ ಜಲಸಾರಿಗೆ ಮಂಡಳಿ (ಕೆಎಂಬಿ) ಅಧಿಕೃತ ಒಪ್ಪಂದಕ್ಕೆ ಸಹಿ ಹಾಕಿದೆ. ದೇಶದಲ್ಲೇ ದುಬಾರಿ ರಾಜಧನ ಪಾವತಿಸಲಿರುವ ಕಂಪನಿಗೆ ಹಡಗುಕಟ್ಟೆಯ ನಿರ್ವಹಣೆಯ ಸವಾಲು ಎದುರಿಗಿದೆ.
‘ಖಾಸಗಿ ಸಾರ್ವಜನಿಕ ಸಹಭಾಗಿತ್ವದಡಿಯಲ್ಲಿ ಹಡಗುಕಟ್ಟೆಯ ನಿರ್ವಹಣೆಗೆ ಕರೆದಿದ್ದ ಹರಾಜಿನಲ್ಲಿ ಪ್ರತಿ ಟನ್ ಸರಕಿಗೆ ₹212 ರಾಜಧನ ಪಾವತಿಸಲು ಬಿಡ್ ಮಾಡುವ ಮೂಲಕ ಬೆಂಗಳೂರಿನ ಅನುರಾಧಾ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಸೇರಿದ ಎಸ್‌ಪಿಎಂ ಲಾಜಿಸ್ಟಿಕ್ಸ್ ಸೊಲ್ಯೂಶನ್ ಲಿಮಿಟೆಡ್ ದಾಖಲೆ ಬರೆದಿದೆ. ಇದು ವಾಣಿಜ್ಯ ಬಂದರಿನ ಹಡಗುಕಟ್ಟೆಯೊಂದರ ನಿರ್ವಹಣೆಗೆ ಪಾವತಿಸಲಾಗುತ್ತಿರುವ ದುಬಾರಿ ರಾಜಧನ ಮೊತ್ತ’ ಎಂದು ಕೆಎಂಬಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
ಆದರೆ, ಹಡಗುಕಟ್ಟೆಯ ನಿರ್ವಹಣೆ ಗುತ್ತಿಗೆ ಪಡೆದುಕೊಂಡಿರುವ ಕಂಪನಿಯು ಕಟ್ಟೆ ಜೊತೆಗೆ ಅಲ್ಲಿರುವ ಉಗ್ರಾಣವನ್ನೂ ದುರಸ್ತಿಪ ಮಾಡಿಕೊಳ್ಳಬೇಕಿದೆ. ಮುಂದಿನ 15 ವರ್ಷದವರೆಗೆ ಕಂಪನಿಗೆ ನಿರ್ವಹಣೆಯ ಹೊಣೆಗಾರಿಕೆ ಇರಲಿದೆ. ಬಂದರಿನಲ್ಲಿ ನಡೆಯುವ ಪ್ರತಿ ಟನ್ ಸರಕುಗಳ ವಹಿವಾಟಿಗೆ ₹212ರಂತೆ ರಾಜಧನವನ್ನು ಕೆಎಂಬಿಗೆ ಪಾವತಿಸಬೇಕಿದೆ ಎಂದು ಒಪ್ಪಂದದಲ್ಲಿ ಉಲ್ಲೇಖಿಸಲಾಗಿದೆ.
‘ವಾಣಿಜ್ಯ ಬಂದರಿನಲ್ಲಿ ಮೊಲಾಸಿಸ್, ಅದಿರುಗಳ ರಫ್ತು, ಆಹಾರ ಸಾಮಗ್ರಿಗಳ ಆಮದು ಸ್ಥಗಿತ, ಬಿಟುಮಿನ್‌ನ ಆಮದು ಇಳಿಕೆಯಾಗಿದ್ದರಿಂದ ಆದಾಯ ಕುಸಿದಿದೆ. ವಾರ್ಷಿಕ ಸರಾಸರಿ ಆದಾಯ ₹11ರಿಂದ 15 ಕೋಟಿ ಇದೆ. ನಿರ್ವಹಣೆ ವೆಚ್ಚವೇ ದುಬಾರಿಯಾಗುತ್ತಿದೆ. ಖಾಸಗಿ ಕಂಪನಿಯೊಂದಿಗಿನ ಒಪ್ಪಂದದಂತೆ ಅದು ವಾರ್ಷಿಕ ₹26.5 ಕೋಟಿಯಷ್ಟು ಆದಾಯ ಸಂಗ್ರಹಿಸುವ ಗುರಿ ಇಟ್ಟುಕೊಂಡಿದೆ’ ಎಂ ದರು.
‘ಬಂದರಿನ ಹಡಗುಕಟ್ಟೆಯ ಬಳಿ ಇರುವ ಉಗ್ರಾಣದ ಗೋಡೆಗಳು ದುಸ್ಥಿತಿಯಲ್ಲಿವೆ. ಚಾವಣಿಗಳು ಹಾಳಾಗಿವೆ. ಉಗ್ರಾಣ ಮರುನಿರ್ಮಾಣ ಮಾಡಿಕೊಳ್ಳಲು, ಹಡಗುಕಟ್ಟೆ ದುರಸ್ತಿ ಮಾಡಿಕೊಳ್ಳಲು, ಇಲ್ಲಿ ಹೆಚ್ಚಿನ ಸೌಕರ್ಯ ಅಳವಡಿಕೆಗೆ ಕಂಪನಿಯು ಹೆಚ್ಚು ವೆಚ್ಚ ಮಾಡಿಕೊಳ್ಳಬೇಕಾಗಬಹುದು’ ಎಂದು ನಿವೃತ್ತ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
ಒಪ್ಪಂದಕ್ಕೆ ಅಂತಿಮ ಮುದ್ರೆ
ಕಾರವಾರ ವಾಣಿಜ್ಯ ಬಂದರಿನ ಅಲ್ಪಭಾಗವನ್ನು ನಿರ್ವಹಣೆ ಸಲುವಾಗಿ ಖಾಸಗಿಯವರಿಗೆ ಹಸ್ತಾಂತರಿಸುವ ಸಂಬಂಧ ಕರ್ನಾಟಕ ಜಲಸಾರಿಗೆ ಮಂಡಳಿ ಮತ್ತು ನಿರ್ವಹಣೆಯ ಗುತ್ತಿಗೆ ಪಡೆದಿರುವ ಎಎಚ್‌ಪಿಎಲ್ ಎಸ್‌ಪಿಎಂ ಲಾಜಿಸ್ಟಿಕ್ಸ್ ಸೊಲ್ಯೂಶನ್ ಲಿಮಿಟೆಡ್ ಕಂಪನಿಯ ನಡುವೆ ಈಚೆಗೆ ಬೆಂಗಳೂರಿನಲ್ಲಿ ಅಂತಿಮ ಒಪ್ಪಂದ ನಡೆಯಿತು. ಕೆಎಂಬಿಯ ಸಿಇಒ ಬಾಲಚಂದ್ರ ಎಚ್.ಸಿ ಮತ್ತು ಕಂಪನಿಯ ನಿರ್ದೇಶಕ ವಿಕ್ರಂ ವಿಶ್ವನಾಥ ಒಪ್ಪಂದಕ್ಕೆ ಸಹಿ ಹಾಕಿದರು.
ವಾಣಿಜ್ಯ ಬಂದರಿನ 375 ಮೀಟರ್ ಉದ್ದದ ಹಡಗು ಕಟ್ಟೆಯ ಪೈಕಿ ಕಂಪನಿಗೆ 150 ಮೀಟರ್ ಹಾಗೂ ಉಗ್ರಾಣ ನೀಡಲಾಗಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260809-20-629600638